ಬೆಂಗಳೂರು, ಡಿ.14 www.bengaluruwire.com : ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ದೇಶದ ಸಾಂಸ್ಕೃತಿಕ ಒಗ್ಗಟ್ಟಿನ ಜಾಗತಿಕ ಸಂಕೇತವಾದ ಮಹಾ ಕುಂಭಮೇಳ 2025 (Maha Kumbhamela-2025)ರ ಕಾರ್ಯಕ್ರಮ ಯಶಸ್ವಿಗಾಗಿ ರಾಜಧಾನಿಯಲ್ಲಿ ಶನಿವಾರ ರೋಡ್ ಶೋ ನಡೆಸಿತು.
ಕೇಂದ್ರ ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಚಿವರಾದ ಸುರೇಶ್ ಕುಮಾರ್ ಖನ್ನಾ (Suresh Kumar Khanna, Union Cabinet Minister for Finance and Parliamentary Affairs) ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ, ದಿವ್ಯಾಂಗರ ಸಬಲೀಕರಣದ ರಾಜ್ಯ ಸಚಿವರಾದ (ಸ್ವತಂತ್ರ ಜವಾಬ್ದಾರಿ) ನರೇಂದ್ರ ಕುಮಾರ್ ಕಶ್ಯಪ್ (Narendra Kumar Kashyap, Minister of State for Welfare of Backward Classes and Empowerment of Divyangjan) ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋನಲ್ಲಿ ಪಾಲ್ಗೊಂಡರು.
ನಂತರ ಖಾಸಗಿ ಹೋಟೆಲ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಹಾಕುಂಭ ಮೇಳದ ಕುರಿತು ಕಿರು ಸಾಕ್ಷ್ಯಾಚಿತ್ರ ಪ್ರದರ್ಶಿಸಲಾಯಿತು. ನಂತರ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಕುಮಾರ್ ಖನ್ನಾ, 12 ವರ್ಷಗಳ ನಂತರ ಪ್ರಯಾಗ್ ರಾಜ್ ನಲ್ಲಿ ಮತ್ತೆ ಮಹಾ ಕುಂಭಮೇಳ ನಡೆಯುತ್ತಿದೆ. ಇದಕ್ಕಾಗಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಈ ಮೇಳ ಆಯೋಜಿಸಲಾಗಿದೆ. ಜ.13 ರಿಂದ ಫೆ.26 ರ ತನಕ 6 ವಿಶೇಷ ಪವಿತ್ರ ಸ್ನಾನಗಳಿರುತ್ತದೆ. ಇದೊಂದು ಕೇವಲ ಸ್ನಾನ ಮಾತ್ರವಲ್ಲದೇ ದೇಶದ ಏಕತೆ ಹಾಗೂ ಏಕ್ ಭಾರತ್ ಶ್ರೇಷ್ಠ ಭಾರತ ಎಂದು ಸಾರುವ ಮಹತ್ವದ ಧಾರ್ಮಿಕ ಸಂಗಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಪ್ರಯಾಗ್ ರಾಜ್ ನಲ್ಲಿ 5500 ಕೋಟಿ ರೂ. ಗೂ ಹೆಚ್ಚಿನ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ, ಯೋಜನೆಗಳನ್ನು ಉದ್ಘಾಟನೆ ಮಾಡಿರುವುದು ಈ ಮಹಾ ಕುಂಭಮೇಳಕ್ಕೆ ಸಾಕಷ್ಟು ಬಲ ತಂದಿದೆ ಎಂದರು.
ಡಿಜಿಟಲ್ ಮಹಾಕುಂಭ ಮೇಳದ ಪ್ರಯುಕ್ತ ವಿಶೇಷ ವೆಬ್ ಸೈಟ್ ಮತ್ತು ಆಪ್, 11 ಭಾಷೆಗಳಲ್ಲಿ ಎಐ ಸನ್ನದ್ದ ಚಾಟ್ ಬೊಟ್, ಜನರು ಮತ್ತು ವಾಹನಗಳಿಗೆ ಕ್ಯೂಆರ್ ಆಧರಿತ ಪಾನ್ ಗಳು, ಬಹುಭಾಷೆಗಳ ಡಿಜಿಟಲ್ ಲಾಸ್ಟ್-ಅಂಡ್-ಫೌಂಡ್ ಸೆಂಟರ್, ಸ್ವಚ್ಛತೆಗೆ ಐಸಿಟಿ ಮೇಲ್ವಿಚಾರಣೆ, ಆಟೊಮೇಟೆಡ್ ರೇಷನ್ ಪೂರೈಕೆ, ಡ್ರೋನ್ ಆಧಾರಿತ ಪರಿವೀಕ್ಷಣೆ ಮತ್ತು ವಿಪತ್ತು ನಿರ್ವಹಣೆ ಮುಂತಾದ ಸೌಲಭ್ಯಗಳನ್ನು ಹೊಂದಿರುತ್ತದೆ.
ಪ್ರಯಾಗ್ ರಾಜ್ ನಡೆಯುವ ಸ್ಥಳಕ್ಕೆ ಭಕ್ತರು, ಯಾತ್ರಾರ್ಥಿಗಳು, ಸಾಧು ಸಂತರು, ಧಾರ್ಮಿಕ ಮುಖಂಡರು, ಪ್ರವಾಸಿಗರು ಆಗಮಿಸಲು ರೈಲ್ವೇ ಇಲಾಖೆಯು ಕುಂಭ ಮೇಳಕ್ಕಾಗಿ 3,000 ವಿಶೇಷ ರೈಲು ಸೇರಿದಂತೆ ಒಟ್ಟು 13,000 ರೈಲುಗಳ ಕಾರ್ಯಾಚರಣೆ ನಡೆಸಲಿದೆ, ಉತ್ತರ ಪ್ರದೇಶ ಸರ್ಕಾರ ಇವಿ ಎಲೆಕ್ಟ್ರಿಕ್ ಬಸ್ ಸೇರಿದಂತೆ 7,000 ಬಸ್, 1.5 ಲಕ್ಷ ಶೌಚಾಲಯ, ಬಂದ ಯಾತ್ರಾರ್ಥಿಗಳು ತಂಗಲು ಸಾವಿರಾರು ಟೆಂಟ್, ವೈದ್ಯಕೀಯ ಸೇವೆ, ಆಸ್ಪತ್ರೆ, ಪ್ಲಾಸ್ಟಿಕ್ ಮುಕ್ತ ಮಹಾಕುಂಭ ಮೇಳಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಚಿವ ಸುರೇಶ್ ಕುಮಾರ್ ಖನ್ನಾ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ, ದಿವ್ಯಾಂಗನ ಸಬಲೀಕರಣದ ರಾಜ್ಯ ಸಚಿವರಾದ ನರೇಂದ್ರ ಕುಮಾರ್ ಕಶ್ಯಪ್ ಮಾತನಾಡಿದ ಅವರು, ಪ್ರಯಾಗ್ ರಾಜ್ ನಲ್ಲಿ ಜ.13 ರಿಂದ ಫೆ.26ರ ತನಕ ಮಹಾಕುಂಭ ಮೇಳ 2025 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗಂಗಾ , ಯಮುನಾ ಹಾಗೂ ಸರಸ್ವತಿ ಸಮಗಮದಲ್ಲಿ ಈ ಮಹಾಕುಂಭ ಮೇಳ ಆಯೋಜಿಸಲಾಗಿದೆ. ಇದೊಂದು ಅಂತರರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ.
45 ದಿನಗಳ ಈ ಆಧ್ಯಾತ್ಮಿಕ ಸಮ್ಮಿಲನದಲ್ಲಿ 45 ಕೋಟಿ ಪ್ರವಾಸಿಗರು, ಸಂತರು, ಭಕ್ತರು ಇನ್ನಿತರರು ಭಾಗವಹಿಸುವ ನಿರೀಕ್ಷೆಯಿದೆ. ಪ್ರಯಾಗ್ ರಾಜ್ ನಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು 4 ಸಾವಿರ ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಮಹಾಕುಂಭ ಮೇಳಕ್ಕೆ ಬಂದು ಹೋಗುವ ಪ್ರಯಾಣಿಕರಿಗಾಗಿ ಸಾರಿಗೆ, ಉಳಿಯಲು ಟೆಂಟ್ ವ್ಯವಸ್ಥೆ, ಮಹಾಕುಂಭ ಮೇಳವೆಂಬ ಧಾರ್ಮಿಕ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದಲ್ಲಿ ಡಬಲ್ ಎಂಜಿನ್ ಸರ್ಕಾರ ಪೂರ್ವ ಸಿದ್ಧತೆಗಳನ್ನು ಆಯೋಜಿಸಿದೆ ಎಂದು ಅವರು ಹೇಳಿದರು.
ನಿನ್ನೆ ಕರ್ನಾಟಕದ ರಾಜ್ಯಪಾಲರಿಗೆ ಪ್ರಯಾಗ್ ರಾಜ್ ಕುಂಭಮೇಳಕ್ಕೆ ಆಗಮಿಸುವಂತೆ ಆಹ್ವಾನ ನೀಡಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತ ಆಹ್ವಾನ ನೀಡಲಿದ್ದೇವೆ. ಕರ್ನಾಟಕದ ಭಕ್ತರಿಗೂ ಈ ಮಹಾಕುಂಭ ಮೇಳಕ್ಕೆ ಆಗಮಿಸುವಂತೆ ಕೋರಿದರು.
ಸ್ವಚ್ಛ, ಸ್ವಾಸ್ಥ, ಸುರಕ್ಷಿತ ಮಹಾ ಕುಂಭಮೇಳ :
ಈ ಬಾರಿಯ ಮಹಾ ಕುಂಭ ಮೇಳದಲ್ಲಿ ಸ್ವಚ್ಛ, ಆರೋಗ್ಯಕರ, ಸುರಕ್ಷಿತ ಮತ್ತು ಡಿಜಿಟಲ್ ಮಹಾಕುಂಭವಾಗಿರುತ್ತದೆ. ಒಂದು ಸಲ ಬಳಸುವ ಪ್ಲಾಸ್ಟಿಕ್ ಗಳಿಂದ ಮುಕ್ತವಾದ ಪರಿಸರ ಸ್ನೇಹಿಯಾಗಿಸಲು ಪ್ರತಿಜ್ಞೆ ಕೈಗೊಳ್ಳಲಾಗಿದೆ. ಈ ಉಪಕ್ರಮದ ಭಾಗವಾಗಿ ಎಲೆಯ ತಟ್ಟೆ, ಬಟ್ಟಲುಗಳ ವ್ಯಾಪಾರಿಗಳ ಹಲವು ಅಂಗಡಿಗಳಿಗೆ ಮೇಳದ ಪ್ರದೇಶದಲ್ಲಿ ಅವಕಾಶ ನೀಡಲಾಗಿದೆ ಮತ್ತು 400 ಶಾಲೆಗಳ ಪ್ರಾಂಶುಪಾಲರೊಂದಿಗೆ ಸಭೆಗಳನ್ನು ನಡೆಸಿ 4 ಲಕ್ಷ ಮಕ್ಕಳಿಗೆ ಸ್ವಚ್ಚತೆಯ ಅರಿವನ್ನು ನೀಡಲಾಗಿದೆ. ಇದಲ್ಲದೆ `ಹರ್ ಘರ್ ದಸ್ತಕ್’ ಅಭಿಯಾನದಡಿಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ಕಾಪಾಡುವ ಸಂದೇಶವನ್ನು ಪ್ರತಿ ಮನೆಗೂ ನೀಡಲಾಗಿದೆ.
ಸಮಗ್ರ ಆರೋಗ್ಯ ಸೇವಾ ಸೌಲಭ್ಯ ವ್ಯವಸ್ಥೆ :
ಯಾತ್ರಿಗಳು, ಸಾಧುಗಳು, ಸಂತರಿಗೆ ಹಾಗೂ ಪ್ರವಾಸಿಗರಿಗೆ ಆರೋಗ್ಯಸೇವಾ ಸೌಲಭ್ಯಕ್ಕಾಗಿ ಹೆಚ್ಚಿನ ಸಂಖ್ಯೆಯ ವೈದ್ಯರನ್ನು ನಿಯೋಜಿಸಲಾಗಿದೆ. ಪೆರೇಡ್ ಮೈದಾನದಲ್ಲಿ 100 ಹಾಸಿಗೆಗಳ ಆಸ್ಪತ್ರೆ ಪ್ರಾರಂಭಿಸಲಾಗಿದೆ. 20 ಹಾಸಿಗೆಗಳ ಎರಡು ಮತ್ತು 8 ಹಾಸಿಗೆಗಳ ಸಣ್ಣ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗುತ್ತಿದೆ.
ಸೇನಾ ಆಸ್ಪತ್ರೆಯಿಂದ 10 ಹಾಸಿಗೆಯ ಐಸಿಯುಗಳನ್ನು ಮೇಳದ ಪ್ರದೇಶದಲ್ಲಿ ಪ್ರಾರಂಭಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ ವೈದ್ಯರು 24 ಗಂಟೆಗಳು ಕರ್ತವ್ಯದಲ್ಲಿರುತ್ತಾರೆ. ಒಟ್ಟು 291 ಎಂಬಿಬಿಎಸ್ ವೈದ್ಯರು ಮತ್ತು ವಿಶೇಷ ತಜ್ಞರು, 90 ಆಯುರ್ವೇದ ಮತ್ತು ಯುನಾನಿ ತಜ್ಞರು ಮತ್ತು 182 ಶುಶ್ರೂಷಕ ಸಿಬ್ಬಂದಿಯಿರುತ್ತಾರೆ. ಈ ಆಸ್ಪತ್ರೆಗಳಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕ ವಾರ್ಡ್ ಗಳು, ಹೆರಿಗೆ ಕೋಣೆಗಳು ,ತುರ್ತು ವಾರ್ಡ್ ಗಳು ಹಾಗೂ ವೈದ್ಯರ ಕೋಣೆಗಳು ಲಭ್ಯವಿರುತ್ತವೆ ಎಂದು ಇಬ್ಬರು ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಐದು ಲಕ್ಷ ವಾಹನಗಳ ನಿಲ್ದಾಣಕ್ಕೆ ಅವಕಾಶ :
101 ಸ್ಮಾರ್ಟ್ ಪಾರ್ಕಿಂಗ್ ಸೌಲಭ್ಯಗಳನ್ನು ನಿರ್ಮಿಸಿ, ಪ್ರತಿನಿತ್ಯ ಐದು ಲಕ್ಷ ವಾಹನಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಪಾರ್ಕಿಂಗ್ ಪ್ರದೇಶ 1,867.04 ಹೆಕ್ಟೇರ್ ಗಳಷ್ಟು ವಿಸ್ತಾರವಾಗಿದೆ. ಇನ್ನು ಕುಂಭ ಮೇಳಕ್ಕೆ ಆಗಮಿಸುವವರಿಗೆ ಶುದ್ಧ ಕುಡಿಯುವ ನೀರು, ಏಕೀಕೃತ ಕಂಟ್ರೋಲ್ ಕಮ್ಯಾಂಡ್ ಸೆಂಟರ್, ಭದ್ರತೆ ಎಐ ಆಧಾರಿತ ಮುಖ ಗುರ್ತಿಸುವ ಸಿಸಿ ಕ್ಯಾಮರಾ, ಸಾವಿರಾರು ಪೊಲೀಸರು, ಮತ್ತು 44 ಘಾಟ್ ಗಳಲ್ಲಿ ಹೂವಿನ ಮಳೆ ಸುರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿದ್ವಯರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉತ್ತರಪ್ರದೇಶ ಹಣಕಾಸು ಇಲಾಖೆ ವಿಶೇಷ ಕಾರ್ಯದರ್ಶಿ ಸಮೀರ್ ವರ್ಮ (Special Secreatary Sameer Verma), ಎಫ್ ಐಸಿಸಿಐ ನ ಉತ್ತರಪ್ರದೇಶ ರಾಜ್ಯದ ಹಿರಿಯ ಸಹಾಯಕ ನಿರ್ದೇಶಕ ಜಯ್ ಶ್ರೀವಾಸ್ತವ (FICCI UP Senior Assistant Director Jai Srivastava), ಉತ್ತರಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.