ನವದೆಹಲಿ, ಡಿ.14 www.bengaluruwire.com : ನೌಕರರ ಭವಿಷ್ಯ ನಿಧಿ ಸಂಘಟನೆಯ (EPFO -ಇಪಿಎಫ್‌ಒ) ಚಂದಾ ದಾರರಿಗೆ ಸಿಹಿ ಸುದ್ದಿ. ಎಟಿಎಂ ಮೂಲಕ ಭವಿಷ್ಯ ನಿಧಿ (Provident Fund- PF) ಹಣವನ್ನು ಹಿಂಪಡೆಯುವ ಸೌಲಭ್ಯ ಕಲ್ಪಿಸಲು ಕೇಂದ್ರ ಕಾರ್ಮಿಕ ಸಚಿವಾಲಯ ಕ್ರಮ ಕೈಗೊಂಡಿದೆ.
ಪಿಎಫ್ ಚಂದಾದಾರರು ಪ್ರಸ್ತುತ ಹಣ ಹಿಂಪಡೆಯಲು ಇಪಿಎಫ್‌ಒಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈ ಪ್ರಕ್ರಿಯೆಯು ಪೂರ್ಣಗೊಳ್ಳಲು 7ರಿಂದ 10 ದಿನಗಳು ಬೇಕಾಗುತ್ತಿತ್ತು. ಇದಾದ ಬಳಿಕ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿತ್ತು. ಇನ್ನು ಮುಂದೆ
ಹೊಸ ವ್ಯವಸ್ಥೆಯಡಿ ಚಂದಾದಾರರ ಅರ್ಜಿಗೆ ಅನುಮೋದನೆ ದೊರೆತ ಬಳಿಕ ಆ ಹಣವನ್ನು ಫಲಾನುಭವಿಗಳು ಎಟಿಎಂನಲ್ಲಿ ಪಡೆದುಕೊಳ್ಳಬಹುದು. ಚಂದಾದಾರರಿಗೆ ಇದಕ್ಕಾಗಿಯೇ ಪ್ರತ್ಯೇಕ ಎಟಿಎಂ ಕಾರ್ಡ್ ನೀಡುವ ಸಾಧ್ಯತೆಯಿದೆ. ಇದರಿಂದ ದೇಶದಲ್ಲಿನ 7 ಕೋಟಿಗೂ ಹೆಚ್ಚು ಚಂದಾದಾರರಿಗೆ ಪ್ರಯೋಜನವಾಗಲಿದೆ.
ಚಂದಾದಾರರಿಗೆ ತ್ವರಿತ ಹಾಗೂ ಸುಲಭವಾಗಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಸುಧಾರಣೆಗೆ ಇಪಿಎಫ್‌ಒ ಒತ್ತು ನೀಡಿದೆ. ಮುಂದಿನ ವರ್ಷದ ಜನವರಿಯಿಂದ ಎಟಿಎಂ ಮೂಲಕ ಪಿಎಫ್ ಹಣ ಪಡೆಯುವ ಹೊಸ ಯೋಜನೆಯು ಜಾರಿಗೊಳ್ಳಲಿದೆ ಎಂದು ಕಾರ್ಮಿಕ ಸಚಿವಾಲಯ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು, ಪಿಟಿಐ ಸುದ್ದಿಸಂಸ್ಥೆಗೆ ವಿವರಿಸಿದ್ದಾರೆ.
ನಿವೇಶನ ಖರೀದಿ, ವೈದ್ಯಕೀಯ ವೆಚ್ಚ, ಮನೆ ನಿರ್ಮಾಣ, ಸೇರಿ ಇತರೆ ಉದ್ದೇಶಗಳಿಗೆ ಚಂದಾದಾರರ ಕ್ಷೇಮುಗಳ ತ್ವರಿತ ಇತ್ಯರ್ಥಕ್ಕೆ ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಹಣ ಹಿಂಪಡೆಯುವ ಪ್ರಕ್ರಿಯೆಗಳು ಮತ್ತಷ್ಟು ಸರಳವಾಗಲಿದೆ ಎಂದು ಅವರು ಹೇಳಿದ್ದಾರೆ.
ಇಪಿಎಫ್‌ಒ ವ್ಯವಸ್ಥೆಯನ್ನು ಬ್ಯಾಂಕಿಂಗ್ ವ್ಯವಸ್ಥೆ (Banking System)ಯ ರೀತಿಯಲ್ಲಿ ಮೇಲ್ದರ್ಜೆಗೇರಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಕ್ಷೇಮು ಇತ್ಯರ್ಥ ಮಾಡುವಾಗ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತೆ. ಇದರಿಂದಾಗಿ ಚಂದಾದಾರರ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಮಿಕ ಕಾರ್ಯದರ್ಶಿ ಸುಮಿತಾ ದಾವ್ರಾ ಪ್ರಕಾರ, ಇಪಿಎಫ್‌ಒ ಸದಸ್ಯರು, ಫಲಾನುಭವಿಗಳು ಅಥವಾ ನಾಮಿನಿಗಳು ಎಟಿಎಂಗಳ ಮೂಲಕ ಅನುಕೂಲಕರವಾಗಿ ಪಿಎಫ್ ಕ್ಲೈಮ್‌ಗಳನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಆದಾಗ್ಯೂ, ಹಣ ಹಿಂಪಡೆಯುವಿಕೆಯು ಒಟ್ಟು ಪಿಎಫ್ ಬ್ಯಾಲೆನ್ಸ್‌ನ ಶೇ.50 ಗೆ ಸೀಮಿತವಾಗಿರುತ್ತದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಸದಸ್ಯರ ನಿಧನದ ಸಂದರ್ಭದಲ್ಲಿ ಫಲಾನುಭವಿಗಳು ಈ ವೈಶಿಷ್ಟ್ಯವನ್ನು ಬಳಸಬಹುದು. ಇದನ್ನು ಸಕ್ರಿಯಗೊಳಿಸಲು, ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಮೃತ ಸದಸ್ಯರ ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಬೇಕಾಗಬಹುದು. ನಿಖರವಾದ ಕಾರ್ಯವಿಧಾನದ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.
ಇಪಿಎಫ್ ಒ ಈಗಾಗಲೇ ಸದಸ್ಯರಿಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಇಪಿಎಫ್ ಖಾತೆಗಳೊಂದಿಗೆ ಲಿಂಕ್ ಮಾಡಲು ಅನುಮತಿ ನೀಡುತ್ತಿದೆ. ಆದಾಗ್ಯೂ, ಈ ವೈಶಿಷ್ಟ್ಯವು ಅಸ್ತಿತ್ವದಲ್ಲಿರುವ ಸಂಪರ್ಕವನ್ನು ಬಳಸುತ್ತದೆಯೇ ಅಥವಾ ಎಟಿಎಮ್ ಹಿಂಪಡೆಯುವಿಕೆಗಾಗಿ ಹೊಸ ವ್ಯವಸ್ಥೆಯನ್ನು ಪರಿಚಯಿಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ. ಕಾರ್ಮಿಕ ಸಚಿವಾಲಯವು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.
ಇಪಿಎಫ್‌ಒದಿಂದ ಇಪಿಎಫ್ ಖಾತೆದಾರರಿಗೆ ಉದ್ಯೋಗಿಯ ಠೇವಣಿ ಆಧಾರಿತ ವಿಮಾ (Employees’ Deposit Linked Insurance Scheme -EDLI) ಸೌಲಭ್ಯ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದಡಿ ಖಾತೆದಾರರಿಗೆ ಗರಿಷ್ಠ ₹7 ಲಕ್ಷದವರೆಗೆ ವಿಮೆ ಲಭ್ಯವಾಗುತ್ತದೆ. ಉದ್ಯೋಗಿಯು ಮೃತಪಟ್ಟರೆ ಆತನ ಕುಟುಂಬಕ್ಕೆ ಆರ್ಥಿಕ ನೆರವು ದೊರೆಯಲಿದೆ. ಇಡಿಎಲ್‌ಐನಡಿ ಲಭಿಸುವ ಹಣವನ್ನು ಸಂತ್ರಸ್ತ ಕುಟುಂಬದವರು ಎಟಿಎಂ ಮೂಲಕ ಪಡೆಯುವ ಅವಕಾಶ ಕಲ್ಪಿಸಲು ಸಚಿವಾಲಯ ಕ್ರಮ ಕೈಗೊಳ್ಳುತ್ತಿದೆ.