ಬೆಂಗಳೂರು, ಡಿ.13 www.bengaluruwire.com : ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ (BJP Government) ಆರಂಭಿಸಿದ್ದ ಏಳು ಹೊಸ ವಿಶ್ವವಿದ್ಯಾನಿಲಯ (New 7 Universities)ಗಳಿಗೆ ಸೂಕ್ತ ಹಣಕಾಸಿನ ಕೊರತೆ, ಸ್ವಂತ ಕಟ್ಟಡವಿಲ್ಲದೆ, ಮೂಲ ಸೌಕರ್ಯವಿಲ್ಲದೆ ಹಲವು ಕುಲಪತಿಗಳಿಗೆ ಓಡಾಡಲು ವಿವಿಗಳ ಸ್ವಂತ ಕಾರಿಲ್ಲದೆ ಬಾಡಿಗೆ ಕಾರಲ್ಲಿ ಓಡಾಡುವ ದುಸ್ಥಿತಿ ಒದಗಿಬಂದಿದೆ.
ಏಳು ಹೊಸ ವಿವಿಗಳಿಗೆ ತಲಾ ಏಳು ಕುಲಪತಿಗಳು ನೇಮಕವಾಗಿ ಒಂದು ಮುಕ್ಕಾಲು ವರ್ಷಗಳಾಗುತ್ತಾ ಬಂದರೂ ಹೊಸ ವಿಶ್ವವಿದ್ಯಾಲಯಗಳಲ್ಲಿ ಕೊರತೆಗಳ ದೊಡ್ಡ ಸರಮಾಲೆಯೇ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ 2022-23ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಆಯವ್ಯಯದಲ್ಲಿ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ವಿನೂತನ ಮಾದರಿಯ ಹೊಸ ಡಿಜಿಟಲ್ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿದ್ದರು.
ಸಾಂಪ್ರದಾಯಿಕ ವಿವಿಗಳಿಂದ ಇವು ಸಾಕಷ್ಟು ಭಿನ್ನವಾಗಿರಲಿದ್ದು, ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಇವುಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಸರ್ಕಾರಿ ಆದೇಶವಾಗಿ ವಿಶ್ವ ವಿದ್ಯಾಲಯ ಸ್ಥಾಪನೆಯಾಯಿತು. ಆದರೆ ಈತನಕವೂ ಸರ್ಕಾರದ ನೆರವಿಲ್ಲದೆ, ಮೂಲ ಸೌಕರ್ಯದ ಕೊರತೆಯಿಂದ ಈ ವಿವಿಗಳು ಅತಂತ್ರವಾಗಿಯೇ ಉಳಿದಿದೆ.
ಮೂಲ ವಿವಿ ಬೇರ್ಪಡಿಸಿ ಹೊಸ ವಿವಿಯಾದರೂ ಗ್ರಹಣ ಬಿಟ್ಟಿಲ್ಲ :
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದು, ಬಿಜೆಪಿ ಸರ್ಕಾರ ಬಿದ್ದು ಹೋಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ ಪರಿಸ್ಥಿತಿ ಬದಲಾಗಿಲ್ಲ. ಅಂದಿನಿಂದಲೂ ಈ ವಿವಿಗಳಿಗೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಸ್ನಾತಕೊತ್ತರ ಶಿಕ್ಷಣ ಸಂಸ್ಥೆಗಳನ್ನೇ ಬೇರ್ಪಡಿಸಿ ಮಂಡ್ಯ, ಚಾಮರಾಜನಗರ ಹಾಗೂ ಹಾಸನದಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು ರಚಿಸಲಾಯಿತು. ಗುಲ್ಬರ್ಗ ವಿಶ್ವವಿದ್ಯಾಲಯ ಮೂಲ ವಿಶ್ವವಿದ್ಯಾಲಯವಾಗಿದ್ದು, ಬೀದರ್‌ನಲ್ಲಿ ಹೊಸ ವಿವಿ ಮಾಡಲಾಗಿದ್ದರೆ, ಮಂಗಳೂರು ವಿಶ್ವವಿದ್ಯಾಲಯ ಮೂಲ ವಿವಿಯ ವ್ಯಾಪ್ತಿಯಲ್ಲಿನ ಕೊಡಗಿನಲ್ಲಿ ಹೊಸ ವಿವಿ ಸ್ಥಾಪನೆ ಮಾಡಲಾಗಿತ್ತು. ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಮೂಲ ವಿವಿಯಾಗಿದ್ದು, ಕೊಪ್ಪಳದಲ್ಲಿ ಹೊಸ ವಿವಿ ನಿರ್ಮಾಣ ಮಾಡಲಾಗಿತ್ತು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮೂಲ ವಿವಿಯಾಗಿದೆ. ಬಾಗಲಕೋಟೆಯಲ್ಲಿ ಹೊಸ ವಿವಿ ಸ್ಥಾಪನೆ ಮಾಡಲಾಗಿದ್ದರೆ, ಕರ್ನಾಟಕ ವಿಶ್ವವಿದ್ಯಾಲಯ ಮೂಲ ವಿವಿಯಾಗಿದ್ದು ಹಾವೇರಿಯಲ್ಲಿ ನೂತನ ವಿವಿ ಪ್ರಾರಂಭಿಸಲಾಗಿದೆ.
ಕುಲಪತಿಗಳ ಓಡಾಟಕ್ಕೂ ವಾಹನವಿಲ್ಲ :
ಈ ವಿವಿಗಳ ಕುಲಪತಿ, ಕುಲಸಚಿವರ ಓಡಾಟಕ್ಕೆ ಯಾವುದೇ ವಾಹನ ವ್ಯವಸ್ಥೆ ಇಲ್ಲ. ಸಿಬ್ಬಂದಿ ವರ್ಗದವರ ವೇತನ, ಸೆಮಿಸ್ಟರ್ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಸಾದ್ವಿಲಾರು ವೆಚ್ಚ ಅಥವಾ ಯಾವುದೇ ಪರೀಕ್ಷಾ ಮಂಡಳಿ, ಅಧ್ಯಯನ ಮಂಡಳಿ ಸಭೆಗಳ ವೆಚ್ಚ ಸೇರಿದಂತೆ ದೈನಂದಿನ ಖರ್ಚು ವೆಚ್ಚಗಳಿಗೆ ಸರ್ಕಾರದಿಂದ ಬಿಡಿಗಾಸು ಕೂಡ ನೀಡಿಲ್ಲ ಎಂದು ನೂತನ ವಿಶ್ವ ವಿದ್ಯಾಲಯವೊಂದರ ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿವೆ.
ಈ ಏಳು ವಿವಿಗಳ ನಿರ್ವಹಣೆ, ದೈನಂದಿನ ಆಡಳಿತ ಮತ್ತಿತರ ಕಾರ್ಯಗಳಿಗೆ ತಲಾ ಎರಡು ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಹಿಂದಿನ ಸರ್ಕಾರದಲ್ಲಿ ಆದೇಶ ಹೊರಡಿಸಲಾಗಿದೆ. ಆದರೆ ಈವರೆಗೆ ಕೆಲವು ವಿವಿಗಳಿಗೆ ಈ ಹಣವೇ ಬಂದಿಲ್ಲ ಎಂದು ದೂರಲಾಗಿದೆ.
ಏಳು ವಿವಿ ಸಿಬ್ಬಂದಿ ಮಾಸಿಕ ಸಂಬಳಕ್ಕೆ ಸಮಸ್ಯೆಯಿಲ್ಲ : ಸರ್ಕಾರದ ಸಮಸರ್ಥನೆ :
ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶ್ರೀಕರ್ ಅವರನ್ನು ಪ್ರಶ್ನಿಸಿದಾಗ, “ಏಳು ವಿಶ್ವ ವಿದ್ಯಾಲಯಗಳ ಸರ್ಕಾರದಿಂದ ನೇಮಕವಾದ ಸಿಬ್ಬಂದಿಯ ತಿಂಗಳ ವೇತನ, ಪಿಂಚಣಿ ಭತ್ಯೆಗಳು ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದು ಅದರಂತೆ ಹಣ ಬಿಡುಗಡೆಯಾಗುತ್ತಿರುತ್ತೆ. ವಿವಿನವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಾಗೆಲ್ಲ ಆರ್ಥಿಕ ಇಲಾಖೆ ಅನುಮೋದನೆಯೊಂದಿಗೆ ಹಣ ಬಿಡುಗಡೆಯಾಗುತ್ತಿದೆ. ಕೆಲವು ಸಲ ವಿಶ್ವ ವಿದ್ಯಾಲಯಗಳ ಸಂಯೋಜನಾ ಶುಲ್ಕ, ಪರೀಕ್ಷಾ ಶುಲ್ಕದ ಆದಾಯಂತಹ ಆಂತರಿಕ ಸಂಪನ್ಮೂಲದಿಂದ ವೆಚ್ಚ ಭರಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಆದೇಶವಿದ್ದರೂ 2 ಕೋಟಿ ರೂ. ಅನುದಾನ ಲಭ್ಯವಿಲ್ಲ ಯಾಕೆ? :
“ಹೊಸ ವಿವಿ ಕಾರ್ಯಾಚರಣೆಗೆ, ಇರುವ ಮೂಲ ಸೌಕರ್ಯವನ್ನೇ ಬಳಸಿಕೊಂಡು ಕಾರ್ಯಾಚರಣೆ ಮಾಡಬೇಕು, ಹೊಸ ಕಟ್ಟಡ ಸ್ಥಾಪಿಸಬಾರದು, ಪ್ರತಿ ವಿವಿಗೆ 2 ಕೋಟಿ ರೂ. ಅನುದಾನದ ಮಿತಿ ಸೇರಿದಂತೆ ಹಲವು ಷರತ್ತುಗಳಿವೆ. ಅದರಂತೆಯೇ ನಡೆದುಕೊಂಡು ಹೋಗುತ್ತಿದೆ. ವಿವಿಗಳಿಗೆ ಹೆಚ್ಚು ಅನುದಾನದ ಅವಶ್ಯಕತೆಯಿದ್ದರೆ ನಾವು ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಬೇಕು. ಹಣಕಾಸು ಇಲಾಖೆ ಕೇಳುವ ವಿವರಣೆ, ಸಮಜಾಯುಷಿ, ಸಮರ್ಥನೆ, ದಾಖಲೆಗಳನ್ನು ನೀಡಿದ ಮೇಲಷ್ಟೆ ಅನುದಾನ ಬಿಡುಗಡೆಯಾಗುತ್ತೆ. ಕೆಲವೊಮ್ಮೆ ವಿವಿಗಳ ಸ್ವಂತ ಆಂತರಿಕ ಸಂಪನ್ಮೂಲ ಬಳಕೆಗೂ ಇಲಾಖೆ ಅನುಮೋದನೆ ನೀಡುತ್ತಿದೆ. ಇದೆಲ್ಲಾ ಸಾಮಾನ್ಯ ಪ್ರಕ್ರಿಯೆ” ಎಂದು ಶ್ರೀಕರ್ ಅವರು ಹೇಳಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶ್ರೀಕರ್ ಅವರೇ ಹೇಳಿದಂತೆ ಪ್ರತಿ ವಿವಿಗೆ 2 ಕೋಟಿ ರೂ. ಅನುದಾನದ ಮಿತಿಯಿದೆ. ಹಿಂದಿನ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ವಿವಿಗಳಿಗೆ ಅನುದಾನ ಬಿಡುಗಡೆಗೆ ಸರ್ಕಾರಿ ಆದೇಶವಾದರೂ ಈತನಕವೂ ಬಿಡುಗಡೆಯಾಗಿಲ್ಲ ಏಕೆ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.
ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಿಗಿಂತ ಈ ವಿವಿಗಳು ಭಿನ್ನವಾಗಲಿದ್ದು, ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೆ ಗರಿಷ್ಟ ತಂತ್ರಜ್ಞಾನದ ಬಳಕೆಯೊಂದಿಗೆ ಈ ವಿವಿಗಳು ಕಾರ್ಯನಿರ್ವಹಿಸಲಿವೆ ಎಂದು ಹಿಂದಿನ ಬಿಜೆಪಿ ಸರ್ಕಾರ ನೂತನ ವಿವಿ ಸ್ಥಾಪಿಸುವ ಮುನ್ನ ತಿಳಿಸಿತ್ತು.
ಏಳು ವಿವಿಗಳ ಯಾವೊಂದು ಪ್ರಸ್ತಾವನೆಯೂ ಕಾರ್ಯರೂಪಕ್ಕೆ ಬಂದಿಲ್ಲ :
ಏಳು ವಿವಿಗಳು ನೀಡಿದ ಯಾವೊಂದು ಪ್ರಸ್ತಾವನೆಗಳಿಗೂ ಉನ್ನತ ಶಿಕ್ಷಣ ಇಲಾಖೆಯಿಂದ ಸೂಕ್ತ ಸ್ಪಂದನೆಯಾಗಲಿ, ಹಣಕಾಸು ಅನುದಾನವಾಗಲಿ ಸಿಕ್ಕಿಲ್ಲ. ವಿವಿಗಳು ಹೊಸದಾಗಿ ಆರಂಭವಾಗಿರುವ ಕಾರಣ ಎಲ್ಲವನ್ನೂ ಸ್ವಂತ ಸಂಪನ್ಮೂಲದಿಂದ ವೆಚ್ಚ ಭರಿಸಲಾಗದು. ಒಂದು (2023-24ರಲ್ಲಿ) ವರ್ಷದಿಂದ ಕುಲಪತಿಗಳಿಗೆ ವೇತನವನ್ನು ಸರ್ಕಾರ ನೀಡಿರಲಿಲ್ಲ. ಬಳಿಕವಷ್ಟೇ ವೇತನ ಪಾವತಿಯಾಯಿತು. ಉಪಕುಲಪತಿಗಳ ವಾಹನ, ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು, ಪ್ರಯೋಗಾಲಯಗಳಿಗೆ ಬೇಕಾದ ಉಪಕರಣ ಇಂತಹ ಹಲವು ಕೆಲಸ ಕಾರ್ಯಗಳಿಗೆ ಹಣದ ಅವಶ್ಯಕತೆಯಿದೆ. ಆದರೆ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ವಿವಿಯೊಂದರ ಮೂಲಗಳು ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದೆ.
ಬೀದರ್, ಬಾಗಲಕೋಟೆ ವಿವಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಹೊಸ ವಿವಿಗಳು ರಚನೆಯಾದ ಮೇಲೆ ಮೂಲ ವಿವಿಯಿಂದ ಹೊಸ ವಿಶ್ವವಿದ್ಯಾಲಯಗಳಿಗೆ ಸಿಬ್ಬಂದಿ ವರ್ಗಾವಣೆ ಮಾಡದೆ, ದೈನಂದಿನ ಆಡಳಿತ, ಶಿಕ್ಷಣ ವ್ಯವಸ್ಥೆಗೆ ತೊಡಕಾಗಿದೆ ಎಂದು ಮಾಹಿತಿ ನೀಡಿವೆ.
ಹೊಸ ವಿಶ್ವವಿದ್ಯಾಲಯದ ಮೂಲಸೌಕರ್ಯ ಬಲಪಡಿಸಿ :
ವಿಶ್ವವಿದ್ಯಾಲಯ ಎಂದ ಮೇಲೆ ಶೈಕ್ಷಣಿಕ, ಆಡಳಿತಾತ್ಮಕ ವೆಚ್ಚ ಇರುತ್ತವೆ. ಸಂಶೋಧನೆ ಅಗತ್ಯ ಉಪಕರಣ, ಫೆಲೋಶಿಪ್, ಗ್ರಂಥಾಲಯ, ಹಾಸ್ಟಲ್ ನಂತಹ ಮೂಲ ಸೌಕರ್ಯ ಕಲ್ಪಸದಿದ್ರೆ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟ ಕಲ್ಪಿಸಲು ಹೇಗೆ ಸಾಧ್ಯ? ಎಂದು ರಾಜ್ಯ ಸರ್ಕಾರ ಏಳು ವಿಶ್ವವಿದ್ಯಾಲಯಗಳ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಶಿಕ್ಷಣ ತಜ್ಞರಾದ ನಿರಂಜರ ಆರಾಧ್ಯ ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
“ಕರ್ನಾಟಕದಲ್ಲಿ ಜಿಲ್ಲೆಗೊಂದು ವಿವಿ ಎಂಬ ಕಲ್ಪನೆಯೇ ತಪ್ಪು. ಹೈಸ್ಕೂಲ್, ಕಾಲೇಜು ಜಿಲ್ಲೆಗಳಲ್ಲಿ ನೂರಾರು ತಲೆ ಎತ್ತೋದು ಸರಿ. ಆದರೆ ಉನ್ನತ ಶಿಕ್ಷಣಕ್ಕಾಗಿ ಹೋಗುವವರ ಸಂಖ್ಯೆ ಕಡಿಮೆ. ಹೀಗಿರುವಾಗ ವಿವಿ ಸ್ಥಾಪಿಸಿ ಅವುಗಳಿಗೆ ಮೂಲ ಸೌಕರ್ಯ ಕಲ್ಪಿಸದಿದ್ದರೆ ಶಿಕ್ಷಣ ವ್ಯವಸ್ಥೆ ಬುಡಮೇಲಾದೀತು. ರಾಯಚೂರು, ಕೊಪ್ಪಳ, ಚಾಮರಾಜನಗರ ವಿವಿಯಂತಹ ನೂತನ ವಿವಿಗಳಲ್ಲಿ ಸಾಕಷ್ಟು ಮೂಲಸೌಕರ್ಯ ಕೊರತೆಯಿದೆ. ಹೀಗಾದ್ರೆ ಜನರಿಗೆ ಸರ್ಕಾರಿ ವಿವಿಗಳ ಮೇಲೆ ಆಸಕ್ತಿ ಕಡಿಮೆಯಾಗಿ ಖಾಸಗಿ ಡೀಮ್ಡ್ ಯೂನಿವರ್ಸಿಟಿಯತ್ತ ಹೊರಡುವ ದುಸ್ಥಿತಿ ಬಂದರೆ ಆಶ್ಚರ್ಯವಿಲ್ಲ” ಎಂದು ಶಿಕ್ಷಣ ತಜ್ಞರಾದ ನಿರಂಜರ ಆರಾಧ್ಯ ಅವರು ಎಚ್ಚರಿಸಿದ್ದಾರೆ.
“ಹೀಗಾಗಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸುವ ಬದಲು ಎರಡು- ಮೂರು ಜಿಲ್ಲೆಗಳಿಗೊಂದು ವಿವಿಯನ್ನು ಕ್ಲಸ್ಟರ್ ರೂಪದಲ್ಲಿ ಪ್ರಾರಂಭಿಸಿ ಅವುಗಳಿಗೆ ಪೂರ್ಣ ರೂಪದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಆ ವಿವಿಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮುಂದೆ ಜೀವನ ರೂಪಿಸಿಕೊಳ್ಳಲು ಉತ್ತಮ ಕೆಲಸ ದೊರಕುವಂತಹ ಗುಣಮಟ್ಟದ ಶಿಕ್ಷಣ ಕಲ್ಪಿಸುವಂತಾಗಬೇಕು. ಆಗ ಮಾತ್ರ ವಿವಿ ಸ್ಥಾಪನೆಯ ಉದ್ದೇಶ ಸಫಲವಾಗುತ್ತೆ” ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
2025-26ನೇ ಸಾಲಿನ ಬಜೆಟ್ ನಲ್ಲಿ ಅನುದಾನ ಮೀಸಲಿಡಿ :
ಒಟ್ಟಾರೆಯಾಗಿ ಹಿಂದಿನ ಬಿಜೆಪಿ ಸರ್ಕಾರ ಹೊಸ ವಿವಿ ಸ್ಥಾಪಿಸಿ, ತಮಗೆ ಬೇಕಾದವರನ್ನು ಕುಲಪತಿಗಳಾಗಿ ನೇಮಕ ಮಾಡಿತ್ತು ಎಂಬ ಒಂದೇ ಕಾರಣದಿಂದ ಕಾಂಗ್ರೆಸ್ ಸರ್ಕಾರ ಹಣಕಾಸು ಮತ್ತಿತರ ಅಗತ್ಯ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ. ಶೈಕ್ಷಣಿಕ ಕ್ಷೇತ್ರದ ಬಗ್ಗೆ ಕಾಳಜಿ ಇದ್ದಲ್ಲಿ ಮೊದಲು ಈ ಏಳು ಹೊಸ ವಿವಿಗಳ ಸಮಸ್ಯೆಗಳನ್ನು ಪರಿಹರಿಸಿ, ಗೊಂದಲ ನಿವಾರಿಸಲು ಕ್ರಮ ಕೈಗೊಳ್ಳಬೇಕು. ಆ ಮೂಲಕ ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶಕ್ಕೆ ತಕ್ಕಂತೆ ಕಾರ್ಯಾಚರಿಸುವ ವಾತಾವರಣವನ್ನು ರಾಜ್ಯ ಸರ್ಕಾರ ಆದಷ್ಟು ಬೇಗ ಕಲ್ಪಸಲಿ. 2025-2026ನೇ ಬಜೆಟ್ ನಲ್ಲಿ ಈ ವಿವಿಗಳ ನಿರ್ವಹಣೆ, ಅಭಿವೃದ್ಧಿಗೆ ಅನುದಾನ ಮೀಸಲಿಟ್ಟು ಅವು ಸದ್ಬಳಕೆಯಾಗುವಂತಾಲಿ ಎಂದು ಶೈಕ್ಷಣಿಕ ವಲಯದ ಅಭಿಪ್ರಾಯವಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಬೆಂಗಳೂರು ವೈರ್ ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ.