ಬೆಂಗಳೂರು, ಡಿ.10 www.bengaluruwire.com : ಭಾರತೀಯ ಸೇನೆಯ ಟೊರ್ನಾಡೋಸ್ (Tornadoes) ಎಂದು ಕರೆಯಲ್ಪಡುವ ಆರ್ಮಿ ಸರ್ವೀಸ್ ಕಾರ್ಪ್ಸ್ (Army Service Corps) ಮೋಟಾರ್ ಸೈಕಲ್ ಪ್ರದರ್ಶನ ತಂಡ (Motorcycle Display Team)264 ನೇ ಆರ್ಮಿ ಸರ್ವಿಸ್ ಕಾರ್ಪ್ಸ್ ದಿನ (264th Army Service Corps Corps Day)ದ ಆಚರಣೆಯ ಸಂದರ್ಭದಲ್ಲಿ ಮೂರು ಹೊಸ ವಿಶ್ವ ದಾಖಲೆ (New World Records)ಗಳನ್ನು ಸ್ಥಾಪಿಸಿದೆ.
264 ನೇ ಆರ್ಮಿ ಸರ್ವಿಸ್ ಕಾರ್ಪ್ಸ್ ಕಾರ್ಪ್ಸ್ ದಿನದ ಸ್ಮರಣಾರ್ಥವಾಗಿ ನಡೆದ ಕಾರ್ಯಕ್ರಮವು ಎಎಸ್‌ಸಿ ಸೆಂಟರ್ ಮತ್ತು ಕಾಲೇಜು ಮತ್ತು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ನಡೆಯಿತು. ಎಲ್ಲಾ ಮೋಟಾರ್ ಸೈಕಲ್ ನಲ್ಲಿ ಸಾಹಸಮಯ ಪ್ರಯತ್ನಗಳನ್ನು ಗಿನ್ನೆಸ್ ವಿಶ್ವ ದಾಖಲೆಗಳ ಅಧಿಕೃತ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಸಲಾಯಿತು.
ನಗರದ ಎಎಸ್‌ಸಿ ಸೆಂಟರ್‌ನಲ್ಲಿ ಸುಬೇದಾರ್ ಪ್ರದೀಪ್ ಎಸ್‌ಎಸ್ ಅವರು ಸತತ 10 ಗಂಟೆ 5 ನಿಮಿಷಗಳ ಕಾಲ 361.56 ಕಿ.ಮೀ ನಷ್ಟು ದೂರವನ್ನು ಹಿಮ್ಮುಖವಾಗಿ ಕುಳಿತು ಮೋಟಾರ್ ಸೈಕಲ್ ಸವಾರಿ ನಡೆಸಿ, ಅತಿ ಹೆಚ್ಚಿನ ಕಿ.ಮೀ ಹಿಮ್ಮುಖ ಮೋಟಾರ್ ಸೈಕಲ್ ಸವಾರಿ (Longest backward ride on a motorcycle) ಮಾಡಿ ವಿಶ್ವ ದಾಖಲೆ (World Record) ಸಾಧಿಸಿದರು.

ಇನ್ನು ಹವಾಲ್ದಾರ್ ಮನೀಶ್ ಅವರು ಮೋಟಾರ್ ಸೈಕಲ್ ಹ್ಯಾಂಡಲ್ ಮುಟ್ಟದೆ, ಕೈ ಅಗಲಿಸಿಕೊಂಡು ಮುಂಭಾಗದ ಚಕ್ರ ಮೇಲೆತ್ತಿ 2.349 ಕಿಲೋಮೀಟರ್ ಚಲಿಸಿ ಬೇಸಿಕ್ ಹ್ಯಾಂಡ್ಸ್-ಫ್ರೀ ವೀಲಿಂಗ್ (Basic hands-free wheelie) ಮಾಡಿ ಹೊಸ ದಾಖಲೆಯನ್ನು ಸ್ಥಾಪಿಸಿದರು.


ಸಿಪಾಯಿ ಸುಮಿತ್ ತೋಮರ್ ಮೋಟಾರ್ ಸೈಕಲ್ ಹ್ಯಾಂಡಲ್ ಮೇಲೆ ಕೈಯಿಡದೆ 1,715.4 ಮೀಟರ್‌ಗಳನ್ನು ಕ್ರಮಿಸುವ ಮೂಲಕ ಅತಿ ಹೆಚ್ಚು ದೂರ ನೋ-ಹ್ಯಾಂಡ್ಸ್ ವೀಲಿಂಗ್ (No hands wheelie) ಮಾಡಿ ಈಗಾಗಲೇ ಇರುವ ವಿಶ್ವ ದಾಖಲೆಯನ್ನು ಮುರಿದರು.

ಆರ್ಮಿ ಸರ್ವಿಸ್ ಕಾರ್ಪ್ಸ್ ತಂಡದ ಅಸಾಧಾರಣ ಕೌಶಲ್ಯ, ಶೌರ್ಯ ಮತ್ತು ದೃಢತೆಯನ್ನು ರಾಷ್ಟ್ರಧ್ವಜ ಹಿಡಿದು ಪ್ರೋತ್ಸಾಹಿಸಿದರೆ, ನೆರೆದಿದ್ದ ಗಣ್ಯರು ಶ್ಲಾಘಿಸಿದರು. ಈ ಗಮನಾರ್ಹ ಸಾಧನೆಗಳು ತಂಡದ ಶಿಸ್ತು ಮತ್ತು ಪರಿಣತಿಯನ್ನು ಪ್ರದರ್ಶಿಸುವುದು ಮಾತ್ರವಲ್ಲದೆ ಭಾರತೀಯ ಸಶಸ್ತ್ರ ಪಡೆಗಳಲ್ಲಿನ ನಾವೀನ್ಯತೆ ಮತ್ತು ಶ್ರೇಷ್ಠತೆಯ ಮನೋಭಾವವನ್ನು ಎತ್ತಿ ತೋರಿಸುತ್ತದೆ.






















