ಬೆಂಗಳೂರು, ಡಿ.10 www.bengaluruwire.com : ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಗಳಲ್ಲಿ ಒಬ್ಬರಾದ ಮಾಜಿ ವಿದೇಶಾಂಗ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (SM Krishna) ದೀರ್ಘಕಾಲದ ಅನಾರೋಗ್ಯದ ನಂತರ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಬೆಳಗಿನ ಜಾವ 2.30ಕ್ಕೆ ನಿಧನರಾದರು.
ಕೃಷ್ಣ ಅವರ ನಿಧನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Deputy CM DK Shivakumar) ಸೇರಿದಂತೆ ಅವರ ಅನುಯಾಯಿಗಳು ಹಾಗೂ ಅಭಿಮಾನಿಗಳಿಗೆ ತುಂಬಲಾರದ ನಷ್ಟ ಉಂಟುಮಾಡಿದೆ. ಮಾಜಿ ರಾಜ್ಯಪಾಲರಾದ ಎಸ್.ಎಂ.ಕೃಷ್ಣ ಅವರಿಗೆ 92 ವರ್ಷ ವಯಸ್ಸಾಗಿತ್ತು. ಕೃಷ್ಣ ಅವರು ಪತ್ನಿ ಪ್ರೇಮಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಇಂದು ಬೆಳಗಿನ ಜಾವ ಕೊನೆಯುಸಿರು ಎಳೆದಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸದಾಸಶಿವನಗರದ ನಿವಾಸದಲ್ಲಿ ಇಂದು ಇಡೀ ದಿನ ಇಡಲಾಗುವುದು. ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ (Mandya District) ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಬೆಳಗ್ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ. ನಾಳೆ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಡಿ.10 ರಿಂದ ಮೂರು ದಿನಗಳ ಕಾಲ ರಾಜ್ಯ ವ್ಯಾಪಿ ಶೋಕ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು ಎಂದು ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಮೇ 1, 1932 ರಂದು ಮಂಡ್ಯ ಜಿಲ್ಲೆಯಲ್ಲಿ ಜನಿಸಿದ ಕೃಷ್ಣ ಅವರು ಭಾರತದ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು, 1999 ರಿಂದ 2004 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಮತ್ತು ನಂತರ 2009 ರಿಂದ 2012 ರವರೆಗೆ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು.
ಎಸ್ ಎಂ ಕೃಷ್ಣ ಅವರ ರಾಜಕೀಯ ಜೀವನ ಬಿಂಬಿಸುವ ಕೆಲವು ಅಪರೂಪದ ಛಾಯಾಚಿತ್ರಗಳು :
ಕೃಷ್ಣ ಅವರ ರಾಜಕೀಯ ಪ್ರಯಾಣವು 1960 ರ ದಶಕದಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷ (Praja Socialist Party)ದೊಂದಿಗೆ ಪ್ರಾರಂಭವಾಯಿತು. ಆನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Congress) ಸೇರಿದರು. ಅಲ್ಲಿ ಅವರು 2017 ರಲ್ಲಿ ಬಿಜೆಪಿಗೆ ಸೇರುವ ಮೊದಲು ವಿವಿಧ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು. ಅವರ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಮಹತ್ವದ ನಿರ್ಧಾರಗಳಿಂದ ಐಟಿ ಕ್ಷೇತ್ರದ ಉನ್ನತಿಗೆ ಹಾಗೂ ನಗರದ ಮೂಲಸೌಕರ್ಯ ಕಲ್ಫಿಸಲು ಬಹುವಾಗಿ ಶ್ರಮಿಸಿ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರಲು ಕಾರಣಕರ್ತರಾದರು.
ರಾಜಕೀಯ ವಲಯದ ಸಾವಿರಾರು ಗಣ್ಯರು, ಕೇಂದ್ರ ಹಾಗೂ ರಾಜ್ಯ ಸಚಿವರು, ಅಗಲಿದ ನಾಯಕರಿಗೆ ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಕೃಷ್ಣ ಅವರ ಅಪ್ರತಿಮ ಸೇವೆಯನ್ನು ಸ್ಮರಿಸಿದರೆ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಎಸ್.ಎಂ.ಕೃಷ್ಣ ಅವರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
ನನ್ನ ರಾಜಕೀಯ ಬದುಕಿನ ಮಾರ್ಗದರ್ಶಕ ಎಸ್ ಎಂ ಕೃಷ್ಣ ಅವರ ಅಗಲಿಕೆ ಅಪಾರ ನೋವು ತಂದಿದೆ. ಕರ್ನಾಟಕ ರಾಜಕೀಯ ರಂಗದ ಧೃವ ನಕ್ಷತ್ರ ಕಳಚಿ ಬಿದ್ದಿದೆ ಎಂದು ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.
“ಎಸ್ ಎಂ ಕೃಷ್ಣ ಅವರು ಸಜ್ಜನ, ಸುಶಿಕ್ಷಿತ ರಾಜಕಾರಣಿ, ಅಜಾತಶತ್ರು. ದೂರದೃಷ್ಟಿಯ ಕನಸುಗಾರ. ರಾಜಕೀಯದ ಒಂದೊಂದೇ ಮೆಟ್ಟಿಲುಗಳನ್ನು ಸಾವಧಾನವಾಗಿ ಏರಿದವರು. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಇಡೀ ಜಗತ್ತೇ ತಿರುಗಿನೋಡುವಂತೆ ಮಾರ್ಪಡಿಸಿದವರು. ಬೆಂಗಳೂರನ್ನು ಸಿಲಿಕಾನ್ ಸಿಟಿ, ಐಟಿ- ಬಿಟಿ ನಗರಿಯನ್ನಾಗಿಸಿ ದೇಶದ ಆರ್ಥಿಕತೆಗೆ ಅತಿದೊಡ್ದ ಹಾಗೂ ದೂರದೃಷ್ಟಿಯ ಕೊಡುಗೆ ನೀಡಿದವರು ಎಂದು ಡಿಸಿಎಂ ಅವರು ಸ್ಮರಿಸಿದ್ದಾರೆ.
ಅವರ ಪರಂಪರೆಯು ಭವಿಷ್ಯದ ಪೀಳಿಗೆಗೆ, ವಿಶೇಷವಾಗಿ ಕರ್ನಾಟಕದ ಅಭಿವೃದ್ಧಿ ನಿರೂಪಣೆಯಲ್ಲಿ ಸ್ಫೂರ್ತಿ ನೀಡುತ್ತದೆ. (ಚಿತ್ರಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ)