ತುಮಕೂರು, ಡಿ.04 www.bengaluruwire.com : ಸರ್ಕಾರ ನೀಡುವ ಆಶ್ರಯ ನಿವೇಶನಕ್ಕಾಗಿ ವರ್ಷಗಟ್ಟಲೆ ಕಾದರೂ ಸೈಟ್ ಸಿಗಲ್ಲ. ಅಂತಹ ಸನ್ನಿವೇಶ ಇರುವಾಗ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ಸೆಳೆದಿದ್ದಕ್ಕೆ ಮಹಿಳೆಯೊಬ್ಬರಿಗೆ ಪಟಾಪಟ್ ಅಂತ ನಿವೇಶನ ಭಾಗ್ಯ ಸಿಕ್ಕಿದೆ.
“ಸಿದ್ದರಾಮಯ್ಯ ಸಾಬ್” ಎಂದು ಕೂಗಿ ಕರೆದ ಆ ಮಹಿಳೆಗೆ ಅದುವರೆಗೆ ನಿರ್ಲಕ್ಷ್ಯ ತೋರಿಸಿದ್ದ ತುಮಕೂರು ಜಿಲ್ಲಾಡಳಿತ ಈಗ ನಿವೇಶನ ನೀಡುವ ಭರವಸೆ ಕೊಟ್ಟಿದೆ.
ನಿವೇಶನಕ್ಕಾಗಿ ಮನವಿ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಸೋಮವಾರ ಭಾಗಿಯಾಗಿದ್ದ ಸಮಾರಂಭದಲ್ಲಿ ಕಾದು ಕುಳಿತಿದ್ದ, ಅವರ ಭೇಟಿ ಸಾಧ್ಯವಾಗದೆ ಅವರು ವೇದಿಕೆಯಿಂದ ಕಾರ್ಯಕ್ರಮದಿಂದ ಮರಳುವಾಗ ‘ಸಿದ್ದರಾಮಯ್ಯ ಸಾಬ್’ ಎಂದು ಜೋರಾಗಿ ಕೂಗಿ ಗಮನ ಸೆಳೆದಿದ್ದ ಶಿರಾ ನಗರದ ರಾಬಿಯಾ ಮನವಿಗೆ ಇದೀಗ ಜಿಲ್ಲಾಡಳಿತ ಸ್ಪಂದಿಸಿದೆ.
‘ಸಿದ್ದರಾಮಯ್ಯ ಸಾಬ್’ ಎಂದು ಕೂಗಿದಾಗ, ಆ ಸಂದರ್ಭದಲ್ಲಿ ರಾಬಿಯಾ ಬಾಯಿ ಮುಚ್ಚಿ ಆಕೆಯ ಧ್ವನಿಯನ್ನು ಪೊಲೀಸರು ಅಡಗಿಸಿದ್ದರು. ಆದರೆ, ಆಕೆಯ ಕೂಗಾಟ ಗಮನಿಸಿದ್ದ ಸಿಎಂ, ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಸಂಪರ್ಕಿಸಿ ಸಮಸ್ಯೆ ಆಲಿಸಲಾಗಿದೆ. ಸಮಸ್ಯೆ ತಿಳಿದ ಒಂದೇ ದಿನದಲ್ಲಿ ಆಕೆಗೆ 20/30 ಅಳತೆಯ ನಿವೇಶನ ಹಂಚಿಕೆ ಮಾಡಿ ಶಿರಾ ನಗರಸಭೆ ಆದೇಶ ಹೊರಡಿಸಿದೆ.
ಮಹಿಳೆಯ ಬಡತನವನ್ನು ಮನಗಂಡು ಆಶ್ರಯ ಯೋಜನೆಯಡಿ ರಾಬಿಯಾಗೆ ನಿವೇಶನ ನೀಡಲು 2024ರ ಸೆ. 25ರಂದು ನಡೆದ ಶಿರಾ ಆಶ್ರಯ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದರೂ ಆಕೆಗೆ ಈ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ಸತಾಯಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಮಂಗಳವಾರ ರಾಬಿಯಾ ಅವರನ್ನು ತುಮಕೂರಿಗೆ ಕರೆಸಿಕೊಂಡು ಆಶ್ರಯ ಸಮಿತಿ ಸಭೆಯ ನಡಾವಳಿ ಪತ್ರ ನೀಡಿದ್ದು, ಶೀಘ್ರದಲ್ಲಿಯೇ ಮನೆ ಕೂಡ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ರಾಬಿಯಾಗೆ ಸ್ಪಂದಿಸಿದಂತೆ ರಾಜ್ಯದಲ್ಲಿ ಆಶ್ರಯ ವಸತಿ ನಿವೇಶನಕ್ಕೆ ಕಾದು ಕುಳಿತ ಲಕ್ಷಾಂತರ ಬಡವರಿಗೆ ಸರ್ಕಾರ ಇದೇ ವೇಗದಲ್ಲಿ ಸ್ಪಂದಿಸುತ್ತಾ ಅಂತ ಸಾರ್ವಜನಿಕರು ಈ ಘಟನೆಯ ಬಳಿಕ ಪ್ರಶ್ನಿಸುತ್ತಿದ್ದಾರೆ.