ಬೆಂಗಳೂರು, ಡಿ.04 www.bengaluruwire.com : ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ ಸಂಯೋಜಿತ ಪಟ್ಟಣ (Integrated Township) ಯೋಜನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನೆ ವರದಿಯನ್ನು ತಯಾರಿಸುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಎಸ್. ಸುರೇಶ ರವರು ತಿಳಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧಿಕಾರಿಗಳು, ಕೆ.ಜಿ.ಎಫ್ ಮತ್ತು ಬಂಗಾರಪೇಟೆ ತಹಶೀಲ್ದಾರ್ ಹಾಗೂ ಕೆ.ಜಿ.ಎಫ್ ನಗರಾಭಿವೃದ್ಧಿ ಆಯುಕ್ತರು ಹಾಗೂ ಕೆ.ಜಿ.ಎಫ್ ನಗರ ಯೋಜನಾ ಆಯುಕ್ತರನ್ನು ಒಳಗೊಂಡ ಅಧಿಕಾರಿಗಳ ಸಭೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024-25ನೇ ಸಾಲಿನ ಆಯವ್ಯಯ ಮಂಡನೆ ವೇಳೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಕೋಲಾರ ಚಿನ್ನದ ಗಣಿ ಪ್ರದೇಶ (ಕೆ.ಜಿ.ಎಫ್), ಬಳ್ಳಾರಿ ಮತ್ತು ತುಮಕೂರಿನ ವಸಂತ ನರಸಾಪುರದಲ್ಲಿ ಸಂಯೋಜಿತ ಪಟ್ಟಣ ನಿರ್ಮಾಣದ ಬಗ್ಗೆ ಘೋಷಿಸಿದ್ದಾರೆ.
ಅಂತೆಯೇ ಕೋಲಾರ ಜಿಲ್ಲೆಯ ಕೆ.ಜಿ.ಎಫ್ ಪಟ್ಟಣದಲ್ಲಿ ಸಂಯೋಜಿತ ಪಟ್ಟಣ ನಿರ್ಮಾಣ ಮಾಡಲು ನಗರಾಭಿವೃದ್ಧಿ ಇಲಾಖೆ ಮುಂದಡಿ ಇಟ್ಟಿದೆ. ಇದನ್ನು ಮತ್ತಷ್ಟು ಚುರುಕುಗೊಳಿಸಲು ಕಾರ್ಯಸಾಧ್ಯತಾ ವಿಸ್ತೃತ ಯೋಜನಾ ವರದಿ, ಅಂದಾಜು ವೆಚ್ಚದ ವರದಿಯನ್ನು ಸಿದ್ದಪಡಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಸಚಿವರು ಸೂಚಿಸಿದರು.
ಕೆ.ಜಿ.ಎಫ್ ನಲ್ಲಿ ಸಂಯೋಜಿತ ಪಟ್ಟಣ ನಿರ್ಮಾಣಕ್ಕಾಗಿ ಬಿ.ಜಿ.ಎಂ.ಎಲ್ ಸುಪರ್ದಿಯಲ್ಲಿರುವ ರಾಜ್ಯ ಸರ್ಕಾರದ ಸುಮಾರು 960 ಎಕರೆ ಜಮೀನು ಇದ್ದು, ಇದರಲ್ಲಿ ಕೆ.ಜಿ.ಎಫ್ ತಾಲ್ಲೂಕಿನಲ್ಲಿ ಬಂಗಾರದ ಗಣಿ ಗ್ರಾಮದ ಸರ್ವೆ ನಂ.3 ರಲ್ಲಿ 294 ಎಕರೆ ಜಾಗವನ್ನು ಗುರುತಿಸಲಾಗಿದೆ. ಬಿ.ಇ.ಎಂ.ಎಲ್ ಸುಪರ್ದಿಯಲ್ಲಿದ್ದ ಕೆಲವು ಎಕರೆ ಜಾಗವನ್ನು ನಗರಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಉಳಿದ ಜಮೀನನ್ನು ಪಡೆಯಲು ಕ್ರಮ ವಹಿಸುವಂತೆ ನಗರಾಭಿವೃದ್ಧಿ ಸಚಿವರು ಸೂಚಿಸಿದರು.
ಚೆನೈ-ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿ ಸಂಪರ್ಕಿಸಲು ಸಮೀಕ್ಷೆ :
ಚೆನೈ-ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿ ಕೆ.ಜಿ.ಎಫ್ ಮೂಲಕ ಹಾದು ಹೋಗಿದ್ದು, ಸಂಯೋಜಿತ ಪಟ್ಟಣ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗದಿಂದ ಕೇವಲ 2.5 ಕಿ.ಮೀ ಅಂತರದಲ್ಲಿದೆ. ಎಕ್ಸ್ಪ್ರೆಸ್ ಹೆದ್ದಾರಿಯಿಂದ ಉದ್ದೇಶಿತ ಟೌನ್ ಶಿಪ್ ಗೆ ನೇರ ಸಂಪರ್ಕ ಕಲ್ಪಿಸಲು ಸಾಧ್ಯವೇ ಎಂಬುವುದನ್ನು ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರಾದ ಬೈರತಿ ಸುರೇಶ ಸೂಚಿಸಿದರು.
ಎಕ್ಸ್ಪ್ರೇಸ್ ಹೆದ್ದಾರಿಯ ಮೂಲಕ ಇಂಟಿಗ್ರೇಟೆಡ್ ಟೌನ್ ಶಿಪ್ ಗೆ ನೇರ ರಸ್ತೆ ಕಲ್ಪಿಸಲು ಸಾಧ್ಯವಾಗದಿದ್ದಲ್ಲಿ, ಸರ್ವಿಸ್ ರಸ್ತೆ, ಎತ್ತರಿಸಿದ (Elevated) ರಸ್ತೆ ಅಥವಾ ಮ್ಯಾಜಿಕ್ ಬಾಕ್ಸ್ ಮೂಲಕ ರಸ್ತೆ ನಿರ್ಮಾಣ ಮಾಡಲು ಸಾಧ್ಯವಿದೆಯೇ ಎನ್ನುವುದನ್ನು ಸಮೀಕ್ಷೆ ಮಾಡಿ ಅದಷ್ಟು ಬೇಗ ವರದಿ ನೀಡುವಂತೆ ಕೆ.ಜಿ.ಎಫ್ ನಗರ ಯೋಜನಾ ಪ್ರಾಧಿಕಾರದ ಆಯುಕ್ತರಿಗೆ ಸಚಿವ ಬೈರತಿ ಸುರೇಶ ಸೂಚಿಸಿದರು.
ಕೆ.ಜಿ.ಎಫ್ ನಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣದ ಬಗ್ಗೆ ವಿಸ್ತೃತ ವರದಿಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲಕ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ಸೂಚಿಸಿದರು. ಇದಕ್ಕಾಗಿ ಖಾಸಗಿ ಕಂಪನಿಗಳನ್ನು ಆಹ್ವಾನಿಸಲು ಟೆಂಡರ್ ಕರೆಯಲು ಸಹ ಸಚಿವ ಬೈರತಿ ಸುರೇಶ ಸೂಚಿಸಿದರು.
ವಿಭಿನ್ನ ಹಾಗೂ ವಿಶಿಷ್ಟವಾದ ಪಟ್ಟಣ ರಚನೆಗೆ ಚಿಂತನೆ :
ವಸತಿ ಯೋಜನೆ, ಕೈಗಾರಿಕೆಗಳು, ಆರೋಗ್ಯ ಘಟಕಗಳು ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಮುಂಗಟ್ಟುಗಳು, ಬ್ಯಾಂಕ್ಗಳು, ಉದ್ಯಾನವನ, ಮನೋರಂಜನ ತಾಣಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ, ಈ ಯೋಜನೆಯಿಂದಾಗಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಮತ್ತು ಉತ್ತಮ ವಸತಿ ಯೋಜನೆಯ ವಿಭಿನ್ನ ಹಾಗೂ ವಿಶಿಷ್ಟವಾದ ಪಟ್ಟಣವನ್ನು ಕೆ.ಜಿ.ಎಫ್ ನಲ್ಲಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷರು ಹಾಗೂ ಬಂಗಾರಪೇಟೆ ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಎಂ. ದೀಪ, ಕೆ.ಯು.ಐ.ಡಿ.ಎಫ್.ಸಿ ವ್ಯವಸ್ಥಾಪಕ ನಿರ್ದೇಶಕರು ಬಿ. ಶರತ್, ಮುಖ್ಯ ಅಭಿಯಂತರ ನಂದೀಶ್ ಕುಮಾರ್, ಬಂಗಾರಪೇಟೆ ಮತ್ತು ಕೆ.ಜಿ.ಎಫ್ ತಹಶೀಲ್ದಾರ್, ಕೆ.ಜಿ.ಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.