ಬೆಂಗಳೂರು, ಡಿ.03 www.bengaluruwire.com : ರಾಜಧಾನಿ ಬೆಂಗಳೂರಿನ ಬೃಹತ್ ಕೆರೆ ಬೆಳ್ಳಂದೂರು ಕೆರೆ ಪುನಶ್ಚೇತನ ಯೋಜನೆ (Bellandur Lake Rejuvenation) ಯು 2020 ರಲ್ಲಿ ಆರಂಭವಾಗಿ, ನಿರಂತರ ವಿಳಂಬ, ಹಣಕಾಸಿನ ಕೊರತೆ ಮತ್ತು ಅಸಮರ್ಪಕ ಯೋಜನೆಗಳಿಂದ ತೊಂದರೆಗೀಡಾಗಿದೆ. ನಾಗರಿಕ ಗುಂಪುಗಳು ಮತ್ತು ಸ್ವಯಂಸೇವಕರ ಪ್ರಯತ್ನಗಳ ಹೊರತಾಗಿಯೂ, ಯೋಜನೆಯ ಪ್ರಗತಿಯು ನಿಧಾನವಾಗಿದೆ ಮತ್ತು ಈ ಕೆರೆಯ ಪುನಶ್ಚೇತನ ಯೋಜನೆಯ ಭವಿಷ್ಯವು ಅನಿಶ್ಚಿತವಾಗಿದೆ.
ಯೋಜನೆಯ ಪ್ರಸ್ತುತ ಸ್ಥಿತಿಯು ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಅಂದಾಜು 32.33 ಲಕ್ಷ ಕ್ಯೂಬಿಕ್ ಮೀಟರ್ ಹೂಳು ಪೈಕಿ 22.69 ಲಕ್ಷ ಕ್ಯೂಬಿಕ್ ಮೀಟರ್ (ಶೇ.70) ಮಾತ್ರ ಈತನಕ ತೆಗೆಯಲಾಗಿದ್ದು, ಇನ್ನು ಶೇ.30 ಹೂಳು ತೆಗೆಯಲಾಗಿಲ್ಲ. ಮಾನ್ಸೂನ್ ಮತ್ತು ಕೆಸರುಮಯ ಪರಿಸ್ಥಿತಿಗಳಿಂದ ಹೂಳು ತೆಗೆಯುವ ಕೆಲಸಕ್ಕೆ ಅಡ್ಡಿಯಾಗಿದೆ. ಆದರೆ ಕಳಪೆ ಯೋಜನೆ ನಿಜವಾದ ಸಮಸ್ಯೆಯಿದು ಸ್ಥಳೀಯ ನಾಗರಿಕರು ದೂರುತ್ತಾರೆ. 2024ರ ಡಿಸೆಂಬರ್ ವೇಳೆಗೆ ಪರಿಷ್ಕೃತ ಗಡುವಿನಲ್ಲಿ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುವುದು ಮರೀಚಿಕೆಯಾಗಿದೆ.
ಜೌಗು ಪ್ರದೇಶ ನಿರ್ಮಾಣ ವಿಳಂಬ :
ಯೋಜನೆಯ ಮತ್ತೊಂದು ನಿರ್ಣಾಯಕ ಅಂಶವಾದ ಜೌಗು ಪ್ರದೇಶ ನಿರ್ಮಾಣ (Wetland Construction) ವಿಳಂಬವಾಗಿದೆ. ಕೋರಮಂಗಲ ಮತ್ತು ಅಗರ ಕಣಿವೆಯಲ್ಲಿ ಕೇವಲ ಶೇ.30 ರಷ್ಟು ಜೌಗು ಪ್ರದೇಶ ಕಾಮಗಾರಿ ಪೂರ್ಣಗೊಂಡಿದ್ದು, ಎಚ್‌ಎಎಲ್, ಎಸ್‌ಟಿ ಬೆಡ್ ಮತ್ತು ಇಬ್ಲೂರಿನಲ್ಲಿನ ಮೂರು ಪ್ರಮುಖ ವೆಟ್‌ಲ್ಯಾಂಡ್ ಯೋಜನೆಗಳು ಹಣಕಾಸಿನ ಕೊರತೆಯಿಂದಾಗಿ ಸ್ಥಗಿತಗೊಂಡಿವೆ. ಯೋಜನೆಯು ಎದುರಿಸುತ್ತಿರುವ ಹಣಕಾಸಿನ ನಿರ್ಬಂಧಗಳು ಗಮನಾರ್ಹವಾಗಿವೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT – ಎನ್‌ಜಿಟಿ) ಮಂಜೂರು ಮಾಡಿದ ₹ 500 ಕೋಟಿ ಎಸ್‌ಕ್ರೊ ನಿಧಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಆರ್ಥಿಕ ಸಂಪನ್ಮೂಲ ಗಮನಾರ್ಹ ಕೊರತೆಯಾಗಿದೆ.
ಕೊಳಚೆ ನೀರು ಸಂಸ್ಕರಣಾ ಘಟಕಗಳಿಗೆ (ಎಸ್‌ಟಿಪಿ) ₹250 ಕೋಟಿ, ಬೆಳ್ಳಂದೂರು ಕೆರೆಗೆ ₹100 ಕೋಟಿ, ಉಳಿದ ಮೊತ್ತದಲ್ಲಿ ಹೂಳು ತುಂಬಿರುವ ಗ್ರಾಮಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಬಿಬಿಎಂಪಿ ಮಾರ್ಷಲ್ ಗಳು ಬೆಳ್ಳಂದೂರು ಕೆರೆಯಲ್ಲಿ ಘನತ್ಯಾಜ್ಯ ಹಾಕುವುದನ್ನು ತಡೆಯಲು, ಒತ್ತುವರಿ ನಿಗ್ರಹಿಸಲು, ವಿಫಲರಾಗಿದ್ದಾರೆ ಎಂದು ಸಿಟಿಜನ್ ಚೇಂಜ್ ಮೇಕರ್ಸ್ (Citizen Change Makers) ಸಂಸ್ಥೆ ತಿಳಿಸಿದೆ. ಯೋಜನೆಯ ಪ್ರಗತಿಯ ಬಗ್ಗೆ ನಾಗರಿಕರು ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ. “ಎರಡು ವರ್ಷಗಳಲ್ಲಿ ನೆಲದ ಮೇಲೆ ಹೆಚ್ಚು ಕೆಲಸವಾಗಲಿಲ್ಲ. ಈ ವೇಗದಲ್ಲಿ ಕೆಲಸ ಮುಂದುವರೆದರೆ ಈ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ದಶಕ ತೆಗೆದುಕೊಳ್ಳುತ್ತದೆ” ಎಂದು ಸಿಟಿಜನ್ ಚೇಂಜ್ ಮೇಕರ್ ಸಂಸ್ಥೆಯ ಸೋನಾಲಿ ಸಿಂಗ್ ಹೇಳಿದ್ದಾರೆ.
ಕೆರೆಯಲ್ಲಿ ಅಕ್ರಮ ಚಟುವಟಿಕೆ :
ಯೋಜನೆಯ ಸವಾಲುಗಳು ಬಹುಮುಖವಾಗಿವೆ. ಅಂಬೇಡ್ಕರ್ ಕಾಲೋನಿಯಲ್ಲಿನ ಅತಿಕ್ರಮಣಗಳು ಬಗೆಹರಿಯದೆ ಉಳಿದಿದ್ದು, ಭದ್ರತೆ ಹಾಗೂ ನಿರ್ವಹಣೆ ಕೊರತೆಯಿಂದ ಕೆರೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ತುತ್ತಾಗುತ್ತಿದೆ. ಘನತ್ಯಾಜ್ಯ ಮತ್ತು ಸಂಸ್ಕರಿಸದ ಕೊಳಚೆಯ ಸಂಗ್ರಹಣೆಯು ಕೆರೆಯನ್ನು ಹಾಳುಮಾಡುವುದನ್ನು ಮುಂದುವರೆಸಿದೆ. ಇದು ಸ್ಥಳೀಯ ನಿವಾಸಿಗಳ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಈ ಸವಾಲುಗಳನ್ನು ಎದುರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಿಟಿಜನ್ ಚೇಂಜ್ ಮೇಕರ್ಸ್ ಗ್ರೂಪ್ ಸರ್ಕಾರವನ್ನು ಒತ್ತಾಯಿಸಿದೆ.
ಹೂಳೆತ್ತುವಿಕೆ ಮತ್ತು ಜೌಗು ಪ್ರದೇಶ ನಿರ್ಮಾಣವನ್ನು ಪುನರಾರಂಭಿಸಲು ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲು, ಎನ್‌ಜಿಟಿ ಶಿಫಾರಸು ಮಾಡಿದ ವೈಜ್ಞಾನಿಕ ಯೋಜನೆಗೆ ಬದ್ಧತೆ, ಅತಿಕ್ರಮಣಗಳ ಪರಿಹಾರ, ಭದ್ರತೆಯ ವರ್ಧನೆ, ಒಳಚರಂಡಿ ಸಂಸ್ಕರಣೆ ಮತ್ತು ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ : Bellandur – Varthur Lake Restoration | ಕುಂಟುತ್ತಾ ಸಾಗುತ್ತಿದೆ ಬೆಳ್ಳಂದೂರು- ವರ್ತೂರು ಕೆರೆ ಹೂಳೆತ್ತುವ ಕಾಮಗಾರಿ : ಏನು ಮಾಡುತ್ತಿದೆ ಬಿಡಿಎ ?
ಬೆಂಗಳೂರು ಜಲಮಂಡಳಿಯು (BWSSB), ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KSPCB)ಯ ಜೊತೆಗೆ ಸೇರಿಕೊಂಡು 110 ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ (Sewage Treatment Plant) ಅಳವಡಿಸುವಲ್ಲಿ ವಿಫಲವಾಗಿರುವ ಕಾರಣದಿಂದಾಗಿ ಸಂಸ್ಕರಿಸದ ಕೊಳಚೆ ನೀರು ಬೆಳ್ಳಂದೂರು ಕೆರೆಯ ಒಡಲನ್ನು ಸೇರುತ್ತಿದೆ ಎಂದು ಸೋನಾಲಿ ಸಿಂಗ್ ಆರೋಪಿಸಿದ್ದಾರೆ.
ಪೂರ್ವ ಬೆಂಗಳೂರಿನ ನಾಗರೀಕರ ಭವಿಷ್ಯಕ್ಕೆ ಬೆಳ್ಳಂದೂರು ನಿರ್ಣಾಯಕ :
ಬೆಳ್ಳಂದೂರು ಕೆರೆ ಪುನರುಜ್ಜೀವನವು ಕೇವಲ ಪರಿಸರದ ಸಮಸ್ಯೆಯಲ್ಲ. ಆದರೆ ಪೂರ್ವ ಬೆಂಗಳೂರಿನ ಭವಿಷ್ಯದ ಜಲ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ ನಿರ್ಣಾಯಕವಾಗಿದೆ. ನಾಗರಿಕರು ಈ ಕಾಮಗಾರಿಗಳನ್ನು ಬೆಂಬಲಿಸಲು ಬದ್ಧರಾಗಿದ್ದಾರೆ. ಆದರೆ ಸರ್ಕಾರವು ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು ಮತ್ತು ಸಮಯೋಚಿತ ಕ್ರಮವನ್ನು ಖಚಿತಪಡಿಸಿಕೊಳ್ಳಬೇಕು.
ಬೆಳ್ಳಂದೂರು-ವರ್ತೂರು ಕೆರೆಗಳ ಅಭಿವೃದ್ಧಿ ಸಮಿತಿಯ ಸಾಮಾಜಿಕ ಕಾರ್ಯಕರ್ತ ಜಗದೀಶ್ ರೆಡ್ಡಿ, ‘ ಬೆಳ್ಳಂದೂರು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೇಲ್ವಿಚಾರಣಾ ಸಮಿತಿ ರಚಿಸಬೇಕು. ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗಡಿಯಾರದ ಮುಳ್ಳು ಟಿಕ್ ಟಿಕ್ ಎನ್ನುತ್ತಿದೆ. ಬೆಳ್ಳಂದೂರು ಕೆರೆಯ ಭವಿಷ್ಯವು ತೂಗುಯ್ಯಾಲೆಯಲ್ಲಿದೆ. ಸರ್ಕಾರವು ಸವಾಲನ್ನು ಇನ್ನಾದರೂ ಸಮರ್ಥವಾಗಿ ಎದುರಿಸುತ್ತದೆಯೇ? ಹಾಗೂ ಯೋಜನೆಯನ್ನು ಸಮಯೋಚಿತವಾಗಿ ಪೂರ್ಣಗೊಳಿಸುತ್ತದೆಯೇ ಅಥವಾ ಇದು ಮತ್ತೊಂದು ತಪ್ಪಿದ ಅವಕಾಶವಾಗುತ್ತದೆಯೇ? ಕಾಲವೇ ಉತ್ತರಿಸಬೇಕಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.