ನವದೆಹಲಿ, ಡಿ.2 www.bengaluruwire.com : ಇತ್ತೀಚೆಗೆ ಬಿಡುಗಡೆಯಾಗಿ ದೇಶದಲ್ಲಿ ವ್ಯಾಪಕ ಚರ್ಚೆಯಾಗುತ್ತಿರುವ ‘ದಿ ಸಬರಮತಿ ರಿಪೋರ್ಟ್’ (The Sabarmati Report ) ಚಿತ್ರ ಸಿನಿ ರಸಿಕರಿಂದ ಉತ್ತಮ ವಿಮರ್ಶೆಗೆ ಒಳಾಗಿದೆ. ಈ ಸಿನಿಮಾವನ್ನು ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಸಂಸತ್ ಸಂಕೀರ್ಣದ ಗ್ರಂಥಾಲಯದಲ್ಲಿ ಸಂಜೆ 4 ಗಂಟೆಗೆ ವೀಕ್ಷಿಸಲಿದ್ದಾರೆ.
ಪಿಎಂ ಮೋದಿ ಜೊತೆಗೆ ವಿಕ್ರಾಂತ್ ಮಾಸ್ಸೆ ಮತ್ತು ಸಹ ನಟ ರಿದ್ಧಿ ಡೋಗ್ರಾ, ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ್, ನಿರ್ದೇಶಕ ಧೀರಜ್ ಸರ್ನಾ ಮತ್ತು ಇತರರು ಚಿತ್ರದ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.
ವಿಕ್ರಾಂತ್ ಮಾಸ್ಸೆ ಮತ್ತು ರಾಶಿ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ದಿ ಸಬರಮತಿ ರಿಪೋರ್ಟ್’ ಚಿತ್ರವು 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರಾ ಘಟನೆ (Godhra Incident)ಯನ್ನು ಆಧರಿಸಿ ತಯಾರಿಸಲಾದ ಸಿನಿಮಾವಾಗಿದೆ. ಈ ಸಿನಮಾ ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಗೋಧ್ರಾ ಘಟನೆಯ ನಂತರ ಮಾಧ್ಯಮಗಳು ಹೇಗೆ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದವು? ನಿಜವಾಗಿ ಈ ಪ್ರಕರಣವೇನು? ಎಂಬುದನ್ನು ‘ದಿ ಸಬರಮತಿ ರಿಪೋರ್ಟ್’ ಸಿನಿಮಾದಲ್ಲಿ ನಿರ್ದೇಶಕ ಧೀರಜ್ ಸರ್ನಾ ತೋರಿಸಿದ್ದಾರೆ.
ಹಲವು ಕುತೂಹಲಕಾರಿ ಅಂಶಗಳಿರುವ ಈ ಚಿತ್ರಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆ ಸಲ್ಲಿಸಿದ್ದರು. ಮೋದಿಯವರು ಈ ಚಿತ್ರದ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ನಂತರ ಬಿಜೆಪಿ ಆಡಳಿತ ನಡೆಸುತ್ತಿರುವ ಮಧ್ಯಪ್ರದೇಶದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಬಳಿಕ ಬಿಜೆಪಿ ಆಡಳಿತದ ರಾಜ್ಯ ಹರಿಯಾಣ ಸದ್ಯ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಾಗಿ ಹೇಳಿದೆ.
ಗೋಧ್ರಾ ಘಟನೆ ನಡೆದಾಗ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಫೆಬ್ರವರಿ 27, 2002 ರಂದು, ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದ ಬೆಂಕಿಯ ಘಟನೆಯು ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ 59 ಜನರನ್ನು ಆಹುತಿ ತೆಗೆದುಕೊಂಡಿತ್ತು.
ಸಿನಿಮಾ ನ.15 ರಂದು ಬಿಡುಗಡೆಯಾದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಚಿತ್ರದ ಬಗ್ಗೆ ಎಕ್ಸ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.