ಬೆಂಗಳೂರು, ನ.30 www.bengaluruwire.com : ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ (ಕೆಎಸ್ ಡಿಎಂಎ) ನಗರದ ಬಸವನಗುಡಿಯಲ್ಲಿ ಶನಿವಾರ ಸುವರ್ಣ ಸಂಭ್ರಮ ರಾಜ್ಯೋತ್ಸವ-2024 ಕಾರ್ಯಕ್ರಮ ನಡೆಯಿತು.
ಸುವರ್ಣ ಸಂಭ್ರಮ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅಬಲಾಶ್ರಮ ಅಧ್ಯಕ್ಷರು ಹಾಗೂ ಖ್ಯಾತ ಅಂಕಲಾಜಿಸ್ಟ್ ಡಾ.ವಿಜಯಲಕ್ಷ್ಮಿ ದೇಶಮಾನೆ, ಅಬಲಾಶ್ರಮ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳ ಬಗ್ಗೆ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಯೋಜನೆ ಮೂಲಕ ಅತಿದೊಡ್ಡ ಕೊಡುಗೆ ಸಮಾಜಕ್ಕೆ ನೀಡಿದಂತಾಗಿದೆ. ಇದರಿಂದಾಗಿ ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ಉತ್ತಮ ಸಂವಹನ, ಮಾಹಿತಿ ಹಂಚಿಕೆಗೆ ಅನುಕೂಲವಾಗಿದೆ ಎಂದು ಹೇಳಿದರು.

ಮಾಧ್ಯಮ ಸಂವಾದದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಹೊಸ ಅವಿಷ್ಕಾರಗಳ ವಿಷಯದ ಬಗ್ಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಾಂಬೆ ಐಐಟಿ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ತಜ್ಞರಾದ ಚೈತನ್ಯ ಬೈಲಿ, ನೋವು (Pain) ಹಾಗೂ ಸಂತೋಷ (Pleasure) ಸುದ್ದಿಗಳಿಗೆ ಹೆಚ್ಚು ಹೆಚ್ಚು ಮಾರ್ಕೆಟಿಂಗ್ ಮಾಡುವ ಅವಶ್ಯಕತೆಯಿದೆ. ಯೂಟ್ಯೂಬ್, ಗೂಗಲ್ ಆಡ್, ಗೂಗಲ್ ಮೈ ಬ್ಯುಸಿನೆಸ್ ನಿಂದ ಆಗುವ ಅನುಕೂಲಗಳು ಹಾಗೂ ಇರುವ ಮಾರ್ಗಗಳ ಬಗ್ಗೆ ಡಿಜಿಟಲ್ ಮಾಧ್ಯಮದ ಪತ್ರಕರ್ತರಿಗೆ ತಿಳಿಸಿಕೊಟ್ಟರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದಿ ಫೈಲ್ ಡಿಜಿಟಲ್ ವೆಬ್ ನ್ಯೂಸ್ ಪೋರ್ಟಲ್ ಸಂಪಾದಕರಾದ ಮಹಂತೇಶ್ ಭದ್ರಾವತಿ, ಕಾಲ ಬದಲಾದಂತೆ, ತಂತ್ರಜ್ಞಾನ ಬದಲಾದಂತೆ ಡಿಜಿಟಲ್ ಮಾಧ್ಯಮದ ಸ್ವರೂಪ ಬದಲಾಗಿದೆ. ಕೋವಿಡ್ ನಂತರ ಡಿಜಿಟಲ್ ಮಾಧ್ಯಮ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತು. ನಾವು ಪ್ರಾರಂಭಿಸಿದ ದಿ ಫೈಲ್ ವೆಬ್ ನ್ಯೂಸ್ ಪೋರ್ಟಲ್ ದಾಖಲೆ ಸಹಿತ ಸುದ್ದಿ ಹಾಕುತ್ತಾ ಬಂದಿದ್ದೇವೆ. ಯಾವುದೇ ಹಣಕಾಸು ನೆರವು ಇಲ್ಲದೇ ಕಳೆದ ನಾಲ್ಕು ವರ್ಷದಿಂದ ಆರ್ ಟಿಐ ಆಧಾರಿತ, ದಾಖಲೆ ಆಧಾರಿತ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ದಿ ಫೈಲ್ ನಲ್ಲಿ ಸುದ್ದಿಗಳನ್ನು, ನಿರಂತರವಾಗಿ ಹಾಕುತ್ತಾ ಬಂದಿದ್ದೇವೆ.
2020 ರಲ್ಲಿ ಕೊವಿಡ್ ಅಕ್ರಮ ಕುರಿತು ಸುದ್ದಿ ಪ್ರಕಟಿಸಿದ ದಾಖಲೆಗಳನ್ನು ಸರ್ಕಾರ ನೇಮಿಸಿದ ಮೈಕಲ್ ಡಿ ಕುನ್ಹಾ ಸಮಿತಿ ದಾಖಲೆಗಳನ್ನು ಸಲ್ಲಿಸಲು ಸೂಚಿಸಿತ್ತು. ಅದರಂತೆ ದಾಖಲೆಗಳನ್ನು ಸಲ್ಲಿಸಿದ್ದೇವೆ. ಇಂತಹ ಸುದ್ದಿಗಳು ಉತ್ತಮ ಸರ್ಕಾರ, ಆಡಳಿತ ನಡೆಸಲು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಟಿವಿ ಸುದ್ದಿ ವಾಹಿನಿಗಳು ಸುದ್ದಿ ಹಾಕುವ ಧಾವಂತದಲ್ಲಿ ಸುದ್ದಿಯನ್ನು ಒಂದು ಬಾರಿ ಕ್ರಾಸ್ ಚೆಕ್ ಮಾಡಿ ಹಾಕಬೇಕಿದೆ. ಈಗಂತೂ ವೆಬ್ ನ್ಯೂಸ್ ಪೋರ್ಟಲ್ ಹೆಚ್ಚೆಚ್ಚು ಪ್ರಾರಂಭವಾಗುತ್ತಿವೆ. ಈ ನಿಟ್ಟಿನಲ್ಲಿ ಸುದ್ದಿಗಳು ಹಾಕುವಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ವಾರ್ತಾ ಇಲಾಖೆ ಜಾರಿಗೆ ತಂದಿರುವ ಡಿಜಿಟಲ್ ನೀತಿ ಸಣ್ಣ ಮಟ್ಟದ ವೆಬ್ ನ್ಯೂಸ್ ಪೋರ್ಟಲ್ ಪ್ರಾರಂಭಿಸಿದವರಿಗೆ ಸಹಕಾರಿಯಾಗಿಲ್ಲ. ಆ ನಿಟ್ಟಿನಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಕೂಡ ಇಲಾಖೆಗೆ ಸ್ವತಂತ್ರ ಮಾಧ್ಯಮಗಳಿಗೂ ಅನುಕೂಲವಾಗುವಂತೆ ಸರ್ಕಾರಕ್ಕೆ ನೀತಿಯಲ್ಲಿ ಬದಲಾವಣೆ ಮಾಡುವಂತೆ ಕೋರುವಂತೆ ಮನವಿ ಮಾಡಿದರು.
ನೋಬ್ಲಿ ಕ್ರೀಮ್ ಎಂಬ ಸ್ವದೇಶಿ ಸಾಮಾಜಿಕ ಮಾಧ್ಯಮ :
ನೋಬ್ಲಿ ಕ್ರೀಮ್ ಸಾಫ್ಟ್ ವೇರ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಹಿರಿಯ ಪತ್ರಕರ್ತ ಪ್ರಶಾಂತ್ ಹೆಬ್ಬಾರ್ ಡಿಜಿಟಲ್ ಮಾಧ್ಯಮ ಮತ್ತು ಆಧುನಿಕ ತಂತ್ರಜ್ಞಾನ ವಿಷಯವಾಗಿ ಮಾತನಾಡುತ್ತಾ, ಭಾರತ 323 ಮಿಲಿಯನ್ ಯುಎಸ್ ಡಾಲರ್ ನಮ್ಮ ದೇಶದ ಹಣ ಸೋಶಿಯಲ್ ಮೀಡಿಯಾ ಕ್ಷೇತ್ರದಿಂದ ವಿದೇಶಕ್ಕೆ ಹೊರಕ್ಕೆ ಹೋಗುತ್ತಿದೆ. ವಿದೇಶಕ್ಕೆ ಹರಿದು ಹೋಗುವ ನಮ್ಮ ಸಂಪನ್ಮೂಲ ಸ್ವದೇಶದಲ್ಲಿನ ಸಂಸ್ಥೆಗಳಿಗೆ ಬಳಕೆಯಾದರೆ ಇಲ್ಲಿನ ಅರ್ಥವ್ಯವಸ್ಥೆಗೆ ಸಹಕಾರಿಯಾಗಲಿದೆ ಎಂದ ಅವರು, ನೋಬ್ಲಿ ಕ್ರೀಮ್ ವೆಬ್ ಸೈಟ್ (ನೋಬ್ಲಿಕ್ರೀಮ್.ಕಾಮ್) ಹಾಗೂ ಸೋಶಿಯಲ್ ಮೀಡಿಯಾ 2020ರಲ್ಲಿ ತಾವು ಪ್ರಾರಂಭಿಸಿದ್ದು, ವರ್ಲ್ಡ್ ಪ್ರೆಸ್ ಬದಲಾಗಿ ನೋಬ್ಲಿ ಕ್ರೀಮ್ ಸಾಫ್ಟ್ ವೇರ್ ಬಳಸಬಹುದು. ಇದು ಸ್ವದೇಶಿ ಆಪ್ ಆಗಿದೆ. ಈ ಅಪ್ ನಲ್ಲಿ ನ್ಯೂಸ್ ಲೆಟರ್ ಅನ್ನು 10 ರಿಂದ 1 ಲಕ್ಷ ಜನರಿಗೆ ನ್ಯೂಸ್ ಲೆಟರ್ ಕಳಿಸಬಹುದು. ಸಾಮಾನ್ಯ ಜನರು ಬ್ಲಾಗ್ ಬರೆಯಬಹುದು. ಅಮೆರಿಕ, ಸಿಂಗಾಪುರ ಮತ್ತಿತರ ದೇಶಗಳಲ್ಲಿ ಇದರ ಸಾಫ್ಟ್ ವೇರ್ ಸಬ್ ಸ್ಕ್ರೈಬರ್ಸ್ ಇದ್ದಾರೆ.
ನೋಬ್ಲಿಕ್ರೀಮ್.ಕಾಮ್ ಅಥವಾ ಗೂಗಲ್ ಆಪ್ ಸ್ಟೋರ್ ನಲ್ಲಿ ಅಪ್ ಡೌನ್ ಲೋಡ್ ಮಾಡಿಕೊಂಡು, ಸೈನಪ್ ಮಾಡಿ ಸೋಶಿಯಲ್ ಮೀಡಿಯಾ, ಜನರ ಅಭಿಪ್ರಾಯ ವ್ಯಕ್ತಪಡಿಸಲು, ಕ್ರಿಯೇಟರ್ ಟೂಲ್, ಎಐ ಬಳಸಿ ಕಂಟೆಂಟ್ ಸೇರಿದಂತೆ ವಿವಿಧ ಅವಕಾಶಗಳನ್ನು ಮಾಡಿಕೊಡಲಾಗಿದೆ. ಈ ಸಾಫ್ಟ್ ವೇರ್ ಅನ್ನು ಬೆಂಗಳೂರಿನ ತಂತ್ರಜ್ಞರೇ ನಿರ್ಮಿಸಿದ್ದಾರೆ. ಈ ಆಪ್ ನಲ್ಲಿ ಕಂಟೆಂಟ್ ಸೃಷ್ಟಿಸಿ, ಹೆಚ್ಚಿನ ಜನರನ್ನು ತಲುಪಬಹುದು. ಪಬ್ಲಿಷ್ ಮಾಡಿರುವ ಕಂಟೆಂಟ್ ಎಷ್ಟು ಜನರು ನೋಡಿದ್ದಾರೆ ಅದರ ಮಾಹಿತಿ ತಿಳಿಯಲಿದೆ. ಈ ಆಪ್ ಮೂಲಕ ಹಣ ಗಳಿಸಬಹುದಾದ ಆಪ್ ಇದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದಿಂದ ಫ್ರೀಡಂ ಟಿವಿ ಡಿಜಿಟಲ್ ಮಾಧ್ಯದ ಮುಖ್ಯಸ್ಥರಾದ ನಾಗರಾಜ್, ಸಮಾಜಸೇವೆ ಕ್ಷೇತ್ರದಲ್ಲಿ ಜ್ಯೋತಿ ಗೌಡ, ಶಾಂತಕುಮಾರ್, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಿ.ಎಂ.ಶಿವರುದ್ರಯ್ಯ ಸೇರಿದಂತೆ ಐವರು ಗಣ್ಯರಿಗೆ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ನಿಂದ ಸುವರ್ಣ ಸಂಭ್ರಮ ರಾಜ್ಯೊತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಆಶಾ ಕೃಷ್ಣಸ್ವಾಮಿ ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿನ ಪರಿಸ್ಥಿತಿ, ಅವಕಾಶ ಮತ್ತು ಸವಾಲುಗಳ ಬಗ್ಗೆ ತಿಳಿಸಿದರು. ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಹನುಮೇಶ್ ಕೆ ಯಾವಗಲ್, ಹಿರಿಯ ಪತ್ರಕರ್ತರಾದ ಶ್ರೀನಾಥ್ ಜೋಶಿ ಹಾಗೂ ಹಾಗೂ ವಿವಿಧ ಡಿಜಿಟಲ್ ಮಾಧ್ಯಮಗಳ ಪತ್ರಕರ್ತರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.