ಬೆಂಗಳೂರು, ನ.29 www.bengaluruwire.com : ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (BMCRI -ಬಿಎಂಸಿಆರ್ ಐ) ಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 200 ಹಾಸಿಗೆಗಳ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (PMSSY – ಪಿಎಂಎಸ್ ಎಸ್ ವೈ) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಾಳಾಗಿದ್ದ ಕೇಂದ್ರೀಕೃತ ಹವಾನಿಯಂತ್ರಿತ ಉಪಕರಣ ಸರಿಪಡಿಸಲಾಗಿದ್ದು, ಎಂದಿನಂತೆ ನಾಳೆಯಿಂದ ಆಯ್ದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ಬಿಎಂಸಿಆರ್ ಐ ನಿರ್ದೇಶಕ ಡಾ.ರಮೇಶ್ ಕೃಷ್ಣ ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಪಿಎಂಎಸ್ ಎಸ್ ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿನ ಕೇಂದ್ರೀಕೃತ ಎಸಿ ಚಿಲ್ಲರ್ ಯೂನಿಟ್ ಕಂಪ್ರೆಸರ್ ಸುಟ್ಟು ಹೋಗಿ, ಶಸ್ತ್ರಚಿಕಿತ್ಸೆ ಕಾರ್ಯಗಳಿಗೆ ಅಡ್ಡಿಯಾಗಿ ರೋಗಿಗಳು ತೊಂದರೆ ಅನುಭವಿಸುವಂತಾಗಿತ್ತು. ತಾಂತ್ರಿಕ ತಜ್ಞರು ಎಸಿ ಉಪಕರಣದಲ್ಲಿನ ಸಮಸ್ಯೆಯನ್ನು ಪತ್ತೆಹಚ್ಚಿ ತಾಂತ್ರಿಕ ಕಾರಣಗಳಿಂದ ಸುಟ್ಟು ಹೋದ ಚಿಲ್ಲರ್ ಯೂನಿಟ್ ಕಂಪ್ರೆಸರ್ ಅನ್ನು ತೆಗೆದು ಹೊಸದನ್ನು ಅಳವಡಿಸಿದ್ದಾರೆ. ಹೀಗಾಗಿ ನಾಳೆಯಿಂದ ಎಂದಿನಂತೆ ನಿಗದಿಯಾಗಿರುವ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.27 ರಂದು ಬಿಎಂಸಿಆರ್ ಐ ಪತ್ರಿಕಾ ಪ್ರಕಟಣೆಯಲ್ಲಿ, ವಿದ್ಯುತ್ ವೋಲ್ಟೇಜ್ ಏರಿಳಿತದಿಂದ ಕೇಂದ್ರೀಕೃತ ಎಸಿಗೆ ಹಾನಿಯಾಗಿದ್ದು ತುರ್ತು, ಕಡಿಮೆ ತುರ್ತು ಶಸ್ತ್ರಚಿಕಿತ್ಸೆ ಹಾಗೂ ಮಧ್ಯಸ್ಥಿಕೆಯ ಪ್ರಕರಣಗಳನ್ನು ಹೊರತುಪಡಿಸಿ, ಎಲೆಕ್ಟಿವ್ ಸರ್ಜರಿಗಳ ದಿನಾಂಕವನ್ನು 3-4 ದಿನಗಳ ಕಾಲ ಮರು ನಿಗದಿ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು.
ವಿದ್ಯುತ್ ವೋಲ್ಟೇಜ್ ಬಗ್ಗೆ ಬೆಸ್ಕಾಂ ಸ್ಪಷ್ಟನೆ :

ಇನ್ನೊಂದೆಡೆ ಬಿಎಂಸಿಆರ್‌ಐಯಲ್ಲಿ ವಿದ್ಯುತ್ ವೋಲ್ಟೇಜ್ ಏರಿಳಿತದಿಂದ ಕೇಂದ್ರೀಕೃತ ಎಸಿ ಹಾನಿಗೊಳಗಾಗಿಲ್ಲ. ಶಸ್ತ್ರ ಚಿಕಿತ್ಸೆಗೆ ಸಮಸ್ಯೆಯಾಗಿದೆ ಎಂದು ಮಾಧ್ಯಮಗಳಲ್ಲಿ ಬುಧವಾರ ವರದಿಯಾಗಿದ್ದು, ಆಸ್ಪತ್ರೆಯ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹಾನಿಗೊಂಡಿರುವುದು, ವಿದ್ಯುತ್ ವೋಲ್ಟೇಜ್ ಅಥವಾ ವಿದ್ಯುತ್ ಸಮಸ್ಯೆಯಿಂದಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಬಿಎಂಅರ್ ಸಿಐ ಎಚ್.ಟಿ ಸ್ಥಾವರವಾಗಿದ್ದು, ಈ ಸ್ಥಾವರಕ್ಕೆ ಎಫ್ -4 ವಿ.ಎಚ್. ಯು.ಎಸ್. ಎಸ್. ಫೀಡರ್ ನಿಂದ ಬೆಸ್ಕಾಂ ವಿದ್ಯುತ್ ಪೂರೈಸುತ್ತಿದೆ. ಈ ಸ್ಥಾವರದ ವಿದ್ಯುತ್ ನಿರ್ವಹಣೆಯನ್ನು ಆಸ್ಪತ್ರೆ ಆಡಳಿತ ಮಂಡಳಿಯು ಹೊರ ಗುತ್ತಿಗೆ ನೀಡಿದ್ದು, ಇದಕ್ಕೆ ಸಂಬಂಧಪಟ್ಟ ಸಿಬ್ಬಂದಿಯಿಂದ , ಬೆಸ್ಕಾಂ ಮಾಹಿತಿ ಪಡೆದಿದ್ದು, ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ಕಟ್ಟಡದ ಹವಾನಿಯಂತ್ರಣ ಚಿಲ್ಲರ್ ವೈಂಡಿಂಗ್ ಸುಟ್ಟು ಹೋಗಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಇದು ನಮ್ಮ ಆಂತರಿಕ ಸಮಸ್ಯೆಯೆಂದು ಎಂದು ಸಿಬ್ಬಂದಿ ಸಿಬ್ಬಂದಿ ತಿಳಿಸಿದ್ದಾರೆ.
ಈ ಫೀಡರ್ ಮೂಲಕ ಆಸ್ಪತ್ರೆಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಅಥವಾ ವೋಲ್ಟೇಜ್ ಏರಿಳಿತವಾಗಲಿ ಕಂಡು ಬಂದಿರುವುದಿಲ್ಲ. ಹಾಗೆಯೇ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಆಸ್ಪತ್ರೆಯಿಂದ ಯಾವುದೇ ದೂರು ಬಂದಿಲ್ಲ ಎಂದು ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. (ಚಿತ್ರಕೃಪೆ : ಡೆಕ್ಕನ್ ಹೆರಾಲ್ಡ್)