ಬೆಂಗಳೂರು, ನ.26 www.bengaluruwire.com : ಸಂವಿಧಾನದ ಬದಲಾವಣೆಗೆ ಈ ನೆಲದಲ್ಲಿ ಅವಕಾಶವಿಲ್ಲ. ಆದರೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನ ಬದಲಾಯಿಸುವ ಮಾತು ಯಾವುದೇ ರಾಜಕೀಯ ಪಕ್ಷಗಳು ಆಡಿದರೂ ಆಕ್ಷೇಪಿಸುವಂತದ್ದೆ. ಈ ಪ್ರಯತ್ನಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಮತ್ತು ಅಧ್ಯಯನ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಕಾರ್ಯಗಾರದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, “ಭಾರತ ಸಾಕಷ್ಟು ವಿಶಿಷ್ಟ ಮತ್ತು ವೈವಿಧ್ಯತೆಗಳನ್ನು ಹೊಂದಿರುವ ರಾಷ್ಟ್ರ. ಈ ದೇಶಕ್ಕೆ ಅನುಗುಣವಾಗುವಂತೆ ಸಂವಿಧಾನ ರಚಿಸಲಾಗಿದೆ. ಭಾರತೀಯ ಸಂವಿಧಾನ ತನ್ನದೇ ಆಶಯ ಮತ್ತು ಮೌಲ್ಯಗಳನ್ನು ಹೊಂದಿದೆ. ಸದ್ಯ ತಮ್ಮ ವೈಯಕ್ತಿಕ, ರಾಜಕೀಯ ವಿಚಾರಧಾರೆಗಳನ್ನು ಪ್ರಚುರಪಡಿಸಲು ಸಂವಿಧಾನದ ಆಶೋತ್ತರಗಳಿಗೆ ಧಕ್ಕೆ ತರುವ ಕೆಲಸವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್.ಜಯಕರ್, ಪ್ರತಿ ಭಾರತೀಯ ಆರಾಧಿಸಬೇಕಾದ ಗ್ರಂಥ ಸಂವಿಧಾನ. ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ವಾತಂತ್ರ್ಯಾನಂತರ ಅನಕ್ಷರತೆ, ಬಡತನ, ಅನಾರೋಗ್ಯ, ನಿರುದ್ಯೋಗ ಸಮಸ್ಯೆಗಳನ್ನು ಎದುರಿಸಿ ಭಾರತ ಪ್ರಬಲ ರಾಷ್ಟ್ರವಾಗಿ ಬೆಳೆದು ನಿಂತಿದೆ. ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ,ಆರ್ಥಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಅಗಾಧವಾಗಿ ಸಾಧಿಸಿದೆ.ಈ ಸಾಧನೆಗೆ ಸಂವಿಧಾನವೇ ಅಡಿಪಾಯ.ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗದರ್ಶನಲ್ಲಿ ರಚಿತವಾದ ಸಂವಿಧಾನ ಭಾರತಕ್ಕೆ ಸ್ಪಷ್ಟ ಗುರಿ ಮತ್ತು ಧ್ಯೇಯಗಳನ್ನು ಒದಗಿಸಿದೆ” ಎಂದರು.
“ಸಂವಿಧಾನದ ಕುರಿತಾದ ಅರಿವು ಮತ್ತಷ್ಟು ಹೆಚ್ಚಾಗಬೇಕು. ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಕುರಿತು ಮತ್ತಷ್ಟು ಅಧ್ಯಯನ ನಡೆಸುವಂತಾಗಬೇಕು. ನಾಡಗೀತೆ, ರಾಷ್ಟ್ರಗೀತೆ, ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು” ಎಂದು ಕುಲಪತಿಗಳು ಕರೆ ನೀಡಿದರು.
ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕು. ಮತದಾರರು ಮತಗಳನ್ನು ಮಾರಿಕೊಂಡು ಮತ ಚಲಾಯಿಸಬಾರದು. ಭಾರತದಲ್ಲಿ ಭ್ರಷ್ಟಾಚಾರ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.ಭ್ರಷ್ಟಾಚಾರ ನಿರ್ಮೂಲನೆಯಾದರೆ ಭಾರತ ಮತ್ತಷ್ಟು ಸದೃಢ ರಾಷ್ಟ್ರವಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುಲಸಚಿವ ಶೇಕ್ ಲತೀಫ್, ಕುಲಸಚಿವ (ಮೌಲ್ಯಮಾಪನ) ಸಿ.ಶ್ರೀನಿವಾಸ್, ಕಾನೂನು ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್ ಗೌಡ, ಡೀನರು ಪ್ರೊ.ಡಾ.ವಿ.ಸುದೇಶ್, ಪ್ರಾಂಶುಪಾಲರು ದಶರಥ್, ಹಿರಿಯ ವಕೀಲ ವಿ.ಸುದೀಶ್ ಪೈ, ಪ್ರೊ.ಹನುಮಂತಪ್ಪ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು.