ಬೆಂಗಳೂರು, ನ.25 www.bengaluruwire.com : “ನೀರು ಬಳಕೆದಾರರ ಸಹಕಾರ ಸಂಘಕ್ಕೆ ಶಕ್ತಿ ತುಂಬಬೇಕು. ಆ ಮೂಲಕ ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತದಂತೆ ರೈತರಲ್ಲಿ ಅರಿವು ಮೂಡಿಸಬೇಕು. ಹಂತಹಂತವಾಗಿ ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ 2024 (Karnataka Irrigation (Amendment) Act 2024) ಅನ್ನು ಜಾರಿಗೊಳಿಸಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೀರಾವರಿ ಇಲಾಖೆ ಇಂಜಿನಿಯರ್ ಗಳಿಗೆ ಮಾರ್ಗದರ್ಶನ ನೀಡಿದರು.
ವಿಕಾಸಸೌಧದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ ಕುರಿತ ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳ ಕಾರ್ಯಾಗಾರವನ್ನು ಶಿವಕುಮಾರ್ ಅವರು ಉದ್ಘಾಟಿಸಿ, ಮಾತನಾಡಿದರು.
“ಸಚಿವರಾದ ಹೆಚ್.ಕೆ ಪಾಟೀಲ್ ಅವರು ನೀರು ಬಳಕೆದಾರರ ಸಹಕಾರ ಸಂಘ ಆರಂಭಿಸಿದ್ದು, ಅದು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ಬಲಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ಚರ್ಚಿಸಿ ಬಜೆಟ್ ನಲ್ಲಿ ಹಣ ಮೀಸಲಿಟ್ಟು, ವಾಲ್ಮಿ (ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ) ನೇತೃತ್ವದಲ್ಲಿ ಈ ಸಹಕಾರ ಸಂಘಗಳಿಗೆ ಜವಾಬ್ದಾರಿ ನೀಡಲಾಗುವುದು. ಈ ಸಂಘಗಳ ಸ್ವರೂಪದ ಜವಾಬ್ದಾರಿ ನಿಮಗೆ ನೀಡುತ್ತಿದ್ದೇವೆ. ಕೆರೆ ತುಂಬಿಸುವ ಯೋಜನೆಗಳಿಗೆ ಬಹಳಷ್ಟು ವೆಚ್ಚ ಮಾಡಲಾಗಿದೆ. ಕುಡಿಯುವ ಉದ್ದೇಶಕ್ಕೆ ತುಂಬಿಸುವ ನೀರನ್ನು ನೀರಾವರಿಗೆ ಬಳಸಿದರೆ ಈ ಯೋಜನೆ ಉದ್ದೇಶವೇನು? ಈ ಬಗ್ಗೆಯೂ ವ್ಯಾಪಕ ಚರ್ಚೆಯಾಗಬೇಕು.
ನೀರು ಬಳಕೆದಾರರ ಫೆಡರೇಷನ್ ಸ್ಥಾಪಿಸಬೇಕು. ಮುಂದಿನ ಎರಡು ಮೂರು ತಿಂಗಳಲ್ಲಿ ಇದರ ಬಗ್ಗೆ ನೀವು ಅವಲೋಕನ ಮಾಡಬೇಕು. ರೈತರಿಗೆ ನೀಡುವ ಉಚಿತ ವಿದ್ಯುತ್ ಗೆ 13 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ನೀರಾವರಿಗೆ ವಿದ್ಯುತ್ ಸಂಪರ್ಕ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ನೀರಾವರಿ ಇಲಾಖೆಯ ಇಂಜಿನಿಯರ್ ಗಳಿಗೆ ಈ ತಿದ್ದುಪಡಿಯ ಸಂಪೂರ್ಣ ಮಾಹಿತಿ ನೀಡಿದ್ದೇವೆ.
ಕಾಲುವೆಯ ಕೊನೆ ಹಂತದವರೆಗೂ ನೀರು ತಲುಪಬೇಕು :
ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ 2024ರಲ್ಲಿ ಬಹಳ ಮಹತ್ತರ ತಿದ್ದುಪಡಿ ತರಲಾಗಿದೆ. ಈ ಕುರಿತು ಇನ್ನಷ್ಟು ಚರ್ಚೆ ನಡೆಯಲಿದ್ದು, ರೈತರನ್ನು ಉಳಿಸುವುದು ನಮ್ಮ ಉದ್ದೇಶ. ಒಬ್ಬರಿಗೆ ಒಂದು ಕಾನೂನು ಮತ್ತೊಬ್ಬರಿಗೆ ಬೇರೆ ಕಾನೂನು ಮಾಡಲು ಸಾಧ್ಯವಿಲ್ಲ. ಈ ತಿದ್ದುಪಡಿ ಮೂಲಕ ಉಪ ಆಯುಕ್ತರ ಅಧಿಕಾರವನ್ನು ಸೂಪರಿಡಿಂಟೆಡ್ ಇಂಜಿನಿಯರ್ ಗೆ ನೀಡಿದ್ದೇವೆ. ನಿಮಗೆ ಸಿಕ್ಕಿರುವ ಅಧಿಕಾರದಿಂದ ಜನರಿಗೆ ಹೆಚ್ಚು ಅನುಕೂಲವಾಗಬೇಕು. ನೀರಾವರಿ ಯೋಜನೆಯಲ್ಲಿ ಕಾಲುವೆಯ ಕೊನೆವರೆಗೂ ಸಮರ್ಪಕವಾಗಿ ನೀರು ತಲುಪಬೇಕು. ಇಲ್ಲದಿದ್ದರೆ, ಯೋಜನೆ ಸಾಕಾರಗೊಳ್ಳುವುದು ಹೇಗೆ?
ಎತ್ತಿನಹೊಳೆ ಯೋಜನೆಯನ್ನು ನಾವು 25 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದೇವೆ. ಇಷ್ಟು ಹಣ ಖರ್ಚು ಮಾಡಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಒದಗಿಸದಿದ್ದರೆ ಹೇಗೆ? ಈ ಯೋಜನೆಯಲ್ಲಿ 3 ತಿಂಗಳಲ್ಲಿ ಸಿಗುವ ನೀರು ಕೇವಲ 24 ಟಿಎಂಸಿಯಷ್ಟು ಮಾತ್ರ. ಮುಂದಿನ ದಿನಗಳಲ್ಲಿ ಇದಕ್ಕೆ ಬೇರೆ ಯೋಜನೆ ಹಾಕಿ ವ್ಯರ್ಥವಾಗಿ ಹರಿಯುತ್ತಿರುವ ನೀರನ್ನು ಬಳಸಿಕೊಳ್ಳುವ ಉದ್ದೇಶ ಹೊಂದಿದ್ದೇವೆ.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಜನರಿಗೆ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವಿದೆ. ಕಾರಣ ಈ ಭಾಗದಲ್ಲಿ 2 ಸಾವಿರ ಅಡಿ ಕೊಳವೆ ಬಾವಿ ಕೊರೆಸಿ ನೀರು ತೆಗೆದು ತರಕಾರಿ, ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ನೀರು ಹೆಚ್ಚಾಗಿ ಸಿಗುತ್ತಿರುವ ಭಾಗಗಳ ಜನರಿಗೆ ನೀರಿನ ಬಳಕೆ ಬಗ್ಗೆ ಹೆಚ್ಚು ಅರಿವಿಲ್ಲ. ಹೀಗಾಗಿ ಈ ತಿದ್ದುಪಡಿ ತರಲಾಗಿದೆ.
ಎತ್ತಿನಹೊಳೆ ಯೋಜನೆ ನೀರು ಕೋಲಾರಕ್ಕೆ ಇನ್ನು ಹೋಗಿಲ್ಲ, ಈಗಾಗಲೇ ಶಾಸಕರುಗಳು 100, 150 ಕೋಟಿ ರೂ. ಮೊತ್ತದ ಯೋಜನೆಗಳನ್ನು ತರುತ್ತಿದ್ದಾರೆ. ಎಲ್ಲಾ ಅಣೆಕಟ್ಟುಗಳ ಗೇಟ್ ಗಳ ದುರಸ್ಥಿಗೆ ನಾವು ಮುಂದಾಗಿದ್ದೇವೆ. ಇದಕ್ಕಾಗಿ ಸಮಿತಿ ರಚಿಸಿ, ವರದಿ ಪಡೆಯಲಾಗಿದೆ. ನನ್ನ ಅವಧಿಯಲ್ಲಿ ಈ ವಿಚಾರದಲ್ಲಿ ಸುಧಾರಣೆ ತರದಿದ್ದರೆ ಮುಂದೆ ಇದು ಸುಧಾರಣೆಯಾಗುವುದಿಲ್ಲ ಎಂದು ಗೊತ್ತಿದೆ ಎಂದು ನುಡಿದರು.
ನೀರಾವರಿ- ಇಂಧನ ಇಲಾಖೆ ಅಧಿಕಾರಿಗಳ ಟಾಸ್ಕ್ ಫೋರ್ಸ್ ರಚನೆ :
ಕಾಲುವೆಗಳಿಂದ ಅಕ್ರಮವಾಗಿ ನೀರನ್ನು ಎತ್ತುವುದನ್ನು ತಡೆಯಲು ನೀರಾವರಿ ಇಲಾಖೆ ಅಧಿಕಾರಿಗಳ ಜತೆಗೆ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸುವ ಇಂಧನ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಟಾಸ್ಕ್ ಫೋರ್ಸ್ ರಚಿಸಲಾಗುವುದು. ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ರಾಜಕೀಯ ಒತ್ತಡಗಳು ಎದುರಾಗಲಿದೆ ಎಂದು ನನಗೆ ಗೊತ್ತಿದೆ. ಹೀಗಾಗಿ ಈ ತಿದ್ದುಪಡಿಯ ಸಾಧಕ ಬಾಧಕಗಳನ್ನು ಈ ಕಾರ್ಯಾಗಾರದಲ್ಲಿ ಚರ್ಚೆ ಮಾಡಿ.
ಜಾಣ್ಮೆಯಿಂದ ತಿದ್ದುಪಡಿ ಕಾನೂನನ್ನು ಜಾರಿಗೆ ತನ್ನಿ:
ಈ ತಿದ್ದುಪಡಿ ಬಂದಿದೆ ಎಂದು ಏಕಾಏಕಿ ನೀವು ನುಗ್ಗಬೇಡಿ. ಕಾನೂನು ಇದೆ ಎಂದು ರೈತರಿಗೆ ಕಿರುಕುಳ ನೀಡಬೇಡಿ. ಹಂತಹಂತವಾಗಿ ಕಾನೂನುಗಳನ್ನು ಜಾರಿಗೊಳಿಸಿ. ಅಕ್ರಮವಾಗಿ ಕಾಲುವೆಗಳಲ್ಲಿ ಮೋಟರ್ ಇಟ್ಟಿರುವ ರೈತರಿಗೆ ತಮ್ಮ ತಪ್ಪಿನ ಬಗ್ಗೆ ಈಗಿನಿಂದಲೇ ಜಾಗೃತಿ ಮೂಡಿಸಿ. ನೀರು ಬಳಕೆದಾರರ ಸಹಕಾರ ಸಂಘದ ಮೂಲಕ ಈ ಜಾಗೃತಿ ಮೂಡಿಸಿ. ಈ ವಿಚಾರದಲ್ಲಿ ನಿಮಗೆ ಇನ್ನಷ್ಟು ಸಶಕ್ತೀಕರಣ ಅಗತ್ಯವಿದ್ದಲ್ಲಿ, ಅದನ್ನು ಚರ್ಚಿಸಿ ಸಲಹೆ ನೀಡಿ. ಈ ವಿಚಾರದಲ್ಲಿ ರೈತರ ಸಹಕಾರ ಬಹಳ ಮುಖ್ಯ ಎಂದರು.
ಶಾಸಕರ ಒತ್ತಡಕ್ಕೆ ಮಣಿಯಬೇಡಿ :
ಶಾಸಕರು ಹೇಳಿದರು ಎಂಬ ಕಾರಣಕ್ಕೆ ಯೋಜನೆಗಳನ್ನು ನೀವುಗಳು ಕೂಡ ಬರೆದು ಕೊಡುತ್ತಿದ್ದೀರಿ. 5 ಕೋಟಿ ವರೆಗೂ ಯೋಜನೆಗಳಿಗೆ ನೀವೇ ಅನುಮತಿ ನೀಡಬಹುದು ಎಂಬ ಕಾರಣಕ್ಕೆ 4.99 ಕೋಟಿ ಎಂದು ಯೋಜನೆ ಅಂದಾಜು ಬರೆದು ಕೊಡುತ್ತಿದ್ದೀರಿ. ಈ ರೀತಿ ಅಂದಾಜು ಮಾಡಲು ನಿಮಗೆ ಹೇಳಿದವರು ಯಾರು? ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಕಾಲದಲ್ಲಿ ಎಲ್ಲವನ್ನು ಹಾಳು ಮಾಡಲಾಗಿದೆ.
ಅವರ ಕಾಲದಲ್ಲಿ 21 ಸಾವಿರ ಕೋಟಿ ರೂ. ಯೋಜನೆಗಾಗಿ ಘೋಷಣೆ ಮಾಡಿದ್ದು, ಅದರಲ್ಲಿ 16 ಸಾವಿರ ಕೋಟಿ ನೀಡಲಾಗಿದೆ. 5 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ ಹಿಡಿದಿಟ್ಟುಕೊಂಡಿದೆ. ಆದರೆ 1 ಲಕ್ಷ ಕೋಟಿ ರೂ. ಮೊತ್ತದ ಕೆಲಸ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಹೇಗೆ ಸಾಧ್ಯ? ಹೊಸ ಯೋಜನೆ ಹೇಗೆ ಕೈಗೊಳ್ಳಬೇಕು? ನೀವುಗಳು ಅಂದಾಜು ಮಾಡುವಾಗ ಲೆಕ್ಕಾಚಾರ ಇರಬೇಕು. ನಾಳೆ ಹೆಚ್ಚುಕಮ್ಮಿಯಾದರೆ, ಈ ಯೋಜನೆ ಅಂದಾಜು ಮಾಡಿಕೊಟ್ಟ ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಸಿದರು.
ನೀವು ಬೇರೆಯವರನ್ನು ಮೆಚ್ಚಿಸಲು ಕೆಲಸ ಮಾಡಬೇಕಿಲ್ಲ. ನಿಮ್ಮ ಆತ್ಮಸಾಕ್ಷಿ ಮೆಚ್ಚಿಸಲು ಕೆಲಸ ಮಾಡಿ. ನೀವು ಶಾಸಕರ ಒತ್ತಡಕ್ಕೆ ಮಣಿಯಬೇಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಾಗಾರದಲ್ಲಿ ನೀರಾವರಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ, ಉಪ ಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್, ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.