ರಾಜಕೀಯ ವಿಶ್ಲೇಷಣೆ : ಕೆ.ಎಸ್.ರಾಜಮನ್ನಾರ್
ರಾಜ್ಯದ ಮತದಾರರ ಮನೋಧರ್ಮ ಬದಲಾಗುತ್ತಿದೆ ಎಂಬುದಕ್ಕೆ ಶಿಗ್ಗಾವಿ ಮತ್ತು ಚನ್ನಪಟ್ಟಣ ಉಪ ಚುನಾವಣಾ ಫಲಿತಾಂಶ ಕನ್ನಡಿ ಹಿಡಿದಿದೆ. ಎರಡೂ ಕ್ಷೇತ್ರಗಳಲ್ಲಿ ವಂಶ ರಾಜಕಾರಣವನ್ನು ಮತದಾರಪ್ರಭು ಮುಖಾ -ಮೂತಿ ನೋಡದೆ ನೇರವಾಗಿ ತಿರಸ್ಕರಿಸಿದ್ದಾರೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಗ್ಗುಲ್ಲಲ್ಲೇ ಚನ್ನಪಟ್ಟಣವಿದ್ದರು, ತಂದೆ ಕೇಂದ್ರ ಮಂತ್ರಿಯಾಗಿದ್ದರೂ, ತಾತ ಮಾಜಿಪ್ರಧಾನಿ ಹಾಗೂ ಒಕ್ಕಲಿಗ ಸಮುದಾಯದ ಪರಮೋಚ್ಚ ನಾಯಕರೆನಿಸಿಕೊಂಡಿದ್ದರೂ, ಕುಟುಂಬ ರಾಜಕಾರಣವನ್ನು ಸಹಿಸುವುದಿಲ್ಲ ಎಂದು ಮತದಾರರು ಸ್ಪಷ್ಟ ತೀರ್ಪು ನೀಡಿದ್ದಾರೆ.
ಇದೇ ಪರಿಸ್ಥಿತಿ ಹೆಚ್ಚು ಕಡಿಮೆ ಶಿಗ್ಗಾವಿ ಕ್ಷೇತ್ರದಲ್ಲೂ ಪ್ರತಿಬಿಂಬಿಸಿದೆ. ಆದರೆ ಬಹುಸಂಖ್ಯಾತ ಪಂಚಮಶಾಲಿ ಲಿಂಗಾಯಿತರು, ಈ ಬಾರಿ ಅಲ್ಪಸಂಖ್ಯಾತ ಸಾದರ ಲಿಂಗಾಯತರ ವಂಶಪಾರಂರ್ಯ ಯಜಮಾನಿಕೆ ಸಹಿಸುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ರಾಜ್ಯದ ಎರಡನೇ ಅತಿ ದೊಡ್ಡ ಮುಸ್ಲಿಂ ಮತದಾರರನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ. ಕುರುಬ ಮತ್ತು ನಾಯಕ ಜನಾಂಗದ ಮತ ಕೂಡ ಸಹ ಅಷ್ಟೆ ನಿರ್ಣಾಯಕವಾಗಿದೆ. ಈ ಲೆಕ್ಕದಲ್ಲಿ ನೋಡಿದಾಗ ಕಳೆದ ಬಾರಿಯೇ ಬಸವರಾಜ್ ಬೊಮ್ಮಾಯಿ ಇಲ್ಲಿ ಗೆಲುವು ಸಾಧಿಸಿದ್ದೇ ಒಂದು ಪರಮಾಶ್ಚರ್ಯದ ಸಂಗತಿ!! ಹೀಗಾಗಿ ಇಲ್ಲಿ ಕೂಡ ಕುಟುಂಬ ರಾಜಕಾರಣವನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸಿರುವುದು ಸ್ಪಷ್ಟ ಎಂಬುದು ರಾಜಕೀಯ ವಿಶ್ಲೇಷಕ ಪ್ರೊ. ಸಿ. ನರಸಿಂಹಪ್ಪ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಸಂಡೂರಿನಲ್ಲಿ ಬಳ್ಳಾರಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಹ ಕುಟುಂಬ ರಾಜಕಾರಣದ ಭಾಗವಾಗುವುದಿಲ್ಲವೇ? ಈ ಕ್ಷೇತ್ರ ಹೇಳಿ, ಕೇಳಿ ಎಸ್ ಟಿ ಮೀಸಲು ಕ್ಷೇತ್ರ. ಮೇಲಾಗಿ ಕಾಂಗ್ರೆಸ್ ಗೆ ಸಮರ್ಥ ಅಭ್ಯರ್ಥಿ ಸಿಗದ ಕಾರಣ ಪತ್ನಿಗೆ ಟಿಕೆಟ್ ನೀಡಲಾಗಿತ್ತು. ಚನ್ನಪಟ್ಟಣ ಮತ್ತು ಶಿಗ್ಗಾವಿಯ ಮತದಾರರು ತೋರಿದಂತಹ ಆಕ್ರೋಶ ಮತ್ತು ಅಸಮಾಧಾನದ ವಾತಾವರಣ ಇಲ್ಲಿ ಕಂಡು ಬಾರದೆ ಇದ್ದದ್ದು ಕಾಂಗ್ರೆಸ್ ಪಾಲಿಗೆ ಫ್ಲಸ್ ಪಾಯಿಂಟ್ ಆಯಿತು ಎಂಬುದು ಅವರ ತರ್ಕ.
ಹೀಗಾಗಿ ಅಲ್ಲಿನ ರಾಜಕಾರಣ ಮತ್ತು ಫಲಿತಾಂಶವನ್ನು ಕುಟುಂಬ ರಾಜಕಾರಣಕ್ಕೆ ತಾಳೆ ಹಾಕುವುದು ಸರಿಯಾಗದು. ಇದರ ಜೊತೆಗೆ ಕನ್ನಡ ಮತ್ತು ತೆಲುಗು ಭಾಷೆಯು ಈ ಗೆಲುವಿನ ಹಿಂದೆ ಕೆಲಸ ಮಾಡಿದೆ ಎಂಬ ಮಾತು ಕೇಳಿಬರುತ್ತಿದೆ. ಒಟ್ಟಾರೆ ತುಕರಾಮ್ ಕರ್ನಾಟಕದಕ ಮಾಸ್ ನಾಯಕ ಸಮುದಾಯಕ್ಕೆ ಸೇರಿದವರಾದರೆ, ಬಿಜೆಪಿಯ ಬಂಗಾರು ಹನುಮಂತು ಆಂಧ್ರದ ತೆಲುಗು ಸೀಮೆಯ ನಾಯಕ ಸಮುದಾಯಕ್ಕೆ ಸೇರಿದವರು. ಈ ಅಂಶ ಗೆಲುವಿನಲ್ಲಿ ಪಾತ್ರ ವಹಿಸಿದೆ. ಚನ್ನಪಟ್ಟಣ ಗೆಲುವನ್ನು ಮತ್ತೊಂದು ರೀತಿಯಲ್ಲಿ ನೋಡುವುದಾದರೆ ಇದು ಡಿ.ಕೆ.ಬದ್ರರ್ಸ್ ಅವರ ಪರ್ಸನಲ್ ಗೆಲುವಾಗಿದೆ. ಒಕ್ಕಲಿಗ ಜನಾಂಗಕ್ಕೆ ದೇವೇಗೌಡರೇ ಪರಮೋಚ್ಚ ನಾಯಕ ಎಂಬುದನ್ನು ಮತದಾರರರು ಸುಳ್ಳು ಮಾಡಿದ್ದಾರೆ. (Photo Credit : PTI)