ಬೆಂಗಳೂರು, ನ.23 www.bengaluruwire.com : ರಾಜಧಾನಿಯ ಸಾಂಸ್ಕೃತಿಕತೆಯ ಪ್ರತೀಕವಾದ ಬಸವನಗುಡಿ ಕಡಲೇಕಾಯಿ ಪರಿಷೆ ಸೋಮವಾರ ಅಧಿಕೃತ ಚಾಲನೆ ಸಿಗಲಿದೆ. ಅದಕ್ಕಿಂತ ಮುನ್ನವೇ ವಾರಾಂತ್ಯವಾದ ಶನಿವಾರ ಪರಿಷೆಯಲ್ಲಿ ಜನಸಂದಣಿ ಕಂಡುಬಂದಿದೆ.
ಈ ಬಾರಿ ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ಆಚರಿಸಲು ಬಿಬಿಎಂಪಿ ನಿರ್ಧರಿಸಿದೆ. ಹೀಗಾಗಿ ಬಹುತೇಕ ಪ್ಲಾಸ್ಟಿಕ್ ಬಳಕೆಯನ್ನು ಪರಿಷೆಯಲ್ಲಿ ನಿರ್ಬಂಧಿಸಲಾಗಿದೆ. ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಯಿಂದ ಕಳೆದ ಒಂದು ವಾರದಿಂದ ಸಂಪೂರ್ಣ ಸ್ವಚ್ಛತೆ ಆಂದೋಲನ ಕೈಗೊಳ್ಳಲಾಗಿದೆ. ದೊಡ್ಡಗಣೇಶ ದೇವಸ್ಥಾನದ ಮುಂಭಾಗದ ಬಸವನಗುಡಿ ರಸ್ತೆಯಲ್ಲಿ ಕಡಲೆಕಾಯಿ ವ್ಯಾಪಾರಕ್ಕೆ ಪ್ರತ್ಯೇಕ ಹಾಗೂ ಆಹಾರ ಮಾರಾಟ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಒಂದೂವರೆ ಸಾವಿರಕ್ಕೂ ಹೆಚ್ಚು ಅಂಗಡಿಗಳು ಬಸವನಗುಡಿ ದೇವಸ್ಥಾನದ ಸುತ್ತಮುತ್ತ ಇಟ್ಟಿದ್ದಾರೆ. ಕಡಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ಹಾವಳಿ ತಪ್ಪಿಸಲು ಬಿಬಿಎಂಪಿ, ಬಿಎಸ್ ಡಬ್ಲ್ಯುಎಂಎಲ್, ಬಿಎಂಎಸ್ ವಿದ್ಯಾರ್ಥಿಗಳು ಹಾಗೂ ಎನ್ ಜಿಒ ಸಂಸ್ಥೆಗಳ ಕಾರ್ಯಕರ್ತಗಳು 90,000 ದಿಂದ ಒಂದು ಲಕ್ಷದ ಕಾಗದದ ಕೊಟ್ಟೆ ತಯಾರಿಸಿ ಬಸವನಗುಡಿ ಸುತ್ತಮುತ್ತಲ ಅಂಗಡಿ ಹಾಗೂ ಕಡಲೆಕಾಯಿ, ತಿಂಡಿ ವ್ಯಾಪಾರದ ಅಂಗಡಿಗಳಿಗೆ ಉಚಿತವಾಗಿ ಹಂಚಿಕೆಮಾಡುತ್ತಿದ್ದಾರೆ.
ಈ ಬಾರಿ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡಲು ಸುಂಕ ವಸೂಲಿ ಮಾಡದಿರಲು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸುಂಕ ವಸೂಲಾತಿ ಇಲ್ಲದೆ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ಕಡಲೆಕಾಯಿ ವ್ಯಾಪಾರ ಸೇರಿದಂತೆ ಪರಿಷೆಯಲ್ಲಿ ವ್ಯಾಪಾರ ಮಾಡಲು ಮುಜರಾಯಿ ಇಲಾಖೆ ವ್ಯಾಪಾರಸ್ಥರಿಗೆ ಅಂಗಡಿಯಿಡಲು ಶುಲ್ಕ ಸಂಗ್ರಹಿಸಲು ಗುತ್ತಿಗೆದಾರರಿಗೆ ಅನುಮತಿ ನೀಡಿತ್ತು. ಇದರಿಂದ ಶುಲ್ಕ ಸಂಗ್ರಹಿಸಲು ಗುತ್ತಿಗೆ ಪಡೆದವರು ಬಾಯಿಗೆ ಬಂದಂಗೆ ಹಣ ವಸೂಲಾತಿ ಮಾಡಿದ್ದರ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಬಿಬಿಎಂಪಿ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್ ಡಬ್ಲ್ಯುಎಂಎಲ್) ಸಿಬ್ಬಂದಿ ಕಸ ಉತ್ಪತ್ತಿಯಾದ ಕೂಡಲೇ ಹಸಿ, ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಿ, ವಿಂಗಡಣೆ ಮಾಡಲು ವ್ಯವಸ್ಥೆ ಕಲ್ಪಿಸಿದೆ. ಪ್ಲಾಸ್ಟಿಕ್ ಪ್ಲಾಸ್ಟಿಕ್ ತಟ್ಟೆ, ಲೋಟ, ಕವರ್ ಮೇಲೆ ನಿಗಾವಹಿಸಲು 25 ಮಾರ್ಷಲ್, ಸ್ವಚ್ಛತೆಗಾಗಿ ಬಸವನಗುಡಿ ವಿಭಾಗದಲ್ಲಿ 300 ಪೌರಕಾರ್ಮಿಕರು, 20 ಆಟೋ ಟಿಪ್ಪರ್, 4 ಕಾಂಪ್ಯಾಕ್ಟರ್ ಬಳಕೆ ಮಾಡಲಾಗುತ್ತಿದೆ ಎಂದು ಬಿಎಸ್ ಡಬ್ಲ್ಯು ಎಂಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಭೀಮೇಶ್ ತಿಳಿಸಿದ್ದಾರೆ.
ಶುಕ್ರವಾರದಿಂದ ಭಾನುವಾರ ತನಕ 15-20 ಟನ್ ಹಾಗೂ ಸೋಮವಾರ, ಮಂಗಳವಾರ 30-35 ಟನ್ ತನಕ ಹಸಿ ಮತ್ತು ಒಣಕಸ ಸಂಗ್ರಹವಾಗುವ ಸಾಧ್ಯತೆಯಿದೆ. ಮುಂದಿನ ಶುಕ್ರವಾರದ (ನ.28) ತನಕ ಹಸಿ ಹಾಗೂ ಒಣಕಸ ಸಂಗ್ರಹ ಮತ್ತು ವಿಂಗಡಣೆ ವ್ಯವಸ್ಥೆ ಕಂಪನಿಯಿಂದ ವ್ಯವಸ್ಥೆ ಮಾಡಲಾಗಿದೆ.
ಕಡಲೆಕಾಯಿ ಪರಿಷೆಯಲ್ಲಿ ಭದ್ರತೆ ಸಂಚಾರಿ ಪೊಲೀಸ್ ಸೇರಿದಂತೆ 600 ಪೊಲೀಸರನ್ನು ನಿಯೋಜಿಸಲಾಗಿದೆ. 50-60 ಸಿಸಿ ಕ್ಯಾಮರಾ, ವೈದ್ಯಕೀಯ ವ್ಯವಸ್ಥೆ, ಒಂದು ಅಗ್ನಶಾಮಕ ವಾಹನ ಹಾಗೂ ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗಿದೆ. ಕರ್ತವ್ಯದಲ್ಲಿರುವ ಸಿಬ್ಬಂದಿಗೆ ದೊಡ್ಡಗಣೇಶ ದೇವಸ್ಥಾನದಿಂದ ಊಟ-ತಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ಧಾರ್ಮಿಕ ದತ್ತಿ ಅಧಿಕಾರಿ ಅರವಿಂದ ಬಾಬು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಶುಕ್ರವಾರದಿಂದಲೇ ಬಸವನಗುಡಿ ಮುಖ್ಯರಸ್ತೆ, ಬಿಎಂಎಸ್ ಮಹಿಳಾ ಕಾಲೇಜು, ಆಶ್ರಮ ಸುತ್ತಮುತ್ತಲ ರಸ್ತೆಗಳಲ್ಲಿ ಕಡಲೆಕಾಯಿ, ಬುಟ್ಟಿ, ಸಿಹಿ ತಿನಿಸು, ಗೃಹಬಳಕೆ ವಸ್ತು ಹಾಗೂ ಅಲಂಕಾರಿಕ ವಸ್ತು ಮಾರಾಟಗಾರರು ಬೀದಿಬದಿ ಅಂಗಡಿ ಹಾಕಿದ್ದರಿಂದ ಕಾಲೇಜು ವಿದ್ಯಾರ್ಥಿಗಳು, ಯುವಕ, ಯುವತಿಯರು, ಗೃಹಣಿಯರು ಪರಿಷೆಗೆ ಆಗಮಿಸಿದ್ದರು. ಇಂದು ವಾರಾಂತ್ಯ ರಜ ಹಾಗೂ 4ನೇ ಶನಿವಾರವಾದ್ದರಿಂದ ತುಸು ಹೆಚ್ಚೇ ಜನಜಂಗುಳಿಯಿದೆ.
ಈ ಬಾರಿ ಕಡಲೆಕಾಯಿ ಬೆಲೆ ಸೇರಿಗೆ 50 ರಿಂದ 100 ರೂ. ಬೆಲೆಯಿದೆ. ಮಾಗಡಿ, ಕನಕಪುರ, ತುಮಕೂರು, ತಮಿಳುನಾಡು ಸೇರಿದಂತೆ ಹಲವೆಡೆಯಿಂದ ಕಡಲೆಕಾಯಿಯನ್ನು ತಂದಿಟ್ಟು ವ್ಯಾಪಾರ ಮಾಡಲಾಗುತ್ತಿದೆ.