ಬೆಂಗಳೂರು, ನ.21 www.bengaluruwire.com : ರಾಜ್ಯದಲ್ಲಿ ಬಡವರ ಬಿಪಿಎಲ್ ಕಾರ್ಡ್ ರದ್ದು ವಿವಾದ ಸ್ವರೂಪ ಪಡೆದುಕೊಳ್ಳುತ್ತಿರುವಂತೆಯೇ ರಾಜ್ಯ ಸರ್ಕಾರ ಸಿಎಂ, ಡಿಸಿಎಂ ಹಾಗೂ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.
ಅರ್ಹರಲ್ಲದವರು ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದು, ಇದನ್ನು ಪರಿಶೀಲನೆ ಮಾಡಿ ಎಪಿಎಲ್‌ಗೆ ವರ್ಗಾಯಿಸಲಾಗುತ್ತಿದೆ ಹೊರತು ರದ್ದುಗೊಳಿಸಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಇಂದು ವಿಧಾನಸೌಧದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಮೂಲಗಳ ಪ್ರಕಾರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎಪಿಎಲ್ ಕಾರ್ಡ್ ದಾರರಿಗೆ 2023ರ ಮೇನಿಂದ ಮಾಸಿಕ ಪಡಿತರಗಳನ್ನು ಹಂಚಿಕೆ ಮಾಡಲಾಗುತ್ತಿಲ್ಲ. ಕೇಂದ್ರ ಸರ್ಕಾರದಿಂದ ಈ ಕಾರ್ಡ್ ಗಳಿಗೂ ಪಡಿತರ ಹಂಚಿಕೆಯಾಗುತ್ತಿದ್ದರೂ, ರಾಜ್ಯ ಸರ್ಕಾರ ಮಾತ್ರ ಎಪಿಎಲ್ ಕಾರ್ಡ್ ದಾರರಿಗೆಂದು ಅಕ್ಕಿಯನ್ನು ಕೇಂದ್ರದಿಂದ ಖರೀದಿಸುವ ಗೋಜಿಗೆ ಹೋಗದೆ ಪಡಿತರ ನೀಡುತ್ತಿಲ್ಲ.
ಎಪಿಎಲ್ ಕಾರ್ಡಿಗೆ ಪಡಿತರ ತಡೆಹಿಡಿದಿರುವುದು ಏಕೆ?:
ಹೀಗಾಗಿ 25.62 ಲಕ್ಷ ಎಪಿಎಲ್ ಕಾರ್ಡಿನ 87.88 ಲಕ್ಷ ಸದಸ್ಯರಿಗೆ (ಏಕ ಸದಸ್ಯ ಪಡಿತರ ಚೀಟಿಗೆ 5 ಕೆಜಿ ಅಕ್ಕಿ, ಒಂದು ಕೆಜಿಗಿಂತ ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ 10 ಕೆಜಿ ಪಡಿತರ ನೀಡಬೇಕು) ರಾಜ್ಯದಲ್ಲಿ ಅಕ್ಕಿ ವಿತರಣೆಯಾಗುತ್ತಿಲ್ಲ. ಹಾಗಾದರೆ ಇವರ್ಯಾರು ನಾಡಿನ ಮತದಾರು ಮತ್ತು ನಾಗರೀಕರಲ್ಲವೇ. ಅರ್ಹ ಎಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಪಡೆಯುವ ಸೌಲಭ್ಯವನ್ನು ರಾಜ್ಯ ಸರ್ಕಾರ ನಿರಾಕರಿಸುತ್ತಿರುವುದಾದರೂ ಯಾಕೆ? ಎಂಬ ಪ್ರಶ್ನೆ ಉದ್ಭವಿಸಿದೆ.
ಹೀಗೆಂದಾದ ಮೇಲೆ ಅನರ್ಹ ಬಿಎಪಿಎಲ್ ಕಾರ್ಡ್ ದಾರರನ್ನು ಎಪಿಎಲ್ ಕಾರ್ಡಿಗೆ ಸೇರಿಸುವುದೆಂದರೆ ಅವರಿಗೆ ಪಡಿತರ ವಿರತಣೆ ಮಾಡದಂತೆ ಕ್ರಮ ಕೈಗೊಂಡಿರುವುದು ಎಂದೇ ಅರ್ಥ ಎನ್ನಲಾಗುತ್ತಿದೆ.
ನ.20ರಲ್ಲಿರುವಂತೆ ರಾಜ್ಯದಲ್ಲಿ (ಕೇಂದ್ರ ಸರ್ಕಾರ ಅಂತ್ಯೋದಯ ಅನ್ನಯೋಜನೆ AAY ಮತ್ತು ಬಿಪಿಎಲ್ ವರ್ಗದಲ್ಲಿ 1,13,12,463 ಕಾರ್ಡ್ ಹಂಚಿಕೆಯಾಗಿದ್ದರೆ ಹಾಗೂ ರಾಜ್ಯ ಸರ್ಕಾರ ನೀಡಿರುವ 11,84,625 ಬಿಪಿಎಲ್ ಕಾರ್ಡ್ ಗಳಿವೆ) ಒಟ್ಟು ಅಂತ್ಯೋದಯ, ಬಿಪಿಎಲ್ ಕಾರ್ಡ್ ಗಳ ಸಂಖ್ಯೆ 1,24,97,088 ಕಾರ್ಡ್ ಗಳು ನೀಡಿದ್ದರೆ, 25,62,343 ಎಪಿಎಲ್ ಕಾರ್ಡ್ ಗಳನ್ನು ವಿತರಿಸಲಾಗಿದೆ ಎಂದು ಕೆ.ಎಚ್.ಮುನಿಯಪ್ಪ ವಿವರಿಸಿದ್ದಾರೆ.
ಆಹಾರ ಇಲಾಖೆ ವೆಬ್ ಸೈಟ್ ನಲ್ಲಿ ಸಾರ್ವಜನಿಕರಿಗೆ ಮಾಹಿತಿ ಅಲಭ್ಯ :
ಒಂದು ತಿಂಗಳ ಹಿಂದೆಯಷ್ಟೇ ಸಾಮಾನ್ಯ ನಾಗರೀಕರು ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿಗಳು ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ ವಿತರಣೆ, ಕಾರ್ಡ್ ದಾರರ ಮಾಹಿತಿ, ಯಾವುದೇ ಪಡಿತರ ಕೇಂದ್ರಗಳಿಗೆ ಹಂಚಿಕೆಯಾಗಿರುವ ಪಡಿತರ ಆಹಾರ ಹಂಚಿಕೆಯ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಎನ್ ಐಸಿ (NIC) ನಿರ್ವಹಿಸುತ್ತಿರುವ ಆಹಾರ ಇಲಾಖೆಯ ವೆಬ್ ಸೈಟನ್ನು ನೋಡಬಹುದಿತ್ತು. ಆದರೀಗ ಡ್ಯಾಷ್ ಬೋರ್ಡ್ ಮಾಹಿತಿಯೂ ಸೇರಿದಂತೆ ಪಡಿತರಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳಾವುದೂ ನೋಡದಂತೆ ನಿರ್ಬಂಧಿಸಲಾಗಿದೆ. ಈ ಮಾಹಿತಿಯನ್ನು ಕೇವಲ ಆಹಾರ ಸಚಿವರು, ಇಲಾಖೆ ಕಾರ್ಯದರ್ಶಿ ಮತ್ತು ಆಯುಕ್ತರು ನೋಡಲಷ್ಟೇ ಅನುವಾಗುವಂತೆ ಭದ್ರಪಡಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿದೆ.
ಇನ್ನೊಂದೆಡೆ ಈಗಿರುವ 1.24 ಕೋಟಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಗಳ ಸಂಖ್ಯೆಯನ್ನು ಕನಿಷ್ಟ 15-16 ಲಕ್ಷ ಕಾರ್ಡ್ ಗಳನ್ನು ರದ್ದು ಮಾಡುವ ಉದ್ದೇಶವಿದೆ. ಹೀಗಾಗಿ ಎನ್ ಐಸಿ ಮಾಹಿತಿಗಳು ಹೊರಗಿನವರಿಗೆ ಪರಿಶೀಲಿಸಲು ಸಿಕ್ಕರೆ ಕಷ್ಟವಾದೀತು ಎಂಬ ಕಾರಣಕ್ಕೆ ಆಹಾರ ಇಲಾಖೆ ವೆಬ್ ಸೈಟ್ ನಲ್ಲಿ ಸಂಪೂರ್ಣ ಮಾಹಿತಿ ಲಭಿಸದಂತೆ ನಿಯಂತ್ರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ahara.kar.nic.in ವೆಬ್ ಸೈಟಿನಲ್ಲಿ ನೀಡಿದ ಯಾವುದೇ ಆಪ್ಶನ್ ಕ್ಲಿಕ್ ಮಾಡಿದರೂ ಸೇವೆ ಲಭ್ಯವಿರುವುದಿಲ್ಲ (Service unavailable) ಎಂಬ ಸಂದೇಶ ಕಂಡುಬರುತ್ತಿದೆ.
ಕಾರ್ಡ್ ದಾರರಿಗೆ ಜೂನ್- ಜುಲೈ ತಿಂಗಳ ಡಿಬಿಟಿ ಹಣ ಕೈಸೇರಿಲ್ಲ :
ಪ್ರಸ್ತುತ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ನಿಗದಿಪಡಿಸಿದೆ. ಆದರೆ, ಅಕ್ಕಿಯ ಕೊರತೆಯಿಂದಾಗಿ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದು, ಉಳಿದ 5 ಕೆಜಿ ಅಕ್ಕಿಗೆ ಜುಲೈ 2023 ರಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಪ್ರತಿ ಕೆಜಿಗೆ 34 ರೂ.ನಂತೆ ಸದಸ್ಯರೊಬ್ಬರಿಗೆ ತಲಾ 170 ರೂ.ನಂತೆ 1.24 ಕೋಟಿ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳಿಗೆ ಮಾಸಿಕ 700 ರಿಂದ 800 ಕೋಟಿ ರೂ. ಹಣ ನೀಡುವುದು ಸರ್ಕಾರದ ಬೊಕ್ಕಸಕ್ಕೆ ಭಾರವಾಗಿದೆ. ಹೀಗಾಗಿ ಈಗಲೂ ರಾಜ್ಯದ ಹಲವು ಭಾಗಗಳಲ್ಲಿ ಫಲಾನುಭವಿಗಳಿಗೆ ಜೂನ್- ಜುಲೈ ತಿಂಗಳಿಂದ ಡಿಬಿಟಿ ಮೂಲಕ ಹಣ ಪಾವತಿಯಾಗಿಲ್ಲ.
ರಾಜ್ಯದಲ್ಲಿ ಶೇಕಡ 70-80 ರಷ್ಟು ಬಿಪಿಎಲ್ ಕಾರ್ಡ್‌ಗಳು ಇರಲು ಸಾಧ್ಯವಿಲ್ಲ. ಹೀಗಾಗಿ ವೈಜ್ಞಾನಿಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ಮನೆ, ಕಾರು ಹೊಂದಿರುವವರ ಮತ್ತು ಆದಾಯ ತೆರಿಗೆ ಪಾವತಿಸುವ ಕುಟುಂಬದ ಬಿಪಿಎಲ್ ಕಾರ್ಡುಗಳು ಮಾತ್ರ ರದ್ದಾಗಿದ್ದು, ಅರ್ಹ ಫಲಾನುಭವಿಗಳ ಕಾರ್ಡ್ ರದ್ದಾಗಿದ್ದರೆ ಮುಖ್ಯಮಂತ್ರಿಗಳ ಸೂಚನೆಯಂತೆ, ಒಂದು ವಾರದ ಒಳಗಾಗಿ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಆದಾಯ ತೆರಿಗೆ ಪಾವತಿ ಹಾಗೂ ಸರ್ಕಾರಿ ನೌಕರರ ಒಟ್ಟು 1,02,509 ಕಾರ್ಡ್ ಗಳ ಪೈಕಿ 76,176 ಕಾರ್ಡ್ ಗಳನ್ನು ಪರಿಶೀಲಿಸಲಾಗಿದೆ. ಇನ್ನೂ 17,710 ಕಾರ್ಡುಗಳ ಪರಿಶೀಲನೆ ಪ್ರಗತಿಯಲ್ಲಿದೆ. ಈಗಾಗಲೇ ಪರಿಶೀಸಿರುವ ಕಾರ್ಡ್ ಗಳ ಪೈಕಿ 59,370 ಕಾರ್ಡ್ ಗಳನ್ನು ಬಿಪಿಎಲ್ ನಿಂದ ಎಪಿಎಲ್ ಕಾರ್ಡ್ ಗಳಿಗೆ ಸೇರಿಸಲಾಗಿದೆ. 8,647 ಕಾರ್ಡ್ ಗಳನ್ನು ಅಮಾನತ್ತಿನಲ್ಲಿರಿಸಲಾಗಿದೆ. 16,806 ಕಾರ್ಡ್ ಗಳನ್ನು ಬಿಪಿಎಲ್ ಕಾರ್ಡ್ ನಲ್ಲೇ ಮುಂದುವರೆಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿಗೆ ಸಂಬಂಧಿಸಿದಂತೆ ತಾಂತ್ರಿಕ ಕಾರಣಗಳಿಂದ ಕೆಲವು ಅರ್ಹ ಫಲಾನುಭವಿಗಳ ಹೆಸರು ಬಿಟ್ಟು ಹೋಗಿದೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳ ಅವರ ಗಮನಕ್ಕೆ ತರಲಾಗಿದೆ. ಇಂದು ಈ ಬಗ್ಗೆ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದು, ಶೀಘ್ರವೇ ಈ ಸಮಸ್ಯೆ ಬಗೆಹರಿಸಲಿದ್ದೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ವಿವರಿಸಿದ್ದಾರೆ.
2011ರ ಜನಗಣತಿಯಂತೆ ಶೇ.65.96 ಬಿಪಿಎಲ್ ಕಾರ್ಡ್ ವಿತರಣೆ :
ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರವು ಅನರ್ಹ ಪಡಿತರ ಚೀಟಿದಾರರನ್ನು ಪತ್ತೆಹಚ್ಚಲು ಕ್ರಮವಹಿಸಿದೆ. ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿಯನ್ನು 2011ರ ಜನಗಣತಿ ಸಮೀಕ್ಷೆ ಪ್ರಕಾರ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ.65.96 ಪ್ರಮಾಣದಲ್ಲಿ ವಿತರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಂತ್ಯೋದಯ ಅನ್ನ ಯೋಜನೆ (AAY) ಹಾಗೂ ಆದ್ಯತಾ ಕುಟುಂಬ/ಬಿಪಿಎಲ್ ಕಾರ್ಡ್ ನ ಅಡಿ 4,34,48,260 ಸದಸ್ಯರಿದ್ದಾರೆ. ಇನ್ನು 25,62,343 ಎಪಿಎಲ್ ಕಾರ್ಡ್ ನಡಿ 87,88,188 ಸದಸ್ಯರಿದ್ದಾರೆ. ಅಂತ್ಯೋದಯ ಅನ್ನ ಯೋಜನೆಯಲ್ಲಿ ಪ್ರತಿ ಪಡಿತರ ಚೀಟಿಗೆ ಅಕ್ಕಿ 21 ಕೆಜಿ ಹಾಗೂ 14 ಕೆಜಿ ಜೋಳ ಅಥವಾ ರಾಗಿ ಸೇರಿದಂತೆ ಒಟ್ಟಾರೆ 35 ಕೆಜಿ ಪಡಿತರ ನೀಡುತ್ತಿದ್ದು, ಬಿಪಿಎಲ್ ಕಾರ್ಡ್ ಕುಟುಂಬದ ಪ್ರತಿ ಸದಸ್ಯನಿಗೆ 5 ಕೆಜಿಯಲ್ಲಿ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಅಥವಾ ಜೋಳ ನೀಡಲಾಗುತ್ತಿದೆ. ಸದ್ಯ ನಿಗದಿತ ಪ್ರಮಾಣದಲ್ಲಿ ಅಕ್ಕಿ ಕೊರತೆಯ ಕಾರಣಕ್ಕೆ ರಾಜ್ಯ ಸರ್ಕಾರ ಕಾರ್ಡ್ ದಾರಿಗೆ ನೇರವಾಗಿ ಲಾಭ ವರ್ಗಾವಣೆಯಡಿ ಹಣ ನೀಡುತ್ತಿದೆ.
ಇನ್ನು 25.62 ಲಕ್ಷ ಎಪಿಎಲ್ ಕಾರ್ಡಿನ 87.88 ಲಕ್ಷ ಸದಸ್ಯರಿಗೆ (ಏಕ ಸದಸ್ಯ ಪಡಿತರ ಚೀಟಿಗೆ 5 ಕೆಜಿ ಅಕ್ಕಿ, ಒಂದು ಕೆಜಿಗಿಂತ ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ 10 ಕೆಜಿ ಪಡಿತರ ನೀಡಬೇಕು) ದುರದೃಷ್ಟವಶಾತ್ ಎಪಿಎಲ್ ಕಾರ್ಡಿಗೆ ಅಕ್ಕಿ ಅಥವಾ ಪಡಿತರ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿದಿದೆ. ಇದರಿಂದಾಗಿ 87.88 ಲಕ್ಷ ಎಪಿಎಲ್ ಕಾರ್ಡ್ ದಾರರಿಗೆ ಪಡಿತರ ಇಲ್ಲದಂತಾಗಿದೆ. ಈ ಅನ್ಯಾಯ ಸರಿಪಡಿಸಬೇಕೆಂದು ಹಲವು ತಿಂಗಳಿಂದ ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಎಂಬ ದೂರುಗಳಿವೆ.
ಅಧಿವೇಶನ ಆರಂಭದ ಒಳಗೆ ಬಿಪಿಎಲ್ ಕಾರ್ಡ್ ಮರಳಿಸಲು ವಿಪಕ್ಷ ಆಗ್ರಹ :
ಈ ಮಧ್ಯೆ ಒಂದೇ ಸಮನೆ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿರುವ ಬಗ್ಗೆ ಸಾರ್ವಜನಿಕರು ಪಡಿತರ ಅಂಗಡಿಗಳ ಎದುರು ಬಂದು ತಮ್ಮ ಆಕ್ರೋಶ ಹೊರಹಾಕುತ್ತಿದ್ದರೆ, ವಿಪಕ್ಷ ಬಿಜೆಪಿ ನಾಯಕರು ಬಡವರಿಗೆ ರದ್ದುಪಡಿಸಿರುವ ಬಿಪಿಎಲ್ ಕಾರ್ಡ್ ಮರಳಿ ನೀಡದಿದ್ದರೆ ಹಾಗೂ ಪಡಿತರ ಚೀಟಿ ರದ್ದು ಪ್ರಕ್ರಿಯೆ ತಕ್ಷಣವೇ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಅಲ್ಲದೇ ಮುಂದಿನ ಅಧಿವೇಶನದ ಒಳಗೆ ರದ್ದು ಮಾಡಿದ ಬಿಪಿಎಲ್ ಕಾರ್ಡ್ ಗಳನ್ನು ಮರಳಿ ಬಡವರಿಗೆ ನೀಡಬೇಕುಮ ಇಲ್ಲವಾದಲ್ಲಿ ಸದನದ ಒಳಗೆ ಹೊರಗೆ ತೀವ್ರ ಹೋರಾಟ ಮಾಡುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗುಡುಗಿದ್ದಾರೆ.