ಬೆಂಗಳೂರು, ನ.20 www.bengaluruwire.com : ನಗರದಲ್ಲಿ ಅನಧಿಕೃತ ಕಟ್ಟಡಗಳ ಮೇಲೆ ಬಿಬಿಎಂಪಿ ಕಾನೂನು ಕ್ರಮಕ್ಕೆ ಮುಂದಾಗಿದೆ. ದಾಸರಹಳ್ಳಿ ವಲಯದ ಚೊಕ್ಕಸಂದ್ರ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಿದ 6 ಅಂತಸ್ತುಗಳ ಕಟ್ಟಡ ತೆರವು ಕಾರ್ಯಾಚರಣೆಯನ್ನು ಬುಧವಾರ ಪಾಲಿಕೆ ಸಿಬ್ಬಂದಿ ಕೈಗೊಂಡರು.
ವಲಯ ಆಯುಕ್ತರಾದ ಹೆಚ್.ಸಿ.ಗಿರೀಶ್ ರವರ ನೇತೃತ್ವದಲ್ಲಿ ಇಂದು ಚೊಕ್ಕಸಂದ್ರ ವಾರ್ಡ್-39ರ ವ್ಯಾಪ್ತಿಯ ನಾಗಸಂದ್ರದ ಸ್ವತ್ತಿನ ಸಂಖ್ಯೆ: 1 ಮತ್ತು 2 ರಲ್ಲಿ ಕಟ್ಟಡ ಮಾಲೀಕರಾದ ಜೋಜಿ ಜಾಕೋಬ್ ಮತ್ತು ಸಿಂಧು ರವರು 40X70 ನಿವೇಶನದಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನೆಲಮಹಡಿ + 5 ಅಂತಸ್ತು ಕಟ್ಟಡ ನಿರ್ಮಾಣ ಮಾಡುತ್ತಿದ್ದರು.
ಈ ಹಿನ್ನಲೆಯಲ್ಲಿ ಕಟ್ಟಡದ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ್ದರೂ ಸಹ ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವ ಬಗ್ಗೆ ಪಾಲಿಕೆಗೆ ಯಾವುದೇ ಮಾಹಿತಿ ಸಲ್ಲಿಸಿರಲಿಲ್ಲ. ಆದ್ದರಿಂದ ಇಂದು ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ 6ನೇ ಮಹಡಿಯಲ್ಲಿ ನಿರ್ಮಿಸಿರುವಂತಹ ಎ.ಸಿ.ಸಿ ಶೀಟ್ ಪೆಂಟ್ ಹೌಸ್, ಪ್ಯಾರಪೆಟ್ ವಾಲ್ ಅನ್ನು ಯಂತ್ರೋಪಕರಣ ಗಳು ಹಾಗೂ ಸುಮಾರು 20 ಸಿಬ್ಬಂದಿ ಮೂಲಕ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಟ್ಟಡದ ಅನಧಿಕೃತ ಭಾಗಗಳನ್ನು ಪೊಲೀಸ್ ಸಿಬ್ಬಂದಿ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶ ಉಪ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ತೆರವುಗೊಳಿಸಲು ತಗುಲಿದ ವೆಚ್ಚವನ್ನು ಕಟ್ಟಡ ಮಾಲೀಕರಿಂದ ಪಾಲಿಕೆ ವಸೂಲಿ ಮಾಡಲಿದೆ.
ಕಾರ್ಯಾಚರಣೆಯಲ್ಲಿ ದಾಸರಹಳ್ಳಿ ವಲಯದ ಮುಖ್ಯ ಅಭಿಯಂತರರಾದ ರವಿ, ಕಾರ್ಯಪಾಲಕ ಅಭಿಯಂತರರಾದ ಯಧುಕೃಷ್ಣಾ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪೀಣ್ಯ ಕೈಗಾರಿಕಾ ಪ್ರದೇಶ ಉಪ ವಿಭಾಗ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.