ಬೆಂಗಳೂರು, ನ.19 www.bengaluruwire.com : ರಾಜ್ಯದಲ್ಲಿ ಉದ್ಯಮ ವಲಯದ ಬೆಳವಣಿಗೆ ಉತ್ತೇಜಿಸಲು ಬೆಂಗಳೂರು, ಮೈಸೂರು ಮತ್ತು ಬೆಳಗಾವಿಗಳಲ್ಲಿ ಮೂರು ಜಾಗತಿಕ ನಾವೀನ್ಯತಾ ಪಾರ್ಕ್ ಗಳನ್ನು (ಗ್ಲೋಬಲ್ ಇನ್ನೊವೇಷನ್ ಡಿಸ್ಟ್ರಿಕ್ಟ್ಸ್) ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಘೋಷಿಸಿದರು.
ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳ “ಬೆಂಗಳೂರು ತಂತ್ರಜ್ಞಾನ ಶೃಂಗ-24” (Bengaluru Tech Summit 2024)ವನ್ನು (27ನೇ ಆವೃತ್ತಿ) ಉದ್ಘಾಟಿಸಿದ ಅವರು, ಸರ್ಕಾರ ಸ್ಥಾಪಿಸಲಿರುವ ಈ ಮೂರು ಜಾಗತಿಕ ನಾವೀನ್ಯತಾ ಪಾರ್ಕ್ ಗಳಲ್ಲಿ (Global Capability Center – GCC) ತಮ್ಮ ಕೇಂದ್ರಗಳನ್ನು ತೆರೆದು ಕಾರ್ಯಾಚರಣೆ ಆರಂಭಿಸಲು ಅನುವು ಮಾಡಿಕೊಡಲಿದ್ದೇವೆ. ಜೊತೆಗೆ ಮೈಸೂರಿನ ಕೋಚನಹಳ್ಳಿಯಲ್ಲಿ ಎಲೆಕ್ಟ್ರಾನಿಕ್ ತಯಾರಿಕಾ ಕ್ಲಸ್ಟರ್ (Electronics manufacturing cluster) ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ರಾಜ್ಯದ ಸೆಮಿಕಂಡಕ್ಟರ್ (Semicounductor) ಉತ್ಪಾದಕತೆಯನ್ನು ಕೋಚನಹಳ್ಳಿಯಲ್ಲಿಯ ಎಲೆಕ್ಟ್ರಾನಿಕ್ಸ್ ಮ್ಯಾನಫ್ಯಾಕ್ಚರಿಂಗ್ ಕ್ಲಸ್ಟರ್ ಸದೃಢಗೊಳಿಸಲಿದೆ. ಇದು ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ ನಗರ-ಗ್ರಾಮೀಣ ಸಮಾನತೆಯನ್ನು ತರುವುದಕ್ಕೂ ಸಹಾಯಕವಾಗಲಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ, ದೇಶದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರೂಪಿಸಲಾಗಿರುವ “ಜಿಸಿಸಿ ಕಾರ್ಯನೀತಿ”ಯನ್ನು ಅನಾವರಣಗೊಳಿಸಿದರು. ಈ ಕುರಿತು ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಈಗ ಇರುವ 875 ಜಿಸಿಸಿ ಘಟಕಗಳ ಜೊತೆಗೆ ಇನ್ನೂ 500 ಜಿಸಿಸಿ ಘಟಕಗಳ ಸ್ಥಾಪನೆ, 3.5 ಲಕ್ಷ ಉದ್ಯೋಗಗಳ ಸೃಷ್ಟಿ ಹಾಗೂ ಆರ್ಥಿಕ ಉತ್ಪಾದನೆಯನ್ನು 50 ಶತಕೋಟಿ ಡಾಲರ್ ಗಳಷ್ಟು ಹೆಚ್ಚಿಸುವ ಗುರಿಯನ್ನು “ಜಿಸಿಸಿ ಕಾರ್ಯನೀತಿ” ಹೊಂದಿದೆ ಎಂದು ವಿವರಿಸಿದರು.
ಮಂಗಳೂರನ್ನು ಫಿನ್ ಟೆಕ್ ವಲಯವನ್ನಾಗಿ, ಹುಬ್ಬಳ್ಳಿ-ಧಾರವಾಡ ಇವಿ ವಲಯವನ್ನಾಗಿ ಹಾಗೂ ಮೈಸೂರನ್ನು ಡ್ರೋನ್ ವಲಯವನ್ನಾಗಿ ರೂಪಿಸಲು ಸರ್ಕಾರ ಒತ್ತು ನೀಡಲಿದೆ. ನಾವೀನ್ಯತೆ, ಸುಸ್ಥಿರತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದ್ದು, ಉದ್ಯಮದ ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲಲಿದೆ ಎಂದರು.
20ನೇ ಶತಮಾನದ ಆರಂಭಿಕ ಅವಧಿಯಲ್ಲಿ ರಕ್ಷಣಾ ಸಾಮಗ್ರಿಗಳ ತಯಾರಿಕೆ ಹಾಗೂ ವೈಮಾಂತರಿಕ್ಷ ಉದ್ದಿಮೆಗಳ ಮೂಲಕ ಗಮನಸೆಳೆದ ಬೆಂಗಳೂರು ಈಗ ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟ್ ಅಪ್ ನೆಲೆಯಾಗಿ ಬೆಳೆದಿದೆ. ಐಟಿ, ಡೀಪ್ ಟೆಕ್, ಬಯೋಟೆಕ್, ಜೀವಿವಿಜ್ಞಾನಗಳು. ಬಯೋ ಮ್ಯಾನುಫ್ಯಾಕ್ಚರಿಂಗ್, ಅಡ್ವಾನ್ಸ್ಡ್ ಮ್ಯಾನು ಫ್ಯಾಕ್ಚರಿಂಗ್ ಇತ್ಯಾದಿಗಳಿಗೆ ನಗರವು ಹೆಸರಾಗಿದೆ. ಅಲ್ಲದೆ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಎಂಜಿನಿಯರಿಂಗ್ ಪ್ರತಿಭೆಗಳು ಹಾಗೂ ಎಐ ವೃತ್ತಿಪರರು ಇರುವ ನಗರವೂ ಇದಾಗಿದೆ ಎಂದು ನುಡಿದರು.
ಬೆಂಗಳೂರು ವಿಮಾನ ನಿಲ್ದಾಣದಿಂದ 50 ಕಿ.ಮೀ. ನಿಲ್ದಾಣದಲ್ಲಿ ನಾವೀನ್ಯತೆಯ ಪರಿಕಲ್ಪನೆಯಿಂದ ಕೂಡಿಡ ‘ಕ್ವಿನ್ ಸಿಟಿ’ ನಿರ್ಮಾಣವಾಗಲಿದೆ. ಇದರ ಜೊತೆಗೆ “ ನಮ್ಮ ಗ್ರಾಮ, ನಮ್ಮ ರಸ್ತೆ”, “ಬಿಯಾಂಡ್ ಬೆಂಗಳೂರು” ದಂತಹ ಉಪಕ್ರಮಗಳು ರಾಜ್ಯದ ಸಮತೋಲಿತ ಬೆಳವಣಿಗೆಗೆ ಪೂರಕವಾಗಲಿವೆ ಎಂದು ಸಿದ್ದರಾಮಯ್ಯ ನುಡಿದರು.
“ನಿಪುಣ” ಯೋಜನೆಯಡಿ ಕೌಶಲ ತರಬೇತಿ:
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ಯುವಜನತೆಗೆ ಕೌಶಲ ತರಬೇತಿ ನೀಡುವ ಉದ್ದೇಶದಿಂದ ರೂಪಿಸಲಾಗಿರುವ ‘ನಿಪುಣ’ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.”ನಿಪುಣ” ಯೋಜನೆಯಡಿ ಒಂದು ವರ್ಷದಲ್ಲಿ ಒಂದು ಲಕ್ಷ ಜನರಿಗೆ ಕೌಶಲ ತರಬೇತಿ ನೀಡುವ ಸಲುವಾಗಿ ಮೈಕ್ರೋಸಾಫ್ಟ್, ಇಂಟೆಲ್, ಆಕ್ಸೆಂಚರ್, ಐಬಿಎಂ, ಬಿಎಫ್ ಎಸ್ಐ ಕನ್ಸಾರ್ಷಿಯಂ, ಈ ಐದು ಸಂಸ್ಥೆಗಳ ಜೊತೆ ಒಡಂಬಡಿಕೆಗೆ ಇಂದು ಸಹಿ ಹಾಕಲಾಗಿದೆ ಎಂದರು.
ನಗರದಲ್ಲಿ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ಮೂಲಸೌಕರ್ಯ ನಿರ್ಮಿಸಲು ಹಾಗೂ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಸರ್ಕಾರ ಒತ್ತು ನೀಡಲಿದೆ. ಈಗ ಬೆಂಗಳೂರಿನಲ್ಲಿ ಉದ್ದಿಮೆಗಳಿಗೆ ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಯಾವ ಸಮಸ್ಯೆಯೂ ಇಲ್ಲ. ಮುಂಬರುವ ದಿನಗಳಲ್ಲಿ ಸಂಚಾರ ಸೇರಿದಂತೆ ಇರುವ ಇನ್ನಿತರ ಒಂದಿಷ್ಟು ಸಮಸ್ಯೆಗಳನ್ನು ಆದ್ಯತೆ ಮೇಲೆ ನಿವಾರಿಸಲಾಗುವುದು ಎಂದರು.
ಬೆಂಗಳೂರಿನಂತಹ ನಗರ ಅಭಿವೃದ್ಧಿಯಾಗಲು ಸರ್ಕಾರವೊಂದೇ ಕಾರಣವಲ್ಲ. ಇಲ್ಲಿನ ನಗರದಲ್ಲಿ ಉದ್ಯಮಿಗಳ ಪಾಲೂ ದೊಡ್ಡದಿದೆ. ಇನ್ಫೋಸಿಸ್ ನ ನಾರಾಯಣ ಮೂರ್ತಿ, ಬಯೋಕಾನ್ ನ ಕಿರಣ್ ಮಜುಂದಾರ್ ಷಾ ಅವರಂತಹ ಉದ್ಯಮಿಗಳು ಇಲ್ಲದಿದ್ದರೆ ಬೆಂಗಳೂರು ಈಗ ಇರುವಂತೆ ಇರುತ್ತಿರಲಿಲ್ಲ ಎಂದು ಉಪ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಟೆಕ್ಸಸ್ ಇನ್ಸ್ಟ್ರುಮೆಂಟ್ಸ್ ನ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ಸ್ವಿಗ್ಗಿಯ ಸಹಸ್ಥಾಪಕ ಶ್ರೀಹರ್ಷ ಮಜೇತಿ ಅವರನ್ನು ಸನ್ಮಾನಿಸಲಾಯಿತು.
ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಯಮಿಗಳಾದ ಕ್ರಿಸ್ ಗೋಪಾಲಕೃಷ್ಣ, ಕಿರಣ್ ಮಜುಂದಾರ್ ಷಾ, ಪ್ರಶಾಂತ್ ಪ್ರಕಾಶ್, ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಏಕ್ ರೂಪ್ ಕೌರ್, ಐಟಿ ಬಿಟಿ ನಿರ್ದೇಶಕ ದರ್ಶನ್, ಉಪ ಕಾರ್ಯದರ್ಶಿ ರುಚಿ ಬಿಂದಲ್ ಮತ್ತಿತರರು ಇದ್ದರು.