ತಿರುಮಲ, ನ.18 www.bengaluruwire.com : ಮಹತ್ವದ ಬೆಳವಣಿಗೆಯೊಂದರಲ್ಲಿ, ತಿರುಮಲ ತಿರುಪತಿ ದೇವಸ್ಥಾನಮ್ಸ್ (Tirumala Tirupati Devastanam – TTD) ಮಂಡಳಿಯು ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತಾದಿಗಳ ದರ್ಶನದ ಸಮಯವನ್ನು ಗಣನೀಯವಾಗಿ ಕಡಿತಗೊಳಿಸಲು ನಿರ್ಧರಿಸಿದೆ.
ದರ್ಶನದ ಸಮಯವನ್ನು ಈಗಿರುವ 20-30 ಗಂಟೆಗಳಿಂದ ಕೇವಲ 2-3 ಗಂಟೆಗಳಿಗೆ ಇಳಿಸಲು, ಇಡೀ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೃತಕ ಬುದ್ಧಿಮತ್ತೆ ಮತ್ತು ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳಲು, ಬಿ ಆರ್ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಟಿಟಿಡಿ ಮಂಡಳಿಯ ಚೊಚ್ಚಲ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಟಿಟಿಡಿ ನೂತನ ಮಂಡಳಿಯ ಇತರ ಪ್ರಮುಖ ನಿರ್ಣಯಗಳು ಈ ಕೆಳಕಂಡಂತಿದೆ :
ಶ್ರೀವಾಣಿ ಟ್ರಸ್ಟ್‌ನ ವಿಲೀನ: ಟ್ರಸ್ಟ್ ಅನ್ನು ಟಿಟಿಡಿ ಖಾತೆಗೆ ವಿಲೀನಗೊಳಿಸಲಾಗುವುದು, ಯೋಜನೆಗೆ ಮರುನಾಮಕರಣ ಮಾಡುವ ಸಾಧ್ಯತೆಗಳಿವೆ.
ದರ್ಶನ ಕೋಟಾ ಸುಧಾರಣೆ: ಟಿಕೆಟ್ ನೀಡಿಕೆಯಲ್ಲಿ ಅವ್ಯವಹಾರ ನಡೆದಿರುವ ಕಾರಣ ವಿವಿಧ ರಾಜ್ಯಗಳಿಗೆ ಪ್ರವಾಸೋದ್ಯಮ ನಿಗಮಗಳ ದರ್ಶನ ಕೋಟಾವನ್ನು ಕೈಬಿಡಲು ಮಂಡಳಿ ನಿರ್ಧರಿಸಿದೆ.
ಮೂಲಸೌಕರ್ಯ ಅಭಿವೃದ್ಧಿ: ತಿರುಮಲದ ಡಂಪಿಂಗ್ ಯಾರ್ಡ್‌ನಲ್ಲಿ ರಾಶಿ ಬಿದ್ದಿರುವ ಅವಶೇಷಗಳನ್ನು 3-4 ತಿಂಗಳೊಳಗೆ ತೆರವುಗೊಳಿಸಲಾಗುವುದು ಮತ್ತು ಶ್ರೀನಿವಾಸ ಸೇತು ಫ್ಲೈ ಓವರ್‌ಗೆ ಗರುಡ ವಾರಧಿ ಎಂದು ಮರುನಾಮಕರಣ ಮಾಡಲಾಗುವುದು.
ನೌಕರರ ಪ್ರಯೋಜನಗಳು: ವಾರ್ಷಿಕ ಬ್ರಹ್ಮೋತ್ಸವದಲ್ಲಿ ವಿಶೇಷ ಸೇವೆ ಸಲ್ಲಿಸಿದ ನೌಕರರ ಬಹುಮಾನದಲ್ಲಿ ಶೇ.10ರಷ್ಟು ಹೆಚ್ಚಳವನ್ನು ಮಂಡಳಿಯು ಅನುಮೋದಿಸಿದೆ. ಟಿಟಿಡಿಯಲ್ಲಿ ಒಟ್ಟಾರೆ 15,400 ಸಿಬ್ಬಂದಿ ಹಾಗೂ 7,535 ಹೊರಗುತ್ತಿಗೆ ಸಿಬ್ಬಂದಿಯಿದ್ದಾರೆ.
ಲಡ್ಡು ತಯಾರಿಕೆಯಲ್ಲಿ ಗುಣಮಟ್ಟದ ತುಪ್ಪ ಬಳಕೆ :
ಶ್ರೀವಾರಿ ಲಡ್ಡು ತಯಾರಿಕೆಯಲ್ಲಿ ಹೆಚ್ಚಿದ ತುಪ್ಪದ ಗುಣಮಟ್ಟವನ್ನು ಬಳಸುವುದು. ಭಕ್ತರಿಗಾಗಿ ತಿರುಮಲದ ಅನ್ನಪ್ರಸಾದ ಕಾಂಪ್ಲೆಕ್ಸ್‌ನಲ್ಲಿ ಪ್ರತಿದಿನ ಮೆನುವಿನಲ್ಲಿ ಮತ್ತೊಂದು ರುಚಿಕರವಾದ ಪಾಕ ವಿಧಾನವನ್ನು ಪರಿಚಯಿಸಲಾಗುತ್ತಿದೆ.
ಖಾಸಗಿ ಬ್ಯಾಂಕ್ ನಿಂದ ರಾಷ್ಟ್ರೀಯ ಬ್ಯಾಂಕ್ ಗೆ ಠೇವಣಿ ವರ್ಗಾವಣೆ :
ಟಿಟಿಡಿ ಠೇವಣಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಬ್ಯಾಂಕ್‌ಗಳಲ್ಲಿ ಈಗಾಗಲೇ ಠೇವಣಿ ಇಟ್ಟಿರುವ ಹಣವನ್ನು ಹಿಂಪಡೆದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಮುಂದಿನ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ತಿರುಮಲದಲ್ಲಿ ಹಿಂದೂಯೇತರರ ಬಗ್ಗೆ ಸೂಕ್ತ ತೀರ್ಮಾನಕ್ಕೆ ಪತ್ರ :
ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದು. ಪ್ರತಿ ತಿಂಗಳ ಮೊದಲ ಮಂಗಳವಾರ ತಿರುಪತಿ ಸ್ಥಳೀಯರಿಗೆ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಅವಕಾಶ ನೀಡಲು ತೀರ್ಮಾನ.
ಈ ಸುಧಾರಣೆಗಳು ಭಕ್ತರ ಅನುಭವವನ್ನು ಹೆಚ್ಚಿಸಲು, ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಮತ್ತು ತಿರುಮಲದಲ್ಲಿ ಭಕ್ತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಟಿಟಿಡಿ ಮಂಡಳಿಯ ನಿರ್ಧಾರಗಳು ಮುಂದಿನ ತಿಂಗಳುಗಳಲ್ಲಿ ಜಾರಿಗೆ ಬರಲಿವೆ ಎಂದು ಟಿಟಿಡಿ ಮಂಡಳಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.