ನವದೆಹಲಿ, ನ.17 www.bengaluruwire.com : ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಭಾನುವಾರ (ನವೆಂಬರ್ 17) ಒಡಿಶಾ ಕರಾವಳಿಯಲ್ಲಿ ದೀರ್ಘ-ಶ್ರೇಣಿಯ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಈ ಮಹತ್ವವನ್ನು ಗುರುತಿಸಿದ್ದಾರೆ ಮತ್ತು “ಒಡಿಶಾದ ಕರಾವಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ದೀರ್ಘ ವ್ಯಾಪ್ತಿಯ ಹೈಪರ್ಸಾನಿಕ್ ಕ್ಷಿಪಣಿಯ ಹಾರಾಟದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸುವ ಮೂಲಕ ಭಾರತವು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಇದು ದೇಶದ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ. ಈ ಮಹತ್ವದ ಸಾಧನೆಯು ನಮ್ಮ ದೇಶವನ್ನು ಅಂತಹ ನಿರ್ಣಾಯಕ ಮತ್ತು ಸುಧಾರಿತ ಮಿಲಿಟರಿ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪಿನಲ್ಲಿ ಇರಿಸಿದೆ” ಎಂದು ಅವರು ಹೇಳಿದ್ದಾರೆ.
ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಕ್ಷಿಪಣಿಯು ಸಶಸ್ತ್ರ ಪಡೆಗಳಿಗೆ 1,500 ಕಿಮೀಗಿಂತ ಹೆಚ್ಚಿನ ವ್ಯಾಪ್ತಿಯ ವಿವಿಧ ಪೇಲೋಡ್‌ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಹೈದರಾಬಾದ್‌ನ ಡಾ.ಎಪಿಜೆ ಅಬ್ದುಲ್ ಕಲಾಂ ಕ್ಷಿಪಣಿ ಸಂಕೀರ್ಣದ ಪ್ರಯೋಗಾಲಯಗಳು ಮತ್ತು ಇತರ ಡಿಆರ್‌ಡಿಒ ಲ್ಯಾಬ್‌ಗಳು ಮತ್ತು ಉದ್ಯಮ ಪಾಲುದಾರರೊಂದಿಗೆ ಒಡಗೂಡಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ.
ಹೈಪರ್ಸಾನಿಕ್ ಕ್ಷಿಪಣಿಗಳ ಬಗ್ಗೆ ಮತ್ತು ಅವು ದೇಶದ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವಲ್ಲಿ ಹೇಗೆ ಪಾತ್ರವಹಿಸುತ್ತವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಹೈಪರ್ಸಾನಿಕ್ ಕ್ಷಿಪಣಿ ಎಂದರೇನು?
“ಹೈಪರ್ಸಾನಿಕ್” ಎಂಬ ಪದವು ಶಬ್ದದ ವೇಗಕ್ಕಿಂತ ಕನಿಷ್ಠ ಐದು ಪಟ್ಟು ವೇಗವನ್ನು ಸೂಚಿಸುತ್ತದೆ (ಇದನ್ನು ಮ್ಯಾಕ್ -5 ಎಂದೂ ಕರೆಯಲಾಗುತ್ತದೆ). ಇದು ಸೆಕೆಂಡಿಗೆ ಸುಮಾರು ಒಂದು ಮೈಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ. ಇಂತಹ, ಕ್ಷಿಪಣಿಗಳ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಕುಶಲತೆ. ಒಂದು ಸೆಟ್ ಕೋರ್ಸ್ ಅಥವಾ ಪಥವನ್ನು ಅನುಸರಿಸುವ ಸ್ಪೋಟಕ ಕ್ಷಿಪಣಿಯಿಂದ ಇವನ್ನು ಪ್ರತ್ಯೇಕಿಸುತ್ತದೆ.
ಎರಡು ವಿಧದ ಹೈಪರ್ಸಾನಿಕ್ ಶಸ್ತ್ರಾಸ್ತ್ರ ವ್ಯವಸ್ಥೆಗಳೆಂದರೆ ಹೈಪರ್ಸಾನಿಕ್ ಗ್ಲೈಡ್ ವೆಹಿಕಲ್ಸ್ (Hypersonic Glide Vehicles – HGV) ಮತ್ತು ಹೈಪರ್ಸಾನಿಕ್ ಕ್ರೂಸ್ Hypersonic Cruise Missiles – HGM) ಕ್ಷಿಪಣಿಗಳು. ಎಚ್ ಜಿವಿ ಕ್ಷಿಪಣಿ ಮಾದರಿಯಲ್ಲಿ ಉದ್ದೇಶಿತ ಗುರಿಗೆ ಗ್ಲೈಡ್ ಮಾಡುವ ಮೊದಲು ರಾಕೆಟ್‌ನಿಂದ ಉಡಾವಣೆಯಾಗುತ್ತವೆ. ಆದರೆ ಎಚ್ ಸಿಎಮ್ ಗಳು ತಮ್ಮ ಗುರಿಯನ್ನು ಪಡೆದ ನಂತರ ಗಾಳಿಯಲ್ಲಿ ಹಾರಬಲ್ಲ ಅತಿ ವೇಗದ ಎಂಜಿನ್‌ಗಳು ಅಥವಾ ‘ಸ್ಕ್ರ್ಯಾಮ್‌ಜೆಟ್‌ಗಳಿಂದ’ (Scramjet) ಅಂದರೆ ಹೈಪರ್ಸಾನಿಕ್ ವೇಗದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲ ಜೆಟ್ ಎಂಜಿನ್ ಪ್ರಕಾರ) ಚಾಲಿತವಾಗುತ್ತವೆ.
ರಕ್ಷಣಾ ಸಾಧನ ತಯಾರಕ ಲಾಕ್‌ಹೀಡ್ ಮಾರ್ಟಿನ್‌ನ ವೆಬ್‌ಸೈಟ್ ಪ್ರಕಾರ, ಹೈಪರ್‌ಸಾನಿಕ್ ವ್ಯವಸ್ಥೆಗಳು ರಾಷ್ಟ್ರೀಯ ಭದ್ರತೆಗಾಗಿ “ಗೇಮ್ ಚೇಂಜರ್” ಆಗಿದೆ.