ಬೆಂಗಳೂರು, ನ.16 www.bengaluruwire.com : ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆ ಈಗಾಗಲೇ ನೂರಾರು ಕೋಟಿ ಪ್ರಾಜೆಕ್ಟ್ಗಳನ್ನು ಘೋಷಿಸಿದ್ದು, ಇದೀಗ ಹೊಸದೊಂದು ಸಿನಿಮಾ ಘೋಷಣೆ ಮಾಡಿದೆ. ಇದರ ಪೋಸ್ಟರ್ ಟೀಸರನ್ನು ಇಂದು ಬಿಡುಗಡೆ ಮಾಡಿದೆ. ಆ ಮೂಲಕ ಆನಿಮೇಷನ್ ನಲ್ಲಿ ನರಸಿಂಹಾವತಾರವನ್ನು ಪ್ರೇಕ್ಷಕರು ನಿರೀಕ್ಷಿಸಬಹುದು.
ಹೊಂಬಾಳೆ ಫಿಲಮ್ಸ್ ಮೊದಲ ಬಾರಿಗೆ ಪೌರಾಣಿಕ ಕತೆಯ ಆನಿಮೇಷನ್ ಸಿನಿಮಾದ ಮೇಲೆ ಬಂಡವಾಳ ಹಾಕುತ್ತಿದೆ. ‘ನರಸಿಂಹ’ ಸಿನಿಮಾವನ್ನು ತನ್ನ ಮುಂದಿನ ಸಿನಿಮಾ ಎಂದು ಘೋಷಣೆ ಮಾಡಿದೆ.
ಈ ಸಿನಿಮಾಕ್ಕೆ ‘ಮಹಾವತಾರ್ ನರಸಿಂಹ’ ಎಂದು ಹೆಸರಿಟ್ಟಿದ್ದು ಇದೊಂದು 3ಡಿ ಸಿನಿಮಾ ಆಗಿರಲಿದೆ. ಇದು ನಿಜ ನಟರಿಲ್ಲದ ಆನಿಮೇಷನ್ ಸಿನಿಮಾ ಹೇಳಲಾಗುತ್ತಿದೆ. ಈ ಸಿನಿಮಾವನ್ನು ಭಾರತದ ಜನಪ್ರಿಯ ಅನಿಮೇಷನ್ ಸಿನಿಮಾ ಸ್ಟುಡಿಯೋ ಕ್ಲೀಮ್ ಸಹ ನಿರ್ಮಾಣ ಮಾಡುತ್ತಿದೆ. ಕ್ಲೀಮ್ನ ಅಶ್ವಿನ್ ಕುಮಾರ್ ಅವರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಭಾರಿ ಗಾತ್ರದ ನರಸಿಂಹ ಹಾಗೂ ನರಸಿಂಹನ ಎದುರು ನಿಂತಿರುವ ಹಿರಣ್ಯಕಶಪುವಿನ ಪೋಸ್ಟರನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ಸಣ್ಣ ಟೀಸರನ್ನು ಬಿಡುಗಡೆ ಮಾಡಿದೆ.
ಎಕ್ಸ್ ಅಧಿಕೃತ ಖಾತೆಯಲ್ಲಿ ಹೊಂಬಾಳೆ ಫಿಲಮ್ಸ್ ಮಹಾವತಾರ್ ಟೇಲ್ಸ್ ಹೆಸರಿನಲ್ಲಿ ಖಾತೆ ತೆರೆದಿದ್ದು, “ನಂಬಿಕೆಗೆ ಸವಾಲು ಬಂದಾಗ, ಅವನು ಕಾಣಿಸಿಕೊಳ್ಳುತ್ತಾನೆ.
ಕತ್ತಲೆ ಮತ್ತು ಅವ್ಯವಸ್ಥೆಯಿಂದ ಛಿದ್ರಗೊಂಡ ಜಗತ್ತಿನಲ್ಲಿ… ಭಗವಾನ್ ವಿಷ್ಣುವಿನ ಅತ್ಯಂತ ಶಕ್ತಿಶಾಲಿ ಅವತಾರದ, ಅರ್ಧ ಮನುಷ್ಯ, ಅರ್ಧ ಸಿಂಹ ಅವತಾರ ಗೋಚರತೆಗೆ ಸಾಕ್ಷಿಯಾಗಲಿದೆ” ಎಂದು ಪೋಸ್ಟ್ ಮಾಡಿದೆ.
‘ಮಹಾವತಾರ್ ನರಸಿಂಹ’ ಸಿನಿಮಾ ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಲಿದೆ. ಇದು ಮೂಲತಃ ಹಿಂದಿಯಲ್ಲಿ ನಿರ್ಮಾಣ ಆಗಲಿರುವ ಸಿನಿಮಾ. ಈ ಚಿತ್ರಕ್ಕೆ ಸ್ಯಾಮ್ ಸಿಎಸ್ ಮತ್ತು ಶ್ಲೋಕ ಅರುಗಳು ಸಂಗೀತ ನೀಡುತ್ತಿದ್ದಾರೆ. ಹಿರಣ್ಯಕಶಪು ಹಾಗೂ ನರಸಿಂಹನ ಕುರಿತ ಕಥೆಯು ಅದ್ಧೂರಿಯಾಗಿ, ರೋಚಕವಾಗಿ ಚಿತ್ರ ನಿರ್ಮಾಣವಾಗಲಿದೆ.
ವಿಷ್ಣುವಿನ ಮಹಾವತಾರಗಳ ಸರಣಿಯನ್ನು ಹೊಂಬಾಳೆ ಹೊರತರುವ ಯೋಜನೆ ಹಾಕಿಕೊಂಡಿದ್ದು, ಆ ಯೋಜನೆಯ ಮೊದಲ ಪ್ರಾಜೆಕ್ಟ್ ಆಗಿ ಇದೀಗ ‘ಮಹಾವತಾರ್ ನರಸಿಂಹ’ ನಿರ್ಮಾಣ ಮಾಡುತ್ತಿದೆ. ಸಿನಿಮಾಕ್ಕೆ ಕ್ಲೀಮ್ ಸಹ ಸಾಥ್ ನೀಡಿದೆ. ಕ್ಲೀಮ್ ಸಂಸ್ಥೆಯು ಈಗಾಗಲೇ ಭಾರತದಲ್ಲಿ ಕೆಲವು ಅನಿಮೇಷನ್ ಸಿನಿಮಾಗಳನ್ನು ನಿರ್ಮಿಸಿದೆ.