ಬೆಂಗಳೂರು, ನ.14 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಅನಧಿಕೃತ ಕಟ್ಟಡ ನಿರ್ಮಾಣ ಹಾಗೂ ಮಂಜೂರಾತಿ ನಕ್ಷೆ ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡ ಭಾಗಗಳನ್ನು ತೆರವುಗೊಳಿಸಲು ಅಂತಹ ಕಟ್ಟಡಗಳ ಸಮೀಕ್ಷೆ ಕಾರ್ಯವನ್ನು ಈಗಾಗಲೇ ಆರಂಭಿಸಿದೆ. ಈ ತನಕ (ನ.13) 8 ವಲಯಗಳಲ್ಲಿ 2,312 ಕಟ್ಟಡಗಳು ನಿಯಮ ಉಲ್ಲಂಘಿಸಿರುವುದನ್ನು ಪಾಲಿಕೆ ಎಂಜಿನಿಯರ್ ಗಳು ಪತ್ತೆ ಹಚ್ಚಿದ್ದಾರೆ.
ಎಂಟು ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಈವರೆಗೆ 546ರಷ್ಟು ಅತಿಹೆಚ್ಚು ಅನಧಿಕೃತ ನಿರ್ಮಾಣಗಳನ್ನು ಪಾಲಿಕೆಯು ಪತ್ತೆಹಚ್ಚಿದೆ. ಪಶ್ಚಿಮ ವಲಯದಲ್ಲಿ 335, ಆರ್.ಆರ್.ನಗರ 332, ಬೊಮ್ಮನಹಳ್ಳಿ 307, ಬೆಂಗಳೂರು ಪೂರ್ವ 242, ದಾಸರಹಳ್ಳಿ 214, ಯಲಹಂಕ 180 ಹಾಗೂ ಬೆಂಗಳೂರು ದಕ್ಷಿಣದಲ್ಲಿ 156 ಅನಧಿಕೃತ ಕಟ್ಟಡ/ನಿರ್ಮಾಣಗಳನ್ನು ಪತ್ತೆ ಹಚ್ಚಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಇತ್ತೀಚೆಗೆ ತಿಳಿಸಿದ್ದರು. ಇದಲ್ಲದೆ ನ.05 ರಂದು ಹೊರಡಿಸಿದ ತಮ್ಮ ಸುತ್ತೋಲೆಯಲ್ಲಿ ಪಾಲಿಕೆಯ 8 ವಲಯಗಳ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣಗಳ ವಿರುದ್ಧ ಬಿಬಿಎಂಪಿ ಕಾಯ್ದೆ 2020 ರ ಕಲಂ 248(1), 248(2) ಹಾಗೂ 248(3) ರಂತೆ ಅನಧಿಕೃತ ನಿರ್ಮಾಣದಾರರಿಗೆ ಜಾರಿಗೊಳಿಸಬೇಕಾದ ನೋಟಿಸ್/ಆದೇಶಗಳ ಮಾದರಿ ನಮೂನೆಗಳನ್ನು ಸುತ್ತೋಲೆಯಲ್ಲಿ ನೀಡಿದ್ದರು.
ಅ.28ರಿಂದ (ಸೋಮವಾರ) ಸಮೀಕ್ಷೆ ನಡೆಸಲಾಗುವುದು. ಖಾಸಗಿ ಹಾಗೂ ಪಾಲಿಕೆಯಿಂದ ಈ ಸಮೀಕ್ಷೆ ನಡೆಯಲಿದ್ದು, ಯಾವುದಾದರೂ ಕಟ್ಟಡ ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿದೆಯೇ ಎಂದು ಪತ್ತೆ ಹಚ್ಚಲಾಗುವುದು ಎಂದು ಬೆಂಗಳೂರು ಉಸ್ತು ವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಬುಸಾಪಾಳ್ಯದ ದುರಂತದ ನಂತರ ಮಾಧ್ಯಮಗಳಿಗೆ ತಿಳಿಸಿದ್ದರು. ಸದ್ಯ ಕಿರಿಯ ಹಾಗೂ ಸಹಾಯಕ ಇಂಜಿನಿಯರ್ಗಳು ಸೇರಿದಂತೆ ಹೊರಗುತ್ತಿಗೆ ಆಧಾರದಲ್ಲಿ 70 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಅಕ್ರಮ ಕಟ್ಟಡಗಳ ಸಮೀಕ್ಷೆ ಮಾಡಲಾಗುತ್ತಿದೆ.
ಪ್ರತಿ ಕಟ್ಟಡದ ಫೋಟೋ ಹಾಗೂ ವಿಡಿಯೋಗಳನ್ನು ಸಂಗ್ರಹಿಸಲಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದು ಬಿದ್ದು 9 ಕಾರ್ಮಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಿಂದ ಅಕ್ರಮ ಕಟ್ಟಡಗಳ ಸಮೀಕ್ಷೆಯನ್ನು ಪಾಲಿಕೆ ಆರಂಭಿಸಿತ್ತು. ನಿಯಮಗಳನ್ನು ಉಲ್ಲಂಘಿಸಿರುವ ಅಕ್ರಮ ಕಟ್ಟಡಗಳನ್ನು ಗುರುತಿಸಲು ಕಂದಾಯ ಇಲಾಖೆ ಮೊಬೈಲ್ ಆಪ್ ವೊಂದನ್ನು ಸಿದ್ದಪಡಿಸಿದೆ. ಆರಂಭದಲ್ಲಿ ಈ ಆಪ್ ಅನ್ನು ಆಸ್ತಿ ತೆರಿಗೆ ಸಂಗ್ರಹಕ್ಕೆ ಮಾತ್ರ ಬಳಸಲಾಗುತ್ತಿತ್ತು. ಇದೀಗ ಅಕ್ರಮ ಕಟ್ಟಡ ನಿರ್ಮಾಣ ಪತ್ತೆಹಚ್ಚುವ ಉದ್ದೇಶಗಳಿಗೂ ಬಳಸಲಾಗುತ್ತಿದೆ.
ಇದೇ ಆಪ್ ಬಳಸಿ ಬಿಬಿಎಂಪಿ ಕಟ್ಟಡಗಳ ನಕ್ಷೆ, ಮೂಲ ನಕ್ಷೆಯನ್ನು ಬದಲಾಯಿಸಿ ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚುತ್ತಿದೆ. ಬಿಡಿಎ ಲೇಔಟ್ಗಳಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿದ್ದರೆ ಅಲ್ಲಿನ ನಿವಾಸಿಗಳೇ ಸ್ವಯಂಪ್ರೇರಣೆಯಿಂದ ದೂರು ನೀಡುತ್ತಿದ್ದಾರೆ. ಕಟ್ಟಡದ ಭಾವಚಿತ್ರ ಅಪ್ ಲೋಡ್ ಮಾಡುತ್ತಿದ್ದಂತೆ ಆಪ್ ನಲ್ಲಿ ಆಸ್ತಿಯ ವಿವರಗಳು ಲಭ್ಯವಾಗುತ್ತಿದೆ. ಇದರಿಂದ ಹಾಲಿ ನಿರ್ಮಾಣ ಮಾಡುತ್ತಿರುವ, ಮಂಜೂರಾದ ನಕ್ಷೆ ಮತ್ತಿತರ ಕಟ್ಟಡಕ್ಕೆ ಸಂಬಂಧಿಸಿದ ವಿವರಗಳನ್ನು ಒದಗಿಸುತ್ತದೆ. ಇದು ಪಾಲಿಕೆ ನಗರ ಯೋಜನೆ ಎಂಜಿನಿಯರ್ ಗಳಿಗೆ ಸಹಾಯಕವಾಗಿದೆ.
ಅನಧಿಕೃತ ಕಟ್ಟಡ ಹಾಗೂ ನಿಯಮ ಉಲ್ಲಂಘಿಸಿದ ಕಟ್ಟಡಗಳನ್ನು ಗುರ್ತಿಸಿ, ಅಧಿಕೃತ ಪಟ್ಟಿ ಮಾಡುವಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಅನಧಿಕೃತ ಕಟ್ಟಡ ಪತ್ತೆಹಚ್ಚಲು ಮುಖ್ಯ ಆಯುಕ್ತರ ಆದೇಶವನ್ನೇ ನೆಪವಾಗಿಟ್ಟುಕೊಂಡು, ತಾವು ಫಿಕ್ಸ್ ಮಾಡಿದ ಲಂಚ ನೀಡದಿದ್ದರೆ ಅಂತಹ ಕಟ್ಟಡಗಳನ್ನು ನಿಯಮಬಾಹಿರ ನಿರ್ಮಾಣ ಪಟ್ಟಿಗೆ ಸೇರ್ಪಡೆಗೊಳಿಸುವ ಹುನ್ನಾರ ನಡೆಯುತ್ತಿದೆ ಎಂಬ ದೂರುಗಳಿವೆ. ಈ ಬಗ್ಗೆ ಆಯಾ ವಲಯ ಮಟ್ಟದ ಆಯುಕ್ತರು, ಜಂಟಿ ಆಯುಕ್ತರು ಪರಿಣಾಮಕಾರಿಯಾಗಿ ಮೇಲುಸ್ತುವಾರಿ ವಹಿಸುವ ಅವಶ್ಯಕತೆಯಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ನಿಯಮ ಉಲ್ಲಂಘಿಸಿದ ಕಟ್ಟಡಗಳ ಜೊತೆಗೆ ಕುಸಿಯುವ ಹಂತದಲಿರುವ ಶಿಥಿಲ ಸಾವಿರಾರು ಕಟ್ಟಡಗಳು ಬೆಂಗಳೂರಿನಲ್ಲಿವೆ. ಅಂತಹ ಒಂದೆರಡು ಕಟ್ಟಡಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಪಾಲಿಕೆ ಅಂತಹ ಕಟ್ಟಡಗಳನ್ನು ತೆರವುಗೊಳಿಸಿ ನಾಗರೀಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಿದೆ.