ಬೆಂಗಳೂರು, ನ.13 www.bengaluruwire.com : ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಜಾಬ್ ಕಾರ್ಡ್ ನಂತೆಯೇ ಬಹುಪಯೋಗಿ ಕಾರ್ಡ್ ವಿತರಣೆಯಾಗಲಿದೆ. ಆದರೆ ಇದು ವಿದ್ಯಾರ್ಥಿಗಳಿಗೆ ಮಾತ್ರ. ಹೌದು ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಮತ್ತು ಹೈಯರ್ ಸೆಕೆಂಡರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ‘ಆಧಾರ್’ ಸಂಖ್ಯೆಯ ಮಾದರಿಯಲ್ಲಿ 12 ಅಂಕಿಯ ‘ಅಪಾರ್’ ವಿಶಿಷ್ಟ ಗುರುತಿನ ಚೀಟಿ ವಿತರಿಸಲು ಸಿದ್ದತೆ ನಡೆಸಲಾಗಿದೆ.
ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಿರುವಂತೆ ಶಾಲಾ ಮಕ್ಕಳಿಗೆ ವಿಭಿನ್ನ ಹಾಗೂ ಪ್ರತ್ಯೇಕ ಗುರುತಿನ ಕಾರ್ಡ್ ಹೊರತರಲು ಮುಂದಾಗಿದೆ. ಈ ಕಾರ್ಡ್‌ಗೆ ‘ಅಪಾರ್’ (APAAR- Automated Permanent Academic Account Registry) ಐಡಿ ಕಾರ್ಡ್ (Identity Card -ID) ಎಂದು ಕರೆಯಲಾಗಿದೆ. ರಾಜ್ಯದಲ್ಲಿ ಈ ವಿಶಿಷ್ಟ ಗುರುತಿನ ಚೀಟಿ ನೀಡುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅಡಿಯಲ್ಲಿ 2026-27 ರ ವೇಳೆಗೆ ಶಾಲಾ ವಿದ್ಯಾರ್ಥಿಗಳ ಎಲ್ಲಾ ಶಿಕ್ಷಣ ದಾಖಲೆಗಳನ್ನು ಅದರ ‘ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಐಡಿ’ ಎಂಬ ಯೋಜನೆಯ ಅಡಿಯಲ್ಲಿ ಈ ಗುರುತಿನ ಚೀಟಿಗಳ ವಿತರಣೆಗೆ ಮುಂದಾಗಿದೆ. ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ವಿದ್ಯಾರ್ಥಿ ಪಡೆದ ಪದವಿಗಳು, ಸ್ಕಾಲರ್‌ಶಿಪ್, ಬಹುಮಾನ, ಕ್ರೆಡಿಟ್ ಅವರ ಶೈಕ್ಷಣಿಕ ದಾಖಲೆಗಳು, ಅವರ ಅಧ್ಯಯನ ವಿಷಯಗಳು ಸೇರಿದಂತೆ ಹಲವು ಮಾಹಿತಿಯನ್ನು ಈ ಕಾರ್ಡ್‌ಗಳ ಒಳಗೊಂಡಿರಲಿದೆ ಎನ್ನಲಾಗಿದೆ. ವಿದ್ಯಾರ್ಥಿಯ ಎಲ್ಲಾ ದಾಖಲೆಗಳು ಒಂದೇ ಕಾರ್ಡ್‌ನಲ್ಲಿ ಏಕೀಕೃತ ವಿಧಾನದಡಿ ತರುವಂತಹ ಯೋಜನೆ ಇದಾಗಿದೆ.
ಅಪಾರ್ ಐಡಿ (APAAR ID) ಕಾರ್ಡಿನಲ್ಲಿ ಆಧಾರ್ ಕಾರ್ಡ್‌ನಂತೆಯೇ ವಿಶೇಷ ಗುರುತಿನ ಸಂಖ್ಯೆಗಳನ್ನು ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವಿವರ ಮತ್ತು ಸಾಧನೆಗಳನ್ನು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಟ್ರ್ಯಾಕ್ ಮಾಡಲು ಸಹಾಯಕವಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಪೋಷಕರನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ಅಥವಾ ಒಂದು ರಾಜ್ಯಕ್ಕೆ ಮತ್ತೊಂದು ರಾಜ್ಯಕ್ಕೆ ವರ್ಗಾಯಿಸುವ ಸಂದರ್ಭದಲ್ಲಿ ಉಪಯೋಗಕಾರಿಯಾಗಿದೆ.
ಅರ್ಧದಲ್ಲಿ ಶಾಲೆಯನ್ನು ಮೊಟಕುಗೊಳಿಸಿರುವ, ಅನುತ್ತೀರ್ಣರಾದ ವಿದ್ಯಾರ್ಥಿಗಳ ವಿಶೇಷ ಮೇಲ್ವಿಚಾರಣೆ ಹಾಗೂ ಅವರನ್ನು ಮತ್ತೆ ಶಾಲೆಯತ್ತ ಕರೆತರುವುದರಿಂದ ಹಿಡಿದು ದೇಶದ ಸಾಕ್ಷರತೆಯ ಮಟ್ಟ ಹೆಚ್ಚಿಸಲು ಕೂಡ ಇದು ನೆರವಾಗಲಿದೆ. ಹಾಗೆಯೇ ಈ ಕಾರ್ಡ್‌ನಲ್ಲಿ ಅವರು ಸಮಗ್ರ ವರದಿಗಳು, ಫಲಿತಾಂಶಗಳು ಸೇರಿ ಎಲ್ಲಾ ಮಾಹಿತಿಯನ್ನು ಸುರಕ್ಷಿತವಾಗಿಡಬಹುದು.
ಅಪಾರ್ ಕಾರ್ಡ್ – ಆಧಾರ್‌ಗೆ ಲಿಂಕ್ ಮಾಡಲಾಗುತ್ತಾ?
ಈಗ ಎಲ್ಲಾ ಕಾರ್ಡ್‌ಗಳನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಗ್ ಮಾಡಲಾಗುತ್ತಿದೆ. ಆದರೆ ಅಪಾರ್ ಕಾರ್ಡ್‌ನ ಸಂಖ್ಯೆಗಳು ಬದಲಾಗುವುದಿಲ್ಲ. ಅಪಾರ್ ಗುರುತಿನ ಚೀಟಿಗೆ ವಿದ್ಯಾರ್ಥಿಗಳ ಹೆಸರು ನೋಂದಣಿಗೂ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಲಾಗಿದೆ. ಈ ಕಾರ್ಡ್‌ಗೆ ಪೋಷಕರ ಆಧಾರ್ ಕಾರ್ಡ್, ಪೋಷಕರ ಮತದಾನದ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ನೊಂದಿಗೆ ಲಿಂಕ್ ಮಾಡಿ ವಿದ್ಯಾರ್ಥಿಗಳಿಗೆ ಐಡಿ ಸೃಷ್ಟಿ ಮಾಲಾಗುತ್ತದೆ. ಈ ಐಡಿಯು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಿಂದ ಪ್ರಾರಂಭವಾಗುವ ಶಾಲಾ ಶಿಕ್ಷಣ ವ್ಯವಸ್ಥೆಯಾದ್ಯಂತ ಸಾರ್ವತ್ರಿಕವಾಗಿ ವಿದ್ಯಾರ್ಥಿಯನ್ನು ಗುರುತಿಸುವಿಕೆಗೆ ಸಹಾಯಕವಾಗುತ್ತದೆ.
ಕೇಂದ್ರ ಶಿಕ್ಷಣ ಸಚಿವಾಲಯದಿಂದ 2026-27ರ ತನಕ ಗಡುವು :
ಈ ಕಾರ್ಡ್ ಹೊಂದಲು ಶಿಕ್ಷಣ ಸಚಿವಾಲಯವು 2026-27 ರ ಗಡುವನ್ನು ಪ್ರಸ್ತಾಪಿಸಿದೆ. ಈಗಾಗಲೇ ಹಲವು ರಾಜ್ಯಗಳು ಈ ಕಾರ್ಡ್ ಅನ್ನು ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿವೆ. ಆಂಧ್ರ ಪ್ರದೇಶ, ಅಸ್ಸಾಂ ಸೇರಿ ಹಲವು ಕಡೆಗಳಲ್ಲಿ ಯೋಜನೆಗೆ ಚಾಲನೆ ಸಿಕ್ಕಿದೆ. ಇನ್ನು ಈ ಕಾರ್ಡ್ ಹೊಂದುವುದು ಪೋಷಕರು ಹಾಗೂ ವಿದ್ಯಾರ್ಥಿಗಳ ಆಲೋಚನೆಗೆ ಬಿಡಲಾಗಿದೆ. ಅಂದರೆ ಈ ಕಾರ್ಡ್ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂಬ ನಿಯಮ ಜಾರಿ ಮಾಡಲಾಗಿಲ್ಲ ಎಂಬುದನ್ನು ಗಮನಿಸಬೇಕು.