ಬೆಂಗಳೂರು, ನ.13 www.bengaluruwire.com : ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್ ರಾಜಧಾನಿ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ದುಬಾರಿಯಾಗುತ್ತಿರುವ ಬಗ್ಗೆ, ಮನೆ ಮಾಲೀಕರ ದುರಾಸೆಯ ಬಗ್ಗೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
‘ಬೆಂಗಳೂರು ಬಾಡಿಗೆ ಸಂಕಟ’ದ ಇತ್ತೀಚಿನ ಪ್ರಕರಣದಲ್ಲಿ ತಿಂಗಳಿಗೆ ₹ 40,000 ಅಪಾರ್ಟ್‌ಮೆಂಟ್‌ಗೆ ₹ 5 ಲಕ್ಷ ಭದ್ರತಾ ಠೇವಣಿಯಾಗಿ ಪಾವತಿಸಲು ಕೇಳಲಾಗಿದೆ ಎಂದು ಹರ್ನಿಧ್ ಕೌರ್ ಎಂಬುವರು ನಗರದಲ್ಲಿ ದುಬಾರಿ ಮನೆ ಬಾಡಿಗೆ ಸಂಕಷ್ಟದ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ನೆಟ್ಟಿಗರನ್ನು ಸೂಜಿಗಲ್ಲಿನಂತೆ ಸೆಳೆದಿದೆ. ನಗರದಲ್ಲಿ ಬಾಡಿಗೆ ಬೆಲೆಗಳ ನಿರ್ಧಾರಕ್ಕೆ “ನಿಯಂತ್ರಣವಿಲ್ಲ” ಎಂದು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“40 ಸಾವಿರ ರೂ. ಬಾಡಿಗೆಯ ಫ್ಲಾಟ್‌ಗೆ 5 ಲಕ್ಷ ಠೇವಣಿ. ನಾನು ತುಂಬಾ ದಣಿದಿದ್ದೇನೆ” ಎಂದು ಕೌರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ದೆಹಲಿಯಂತಹ ಅನೇಕ ನಗರಗಳಲ್ಲಿ, ಭದ್ರತಾ ಠೇವಣಿಯು ಸಾಮಾನ್ಯವಾಗಿ ಒಂದು ಅಥವಾ ಎರಡು ತಿಂಗಳ ಬಾಡಿಗೆಯ ಲೆಕ್ಕದಲ್ಲಿರುತ್ತದೆ. ಗಗನಕ್ಕೇರುತ್ತಿರುವ ರಿಯಲ್ ಎಸ್ಟೇಟ್ ಬೆಲೆಗಳು ಮತ್ತು ಸ್ಥಳಾವಕಾಶದ ಕೊರತೆಗೆ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ, ಈ ಮೊತ್ತವು ಐದು ಅಥವಾ 10 ತಿಂಗಳ ಬಾಡಿಗೆಗೆ ಹೆಚ್ಚಾಗಬಹುದು.
ಆದರೆ ಸಾಮಾಜಿಕ ಮಾಧ್ಯಮದಲ್ಲಿ ಸಾಮಾನ್ಯ ಒಮ್ಮತವೇನಂದರೆ, ಒಂದು ವರ್ಷದ ಬಾಡಿಗೆಯೇ ₹ 4.8 ಲಕ್ಷದಷ್ಟಿದೆ. ಬೆಂಗಳೂರಿನ ಮಾನದಂಡಗಳ ಪ್ರಕಾರ ₹ 5 ಲಕ್ಷ ಭದ್ರತಾ ಠೇವಣಿಯಾಗಿದೆ. ಈ ಸೆಕ್ಯುರಿಟಿ ಡೆಪಾಸಿಟ್ ಒಂದು ವರ್ಷದ ಮೌಲ್ಯದ ಬಾಡಿಗೆಯನ್ನು ಮೀರಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಸೆಳೆದಿದ್ದಾರೆ.
ಕೌರ್ ಅವರ ಪೋಸ್ಟ್ ಆನ್‌ಲೈನ್‌ನಲ್ಲಿ ವೈರಲ್ ಆಗಲು ಶುರುವಾಗುತ್ತಿದ್ದಂತೆ, ಆಕೆಗೆ ಹಲವಾರು ಆಶ್ಚರ್ಯಕರ ಪ್ರಶ್ನೆಗಳು ಕೇಳಿ ಬಂದವು. “ಒಂದು ವರ್ಷ ಠೇವಣಿ? ಯಾವ ನಗರ? ಇದು ಯಾವಾಗ ರೂಢಿಯಾಯಿತು? ಇದು ಅನೈತಿಕವಲ್ಲ ಎಂದರೆ ಹೇಗೆ? ಎಂದು ಫಿಟ್ನೆಸ್ ಕೋಚ್ ಚಿರಾಗ್ ಬರ್ಜಾತ್ಯಾ ಪ್ರಶ್ನಿಸಿದ್ದಾರೆ.
“ಬೆಂಗಳೂರಿನ ಮನೆ ಮಾಲೀಕರು ಕಳ್ಳರು. ನೀವು ಖಾಲಿ ಮಾಡುವಾಗ ಅವರು ನಿಮಗೆ ಬಹಳ ಕಷ್ಟ ಕೊಡುತ್ತಾರೆ”ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. “ನಿಖಿಲ್ ಕಾಮತ್ ಅವರು ಮನೆ ಖರೀದಿಸಲು ಮತ್ತೊಂದು ಕಾರಣವಾಗಿರಬಹುದು” ಎಂದು ಎಕ್ಸ್ ಬಳಕೆದಾರ ನಿರಾಜ್ ಲೇವಡಿ ಮಾಡಿದ್ದಾರೆ.
ಭಾರತದಲ್ಲಿ ಯಾವ ನಗರವು ಉತ್ತಮ ಗುಣಮಟ್ಟದ ಜೀವನವನ್ನು ನೀಡುತ್ತದೆ ಎಂಬ ಹಳೆಯ ಚರ್ಚೆ ಪೋಸ್ಟ್ ನಲ್ಲಿ ಮರು ಆರಂಭವಾಗಿದೆ. “ಭಾರತದಲ್ಲಿ ವಾಸಿಸಲು ದೆಹಲಿ ಅತ್ಯುತ್ತಮ ಸ್ಥಳವಾಗಿದೆ. ಸಾರ್ವಜನಿಕ ಸಾರಿಗೆ ಉತ್ತಮವಾಗಿದೆ, ಉತ್ತಮ ಆಹಾರ, ಉತ್ತಮ ರಾತ್ರಿ ಜೀವನ, ಹೆಚ್ಚು ಹಸಿರು, ಕಡಿಮೆ ಸಂಚಾರ, ಕೈಗೆಟುಕುವ ದರ. ಆದರೆ ನಾವು ಅಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸಬೇಕಾಗಿದೆ. ಮುಂಬೈ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಖಂಡಿತವಾಗಿಯೂ ಮುಂದಿದೆ. ಆದರೆ ದೆಹಲಿಗಿಂತ ಬೆಂಗಳೂರಿನಲ್ಲಿ ಏನೂ ಇಲ್ಲ ಎಂದು ಎಕ್ಸ್ ಬಳಕೆದಾರರು ಬರೆದಿದ್ದಾರೆ.
ಅಂತಹ ಹೆಚ್ಚಿನ ಬೆಲೆಗೆ ಬಾಡಿಗೆ ಹಣ ನೀಡುವ ಬದಲು ಮನೆ ಖರೀದಿಸುವುದು ಆರ್ಥಿಕವಾಗಿ ವಿವೇಕಯುತ ನಿರ್ಧಾರವಾಗಿರುತ್ತೆ ಎಂದು ಕೆಲವರು ಕಮೆಂಟ್ ಮಾಡಿದರೆ, ಇತರರು ಮಾರುಕಟ್ಟೆಯಲ್ಲಿ ದುರಾಸೆಯ ಮನೆ ಮಾಲೀಕರ ಕಾರಣದಿಂದ ಬಾಡಿಗೆ ಬೆಲೆ ಹೆಚ್ಚಾಗಿದೆ ಎಂದು ಟೀಕಿಸಿದ್ದಾರೆ. ಐಟಿ ಸಿಟಿಯಲ್ಲೂ ಈಗಂತೂ ಬಾಡಿಗೆ ಮನೆಗಳ ಸಂಖ್ಯೆ ಅತಿಹೆಚ್ಚಾಗಿದ್ದು, ದುಬಾರಿ ಬಾಡಿಗೆ ನಿಯಂತ್ರಣಕ್ಕೆ ಸರ್ಕಾರ ಮಾನದಂಡ, ಸೂಕ್ತ ನಿಯಮಾವಳಿ, ಪರಿಶೀಲನೆಯಂತಹ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.