ಬೆಂಗಳೂರು, ನ.10 www.bengaluruwire.com : ನಗರದ ಮೊದಲ ಡಿಜಿಟಲ್ ಜನಸಂಖ್ಯಾ ಗಡಿಯಾರ (Digital population clock)ವನ್ನು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್ – ISEC) ನಗರದಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು. ಈ ಡಿಜಿಟಲ್ ಗಡಿಯಾರವು ಕರ್ನಾಟಕದ ಮತ್ತು ದೇಶದ ಜನಸಂಖ್ಯೆಯ ನೈಜ ಸಮಯದ ಅಂದಾಜುಗಳನ್ನು ತಿಳಿಸಲಿದೆ.
ಈ ಯೋಜನೆಯನ್ನು ಐಸೆಕ್ ಹಾಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಜಂಟಿಯಾಗಿ ಕೈಗೆತ್ತಿಕೊಂಡಿದೆ. ಐಸೆಕ್ ಸಂಸ್ಥೆಯ ಮುಖ್ಯ ಪ್ರವೇಶದ್ವಾರದ ಬಳಿ ಈ ಗಡಿಯಾರ ಸ್ಥಾಪಿಸಲಾಗಿದೆ. ಉಪಗ್ರಹದ ಸಂಪರ್ಕ ಸಹಯಾದಿಂದ ನಿಖರವಾದ ಸಮಯ ಪಾಲನೆ ಜೊತೆಗೆ ಜನಸಂಖ್ಯಾ ದತ್ತಾಂಶವನ್ನು ಇದರಲ್ಲಿನ ಉಪಕರಣ ಪ್ರದರ್ಶಿಸುತ್ತದೆ. ಈ ಡಿಜಿಟಲ್ ಗಡಿಯಾರವು ಪ್ರತಿ 1.10 ನಿಮಿಷಕ್ಕೆ (ಒಂದು ನಿಮಿಷ 10 ಸೆಕೆಂಡುಗಳು) ರಾಜ್ಯದ ಜನಸಂಖ್ಯೆಯ ಅಂಕಿ ಅಂಶಗಳನ್ನು ಮತ್ತು ಪ್ರತಿ ಎರಡು ಸೆಕೆಂಡುಗಳಲ್ಲಿ ದೇಶದ ಜನಸಂಖ್ಯೆಯನ್ನು ನವೀಕರಿಸಿ ಗಡಿಯಾರವು ಮಾಹಿತಿ ಪ್ರದರ್ಶಿಸುತ್ತದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೇಶದಾದ್ಯಂತ 18 ಜನಸಂಖ್ಯಾ ಸಂಶೋಧನಾ ಕೇಂದ್ರಗಳಲ್ಲಿ ಡಿಜಿಟಲ್ ಜನಸಂಖ್ಯೆ ಗಡಿಯಾರಗಳನ್ನು ಅಳವಡಿಸುತ್ತಿದೆ.
ಸಂಖ್ಯಾಶಾಸ್ತ್ರ ವಿಭಾಗದ ಮಹಾ ನಿರ್ದೇಶಕ ಕಲ್ ಸಿಂಗ್, ಜನಗಣತಿ ದತ್ತಾಂಶ ಸಂಶೋಧನಾ ಗಡಿಯಾರವನ್ನು ಉದ್ಘಾಟಿಸಿ ಮಾತನಾಡುತ್ತಾ “ಜನಸಂಖ್ಯೆಯ ಪ್ರವೃತ್ತಿಗಳ ಕುರಿತು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವಲ್ಲಿ ಗಡಿಯಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದು ಹೇಳಿದರು.
ಹೊಸ ಜನಗಣತಿ ದತ್ತಾಂಶ ಸಂಶೋಧನಾ ಡಿಜಿಟಲ್ ಗಡಿಯಾರವು ಶೈಕ್ಷಣಿಕ ಸಂಶೋಧನೆ, ನೀತಿ ವಿಶ್ಲೇಷಣೆ ಮತ್ತು ಜನಸಂಖ್ಯೆಯ ಅಧ್ಯಯನದಲ್ಲಿ ಸಾಮರ್ಥ್ಯ ನಿರ್ಮಾಣವನ್ನು ಮತ್ತಷ್ಟು ಬಲಪಡಿಸುತ್ತದೆ.
ಐಸೆಕ್ ಆಡಳಿತ ಮಂಡಳಿಯ ಅಧ್ಯಕ್ಷ ಸುಖದೇವ್ ಥೋರಟ್, ಉಪನಿರ್ದೇಶಕ, ಆರೋಗ್ಯ ಸಚಿವಾಲಯದ ಉಪ ಮಹಾನಿರ್ದೇಶಕ ರಾಕೇಶ್ ಕುಮಾರ್ ಮೌರ್ಯ,ಐಸೆಕ್ ನಿರ್ದೇಶಕ ಡಿ.ರಾಜಶೇಖರ್, ಜನಸಂಖ್ಯಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಸಿ.ಎಂ.ಲಕ್ಷ್ಮಣ ಹಾಗೂ ಐಸೆಕ್ ಸಂಸ್ಥೆಯ ತಜ್ಞರು, ಅಧಿಕಾರಿಗಳು ಉಪಸ್ಥಿತರಿದ್ದರು.