ಬೆಂಗಳೂರು, ನ.09 www.bengaluruwire.com : ಐಟಿ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಅನ್ನೋದು ಸಾಮಾನ್ಯ. ಆದರೆ ಇತ್ತೀಚೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport Limited – KIAL) ದಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿದೆ. ಅದು ಅಲ್ಲಿಗೆ ಸಂಪರ್ಕಿಸುವ ರಸ್ತೆಯಲ್ಲಲ್ಲ. ಬದಲಿಗೆ ಏರ್ ಪೋರ್ಟ್ ನಲ್ಲಿ.
ಸಾಮಾಜಿಕ ಮಾಧ್ಯಮದಲ್ಲಿ ವಿಮಾನಗಳು ಹಾರಲು ಒಂದರ ಹಿಂದೆ ಒಂದು ಸರತಿ ಸಾಲಲ್ಲಿ ನಿಂತಿರುವ ಅಪರೂಪದ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಹಲವು ನೆಟ್ಟಿಗರ ಆಸಕ್ತಿಯನ್ನು ಕೆರಳಿಸಿದೆ. ಈ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ “ರನ್‌ವೇ ಟ್ರಾಫಿಕ್ ಜಾಮ್” ಬಗ್ಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರನ್‌ವೇಯಲ್ಲಿನ ಈ ಅನಿರೀಕ್ಷಿತ ವಿಳಂಬವು ನಗರದಲ್ಲಿ ಹೆಚ್ಚುತ್ತಿರುವ ವಾಯು ಸಂಚಾರ ಮತ್ತು ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಮೇಲೆ ಹೇರುತ್ತಿರುವ ಒತ್ತಡದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಇದಲ್ಲದೆ ಈ ಘಟನೆಯು ವಿಮಾನ ಪ್ರಯಾಣಕ್ಕೆ ಹೆಚ್ಚುತ್ತಿರುವ ಬೇಡಿಕೆ ಮತ್ತು ವಿಮಾನ ನಿಲ್ದಾಣದ ಮೂಲಸೌಕರ್ಯದ ಸಾಮರ್ಥ್ಯದ ಮಿತಿಗಳ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ. 2024 ರ ಹಣಕಾಸು ವರ್ಷದಲ್ಲಿ, ಕೆಐಎಎಲ್ ಏರ್ ಪೋರ್ಟ್ ನಲ್ಲಿ ಒಟ್ಟು 2,45,880 ವಾಯು ಸಂಚಾರ ಚಲನೆಗಳನ್ನು ದಾಖಲಿಸಿದೆ. ಎರಡು ರನ್ ವೇಗಳನ್ನು ಹೊಂದಿರುವ ಕೆಐಎಎಲ್ ನಲ್ಲಿ ಪ್ರತಿದಿನ ಸರಾಸರಿಯಾಗಿ 750 ವಿಮಾನಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 2013-14ರಲ್ಲಿ 60 ಲಕ್ಷವಿತ್ತು. ಆದರೀಗ 2024ರ ನವೆಂಬರ್ ನಲ್ಲಿ 1.2 ಕೋಟಿಗೆ ತಲುಪಿದೆ. ಪ್ರತಿದಿನ 6 ಸಾವಿರ ವಾಹನಗಳು ಹೊಸದಾಗಿ ನೋಂದಣಿಯಾಗಿ ರಸ್ತೆಗಿಳಿಯುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಸರಾಸರಿಯಾಗಿ ನಗರದ ಪ್ರತಿಯೊಬ್ಬ ನಿವಾಸಿ ಬಳಿ ಒಂದು ವಾಹನವನ್ನು ಹೊಂದಿದ್ದಾರೆ.ಇದೇ ವೇಗದಲ್ಲಿ ವಾಹನಗಳ ಸಂಖ್ಯೆ ಏರುತ್ತಿದ್ದರೆ ಮುಂದಿನ ಐದು ವರ್ಷಗಳ ಒಳಗಾಗಿ ನಗರದ ಜನಸಂಖ್ಯೆಯನ್ನು ಮೀರಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈಗಾಗಲೇ ತೀವ್ರ ರಸ್ತೆ ಸಂಚಾರ ದಟ್ಟಣೆಗೆ ಹೆಸರುವಾಸಿಯಾಗಿರುವ ಬೆಂಗಳೂರು ಈಗ ತನ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಸವಾಲನ್ನು ಎದುರಿಸುತ್ತಿದೆ. ಈ ರೀತಿಯ ಘಟನೆಯು ಅಸಾಮಾನ್ಯವಾಗಿದ್ದರೂ, ಇದು ವಾಯು ಸಂಚಾರದ ಸುಧಾರಿತ ನಿರ್ವಹಣೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ. “ಬೆಂಗಳೂರು ರಸ್ತೆ ಸಂಚಾರ ದಟ್ಟಣೆಗೆ ಹೆಸರುವಾಸಿಯಾಗಿದೆ, ಆದರೆ ಇಂದು ಬೆಂಗಳೂರು ವಿಮಾನ ನಿಲ್ದಾಣದ ರನ್‌ವೇ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಅನುಭವಿಸಿದೆ. ಗಮನಾರ್ಹ ಸಂಖ್ಯೆಯ ವಿಮಾನಗಳು ಸರದಿಯಲ್ಲಿ ನಿಂತು, ಟೇಕ್ ಆಫ್ ಆಗಲು ಕಾಯುತ್ತಿದ್ದವು, ಅಪರೂಪದ ‘ಟ್ರಾಫಿಕ್ ಜಾಮ್’ ಅನ್ನು ಇದು ಸೃಷ್ಟಿಸಿದೆ. ವಿಮಾನ ನಿಲ್ದಾಣದ ರನ್‌ವೇಯಲ್ಲಿ ಈ ಅಸಾಮಾನ್ಯ ದೃಶ್ಯವು ಹೆಚ್ಚುತ್ತಿರುವ ವಾಯು ದಟ್ಟಣೆ ಮತ್ತು ಬೆಂಗಳೂರು ವಿಮಾನನಿಲ್ದಾಣದಲ್ಲಿ ಗದ್ದಲದ ಚಟುವಟಿಕೆಯನ್ನು ಎತ್ತಿ ತೋರಿಸುತ್ತದೆ, ಇದು ನಗರದ ಕ್ಷಿಪ್ರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅದರ ಪ್ರಮುಖ ಟ್ರಾವೆಲ್ ಹಬ್ ಅನ್ನು ಪ್ರತಿಬಿಂಬಿಸುತ್ತದೆ” ಎಂದು ವಿಡಿಯೋ ಪೋಸ್ಟ್ ಮಾಡಿದ ಎಕ್ಸ್ ಖಾತೆಯಲ್ಲಿ ಕರ್ನಾಟಕ ಪೋರ್ಟ್ ಫೊಲಿಯೋ ಖಾತೆದಾರರು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ತನಕ 32.7 ಸಾವಿರ ಜನರು ಇದನ್ನು ವೀಕ್ಷಿಸಿದ್ದಾರೆ. ಆದಾಗ್ಯೂ, ಬೆಂಗಳೂರು ವೈರ್, ಕರ್ನಾಟಕ ಪೋರ್ಟ್‌ಫೋಲಿಯೊ ಹಂಚಿಕೊಂಡ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ.
ಈ ಪೋಸ್ಟ್ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‘ ಇದು ಸಮಾನಾಂತರ ರನ್ವೇಗಳನ್ನು ಹೊಂದಿಲ್ಲವೇ? ಒಂದು ರನ್ ವೇ, ಟೇಕ್ ಆಫ್ ಮಾಡಲು ಮತ್ತು ಇನ್ನೊಂದು ರನ್ ವೇಯನ್ನು ಸಮಾನಾಂತರವಾಗಿ ಲ್ಯಾಂಡಿಂಗ್ ಮಾಡಲು ಬಳಸಬಹುದೇ? ಅವರು ಅದನ್ನು ಬಳಸುತ್ತಿಲ್ಲವೇ?” ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ. ಇದೇ ವಿಡಿಯೋ ಪೋಸ್ಟ್ ಬಗ್ಗೆ ಮತ್ತೊಬ್ಬ ಖಾತೆದಾರರು, “’ಮೊದಲ ಬಾರಿಯಲ್ಲ, ಈ ಹಿಂದೆಯೂ ಇದೇ ಪರಿಸ್ಥಿತಿ ಅನುಭವಿಸಿದ್ದೇನೆ” ಎಂದು ಅವರು ಹೇಳಿದ್ದಾರೆ. “ಇದು ಬೆಂಗಳೂರಿನ ಕ್ಷಿಪ್ರ ಬೆಳವಣಿಗೆಯ ಪ್ರತಿಬಿಂಬವಲ್ಲ. ಆದರೆ ಕೇವಲ ಒಂದು ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವ ಕರ್ನಾಟಕದ ಸಮರ್ಥನೀಯವಲ್ಲದ, ಯೋಜಿತವಲ್ಲದ ಬೆಳವಣಿಗೆಯ ಸಂಕೇತವಾಗಿದೆ” ಎಂದು ಮೂರನೇ ಬಳಕೆದಾರರು ಟೀಕಿಸಿದ್ದಾರೆ.