ಬೆಂಗಳೂರು, ನ.06 www.bengaluruwire.com : ನಾಗಸಂದ್ರದಿಂದ ತುಮಕೂರು ರಸ್ತೆಯ ಮಾದಾವರ ವರೆಗಿನ ನೂತನ ಹಸಿರು ಮಾರ್ಗದ ವಿಸ್ತರಿತ ಭಾಗದಲ್ಲಿ ಗುರುವಾರದಿಂದ ನಮ್ಮ ಮೆಟ್ರೊ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ನಮ್ಮ ಮೆಟ್ರೊ ತಿಳಿಸಿದೆ.
“2025 ರ ವೇಳೆಗೆ ಸುಮಾರು 30 ಕಿಮೀ ಹಾಗೂ 2026 ರ ವೇಳೆಗೆ 175 ಕಿಮೀ ನೂತನ ಮೆಟ್ರೊ ಮಾರ್ಗಗಳನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುತ್ತದೆ” ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಮೆಟ್ರೋ ಹಸಿರು ಮಾರ್ಗದಲ್ಲಿ ಬುಧವಾರ, ನಾಗಸಂದ್ರದಿಂದ ತುಮಕೂರು ರಸ್ತೆಯ ಮಾದಾವರ ( ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ)ದ ತನಕ ವಿಸ್ತರಣೆ ಮಾಡಿರುವ ನೂತನ ಮಾರ್ಗದಲ್ಲಿ ಪ್ರಾಯೋಗಿಕ ಮೆಟ್ರೊ ರೈಲು ಸಂಚಾರವನ್ನು ಪರಿಶೀಲನೆ ಮಾಡಿದರು.
ಸಂಸದ ತೇಜಸ್ವಿ ಸೂರ್ಯ, ನೆಲಮಂಗಲ ಶಾಸಕ ಶ್ರೀನಿವಾಸಯ್ಯ, ದಾಸರಹಳ್ಳಿ ಶಾಸಕ ಮುನಿರಾಜು ಅವರ ಜೊತೆ ಯಶವಂತರಪುರ ಮೆಟ್ರೊ ರೈಲು ನಿಲ್ದಾಣದಿಂದ ಮಾದಾವರದ ತನಕ ರೈಲಿನಲ್ಲಿ ಪ್ರಯಾಣಿಸಿದರು. ಇದೇ ವೇಳೆ ಬಿಎಂಆರ್ ಸಿಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾದಾವರ ಮೆಟ್ರೊ ನಿಲ್ದಾಣದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಶೀಘ್ರ ನಾಗಸಂದ್ರ- ಮಾದಾವರ ನಡುವಿನ ಮಾರ್ಗ ಅಧಿಕೃತ ಉದ್ಘಾಟನೆ :
“ನಾಗಸಂದ್ರದಿಂದ ಮೂರು ಕಿಮೀ ದೂರವಿರುವ ಮಾದಾವರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ವರೆಗೆ ನೂತನ ವಿಸ್ತರಿತ ಮಾರ್ಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ಉದ್ಘಾಟನೆ ಮಾಡಲಾಗಿದೆ. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಯೋಜನೆಗೆ ಒಪ್ಪಿಗೆ ನೀಡಿದ್ದೆ. ಮುಂದಿನ ದಿನಗಳಲ್ಲಿ ಎಲ್ಲ ಸಂಸದರು ಹಾಗೂ ಇತರೇ ಜನಪ್ರತಿನಿಧಿಗಳನ್ನು ಆಹ್ವಾನಿಸಿ ವಿಸ್ತರಿತ ಮೆಟ್ರೋ ಮಾರ್ಗವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗುವುದು” ಎಂದು ವಿವರಿಸಿದರು.
ಪ್ರಸ್ತುತ ಮೆಟ್ರೋ ಹಸಿರು ಮಾರ್ಗವು 33.46 ಕಿಮೀ ಉದ್ದವಿದೆ. ನೇರಳೆ ಮಾರ್ಗ 40.5 ಕಿಮೀ ಉದ್ದವಿದೆ. ಈ ಮಹತ್ತರವಾದ ಕಾರ್ಯ ಸಾಕಾರಗೊಳ್ಳಲು ಸಹಕಾರ ನೀಡಿದ ಕೇಂದ್ರ ಸರ್ಕಾರಕ್ಕೆ ಹಾಗೂ ಕೈ ಜೋಡಿಸಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಬೆಂಗಳೂರಿನ ಜನತೆಗೆ ಅಭಿನಂದನೆಗಳನ್ನು ತಿಳಿಸುತ್ತೇನೆ” ಎಂದು ಹೇಳಿದರು.
ಮೆಟ್ರೊ ಮೂರನೇ ಹಂತಕ್ಕೆ ಕೇಂದ್ರದ ಒಪ್ಪಿಗೆ :
“ಈಗಾಗಲೇ ₹ 1,130 ಕೋಟಿ ವೆಚ್ಚದಲ್ಲಿ 21 ಹೊಸ ರೈಲುಗಳಿಗೆ ಹರಾಜು ಪ್ರಕ್ರಿಯೆ ನಡೆಸಿ ಹಣ ಕಟ್ಟಲಾಗಿದೆ. ಹೊಸ ರೈಲುಗಳು ಆದಷ್ಟು ಬೇಗ ಸೇವೆಗೆ ಲಭ್ಯವಾಗಲಿವೆ. ಮೆಟ್ರೊ ಮಾರ್ಗದ ಒಂದು ಹಾಗೂ ಎರಡನೇ ಹಂತಗಳನ್ನು ನಾವು ಪೂರ್ಣಗೊಳಿಸಿದ್ದು, ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ” ಎಂದರು.
ಪಾದಚಾರಿ ಮೇಲ್ಸೇತುವೆ, ಅಂಡರ್ ಪಾಸ್ ನಿರ್ಮಾಣ :
“ಮಂಜುನಾಥ ನಗರ ನಿಲ್ದಾಣದಲ್ಲಿ ರಸ್ತೆ ದಾಟಲು ಪಾದಚಾರಿ ಮೇಲ್ಸೆತುವೆ ನಿರ್ಮಿಸಿ ಅನುಕೂಲ ಮಾಡಿಕೊಡಲಾಗುತ್ತಿದೆ. ಯಶವಂತಪುರ ನಿಲ್ದಾಣದಲ್ಲಿ ಸಾರ್ವಜನಿಕರು ಯಾವುದೇ ಅಡಚಣೆಯಿಲ್ಲದೆ ಸಂಚರಿಸಲು ಭಾರತೀಯ ರೈಲ್ವೇ ಹಾಗೂ ನಮ್ಮ ಮೆಟ್ರೋ ಸಂಸ್ಥೆ ಪಾದಚಾರಿ ಮೇಲ್ಸೆತುವೆ ಸೇರಿದಂತೆ ಇತರೇ ಅನುಕೂಲಗಳನ್ನು ಮಾಡಲು ಜಂಟಿಯಾಗಿ ಒಪ್ಪಂದ ಮಾಡಿಕೊಂಡಿವೆ” ಎಂದು ತಿಳಿಸಿದರು.
“ಚಿಕ್ಕಬಿದರಕಲ್ಲು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಸ್ಥೆಯೊಟ್ಟಿಗೆ ಸೇರಿ ಅಂಡರ್ ಪಾಸ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಮಾದಾವರ ಮೆಟ್ರೋ ನಿಲ್ದಾಣದ ಬಳಿಯೂ ಅಂಡರ್ ಪಾಸ್ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಳಿ ಮಾತುಕತೆ ನಡೆಸಲಾಗುತ್ತಿದೆ” ಎಂದರು.
“ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುವವರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರ ದಟ್ಟಣೆ ರಹಿತವಾಗಿ ನಗರ ಪ್ರದಕ್ಷಿಣೆ ಮಾಡಬಹುದು ಹಾಗೂ ಅವರ ಕೆಲಸಗಳನ್ನು ತ್ವರಿತವಾಗಿ ಮುಗಿಸಿಕೊಳ್ಳಬಹುದು” ಎಂದು ಹೇಳಿದರು.
ದೇಶದಲ್ಲಿಯೇ ಹೆಚ್ಚು ಪ್ರಯಾಣಿಕರ ಸಂಚಾರ :
“ದೆಹಲಿ, ಮುಂಬೈ ಸೇರಿದಂತೆ ದೇಶದ ಇತರೆಡೆಗಳಲ್ಲಿ ಇರುವ ಮೆಟ್ರೋಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗಿಂತ ಬೆಂಗಳೂರಿನಲ್ಲಿರುವ 76.95 ಕಿಮೀ ಉದ್ದದ ಮೆಟ್ರೋ ಮಾರ್ಗದಲ್ಲಿ ಹೆಚ್ಚು ಪ್ರಯಾಣಿಕರು ಪ್ರತಿನಿತ್ಯ ಸಂಚರಿಸುತ್ತಿದ್ದಾರೆ. ನಮ್ಮ ಮೆಟ್ರೊನಿಂದ ಬೆಂಗಳೂರಿನ ನಾಗರಿಕರಿಗೆ ಉತ್ತಮ ಸೇವೆ ದೊರೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ” ಎಂದು ಹೇಳಿದರು.
ನೆಲಮಂಗಲ ಹಾಗೂ ತುಮಕೂರು ತನಕ ಮೆಟ್ರೋ ಮಾರ್ಗ ವಿಸ್ತರಣೆ ಬಗ್ಗೆ ಕೇಳಿದಾಗ “ಬೇರೆ ಸಮಯದಲ್ಲಿ ಇದರ ಬಗ್ಗೆ ಮಾತನಾಡುತ್ತೇನೆ” ಎಂದು ಹೇಳಿದರು.