ಬೆಂಗಳೂರು, ನ.04 www.bengaluruwire.com : ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ. ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಆರಂಭಿಸಿದೆ. ಈತನ್ಮಧ್ಯೆ ಕರ್ನಾಟಕದ ವಕ್ಫ್ ಮಂಡಳಿಗೆ ಸಂಬಂಧಿಸಿದ ಎಲ್ಲ ಬಗೆಯ ಜಮೀನು ನೋಂದಣಿಯನ್ನು ಸ್ಥಗಿತಗೊಳಿಸಲು ಕೋರಿ ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವರಿಗೆ ಹಾಗೂ ವಕ್ಫ್ ಜಂಟಿ ಸಮಿತಿಗೆ ಪತ್ರ ಬರೆದಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಕ್ಫ್ ಆಸ್ತಿಯ ಇಂಚಿಂಚು ಜಾಗವನ್ನು ಪರಭಾರೆ ಮಾಡಲು ಬಿಡುವುದಿಲ್ಲ ಎಂದು ಹೇಳಿ ಇದೀಗ ಯಾಕೆ ಯುಟರ್ನ್ ಹೊಡೆದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೆ.ಆರ್.ಪುರದಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, “ವಕ್ಫ್ ಮಂಡಳಿ ಭೂಮಿ ಕಬಳಿಸುತ್ತಿರುವುದು ರೈತರ ಪಾಲಿಗೆ ಮರಣಶಾಸನವಾಗಿದೆ. ಆದರೆ ಭೂ ಕಬಳಿಕೆಯ ಈ ಆಟ ನಡೆಯಲು ಹಿಂದೂಗಳು ಬಿಡುವುದಿಲ್ಲ. ಕೂಡಲೇ ಕಾಂಗ್ರೆಸ್ ಸರ್ಕಾರ ವಕ್ಫ್ ಕಾಯ್ದೆಯಲ್ಲಿ ಬದಲಾವಣೆ ತರಲಿ. ಜಮೀನು ಕಬಳಿಸುವ ಮೂಲಕ ಅನ್ನದಾತರ ಕಣ್ಣಲ್ಲಿ ನೀರು ಬರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.
“ಇವೆಲ್ಲಕ್ಕೂ ಸಚಿವ ಜಮೀರ್ ಅಹ್ಮದ್ ಕಾರಣ. ಹಿಂದೆ ಕೇಂದ್ರದ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸಲು ವಕ್ಫ್ ಬೋರ್ಡ್‌ಗೆ ಹೆಚ್ಚು ಅಧಿಕಾರ ನೀಡಿತು. ಸಿಎಂ ಸಿದ್ದರಾಮಯ್ಯ ಅವರೇ ಭೂಮಿ ಪಡೆಯಿರಿ ಎಂದು ಹೇಳಿದ್ದು, ಈಗ ಇದು ಬಿಜೆಪಿ ಮಾಡುವ ರಾಜಕೀಯ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರು ಈಗ ಟೋಪಿ ತೆಗೆದಿದ್ದಾರೆ. ಬಳಿಕ ಅವರೇ ರೈತರ ತಲೆ ಮೇಲೆ ಟೋಪಿ ಹಾಕುತ್ತಾರೆ. ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ನೀಡುತ್ತೇನೆಂದು ಹೇಳಿ ದಲಿತರ ಹಣ ಲೂಟಿ ಮಾಡಿದ್ದಾರೆ. ಕಾಂಗ್ರೆಸ್‌ಗೆ ಹಿಂದೂಗಳು ಮತ ನೀಡಿಲ್ಲವೇ? ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳೇ?” ಎಂದು ಪ್ರಶ್ನಿಸಿದ್ದಾರೆ
.”ಸಿಎಂ ಸಿದ್ದರಾಮಯ್ಯನವರು ಬೇಕಿದ್ದರೆ ಎಲ್ಲ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ಬರೆದು ಬಿಡಬಹುದು. ಇವೆಲ್ಲ ದಾನ ಕೊಟ್ಟ ಜಮೀನು ಎಂದು ವಕ್ಫ್ ಮಂಡಳಿ ಹೇಳುತ್ತಿದೆ. ಮುಜರಾಯಿ ಇಲಾಖೆಗೂ ದಾನದಿಂದ ಭೂಮಿ ಬಂದಿದೆ. ಆದರೆ ಅದು ಮಾತ್ರ ಸರ್ಕಾರಿ ಆಸ್ತಿಯಾಗುತ್ತದೆ. ಆದರೆ ವಕ್ಫ್ ಬೋರ್ಡ್‌ಗೆ ದಾನದಿಂದ ಬರುವ ಭೂಮಿ ಮಾತ್ರ ಸರ್ಕಾರಿ ಆಸ್ತಿಯಾಗುವುದಿಲ್ಲ. ಹೀಗೆಯೇ ಕಾಂಗ್ರೆಸ್ ರಾಜ್ಯವನ್ನು ಹಾಳು ಮಾಡಿದರೆ ಹಿಂದೂಗಳು ಈ ಆಟ ನಡೆಯಲು ಬಿಡುವುದಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಕಾಯ್ದೆಯಲ್ಲಿ ಬದಲಾವಣೆ ಮಾಡಲಿ” ಎಂದು ಅಶೋಕ್ ಅವರು ಒತ್ತಾಯಿಸಿದರು.
ಕೇಂದ್ರದ ವಕ್ಫ್ ಜಂಟಿ ಸಮಿತಿಗೆ ಪತ್ರ :
ಕರ್ನಾಟಕದ ವಕ್ಫ್ ಮಂಡಳಿಗೆ ಸಂಬಂಧಿಸಿದ ಎಲ್ಲ ಬಗೆಯ ಜಮೀನು ನೋಂದಣಿಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಬೇಕೆಂದು ಕೋರಿ ಪ್ರತಿಪಕ್ಷ ನಾಯಕ ಆರ್.ಅಶೋಕ ಕೇಂದ್ರ ಸಚಿವರಿಗೆ ಹಾಗೂ ವಕ್ಫ್ ಜಂಟಿ ಸಮಿತಿಗೆ ಪತ್ರ ಬರೆದಿದ್ದಾರೆ. ರೈತರ ಜಮೀನು ಹಾಗೂ ಹಿಂದೂ ಸಂಸ್ಥೆಗಳಿಗೆ ಸಂಬಂಧಿಸಿದ ಜಮೀನುಗಳನ್ನು ವಕ್ಫ್ ಮಂಡಳಿ ಕಬಳಿಸುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ಅವರು, ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹಾಗೂ ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದಾರೆ.
ರೈತರು ವಂಶಪಾರಂಪರ್ಯವಾಗಿ ಬಂದ ಭೂಮಿ ಕಳೆದುಕೊಳ್ಳುತ್ತಿದ್ದಾರೆ :
ಕೇಂದ್ರ ಸರ್ಕಾರದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ತರಲು ಜಂಟಿ ಸಂಸದೀಯ ಸಮಿತಿ ರಚಿಸಿದ್ದು, ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ದಕ್ಷತೆ ಹಾಗೂ ಪಾರದರ್ಶಕತೆ ತರಲು ಈ ಸಮಿತಿ ಶ್ರಮಿಸುತ್ತಿದೆ. ಆದರೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿಯು ಕಂದಾಯ ದಾಖಲೆಗಳನ್ನು ತಿದ್ದುವ ಹಾಗೂ ರೈತರ ಜಮೀನುಗಳ ಮಾಲೀಕತ್ವ ವರ್ಗಾಯಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಈ ರೀತಿ ತರಾತುರಿಯಲ್ಲಿ ಜಮೀನುಗಳನ್ನು ವಕ್ಫ್ ಮಂಡಳಿ ನೋಂದಾಯಿಸಿಕೊಳ್ಳುತ್ತಿರುವ ಪರಿಣಾಮ ಸಾವಿರಾರು ಬಡವರು ಹಾಗೂ ರೈತರು ವಂಶಪಾರಂಪರ್ಯವಾಗಿ ಬಂದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆರ್.ಅಶೋಕ ಪತ್ರದಲ್ಲಿ ವಿವರಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆ ಜಮೀನು ವಶಕ್ಕೆ ನೋಟಿಸ್? :
ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ನೋಟಿಸ್ ನೀಡಲಾಗಿದೆ ಎಂದು ನೂರಾರು ರೈತರು ಹೇಳಿದ ಬಳಿಕ ಈ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಲಾ 10,000 ಎಕರೆ ಜಮೀನನ್ನು ವಕ್ಫ್ ನೋಂದಣಿ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ, ವಕ್ಫ್ ಮಂಡಳಿಯು ದೇವಸ್ಥಾನ, ಮಠ ಹಾಗೂ ಇತರೆ ಹಿಂದೂ ಧಾರ್ಮಿಕ ಸಂಸ್ಥೆಗಳ ಜಮೀನುಗಳನ್ನು ಕೂಡ ತನ್ನದು ಎಂದು ಹೇಳಿಕೊಂಡಿದೆ. ಹಿಂದೂ ಸ್ಮಶಾನ ಕೂಡ ತನ್ನದು ಎಂದು ವಕ್ಫ್ ಉಲ್ಲೇಖಿಸಿರುವುದು ಇನ್ನಷ್ಟು ಆಘಾತದ ಸಂಗತಿ. 13 ನೇ ಶತಮಾನದಷ್ಟು ಇತಿಹಾಸ ಹೊಂದಿರುವ ವಿರಕ್ತ ಮಠಕ್ಕೆ ಸೇರಿದ ಸಿಂಧಗಿಯ 1.28 ಎಕರೆ ಜಮೀನು, ವಿಜಯಪುರದ ಐತಿಹಾಸಿಕ ಸೋಮೇಶ್ವರ ದೇವಾಲಯ, ಕಲಬುರ್ಗಿಯ ಬೀರದೇವರ ಗುಡಿ ಸೇರಿದಂತೆ ಅನೇಕ ಜನಪ್ರಿಯ ಸ್ಥಳಗಳನ್ನು ಕೂಡ ವಕ್ಫ್ ತನ್ನದೆಂದು ಘೋಷಿಸಿಕೊಂಡಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದು ಜನರಲ್ಲಿ ಆತಂಕ ಉಂಟುಮಾಡಿದ್ದು, ಹಾವೇರಿಯಲ್ಲಿ ಹಿಂಸಾಚಾರ, ಗಲಭೆ ಕೂಡ ನಡೆದಿದೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ, ಜಂಟಿ ಸಮಿತಿಯು ಕೂಡಲೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಜೊತೆ ಮಾತನಾಡಬೇಕು ಹಾಗೂ ವಕ್ಫ್‌ಗೆ ಸಂಬಂಧಿಸಿದ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಬೇಕೆಂದು ಆರ್.ಅಶೋಕ ಮನವಿ ಮಾಡಿದ್ದಾರೆ.
ಬಿಜೆಪಿಯ ಬಸವರಾಜ ಬೊಮ್ಮಾಯಿ ಯೂಟರ್ನ್
ಬಿಜೆಪಿ ಅವಧಿಯಲ್ಲಿ 216 ಪ್ರಕರಣಗಳಲ್ಲಿ ನೋಟೀಸು
ಬಿಜೆಪಿ ವಕ್ಫ್ ಆಸ್ತಿ ಕುರಿತಂತೆ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಒತ್ತುವರಿಯಾಗಿರುವ ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು ಈಗ ರಾಜಕೀಯ ಕಾರಣಕ್ಕಾಗಿ ವಿರುದ್ಧವಾಗಿ ಮಾತನಾಡುತ್ತಾರೆ ಅವರೇ ಹೇಳಿದ್ದ ಮಾತುಗಳಿಗೆ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ. ವಕ್ಫ್ ಆಸ್ತಿ ವಿಚಾರ ನಮಗೆ ಗೊತ್ತಾದ ತಕ್ಷಣವೇ ನೋಟೀಸು ಹಿಂಪಡೆಯಲಾಗಿದೆ. ಬಿಜೆಪಿ ಅವಧಿಯಲ್ಲಿ 216 ಪ್ರಕರಣಗಳಲ್ಲಿ ನೋಟೀಸು ಕೊಟ್ಟಿದ್ದರು. ಬಿ.ಎಸ್.ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಹೆಚ್.ಡಿ ಕುಮಾಸ್ವಾಮಿ ಇದ್ದಾಗ ಏಕೆ ನೋಟೀಸು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯ ಈ ಡಬ್ಬಲ್ ಗೇಮ್ ವಿಚಾರವನ್ನು ಜನರಿಗೆ ನಾವು ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.