ಬೆಂಗಳೂರು, ನ.02 www.bengaluruwire.com : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಕಾಂಗ್ರೆಸ್ – ಬಿಜೆಪಿ ಮಧ್ಯೆ ರಾಷ್ಟ್ರಮಟ್ಟದಲ್ಲಿ ಎದ್ದಿರುವ ಗೊಂದಲಗಳಿಗೆ ಆಯಾ ಇಲಾಖೆಗಳ ಸಚಿವರು, ಆಡಳಿತರೂಢ ಪಕ್ಷದ ಶಾಸಕರು ಸ್ಪಷ್ಟನೆ ನೀಡಲಾರಂಭಿಸಿದ್ದಾರೆ.
ಬಜೆಟ್ನಲ್ಲಿ ಪ್ರಕಟಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವರು, ಜನಪ್ರತಿನಿಧಿಗಳಿಗೆ ಖಡಕ್ ಸೂಚನೆ ಕೊಟ್ಟ ನಂತರ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಇತರ ನಾಯಕರು ತಾವು ನೀಡುವ ಹೇಳಿಕೆಗಳ ವರಸೆಯನ್ನು ಬದಲಾಯಿಸಿದ್ದಾರೆ. ಸದ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶಕ್ತಿ ಯೋಜನೆ ಬಗ್ಗೆ ಮಾತನಾಡಿ, ಈ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು ಸಾರಿಗೆ ಇಲಾಖೆ ನುಡಿದಂತೆಯೇ ಮುಂದುವರೆಸಿಕೊಂಡು ಬರುತ್ತಿದೆ. ಯಾವುದೇ ಕಾರಣಕ್ಕೂ ನಾವು ಯೋಜನೆಯನ್ನು ನಿಲ್ಲಿಸುವುದಿಲ್ಲ. ಮುಂದುವರಿಸುತ್ತೇವೆ. ನಾನು ಮಾಧ್ಯಮದಲ್ಲಿ ಯಾರಿಗೂ ಶಕ್ತಿ ಯೋಜನೆ ನಡೆಸಲು ಸಾರಿಗೆ ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ ಎಂದು ಹೇಳಿಕೆಯನ್ನು ಎಂದು ನೀಡಿಲ್ಲ” ಹೇಳಿದ್ದಾರೆ.
“ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು ಸಾರಿಗೆ ಇಲಾಖೆ ನುಡಿದಂತೆಯೇ ನಡೆಸಿಕೊಂಡು ಬರುತ್ತಿದೆ. ಯಾವುದೇ ಕಾರಣಕ್ಕೂ ನಾವು ಯೋಜನೆಯನ್ನು ನಿಲ್ಲಿಸುವುದಿಲ್ಲ. ಈ ಕುರಿತಂತೆ ಎದ್ದಿರುವ ಗೊಂದಲಗಳು, ಹೇಳಿಕೆಗಳು, ವಿನಾ ಕಾರಣ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಶಕ್ತಿ ಯೋಜನೆಯ ಬಗ್ಗೆ ಗೊಂದಲ ಸೃಷ್ಟಿಸುವ ಹುನ್ನಾರವಾಗಿದೆ. ನಾನು ಮಾತನಾಡಿಯೇ ಇಲ್ಲದ ಹೇಳಿಕೆಗಳನ್ನು ಈ ರೀತಿ ಪ್ರಕಟಿಸಿರುವುದು ಸರಿಯಲ್ಲ” ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆ ಅಡಿ ನೇರ ನಗದು ವರ್ಗಾವಣೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಶಕ್ತಿ ಯೋಜನೆ ಹಾಗಲ್ಲ. ಎಲ್ಲ ಮಹಿಳೆಯರಿಗೂ ಇದರ ಪ್ರಯೋಜನ ದೊರೆಯುತ್ತಿದೆ. ಈ ಯೋಜನೆ ಅಡಿ ಯಾವ ಮಹಿಳೆಯರು ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಕೆಲವು ಮಹಿಳೆಯರು ತಾವು ಟಿಕೆಟ್ ಖರೀದಿಸಿ ಪ್ರಯಾಣ ಮಾಡುತ್ತೇವೆ. ಶಕ್ತಿ ಯೋಜನೆ ಬೇಕಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎರಡು ದಿನಗಳ ಹಿಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ವಿಷಯ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ, ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಡಿಸಿಎಂ ತಮ್ಮ ಹೇಳಿಕೆಯ ಧಾಟಿಯನ್ನೇ ಬದಲಾಯಿಸಿದ್ದಾರೆ.
“ನಮ್ಮ ಗ್ಯಾರಂಟಿ ಯೋಜನೆಗಳು, ಜನರ ಹೊಟ್ಟೆ ತುಂಬಿಸಿ, ಬದುಕು ಕಟ್ಟುತ್ತಿದೆ. ಆ ಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗಿದೆ. ಆರ್ಥಿಕವಾಗಿ ಸಬಲವಾಗಿರುವ ಮಹಿಳೆಯರು, ಉದ್ಯೋಗಸ್ಥ ಮಹಿಳೆಯರು ನಮಗೆ ಸಾರಿಗೆ ಭತ್ಯೆ ಸಿಗುತ್ತಿದೆ. ನಮಗೆ ಶಕ್ತಿ ಯೋಜನೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ನಾನು ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದೆ. ನಮ್ಮ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ” ಎಂದು ಇಂದು ಮಂಗಳೂರಿನಲ್ಲಿ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಕೂಡ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದಕ್ಕೂ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ಗ್ಯಾರಂಟಿ ಚರ್ಚೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.