ನವದೆಹಲಿ, ಅ.31 www.bengaluruwire.com : ಚಿನ್ನದ ಬೆಲೆ ಅಂತರರಾಷ್ಟ್ರೀಯ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಗಗನಮುಖಿಯಾಗಿದೆ. ಕಳೆದ ಒಂದು ವರ್ಷದಲ್ಲಿ 10 ಗ್ರಾಂ ಶುದ್ಧ ಚಿನ್ನದ (ಶೇ 99.9 ಪರಿಶುದ್ಧತೆ) ಬೆಲೆಯಲ್ಲಿ ಶೇ 35ರಷ್ಟು ಏರಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಹೇಳಿದೆ.
ದೀಪಾವಳಿಗೆ ಮುಂಚಿತವಾಗಿ ಆಭರಣ ವ್ಯಾಪಾರಿಗಳ ದೃಢವಾದ ಖರೀದಿಯ ನಡುವೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಾರಿಗೆ ಚಿನ್ನದ ಬೆಲೆಯು 10 ಗ್ರಾಮ್ ಗೆ ರೂ 1,000 ರಷ್ಟು ಏರಿಕೆಯನ್ನು ಕಂಡು 82,000 ಗಡಿಯನ್ನು ದಾಟಿದೆ. ಆಲ್-ಇಂಡಿಯಾ ಸರಾಫಾ ಅಸೋಸಿಯೇಷನ್ ಪ್ರಕಾರ, 99.9 ಪ್ರತಿಶತ ಶುದ್ಧತೆಯ ಹಳದಿ ಲೋಹವು ದೆಹಲಿಯಲ್ಲಿ 10 ಗ್ರಾಂಗೆ 82,400 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ಹಿಂದಿನ ಅವಧಿಯಲ್ಲಿ, 99.9% ಮತ್ತು 99.5% ಶುದ್ಧತೆಯ ಚಿನ್ನವು ಕ್ರಮವಾಗಿ 10 ಗ್ರಾಂಗೆ 81,400 ಮತ್ತು 81,000 ರೂ.ನಷ್ಟಿತ್ತು.
ಕಳೆದ ವರ್ಷದ ಅಕ್ಟೋಬರ್ 29ರಂದು ಶುದ್ಧ ಚಿನ್ನದ ಬೆಲೆಯು 10 ಗ್ರಾಂಗೆ ₹61.200 ದರವಿತ್ತು. ಬುಧವಾರದ ವಹಿವಾಟಿನಲ್ಲಿ ₹82,400ಕ್ಕೆ ಮುಟ್ಟಿದೆ. ಒಟ್ಟಾರೆ ಒಂದು ವರ್ಷದ ಅವಧಿಯಲ್ಲಿ ₹21,200ರಷ್ಟು ಹಳದಿ ಲೋಹದ ದರವು ಏರಿಕೆಯಾಗಿದೆ. ಬೆಳ್ಳಿ ಲೋಹದ ದರ ಪ್ರತಿ ಕೆಜಿಗೆ ಸದ್ಯ 1,01,000 ರೂ., ನಷ್ಟಾಗಿದೆ. ಬೆಳ್ಳಿ ಬೆಲೆ ಕಳೆದ ವರ್ಷ ಅಕ್ಟೋಬರ್ 29 ರಂದು ಕೆಜಿಗೆ 74,000 ರೂ. ನಷ್ಟಿತ್ತು. ಈ ಒಂದು ವರ್ಷದಲ್ಲಿ 36% ರಷ್ಟು ಜಿಗಿತವನ್ನು ದಾಖಲಿಸಿದೆ.
ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಚಿನ್ನದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿತ ಮಾಡಿತ್ತು. ಇದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಜಾಗತಿಕ ಬಿಕ್ಕಟ್ಟಿನ ಪರಿಣಾಮ ಧಾರಣೆಯು ಏರಿಕೆಯ ಹಾದಿ ಹಿಡಿದಿದೆ.
ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್‌ನ ಸರಕು ಸಂಶೋಧನೆಯ ವಿಶ್ಲೇಷಕ ಮಾನವ್ ಮೋದಿ ಪ್ರಕಾರ, ಯುಎಸ್ ಮತ್ತು ಜಪಾನ್‌ನಲ್ಲಿ ಹೆಚ್ಚಿದ ರಾಜಕೀಯ ಅನಿಶ್ಚಿತತೆ ಮತ್ತು ಬಡ್ಡಿದರಗಳ ಮೇಲೆ ಹೆಚ್ಚಿನ ಸೂಚನೆಗಳ ನಿರೀಕ್ಷೆಯಿಂದ ಸುರಕ್ಷಿತ ಹೂಡಿಕೆಯಾದ ಚಿನ್ನದ ಮೇಲಿನ ಬೇಡಿಕೆ ಹೆಚ್ಚಾದ ಕಾರಣ ಚಿನ್ನದ ಬೆಲೆಗಳು ದಾಖಲೆಯ ಎತ್ತರವನ್ನು ತಲುಪಿದೆ ಎಂದು ಹೇಳಿದರು.
“ಭಾರತದಲ್ಲಿ ಹಬ್ಬದ ಋತುವಿನಲ್ಲಿ ಹಳದಿ ಲೋಹದ ಬೇಡಿಕೆಯ ಜೊತೆಗೆ, ಮುಂಬರುವ ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಗೆಲುವಿನ ನಿರೀಕ್ಷೆಯಲ್ಲಿ ಮಾರುಕಟ್ಟೆಯ ಬೆಟ್‌ಗಳ ಪರಿಣಾಮ ಚಿನ್ನದ ಲೋಹದ ಮೇಲಾಗಿದೆ. ಈ ಆಶಾವಾದವು ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿದೆ” ಎಂದು ಎಲ್ ಕೆಪಿ ಸೆಕ್ಯುರಿಟಿಸ್ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಹೇಳಿದರು.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇನ್ನೂ ಶಮನಗೊಂಡಿಲ್ಲ. ಇದು ಸರಕು ಸಾಗಣೆ ಮತ್ತು ವಿಮಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಅಮೆರಿಕ ಬಾಂಡ್ ಗಳಿಕೆ ಇಳಿಕೆಯಾಗಿದೆ. ಡಾಲರ್ ಮೌಲ್ಯ ಕಡಿಮೆಯಾಗಿದೆ. ಹಾಗಾಗಿ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ದೃಷ್ಟಿ ನೆಟ್ಟಿದ್ದಾರೆ. ಇದರಿಂದ ಬೆಲೆ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಧನ್ ತೇರಸ್ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಸ್ಟ್ಯಾಂಡರ್ಡ್ ಚಿನ್ನದ (ಶೇ.99.5 ಶುದ್ಧತೆ) ದರದಲ್ಲಿ ಏರಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ 10 ಗ್ರಾಂಗೆ ₹1 ಸಾವಿರ ಏರಿಕೆಯಾಗಿದ್ದು, ₹82,000 ತಲುಪಿದೆ.
ನಾಲ್ಕು ದಶಕದಲ್ಲಿ ಚಿನ್ನದ ಬೆಲೆ ಸಾಗಿ ಬಂದ ಹಾದಿ :
1991ರಲ್ಲಿ 24 ಕ್ಯಾರೇಟ್ ಶುದ್ಧ ಚಿನ್ನದ ದರ 10 ಗ್ರಾಮ್ ಕೇವಲ 3,466 ರೂ. ಇತ್ತು. 2001 ರಲ್ಲಿ 4,300 ರೂ., 2011ನೇ ಇಸವಿಯಲ್ಲಿ 26,400 ರೂ., 2021ನೇ ಇಸವಿಯಲ್ಲಿ 10 ಗ್ರಾಮ್ ಹಳದಿ ಲೋಹದ ಬೆಲೆ 48,720 ರೂ. ನಷ್ಟಿತ್ತು. ಇದೀಗ ಅ.30ರಂದು 82,400 ರೂ. ನಷ್ಟಾಗಿದೆ.
ಕಳೆದ ವರ್ಷ ನವೆಂಬರ್ ಒಂದರಂದು 916 ಹಾಲ್ ಮಾರ್ಕ್ ಒಂದು ಗ್ರಾಮ್ ಚಿನ್ನದ ದರವು 5,287 ರೂ. ಇತ್ತು, 2024ರ ಏಪ್ರಿಲ್ 1 ರಂದು 6028.8 ಏರಿಕೆಯಾಗಿ 6 ಸಾವಿರ ರೂ. ಗಡಿದಾಟಿತು. ಅಲ್ಲಿಂದ ಏರಿಕೆಯಾದ ಚಿನ್ನದ ದರವು ಇಳಿಕೆಯಾಗದೆ ಸೆ.20 ರಂದು 7024.5 ರೂ. ಏರಿಕೆಯಾಗಿ 7,000 ರೂ. ದಾಟಿ ಅ.30ಕ್ಕೆ 7525.2 ರೂ. ಬಂದು ನಿಂತಿದೆ.