ಬೆಂಗಳೂರು, ಅ.30 www.bengaluruwire.com : ದಿನೇ ದಿನೇ ಬೆಂಗಳೂರು ವಾತಾವರಣ ಕಲುಷಿತಗೊಳ್ಳುತ್ತಿರುವ ಹೊತ್ತಿನಲ್ಲೇ ದಟ್ಟ ಅರಣ್ಯ, ಅಮ್ಲಜನಕ, ಜೀವ ವೈವಿಧ್ಯತೆಯನ್ನು ಹೊತ್ತು ನಿಂತ ಬೆಂಗಳೂರು ವಿಶ್ವವಿದ್ಯಾಲಯ (Bangalore University) ದ ಜ್ಞಾನಭಾರತಿ ಕ್ಯಾಂಪಸ್ (Jnanabharathi campus) ದಿನೇ ದಿನೇ ಕಾಂಕ್ರೀಟ್ ಕಟ್ಟಡಗಳ ತವರು ಮನೆಯಾಗುವತ್ತ ಹೆಜ್ಜೆಯಿಟ್ಟಿದೆ. ಇದಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿ ಜ್ಞಾನಭಾರತಿ ವ್ಯಾಪ್ತಿಯಲ್ಲಿರುವ ಜೀವ ವೈವಿಧ್ಯತೆಯ ವನವನ್ನು ಜೈವಿಕ ವನವೆಂದು ಘೋಷಿಸಲು ಆಗ್ರಹಿಸಿವೆ.
ಜ್ಞಾನಭಾರತಿ ಕ್ಯಾಂಪಸ್ ಪ್ರದೇಶದ ಪ್ರಾದೇಶಿಕ ಮಾಹಿತಿ ಹಾಗೂ ದತ್ತಾಂಶವನ್ನು ತಯಾರಿಸಲು ಬೆಂಗಳೂರು ವಿಶ್ವ ವಿದ್ಯಾಲಯ 2010ರಲ್ಲಿ ಆಗಿನ ಬೆಂಗಳೂರು ವಿವಿ ಭೂಗೋಳ ಶಾಸ್ತ್ರ ವಿಭಾಗದ ಹಿರಿಯ ಭೂವಿಜ್ಞಾನಿ ಪ್ರೊ.ಟಿ.ಜೆ.ರೇಣುಕಾಪ್ರಸಾದ್ ನೀಡಿರುವ ವರದಿ ಪ್ರಕಾರ ಜ್ಞಾನಭಾರತಿ ಕ್ಯಾಂಪಸ್ ಒಟ್ಟು 1319.74 ಎಕರೆ ವಿಸ್ತೀರ್ಣದಲ್ಲಿದೆ. 2000ನೇ ಇಸವಿಯಲ್ಲಿ ಆಗಿನ ಬೆಂಗಳೂರು ವಿವಿಯ ತಂಡದೊಂದಿಗೆ ಸೇರಿ ಪ್ರಾರಂಭಿಸಿದ ಜೈವಿಕ ವನ (Biopark)ದಲ್ಲಿ ಇಂದು 700ಕ್ಕೂ ಹೆಚ್ಚು ಜಾತಿಯ ಸುಮಾರು 4 ಲಕ್ಷಕ್ಕೂ ಹೆಚ್ಚು ಮರಗಿಡಗಳಿಂದ ಸಮೃದ್ಧಿ ಜೀವ ವೈವಿಧ್ಯತಾ ಕಾಡಾಗಿ ರೂಪುಗೊಂಡಿದೆ.
ಹೆಸರಾಂತ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿಯವರು ಬೆಂಗಳೂರು ವಿಶ್ವವಿದ್ಯಾಲಯವನ್ನು ಜೀವವೈವಿಧ್ಯತಾ ನೆಲೆಯಾಗಿಸಲು ಬಯೋಪಾರ್ಕ್ ವಿಚಾರದಲ್ಲಿ ಕೈಗೊಂಡ ಕ್ರಮವನ್ನು ಆಗಿನ ಬೆಂಗಳೂರು ವಿವಿಯ ಭೂಗರ್ಭಶಾಸ್ತ್ರ ವಿಭಾಗದ ಹಿರಿಯ ಭೂವಿಜ್ಞಾನಿ ಪ್ರೊ.ಟಿ.ಜೆ.ರೇಣುಕಾಪ್ರಸಾದ್ ಮುಂದುವರೆಸಿಕೊಂಡು ಬಂದ ಪರಿಣಾಮ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ವಿವಿಧ ಭಾಗಗಳಲ್ಲಿ 16 ಬಯೋಪಾರ್ಕ್ ಗಳು ತಲೆಎತ್ತಿದೆ. ಇದಲ್ಲದೆ ಹೈಕೋರ್ಟ್ ನಿರ್ದೇಶನದ ಅನ್ವಯ ಭೂವೈಜ್ಞಾನಿಕ ಉದ್ಯಾನವನ ಹಾಗೂ ಅಂತರ್ಜಲ ವೃದ್ಧಿ ಮತ್ತು ಪರಿಸರ ಸಮತೋಲನಕ್ಕಾಗಿ 7 ಕಡೆಗಳಲ್ಲಿ ಚೆಕ್ ಡ್ಯಾಮ್ ನಿರ್ಮಾಣವಾಗಿದೆ ಹಾಗೂ 1 ಕಲ್ಯಾಣಿಯನ್ನು ನಿರ್ಮಿಸಲಾಗಿದ್ದು, ಇದರಿಂದ ಬೆಂಗಳೂರು ವಿವಿ ಕ್ಯಾಂಪಸ್ ಬಯೋ-ಜಿಯೋ ಹಾಗೂ ಹೈಡ್ರೋ ಪಾರ್ಕ್ ಆಗಿ ಒಟ್ಟಾರೆ 673.26 ಎಕರೆ ಪ್ರದೇಶದಲ್ಲಿ ಹಸಿರು ಸಿರಿಯಿಂದ ಸಮೃದ್ಧ ಜೀವ ವೈವಿಧ್ಯತಾ ವನ ತಲೆ ಎತ್ತಿ ನಿಂತಿದೆ. ಪ್ರೊ.ಟಿ.ಜೆ.ರೇಣುಕಾ ಪ್ರಸಾದ್ ಅವರ ಅವಿರತ ಶ್ರಮ ಹಾಗೂ ಪ್ರಮಾಣಿಕ ಪ್ರಯತ್ನದಿಂದ 673 ಎಕರೆ ಜೀವ ವೈವಿಧ್ಯತಾ ವನವನ್ನು ಬೆಳೆಸಿರುವುದು ದಾನಿಗಳಿಂದ ಎಂಬುದು ಪ್ರಮುಖ ವಿಚಾರವಾಗಿದೆ.
ಭೂ ಪರಭಾರೆಯಿಂದ ಜೈವಿಕ ವನಕ್ಕೆ ಗಂಡಾಂತರ :
ಆದರೆ ಇಷ್ಟು ದೊಡ್ಡ ಜೈವಿಕವನ ಹೊಂದಿರುವ ಸ್ಥಳವನ್ನು ಸರ್ಕಾರ ಮತ್ತು ಬೆಂಗಳೂರು ವಿವಿಯ ಅವೈಜ್ಞಾನಿಕ ನಿರ್ಧಾರಗಳಿಂದ ಹಲವು ಇಲಾಖೆ, ಸಂಸ್ಥೆಗಳಿಗೆ ಎಗ್ಗಿಲ್ಲದೆ ಭೂಪರಭಾರೆ ಮಾಡುತ್ತಿರುವ ಕಾರಣದಿಂದ ಬೆಂಗಳೂರಿನ ಪ್ರಮುಖ ಸಮೃದ್ಧ ಆಮ್ಲಜನಕ ಬ್ಯಾಂಕ್ ಸ್ಥಳವಾಗಿರುವ ಬೆಂಗಳೂರು ವಿಶ್ವ ವಿದ್ಯಾಲಯದ ಜೈವಿಕ ವನಕ್ಕೆ ಗಂಡಾಂತರ ಒದಗಿಬಂದಿದೆ. ಬಯೋಪಾರ್ಕ್ ಭಾಗ-1 ಅನ್ನು ದೆಹಲಿಯ ಯೋಗ ವಿಜ್ಞಾನ ಸಂಸ್ಥೆ, ಕೇಂದ್ರೀಯ ವಿಶ್ವ ವಿದ್ಯಾಲಯ, ನ್ಯಾಕ್, ಸಿಬಿಎಸ್ ಸಿ ಹೀಗೆ ಮುಂತಾದ ಸಂಸ್ಥೆಗಳಿಗೆ ನೀಡಿದ್ದನ್ನು ಪ್ರತಿಭಟಿಸಿ ವಾಯುವಿಹಾರಿಗಳು, ಹೋರಾಟಗಾರರು ನ್ಯಾಯಾಲಯದಲ್ಲಿ ಪಿಐಎಲ್ ದಾಖಲಿಸಿ ತಡೆಯಾಜ್ಞೆ ತಂದಿದ್ದರೂ, ಇನ್ನೂ ಕೂಡ ಜಮೀನು ನೀಡಿಕೆಯ ನೋಂದಣಿಗಳು ರದ್ದಾಗಿಲ್ಲ. ಈ ಬಗ್ಗೆ ಸುಮಾರು 14,000 ಮಂದಿ ಜಮೀನು ಮಂಜೂರಾತಿ ಬಗ್ಗೆ ವಿರೋಧ ವ್ಯಕ್ತಪಡಿಸಿ ಸಹಿಸಂಗ್ರಹ ಅಭಿಯಾನ ನಡೆಸಿದ್ದರು. ಈ ಮಧ್ಯೆ ಅತಿಹೆಚ್ಚು ಸಮೃದ್ಧವಾಗಿ ತಲೆ ಎತ್ತಿರುವ ಸಹ್ಯಾದ್ರಿ ವನದ ಸ್ಥಳದಲ್ಲಿ ಸ್ವಾಯತ್ತ ಸಂಸ್ಥೆಯಾಗಿರುವ ಯುವಿಸಿಇ ಗೆ 50 ಎಕರೆ ನೀಡದಂತೆ ಈಗಾಗಲೇ ವಿವಿಯ ಶಿಕ್ಷಕರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಉನ್ನತ ಶಿಕ್ಷಣ ಸಚಿವರಿಗೆ ಆಗ್ರಹಿಸಿದ್ದರು. ಆದರೂ ಅಲ್ಲಿ ಜೆಸಿಬಿ ಯಂತ್ರದ ಮೂಲಕ ಕೆಲಸ ಪ್ರಾರಂಭಿಸಿದ್ದು ಸಹ್ಯಾದ್ರಿ ವನ ನಾಶವಾಗುತ್ತಿದೆ ಎಂದು ಜ್ಞಾನಭಾರತಿ ವಾಯುವಿಹಾರಿಗಳ ಸಂಘ ಆತಂಕ ವ್ಯಕ್ತಪಡಿಸಿದೆ.
ಜೈವಿಕವನ ಅಭಿವೃದ್ಧಿಗೆ 2017ನೇ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ
ಇತರ ಸಂಸ್ಥೆಗಳಿಗೆ ಜಮೀನು ನೀಡದಿರಲು ತೀರ್ಮಾನ
ಅಸಲಿಗೆ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಬೆಂಗಳೂರು ವಿವಿ ಕ್ಯಾಂಪಸ್ ನಲ್ಲಿ 4 ಎಕರೆ ಭೂಮಿ ಹಂಚಿಕೆ ಪ್ರಸ್ತಾವನೆಗೆ ಸಂಬಂಧಿಸಿದಂತೆ , ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ 15-10-2018ರಲ್ಲೇ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು ಪತ್ರ ಬರೆದು “2017ರಲ್ಲಿ ಮೇ 17ನೇ ತಾರೀಖಿನಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಪರಾಮರ್ಶಿಸಿ, ಈಗಾಗಲೇ ವಿಶ್ವ ವಿದ್ಯಾಲಯದ ಜಮೀನುಗಳನ್ನು ಸಾಕಷ್ಟು ಸಂಸ್ಥೆಗಳಿಗೆ ನೀಡಿರುವುದರಿಂದ ಹಾಗೂ ವಿಶ್ವವಿದ್ಯಾಲಯವು ಜೈವಿಕ ವನವನ್ನು ಬೆಳೆಸುವ ಉದ್ದೇಶ ಹೊಂದಿರುವುದರಿಂದ ಯಾವುದೇ ಸಂಸ್ಥೆಗಳಿಗೆ ಜಮೀನು ನೀಡಲು ಸಾಧ್ಯವಾಗುವುದಿಲ್ಲವೆಂದು ತೀರ್ಮಾನಿಸಲಾಗಿದೆ” ಎಂಬ ಸಿಂಡಿಕೇಟ್ ಸಭೆಯ ನಿರ್ಣಯವನ್ನು ಉಲ್ಲೇಖಿಸಿ ತಿಳಿಸಿದ್ದರು. ಇದನ್ನೂ ಓದಿ : BW EXCLUSIVE REPORT | Karnataka Landslide | ನಾಡಿನಲ್ಲಿ ಈ ಬಾರಿ 46 ಕಡೆ ಭೂ ಕುಸಿತ – ಸರ್ಕಾರದ ಇಚ್ಛಾಶಕ್ತಿಯ ಕುಸಿತ : 720 ಮಳೆ ಮಾಪನ ಕೇಂದ್ರಗಳೇ ಸ್ಥಗಿತ!! 7 ಜಿಲ್ಲೆಗಳ ಭವಿಷ್ಯದ ಬಗ್ಗೆ ಏನಂತಾರೆ ತಜ್ಞರು?
ಉನ್ನತ ಶಿಕ್ಷಣ ಇಲಾಖೆ- ವಿವಿಯಿಂದ ಇಬ್ಬಗೆ ನೀತಿ :
ಮತ್ತೊಂದೆಡೆ ಅದೇ ವಿಶ್ವವಿದ್ಯಾಲಯದ ಕುಲ ಸಚಿವರು 17-12-2018ರಂದು ಕೇಂದ್ರ ಸರ್ಕಾರದ ಮಾನವ ಸಂಪನ್ಮಲ ಅಭಿವೃದ್ಧಿ ಸಚಿವಾಲಯಕ್ಕೆ ಶ್ರೇಷ್ಠತಾ ಕೇಂದ್ರ ಹಾಗೂ ತರಬೇತಿ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಲು 30 ವರ್ಷಗಳ ಅವಧಿಗೆ ವಿವಿಯಲ್ಲಿರುವ 2 ಎಕರೆ ಜಾಗ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದು ಕೋರಿದ್ದರು. ಆಗ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು “ಈಗಾಗಲೇ ಡಾ.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ಎನ್ ಸಿಸಿ ನಿರ್ದೇಶನಾಲಯ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಇಲಾಖೆ ಮತ್ತು ಸಂಸ್ಥೆಗಳಿಗೆ ವಿಶ್ವವಿದ್ಯಾಲಯದ ಜಾಗವನ್ನು ಭೋಗ್ಯ ಹಾಗೂ ನಿರ್ದಿಷ್ಟದ ಅವಧಿಗೆ ನೀಡಲಾಗಿದೆ. ಬೆಂಗಳೂರು ವಿವಿಯಲ್ಲಿ ಗಣನೀಯ ಪ್ರಮಾಣದ ಜಮೀನು ನೀಡಿರುವುದರಿಂದ ಇಲ್ಲಿನ ಜಮೀನನ್ನು ಅತ್ಯಲ್ಪ ಭೂ ಬಾಡಿಗೆ ವಿಧಿಸಿ ನೀಡುವ ಪ್ರವೃತ್ತಿ ಮುಂದುವರೆಸಿದರೆ ವಿಶ್ವವಿದ್ಯಾಲಯದ ಯೋಜನೆ ಜಾರಿಗೊಳಿಸಲು, ಶೈಕ್ಷಣಿಕ ಚಟುವಟಿಕೆ ನಡೆಸಲು ತೊಂದರೆಯಾಗುತ್ತದೆ. ವಿವಿಯಲ್ಲಿನ 1112 ಎಕರೆ ಜಮೀನಿನ ಪೈಕಿ ಸಾಕಷ್ಟು ಪ್ರಮಾಣದ ಜಾಗ ಅತಿಕ್ರಮಣವಾಗಿದೆ” ಎಂದು ಪತ್ರದಲ್ಲಿ ತಿಳಿಸಿದ್ದರು.
ಒಂದೆಡೆ ವಿಶ್ವವಿದ್ಯಾಲಯ ಇತರ ಸಂಸ್ಥೆಗಳಿಗೆ ವಿವಿಯ ಜಮೀನು ನೀಡಲು ಸಾಧ್ಯವಿಲ್ಲ ಎಂದು ಸರ್ಕಾರದ ಉನ್ನತ ಶಿಕ್ಷಣ ಇಲಾಖೆಗೆ ತಿಳಿಸಿ ಪತ್ರ ಬರೆದರೆ, ಮತ್ತೊಂದು ಕಡೆ ಕೇಂದ್ರ ಸರ್ಕಾರದ ಪ್ರಸ್ತಾವದ ಹಿನ್ನಲೆಯಲ್ಲಿ ಪುನಃ ಜಮೀನು ಪರಭಾರೆಗೆ ಉನ್ನತ ಶಿಕ್ಷಣ ಇಲಾಖೆ ಅನುಮತಿ ಕೋರಿ ಪತ್ರ ಬರೆಯುವ ಇಬ್ಬಗೆ ನೀತಿ ಅನುಸರಿಸಿ ವಿವಿ ಕುಲಸಚಿವರು, ಸಿಂಡಿಕೇಟ್ ನಿರ್ಣಯವನ್ನು ತಾವೇ ಉಲ್ಲಂಘಿಸುತ್ತಿದ್ದಾರೆ. ಮತ್ತೊಂದೆಡೆ ಉನ್ನತ ಶಿಕ್ಷಣ ಇಲಾಖೆಯು ಇತರ ಇಲಾಖೆಗಳಿಗೆ ಜಮೀನು ನೀಡಲು ಸಾಧ್ಯವಿಲ್ಲ ಎಂದು ಅದೇ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಜಮೀನು ನೀಡಲು ಅನುಮತಿ ನಿರಾಕರಿಸುತ್ತಾ, ಬೇರೆ ಬೇರೆ ಸಂದರ್ಭಗಳಲ್ಲಿ ಹಲವು ಸರ್ಕಾರಿ, ಶೈಕ್ಷಣಿಕ ಸಂಸ್ಥೆಗಳಿಗೆ ಜಮೀನನ್ನು ಎಗ್ಗಿಲ್ಲದೆ ಮಂಜೂರು ಮಾಡುವುದನ್ನು ಮುಂದುವರೆಸಿದೆ.
153ನೇ ಸಿಂಡಿಕೇಟ್ ಸಭೆಯಲ್ಲೂ ಇತರ ಸಂಸ್ಥೆಗಳಿಗೆ ಭೂಹಂಚಿಕೆ ಮಾಡದ ಬಗ್ಗೆ ಪ್ರಸ್ತಾವ
2012 ಹಾಗೂ 2017ನೇ ಸಿಂಡಿಕೇಟ್ ಸಭೆಯ ನಿರ್ಣಯ ಉಲ್ಲೇಖಿಸಿದ ಸದಸ್ಯರು
ಇದಲ್ಲದೆ 20-08-2020ರಂದು ಬೆಂಗಳೂರು ವಿಶ್ವವಿದ್ಯಾಲಯದ 153ನೇ ಸಿಂಡಿಕೇಟ್ ಸಭೆಯಲ್ಲೂ ಕೂಡ ಸಿಂಡಿಕೇಟ್ ಸದಸ್ಯ ಡಾ.ಗೋವಿಂದರಾಜು ಶೂನ್ಯ ವೇಳೆಯಲ್ಲಿ ನಡೆದ ಚರ್ಚೆಯ ವೇಳೆ, “ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಸುಮಾರು 600 ಎಕರೆ ಮಾತ್ರ ಉಳಿದಿರುವುದರಿಂದ ಬೇರೆ ಸಂಸ್ಥೆಗಳಿಗೆ ಜಮೀನು ಕೊಡುವುದು ವಿಶ್ವವಿದ್ಯಾಲಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. 2012 ಮತ್ತು 2017ರಲ್ಲಿ ನಡೆದಿರುವ ಸಿಂಡಿಕೇಟ್ ಸಭೆಗಳಲ್ಲಿ ಯಾವುದೇ ಸಂಸ್ಥೆಗಳಿಗೆ ವಿಶ್ವವಿದ್ಯಾಲಯದ ಜಮೀನನ್ನು ಕೊಡಬಾರದೆಂದು ನಿರ್ಣಯಿಸಲಾಗಿದೆ. ಆದರೂ ಇತ್ತೀಚೆಗೆ ಹಲವಾರು ಸಂಸ್ಥೆಗಳಿಗೆ ಜಮೀನು ನೀಡಿರುವುದು ಸರಿಯಾದ ಕ್ರಮವಲ್ಲವೆಂದು ಬೇಸರ ವ್ಯಕ್ತಪಡಿಸಿದರು” ಎಂದು ಬೆಂಗಳೂರು ವಿಶ್ವವಿದ್ಯಾಲಯದ 03-09-2020ರಂದು ಪ್ರಕಟಿಸಿದ ಸಭೆಯ ನಡವಳಿಯಲ್ಲಿ ಅಧಿಕೃತವಾಗಿ ತಿಳಿಸಿದೆ.
ಯುಜಿಸಿ ನೀಡಿರುವ ನಿರ್ದೇಶನಗಳಿಗೂ ಕ್ಯಾರೇ ಅನ್ನದ ವಿವಿ :
ಹೀಗಿದ್ದರೂ ಬೆಂಗಳೂರು ವಿವಿಯೇ ತಾನೇ ಕೈಗೊಂಡ ಸಿಂಡಿಕೇಟ್ ನಿರ್ಣಯವನ್ನು ತಾನೇ ಉಲ್ಲಂಘಿಸಿ ಸರ್ಕಾರಕ್ಕೆ ಜಮೀನು ಪರಭಾರೆ ಬಗ್ಗೆ ಪ್ರಸ್ತಾವನೆ ಸಲ್ಲಿಸುತ್ತಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (University Grants Commission – UGC)ವು 27-12-202ರಂದು (D.O.No.2-106/2022 (CPP-II) ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ದೇಶದಲ್ಲಿನ ಎಲ್ಲಾ ವಿವಿಗಳಿಗೆ ತನ್ನ ಕ್ಯಾಂಪಸ್ ಗಳಲ್ಲಿ ವನ ಅಥವಾ ಕಾಡು ಬೆಳಸಿ ಎಂದು ನಿರ್ದೇಶನ ನೀಡಿದೆ. ಹೀಗಿದ್ದಾಗ್ಯೂ ಯುಜಿಸಿ ನಿರ್ದೇಶನವನ್ನು ಬೆಂಗಳೂರು ವಿವಿ ಕಡೆಗಣಿಸಿದೆ. ಇದಲ್ಲದೆ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೂ ಸಹ ನಗರ ಕಿರು ಅರಣ್ಯಕ್ಕೆ ಕೊಡುಗೆ ನೀಡುವಲ್ಲಿ ಜೈವಿಕ ಪಾರ್ಕ್ ಸಂರಕ್ಷಣೆಯ ಅಗತ್ಯವನ್ನು 28-05-2021ರಂದು ಸಂಬಂಧಿಸಿದವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರು ವಿವಿಗೆ ಹಂಚಿಕೆಯಾಗಿತ್ತು 6 ಹಳ್ಳಿಗಳ ಜಮೀನು
ಭೂಕಬಳಿಕೆ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದ 242 ಎಕರೆ ಭೂ ಒತ್ತುವರಿ ಪ್ರಕರಣ
ಕೆಂಚನಹಳ್ಳಿ, ನಾಗರಭಾವಿ, ಪಂತರಪಾಳ್ಯ, ಮಲ್ಲತ್ತಹಳ್ಳಿ, ನಾಗದೇವನಹಳ್ಳಿ ಹಾಗೂ ನಾಯಂಡಹಳ್ಳಿಯ ವಿವಿಧ ಸರ್ವೆ ನಂಬರ್ ನಲ್ಲಿನ ಜಾಗವನ್ನು ಈ ಹಿಂದೆ ರಾಜ್ಯ ಸರ್ಕಾರ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರ ಮಾಡಿತ್ತು. ಆದರೆ ಈ ಪೈಕಿ ಸದ್ಯ 242 ಎಕರೆ ಜಮೀನು ವಿವಿದೆಡೆ ಒತ್ತುವರಿಯಾಗಿರುವ ಸಂಬಂಧ 2021ರಲ್ಲಿ ಭೂಕಬಳಿಕೆ ವಿಶೇಷ ನ್ಯಾಯಾಲಯವು ಸ್ವಯಂಪ್ರೇರಣೆಯಿಂದ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಒತ್ತುವರಿ ಸ್ಥಳದ ಸರ್ವೆ ಕಾರ್ಯಕ್ಕೆ ಆದೇಶಿಸಿದ್ದು, ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಉಳಿದಂತೆ 227.45 ಎಕರೆ ಜಾಗ ನ್ಯಾಯಾಲಯದ ಮೆಟ್ಟಿಲು ಏರದ ವ್ಯಾಜ್ಯ ಹೊಂದಿರುವ ಸ್ಥಳವಾಗಿದೆ ಹಾಗೂ ವಿವಿಧ ಸರ್ವೆ ನಂಬರ್ ಗಳ ಒಟ್ಟು 19 ಎಕರೆ ಪ್ರದೇಶ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ಪ್ರೊ.ಟಿ.ಜೆ.ರೇಣುಕಾಪ್ರಸಾದ್ ನೇತೃತ್ವದ ಸಮಿತಿಯು ವಿವಿಗೆ ನೀಡಿರುವ ವರದಿಯಲ್ಲಿ ತಿಳಿಸಿದೆ.
ಇನ್ನೊಂದೆಡೆ ಇದೇ ವರದಿಯಲ್ಲೇ 131 ಕಟ್ಟಡಗಳು ಬೆಂಗಳೂರು ವಿಶ್ವವಿದ್ಯಾಲಯದಲ್ಲಿದ್ದು, ಅವುಗಳು 24.18 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ ಎಂದು ವರದಿ ನೀಡಿತ್ತು. ಅದಾದ ಬಳಿಕ ರಾಜ್ಯ ಸರ್ಕಾರ ಒಂದೇ ಸಮನೆ ವಿವಿಧ ಸಂಸ್ಥೆ, ಸರ್ಕಾರಿ ಇಲಾಖೆಗಳಿಗೆ ನಿರಂತರವಾಗಿ ಕ್ಯಾಂಪಸ್ ನಲ್ಲಿರುವ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುತ್ತಾ ಬಂದಿದ್ದು, ಕಳೆದ 25 ವರ್ಷಗಳಿಂದ ಹಂತ ಹಂತವಾಗಿ ಬೆಳೆಸಿರುವ ಲಕ್ಷಾಂತರ ಗಿಡಮರ ಹಾಗೂ ಜೀವ ವೈವಿಧ್ಯತೆಯ ಉಳಿವಿಗೆ ಸಂಚಕಾರ ಬಂದೊದಗಿದೆ.
ಪೂರ್ವ ಮತ್ತು ಪಶ್ಚಿಮಘಟ್ಟ ದಟ್ಟ ಕಾಡಿನ ಮರಗಳು ಇಲ್ಲಿವೆ :
ಚರಕವನದಲ್ಲಿ 500ಕ್ಕೂ ಹೆಚ್ಚು ಜಾತಿಯ ಔಷಧೀಯ ಗಿಡಮೂಲಿಕೆಗಳ ಗಿಡ, ಮರಗಳಿವೆ. ಇನ್ನು ಪಶ್ಚಿಮಘಟ್ಟ ಕಾಡುಗಳಿರುವ ಕೂಡಲಿಪೇಟೆ, ತೀರ್ಥಹಳ್ಳಿ, ಅಂಕೋಲಾದಿಂದ ಬೆಳಗಾವಿಯ ತನಕ ಹಬ್ಬಿರುವ ಪಶ್ಚಿಮಘಟ್ಟ ಕಾಡುಗಳಿಂದ ಆಯ್ದು ತಂದಿರುವ 25,000 ಗಿಡಗಳನ್ನು ಕ್ಯಾಂಪಸ್ ನಲ್ಲಿನ ಬಯೋಪಾರ್ಕಿನ ವಿವಿಧ 3 ಭಾಗಗಳಲ್ಲಿ ನೆಡಲಾಗಿದ್ದು, ಆ ಜಾಗಗಳಿಗೆ ಸಹ್ಯಾದ್ರಿ ವನ ಎಂದು ನಾಮಕರಣ ಮಾಡಲಾಗಿತ್ತು. ಇಂದು ಅವು ದೊಡ್ಡ ಮರಗಳಾಗಿ ಬೆಳೆದಿದೆ. ಇನ್ನು ಪೂರ್ವಘಟ್ಟಗಳಿರುವ ಆಂಧ್ರದ ರಾಜಮಂಡ್ರಿ, ವೈಜಾಗ್ ಹಾಗೂ ವಿಶಾಖಪಟ್ಟಣ ಮತ್ತಿತರ ಕಡೆಗಳಿಂದ 1 ಲಕ್ಷ ಸಸಿಗಳನ್ನು ತಂದು ವಿವಿಯ ವಿವಿಧ ಬಯೋಪಾರ್ಕ್ ಗಳಲ್ಲಿ ನೆಟ್ಟು ಅವುಗಳು ದೊಡ್ಡದಾಗಿವೆ.
162 ವಿವಿಧ ಜಾತಿಯ ಪಕ್ಷಿಗಳು- 150ಕ್ಕೂ ಹೆಚ್ಚು ಚಿಟ್ಟೆಗಳ ನೆಲವೀಡು :
162 ವಿವಿಧ ಜಾತಿಯ 3,000 ಹಣ್ಣಿನ ಗಿಡ, 1,500 ಗಿಡಗಳ ಮಿಯಾವಾಕಿ ಅರಣ್ಯ, ವಿಶ್ವ ವಿದ್ಯಾಯಲಯದ ನಾಲ್ಕು ಭಾಗಗಳಲ್ಲಿ 1 ಲಕ್ಷ ಗಿಡಗಳನ್ನು ಹೊಂದಿದ ಒತ್ತು ಅರಣ್ಯ (ದಟ್ಟ ಅರಣ್ಯ ಅಥವಾ ಅರೆಮಿಯಾವಾಕಿ) ಗಳು ಸಮೃದ್ಧವಾಗಿ ಬೆಳೆದು ಇಲ್ಲಿನ ಜೀವವೈವಿಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ಬಯೋಪಾರ್ಕ್ ನಲ್ಲಿ ಒಟ್ಟು 162 ವಿಧದ ಪಕ್ಷಿಗಳಿವೆ. ವೈವಿಧ್ಯ ಮಯ ಚಿಟ್ಟೆಗಳ ಬಗ್ಗೆ ವೈಲ್ಡ್ ಲೈಫ್ ಇನ್ಸಿಟ್ಯೂಟ್ ಆಫ್ ಇಂಡಿಯಾ ಅಧ್ಯಯನ ನಡೆಸಿ, ಕ್ಯಾಂಪಸ್ ನಲ್ಲಿ 150ಕ್ಕೂ ಹೆಚ್ಚು ಜಾತಿಯ ಚಿಟ್ಟೆಗಳಿವೆ ಎಂದು ತಿಳಿಸಿದೆ. ಇದಲ್ಲದೆ ನಾಗರಹಾವು, ಮುಂಗುಸಿ, ಮೊಲ, ನರಿಗಳು, ಸೀಳುನಾಯಿ, ಕಾಡುಪಾಪ, ನವಿಲು ಹಾಗೂ ಯತೇಚ್ಛ ಪ್ರಮಾಣದ ಜೇನುನೊಣಗಳಿವೆ.
ಸಹಿ ಮತ್ತು ಟ್ವಟ್ಟರ್ ಅಭಿಯಾನಕ್ಕೆ ಸರ್ಕಾರ ಕಿವಿಗೊಡುತ್ತಾ? :
ಬೆಳ್ಳಂ ಬೆಳಗ್ಗೆ ಸೂರ್ಯ ಕಣ್ಣು ಬಿಡುವ ಮೊದಲೇ ಜ್ಞಾನಭಾರತಿ ಕ್ಯಾಂಪಸ್ ಗೆ ಸಾವಿರಾರು ಮಂದಿ ವಾಯುವಿಹಾರ, ಧ್ಯಾನ, ವ್ಯಾಯಮಕ್ಕಾಗಿ ದಿನಂಪ್ರತಿ ಬರುತ್ತಾರೆ. ಹೀಗೆ ಲಕ್ಷಾಂತರ ಮಂದಿಗೆ ಆಮ್ಲಜನಕ, ಅಂತರ್ಜಲ ಸಂಗ್ರಹದ ಅಪರೂಪ ತಾಣವಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ಜಾಗವನ್ನು ಒಂದೇ ಸಮನೆ ಭೂಪರಭಾರೆ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹಾಗೂ 673 ಎಕರೆಯಲ್ಲಿ ತಲೆ ಎತ್ತಿರುವ ಜೈವಿಕ ವನವನ್ನು ಜೀವವೈವಿಧ್ಯ ವನವೆಂದು ಘೋಷಿಸುವಂತೆ ಜ್ಞಾನಭಾರತಿ ವಾಯುವಿಹಾರಿಗಳ ಸಂಘವು ಸಹಿ ಅಭಿಯಾನ ಆರಂಭಿಸಿದೆ. ಇದಲ್ಲದೆ ಸ್ವಯಂ ಜಾಗೃತಿ ತಂಡವು ಟ್ವಿಟ್ಟರ್ ಅಭಿಯಾನವನ್ನು ಕೈಗೊಂಡಿದೆ. ಈ ಮಧ್ಯೆ ಬಯೋಪಾರ್ಕ್ ಹಿಂದಿನ ಅಧ್ಯಕ್ಷರಾಗಿದ್ದ ಭೂವಿಜ್ಞಾನಿ ಪ್ರೊ.ಟಿ.ಜೆ.ರೇಣುಕಾಪ್ರಸಾದ್ ಮುಖ್ಯಮಂತ್ರಿಗಳಿಗೆ ಹಾಗೂ 2024ರ ಮಾರ್ಚ್ ತಿಂಗಳಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರಿಗೆ ಬೆಂಗಳೂರು ವಿವಿಯ ಜೀವ ವೈವಿಧ್ಯತೆಯ ತಾಣವಾಗಿರುವ ಬೆಂಗಳೂರು ವಿವಿ ಬಯೋಪಾರ್ಕ್ ಅನ್ನು ಜೀವ ವೈವಿಧ್ಯತಾ ವನವನ್ನಾಗಿ ಘೋಷಿಸುವಂತೆ ಮನವಿ ಪತ್ರ ನೀಡಿದ್ದರು. ಆದರೆ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಹೆಜ್ಜೆಯಿರುಸುತ್ತಾ ಕಾಲವೇ ಉತ್ತರಿಸಬೇಕಿದೆ.
ಬಯೋಪಾರ್ಕ್ ಅಭಿವೃದ್ಧಿಗೆ ಶ್ರಮಿಸಿದ ಹಿರಿಯ ಭೂವಿಜ್ಞಾನಿ ಹೇಳೋದೇನು? :
ಬೆಂಗಳೂರು ವಿವಿ ಅನ್ಯ ಸಂಸ್ಥೆ ಯುವಿಸಿಇಗೆ 50 ಎಕರೆ ಜಾಗವನ್ನು ನೀಡಲಾಗಿದೆ. ಇದರಿಂದಾಗಿ ಗಾಂಧಿ ಭವನದ ಹಿಂಭಾಗವಿರುವ ಬಯೋ ಪಾರ್ಕ್ ಸಹ್ಯಾದ್ರಿ ವನ ಭಾಗ– 8 ಕ್ಕೆ ತೊಂದರೆಯಾಗಿದೆ. ಕೊಡ್ಲಿಪೇಟೆ, ಅಂಕೋಲಾ ಹಾಗೂ ತೀರ್ಥಹಳ್ಳಿ ಸುತ್ತಮುತ್ತಲಿನ ಪಶ್ಚಮಘಟ್ಟ ಕಾಡಿನ ಗಿಡಗಳು ಇಲ್ಲಿ ಚೆನ್ನಾಗಿ ಬೆಳೆಯುತ್ತಿದ್ದು, ಜಮೀನು ಹಂಚಿಕೆಯಿಂದ ವಿನಾಶಕ್ಕೆ ನಾಂದಿ ಹಾಡಿದಂತಾಗಿದೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಗೆ 7 ಎಕರೆ ಅಧಿಕವಾಗಿ ನೀಡಿದ ಪರಿಣಾಮವಾಗಿ ಭಾಗ-10ರ ತ್ರಿಫಲ ವನ ಮತ್ತಿತರ ಔಷಧೀಯ ಗಿಡಗಳು ಇಲ್ಲವಾಗುತ್ತವೆ. ವೃಷಭಾವತಿ ಬಫರ್ ಜೋನ್ ಅಂಚಿನ ಜಾಗ ಉಳಿಸಬೇಕಾಗಿದೆ. ಈ ಸ್ಥಳ ಗಾಳಿ ಮತ್ತು ಅಂತರ್ಜಲ ಬೀಡಾಗುವುದು ಅತ್ಯಂತ ಅವಶ್ಯಕ. ವಾಯುವಿಹಾರಿಗಳು, ಸರ್ಕಾರೇತರ ಸಂಘಸಂಸ್ಥೆಗಳು, ಶಿಕ್ಷಕರ ಪರಿಷತ್ತು, ಶಿಕ್ಷಕೇತರ ಸಂಘ ಹಾಗೂ ವಿದ್ಯಾರ್ಥಿ ಸಂಘಗಳು ಈ ಜಾಗ ಇತರರಿಗೆ ಕೊಡಬಾರದೆಂದು ಆಗ್ರಹಿಸಿದ್ದು, ಸಂಬಂಧಿತ ಸಚಿವರ ಗಮನಕ್ಕೂ ತಂದಿದ್ದಾರೆ. ಈಗಿರುವ ಅತಿ ದೊಡ್ಡ ಕಟ್ಟಡಗಳ ಮೇಲೆ ಒಂದೆರಡು ಅಂತಸ್ತು ಹೆಚ್ಚಿಸಿದರೆ ಬಯೋ ಪಾರ್ಕ್ ಉಳಿಯುತ್ತದೆ. ಘನ ಸರ್ಕಾರ ಈ ಹಸಿರಿನ ತಾಣವನ್ನು ಜೈವಿಕ ವೈವಿಧ್ಯ ವನವೆಂದು ಘೋಷಿಸಲು ಕೋರುತ್ತೇನೆ.
- ಪ್ರೊ.ಟಿ.ಜೆ.ರೇಣುಕಾಪ್ರಸಾದ್, ನಿವೃತ್ತ ಪ್ರಾಧ್ಯಪಕರು ಮತ್ತು ಹಿರಿಯ ಭೂವಿಜ್ಞಾನಿ (ಬೆಂಗಳೂರು ವಿಶ್ವವಿದ್ಯಾಲಯ)
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.