ಬೆಂಗಳೂರು, ಅ.29 www.bengaluruwire.com : ನಗರದಲ್ಲಿ ದೀಪಾವಳಿ (Deepavali) ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್ (Supreme Court) ಆದೇಶ ಹಾಗೂ ನಿರ್ದೇಶನದಂತೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board) ಸೂಚನೆ ಮೇರೆಗೆ ಬಿಬಿಎಂಪಿ (BBMP) ಮಾರ್ಗಸೂಚಿ ಪ್ರಕಟಿಸಿದೆ.
ಸ್ಫೋಟಕ ಮಾದರಿಯ ಪಟಾಕಿಗಳನ್ನು ಸಿಡಿಸುವುದು ಸಂಪೂರ್ಣ ನಿಷೇಧಿಸಿದ್ದು, ಹಸಿರು ಪಟಾಕಿ (Green Crackers) ಮಾತ್ರ ಸಿಡಿಸುವಂತೆ ಸಾರ್ವಜನಿಕರಿಗೆ ಮಾಲಿನ್ಯ ಮಂಡಳಿ ಮನವಿ ಮಾಡಿದೆ. ಅಕ್ಟೋಬರ್ 31ರಿಂದ ನವೆಂಬರ್ 2ರ ವರೆಗೆ ಮೂರು ದಿನ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಹಸಿರು ಪಟಾಕಿ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್ ಸೈಟಿನಲ್ಲಿ (https://kspcb.karnataka.gov.in/) ಮಾಹಿತಿ ಲಭ್ಯವಿರುತ್ತದೆ ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ ಸಮಯದಲ್ಲಿ ಪಟಾಕಿ ಸಿಡಿಸಬೇಕು?
ಮೇಲೆ ತಿಳಿಸಿದ ಮೂರು ದಿನಗಳಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಬೇಕು. ಅದರ ಹೊರತಾಗಿ ಬೇಕಾಬಿಟ್ಟಿ ಪಟಾಕಿ ಸಿಡಿಸುವುದಕ್ಕೆ ಕೆಎಸ್‌ಪಿಸಿಬಿ ಸೂಚನೆಯಂತೆ ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಿದೆ.
ಅನಗತ್ಯವಾಗಿ ಪಟಾಕಿ ಮನೆ ಹಾಗೂ ಇತರೆ ಜಾಗದಲ್ಲಿ ಶೇಖರಣೆ ಮಾಡದಂತೆಯೂ ಸೂಚನೆ ನೀಡಲಾಗಿದೆ. ಆನ್‌ಲೈನ್‌ನಲ್ಲೂ ಬೇಕಾಬಿಟ್ಟಿ ಸ್ಫೋಟಕ ಪಟಾಕಿ ಮಾರಾಟ ಮಾಡದಂತೆ ತಾಕೀತು ಮಾಡಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶ ಸಂಖ್ಯೆ ಉಲ್ಲೇಖಿಸಿ ಸಾರ್ವಜನಿಕ ಸುತ್ತೋಲೆ ಹೊರಡಿಸಲಾಗಿದೆ.
ನಿಷೇಧಿತ ಪಟಾಕಿಗಳ ಮಾರಾಟ, ದಾಸ್ತಾನು ಮಾಡುವವರ ವಿರುದ್ಧ ಕ್ರಮ ಕೈಗೊಂಡು, ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.