ಬೆಂಗಳೂರು, ಅ.28 www.bengaluruwire.com : ಲೋಕಸಭೆಯ ಸಂಸದ ತೇಜಸ್ವಿ ಸೂರ್ಯ ಭಾನುವಾರ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಟ್ರಯಥ್ಲಾನ್ ಎಂಡ್ಯುರೆನ್ಸ್ ಸ್ಪರ್ಧೆ ಪೂರ್ಣಗೊಳಿಸಿದ ಸಂಸತ್ತಿನ ಪ್ರಥಮ ಸದಸ್ಯರಾಗಿ ಮಹತ್ವದ ಸಾಧನೆ ಮಾಡಿದರು. ಈ ಹಿಂದೆ 2022 ರಲ್ಲಿ ರಿಲೇ ತಂಡದ ಭಾಗವಾಗಿದ್ದ ಸೂರ್ಯ ಅವರು 90 ಕಿ.ಮೀ ಸೈಕ್ಲಿಂಗ್ ವಿಭಾಗವನ್ನು ಪೂರ್ಣಗೊಳಿಸಿದರು, ಈ ವರ್ಷ ಸಂಪೂರ್ಣ ಸ್ಪರ್ಧೆಯನ್ನು 8 ಗಂಟೆ, 27 ನಿಮಿಷಗಳು ಮತ್ತು 32 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.
“ಕಳೆದ 4 ತಿಂಗಳುಗಳಲ್ಲಿ, ನನ್ನ ಫಿಟ್‌ನೆಸ್ ಅನ್ನು ಸುಧಾರಿಸಲು ನಾನು ಕಠಿಣ ತರಬೇತಿ ಪಡೆದಿದ್ದೆ ಮತ್ತು ಇದರ ಪರಿಣಾಮವಾಗಿ, ನಾನು ಈ ಸವಾಲನ್ನು ಪೂರ್ಣಗೊಳಿಸಿದ್ದೇನೆ ಎಂದು ಹಂಚಿಕೊಳ್ಳಲು ಸಂತೋಷಪಡುತ್ತೇನೆ” ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ನನ್ನ ಫಿಟ್‌ನೆಸ್ ಗುರಿಗಳನ್ನು ಪ್ರತಿಬಿಂಬಿಸಲು ನನಗೆ ಸಹಾಯ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಅವರು ಪ್ರಾರಂಭ ಮಾಡಿದ ಫಿಟ್ ಇಂಡಿಯಾ (#FitIndia) ನನಗೆ ಸ್ಪೂರ್ತಿಯಾಗಿದೆ. ದೊಡ್ಡ ಮಹತ್ವಾಕಾಂಕ್ಷೆಗಳನ್ನು ಬೆನ್ನಟ್ಟುತ್ತಿರುವ ಯುವ ರಾಷ್ಟ್ರವಾಗಿ, ನಾವು ನಮ್ಮ ದೈಹಿಕ ಸಾಮರ್ಥ್ಯವನ್ನು ಪೋಷಿಸಬೇಕು ಮತ್ತು ಹೆಚ್ಚು ಆರೋಗ್ಯಕರ ರಾಷ್ಟ್ರವಾಗಬೇಕು. ಫಿಟ್ ಆಗುವದರಿಂದ ನಿಮ್ಮಲ್ಲಿ ಹೆಚ್ಚು ಶಿಸ್ತು ಮತ್ತು ಆತ್ಮವಿಶ್ವಾಸ ನೀಡುತ್ತದೆ. ಇದು ನೀವು ಕೈಗೊಳ್ಳುವ ಯಾವುದೇ ಉದ್ಯಮದಲ್ಲಿ, ಕಾರ್ಯಕ್ಷೇತ್ರದಲ್ಲಿ ನಿಮ್ಮ ಯಶಸ್ಸಿನ ಸಾಧ್ಯತೆಗಳನ್ನು ಸುಧಾರಿಸುತ್ತದೆ” ಎಂದು ತಮ್ಮ ಅಭಿಪ್ರಾಯವನ್ನು ಸಂಸದ ಸೂರ್ಯ ಹಂಚಿಕೊಂಡಿದ್ದಾರೆ.
ಐರನ್‌ಮ್ಯಾನ್ ಸ್ಪರ್ಧೆ ಎಂದರೇನು?
ಐರನ್‌ಮ್ಯಾನ್ ಸ್ಪರ್ಧೆಯಲ್ಲಿ 1.9 ಕಿಮೀ ಈಜು, 90 ಕಿಮೀ ಸೈಕ್ಲಿಂಗ್ ವಿಭಾಗ ಮತ್ತು 21.1 ಕಿಮೀ ಓಟ ಹೀಗೆ ಮೂರು ಸವಾಲುಗಳನ್ನು ಸ್ಪರ್ಧಾಳು ಪೂರ್ಣಗೊಳಿಸಬೇಕಿರುತ್ತದೆ. ಒಟ್ಟಾರೆ 113 ಕಿಮೀ ದೂರವನ್ನು ಕ್ರಮಿಸಬೇಕಾಗುತ್ತದೆ. ಇದು ಒಬ್ಬ ಕ್ರೀಡಾಳುವಿನ ಸಹಿಷ್ಣುತೆ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಪರೀಕ್ಷೆಯಾಗಿದೆ.
ಸೂರ್ಯ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. “ಇದೊಂದು ಶ್ಲಾಘನೀಯ ಸಾಧನೆ! ಫಿಟ್‌ನೆಸ್ ಸಂಬಂಧಿತ ಚಟುವಟಿಕೆಗಳನ್ನು ಮುಂದುವರಿಸಲು ಇದು ಅನೇಕ ಯುವಕರನ್ನು ಪ್ರೇರೇಪಿಸುತ್ತದೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ” ಎಂದು ಎಕ್ಸ್ ಪೋಸ್ಟ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಐರನ್‌ಮ್ಯಾನ್ 70.3 ಗೋವಾದ ನಾಲ್ಕನೇ ಆವೃತ್ತಿ ಈ ಬಾರಿ ಯಾರು ಗೆದ್ದಿದ್ದಾರೆ?
ಐರನ್‌ಮ್ಯಾನ್ 70.3 ಗೋವಾದ ನಾಲ್ಕನೇ ಆವೃತ್ತಿಗೆ ಟೆನಿಸ್ ದಂತಕಥೆ ಮತ್ತು ರೇಸ್ ರಾಯಭಾರಿ ಲಿಯಾಂಡರ್ ಪೇಸ್, ಸೂರ್ಯ, ಯೋಸ್ಕಾ ಸಂಸ್ಥಾಪಕ ಮತ್ತು ಸಿಇಒ ದೀಪಕ್ ರಾಜ್ ಮತ್ತು ಹರ್ಬಲೈಫ್ ಇಂಡಿಯಾದ ಮಾರುಕಟ್ಟೆ ನಿರ್ದೇಶಕ ಗಣೇಶನ್ ವಿ ಎಸ್ ಅವರು ಚಾಲನೆ ನೀಡಿದ್ದರು.
ಗೋವಾದ ರಮಣೀಯ ಮಿರಾಮರ್ ಬೀಚ್‌ನಲ್ಲಿ ಸುಮಾರು 1,200 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಈಜು, ಬೈಕು ಮತ್ತು ಓಟದ ಹಂತಗಳನ್ನು ಪೂರ್ಣಗೊಳಿಸಿದರು. ಪುರುಷರ ಪ್ರಶಸ್ತಿಯನ್ನು ಮಾಜಿ ಐರನ್‌ಮ್ಯಾನ್ ಚಾಂಪಿಯನ್, ಭಾರತೀಯ ಸೇನೆಯ ಬಿಶ್ವರ್ಜಿತ್ ಸಾಯಿಖೋಮ್ ಅವರು 4 ಗಂಟೆ, 32 ನಿಮಿಷಗಳು ಮತ್ತು 4 ಸೆಕೆಂಡುಗಳಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಪುನಃ ಗೆಲವು ಸಾಧಿಸಿದರು. ಮಹಿಳೆಯರ ವಿಭಾಗದಲ್ಲಿ ಈಜಿಪ್ಟ್‌ನ ಯಾಸ್ಮಿನ್ ಹಲಾವಾ 5 ಗಂಟೆ, 22 ನಿಮಿಷ, 50 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರು.