ಬೆಂಗಳೂರು, ಅ.26 www.bengaluruwire.com : ರಾಜ್ಯದಲ್ಲಿ ಕಳೆದ ವರ್ಷ ಬರ ಪರಿಹಾರ ವಿತರಣೆ ವೇಳೆ ಹಾಗೂ ವರ್ಷ ಮುಂಗಾರು ಬೆಳೆ ಹಾನಿ ಪರಿಹಾರ ವಿತರಣೆ ವೇಳೆ ಉಂಟಾದ ಎಡವಟ್ಟುಗಳು ಮರುಕಳಿಸದಂತೆ ಸರ್ಕಾರ ಈ ಬಾರಿಯಾದರೂ ಎಚ್ಚರ ವಹಿಸಬೇಕು. ಬೆಳೆ ಹಾನಿ ಸಮೀಕ್ಷೆಯನ್ನ ಸಮರೋಪಾದಿಯಲ್ಲಿ ನಡೆಸಿ, ಒಂದು ವಾರದೊಳಗೆ ಪರಿಹಾರದ ಹಣ ರೈತರ ಕೈಸೇರುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷ ಬಿಜೆಪಿ ಆಗ್ರಹಿಸಿದೆ.
ಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್, “ಅಕಾಲಿಕ ಮಳೆಯಿಂದ ಅಪಾರ ಬೆಳೆ ಹಾನಿಯಾಗಿ ರಾಜ್ಯಾದ್ಯಂತ ರೈತರು ಸಂಕಷ್ಟ ಎದುರಿಸುತ್ತಿರುವುದನ್ನ ವಿಪಕ್ಷಗಳು ಗಮನಕ್ಕೆ ತಂದ ಮೇಲೆ ಪ್ರಗಾಢ ನಿದ್ದೆಯಿಂದ ಎದ್ದಿರುವ ಕಾಂಗ್ರೆಸ್ ಸರ್ಕಾರ ನಿನ್ನೆ ಜಿಲ್ಲಾಡಳಿತಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದೆ” ಎಂದಿದ್ದಾರೆ.
“ಫ್ರೂಟ್ಸ್ ತಂತ್ರಾಂಶದಲ್ಲಿ ಸಮಸ್ಯೆ ಇದೆ, ಆಧಾರ್ ಲಿಂಕ್ ಆಗಿಲ್ಲ ಎಂದು ಕುಂಟು ನೆಪವೊಡ್ಡಿ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡದೆ ಈಗಲೇ ಪೂರ್ವಸಿದ್ಧತೆ ಮಾಡಿಕೊಂಡು, ಸಮೀಕ್ಷೆ ವರದಿ ಕೈಸೇರುತ್ತಿದ್ದಂತೆ ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಬೇಕು”.
“ಕಳೆದ 2 ವರ್ಷದಿಂದ ಸತತವಾಗಿ ಬರ, ನೆರೆ ಹಾವಳಿಯಿಂದ ಹೈರಾಣಗಿರುವ ರೈತರು ವಾರದೊಳಗೆ ಪರಿಹಾರ ಹಣ ಕೈಸೇರಿದರೆ ದೀಪಾವಳಿ ಹಬ್ಬವನ್ನಾದರೂ ನೆಮ್ಮದಿಯಿಂದ ಆಚರಿಸಲು ಸಹಕಾರಿಯಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಅವಧಿಯಲ್ಲಿ (ಅ.1 ರಿಂದ 25ನೇ ತಾರೀಖಿನ ತನಕ) ಈತನಕ ಅತಿವೃಷ್ಟಿಯಿಂದ ಹಾನಿಗೊಳಗಾದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆಗೆ ಶನಿವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ, ಅತಿವೃಷ್ಟಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ಭೇಟಿನೀಡಿ, ನಿಯಮಾವಳಿ ಪ್ರಕಾರ ಪರಿಹಾರ ವಿತರಿಸಬೇಕು. ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅತಿವೃಷ್ಟಿಯಿಂದ ಮೃತಪಟ್ಟ 25 ಮಂದಿಯ ಕುಟುಂಬಗಳಿಗೆ ತುರ್ತು ಪರಿಹಾ ನೀಡಲಾಗಿದೆ. ಹಾನಿಗೀಡಾದ ಮನೆಗಳಿಗೆ ತಲಾ 1.20 ಲಕ್ಷ ಪರಿಹಾರ, ಭಾಗಶಃ ಹಾನಿಗೀಡಾದ ಮನೆಗಳಿಗೆ 50 ಸಾವಿರದ ತನಕ ಪರಿಹಾರ ನೀಡಲು ಸೂಚಿಸಲಾಗಿದೆ” ಎಂದು ಅವರು ತಿಳಿಸಿದ್ದರು.
“ಮನೆ, ಪ್ರಾಣಹಾನಿ ಪ್ರಕರಣಗಳಲ್ಲಿ 48 ಗಂಟೆಗಳಲ್ಲಿ ಪರಿಹಾರ ನೀಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ.ಅತಿವೃಷ್ಟಿ ಪರಿಹಾರ ಕಾರ್ಯಗಳಿಗಾಗಿ ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಯಲ್ಲಿ ಒಟ್ಟು 551.25 ಕೋಟಿ ರೂ., ತಹಸೀಲ್ದಾರ್ ಗಳ ಖಾತೆಯಲ್ಲಿ 114.71 ಕೋಟಿ ರೂ. ಸೇರಿದಂತೆ 666.96 ಕೋಟಿ ರೂ. ಲಭ್ಯವಿದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ನೆರೆಪೀಡಿತ ಪ್ರದಶಗಳಲ್ಲಿ ಬೆಳೆ ಹಾನಿ ಸಮೀಕ್ಷೆಯನ್ನ ಸಮರೋಪಾದಿಯಲ್ಲಿ ನಡೆಸಿ, ಒಂದು ವಾರದೊಳಗೆ ಪರಿಹಾರದ ಹಣ ರೈತರ ಕೈಸೇರುವಂತೆ ಕ್ರಮ ಕೈಗೊಳ್ಳಬೇಕು ಎಂಬ ಆರ್.ಅಶೋಕ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಗೆ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.
ಆರ್.ಅಶೋಕ್ ಪೋಸ್ಟ್ ಗೆ ನೆಟ್ಟಿಗರಿಂದ ಟೀಕೆ :
“ಬಿಜೆಪಿ ಪರಿಹಾರದ ಮಾತನಾಡುವ ನೈತಿಕತೆ ಇದೆಯೇ? ಕರ್ನಾಟಕಕ್ಕೆ ಬರಬೇಕಿರುವ ಬಾಕಿ ಕೊಟ್ಟರೆ ಸಾಕು” ಎಂದು ವಿಜಯ್ ಕುಮಾರ್ ಎಂಬುವರು ಪ್ರತಿಕ್ರಿಯೆ ನೀಡಿದ್ದಾರೆ.
“ಪ್ರತಿ ಪಕ್ಷದಲ್ಲಿ ಕೂತು..ನೀವೇನು ಮಾಡಿದ್ದೀರಿ? ನೀವು ಎಷ್ಟು ಪ್ರವಾಹ ಪೀಡಿತ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ್ದೀರಿ?
ನಿಮ್ಮ ಸರಕಾರ ಇದ್ದಾರೆ ಮಾತ್ರ ನೀವು ಜನ ಪರ ಕೆಲಸ ಮಾಡೋದಾ?” ಎಂದು ಶ್ರೀಕಾಂತ್ ಮರಾಟೆ ಎಂಬುವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅತಿವೃಷ್ಟಿ ಸೃಷ್ಟಿಸಿದ ಅವಾಂತರಗಳ ಅಂಕಿ-ಅಂಶಗಳು :
• ಅ.1 ರಿಂದ 25ರ ವರೆಗೆ ಸುರಿದ ಸರಾಸರಿ ಮಳೆಯ ಪ್ರಮಾಣ 181 ಮಿ.ಮೀ.
• ಈ ಅವಧಿಯಲ್ಲಿ ಬೀಳುವ ವಾಸ್ತವಿಕ ವಾಡಿಕೆ ಮಳೆಯ ಪ್ರಮಾಣ 114 ಮಿ.ಮೀ.
• ಅತಿವೃಷ್ಟಿಯಾದ ಹಿಂಗಾರು ಅವಧಿಯಲ್ಲಿ ಆದ ಜೀವಹಾನಿ 25.
• ಸಂಪೂರ್ಣವಾಗಿ ಹಾನಿಯಾದ ಮನೆಗಳು 84.
• ಭಾಗಶಃ ಹಾನಿಯಾದ ಮನೆಗಳು 2,077.
• ಅತಿವೃಷ್ಟಿಯಿಂದ ಒಟ್ಟಾರೆ 1.06 ಲಕ್ಷ ಹೆಕ್ಟೇರ್ ಬೆಳೆಹಾನಿ.
* ಆ ಪೈಕಿ ಒಟ್ಟಾರೆ ಕೃಷಿ ಬೆಳೆಹಾನಿ 74,993 ಹೆಕ್ಟೇರ್.
• 30,941 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿ.
• ಗ್ರಾಮೀಣ ಪ್ರದೇಶದಲ್ಲಿ 12,553 ಕಿ.ಮೀ ಗ್ರಾಮೀಣ ರಸ್ತೆ 1,106 ಸಣ್ಣ ಸೇತುವೆ, ಮೋರಿಗಳು ಹಾನಿಗೀಡಾಗಿದೆ.
• ರಾಜ್ಯದಲ್ಲಿನ ಪ್ರಮುಖ ಜಲಾಶಯಗಳ ನೀರು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿ ಅಡಿ.
• ಪ್ರಸ್ತುತ ನೀರು ಸಂಗ್ರಹ 871.26 ಟಿಎಂಸಿ ಅಡಿ.
• ಕಳೆದ ವರ್ಷ ಇದೇ ಅವಧಿಯಲ್ಲಿ ನೀರು ಸಂಗ್ರಹವಾಗಿದ್ದು 505.81 ಟಿಎಂಸಿ ಅಡಿ.