ಬೆಂಗಳೂರು, ಅ.26 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಈ ತಿಂಗಳು 1ನೇ ತಾರೀಖಿನಿಂದ 24ರವರೆಗೆ ಸುರಿದ ಮಳೆಯು ಅಕ್ಟೋಬರ್ ತಿಂಗಳಲ್ಲೇ ಮೂರನೇ ಅತ್ಯಧಿಕ ಮಳೆಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ತಿಳಿಸಿದೆ. ರಾಜಧಾನಿ ಬೆಂಗಳೂರಿನ ಜನರು ಈ ಅವಧಿಯಲ್ಲಿ ಸುರಿದ ತೀವ್ರ ಮಳೆಯಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆಯಲ್ಲಿ ಸಿಲುಕುವುದಕ್ಕಿಂತ ಸಿಲಿಕಾನ್ ಸಿಟಿ ಜನರು ತಮ್ಮ ಸಂಚಾರ ಸಾರಿಗೆಯಾಗಿ ಮೆಟ್ರೊದಲ್ಲಿ ಹೆಚ್ಚಾಗಿ ಸಂಚರಿಸುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
2023ನೇ ಇಸವಿಯಲ್ಲಿ ಅಕ್ಟೋಬರ್ 1 ರಿಂದ 24ನೇ ತಾರೀಖಿನವರೆಗಿನ 24 ದಿನಗಳ ಅವಧಿಯಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ 1.52 ಕೋಟಿ ಜನರು ಮೆಟ್ರೊದಲ್ಲಿ ಪ್ರಯಾಣಿಸಿದ್ದರೆ, 2024 ಇಸವಿಯಲ್ಲಿನ ಇದೇ ಅವಧಿಯಲ್ಲಿ 1.85 ಕೋಟಿ ಜನರು ಮೆಟ್ರೊ ಬಳಸಿದ್ದಾರೆ. ಅಲ್ಲಿಗೆ ಮೆಟ್ರೊದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ 32.90 ಲಕ್ಷ ಜನರು ಹೆಚ್ಚಾಗಿ ಮೆಟ್ರೊದಲ್ಲಿ ಪ್ರಯಾಣಿಸಿರುವುದು ನಮ್ಮ ಮೆಟ್ರೊ ಅಧಿಕೃತ ಅಂಕಿ ಅಂಶಗಳು ಇದನ್ನು ಪುಷ್ಟೀಕರಿಸುತ್ತದೆ. ಈ ಅವಧಿಯಲ್ಲಿ ಅತಿ ಹೆಚ್ಚು ಪ್ರಯಾಣಿಕರು ಮೆಜಿಸ್ಟಿಕ್ ನಲ್ಲಿನ ಮೆಟ್ರೊ ನಿಲ್ದಾಣವನ್ನು ಬಳಸಿದ್ದಾರೆ.
ವರುಣ ಆರ್ಭಟಕ್ಕೆ ಮೆಟ್ರೊ ನೆಚ್ಚಿಕೊಂಡ ಪ್ರಯಾಣಿಕರು
ಅಕ್ಟೋಬರ್ ನಲ್ಲಿ 9.22 ಕೋಟಿ ರೂ. ಹೆಚ್ಚಿನ ಆದಾಯ
ಬಿಎಂಆರ್ ಸಿಎಲ್ ಆದಾಯ ಸಂಗ್ರಹದ ದೃಷ್ಟಿಯಿಂದ ನೋಡುವುದಾದರೆ, 2023ನೇ ಇಸವಿಯ ಅಕ್ಟೋಬರ್ ತಿಂಗಳ ಈ 24 ದಿನಗಳ ಅವಧಿಯಲ್ಲಿ 39.12 ಕೋಟಿ ರೂ. ಸಂಗ್ರಹವಾಗಿದ್ದರೆ, 2024ನೇ ಇಸವಿಯಲ್ಲಿ 48.35 ಕೋಟಿ ರೂ. ಹಣ ಪ್ರಯಾಣಿಕರ ಟಿಕೆಟ್ ಮೂಲಕ ಮೆಟ್ರೊಗೆ ಆದಾಯ ರೂಪದಲ್ಲಿ ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 9.22 ಕೋಟಿ ರೂ. ಹೆಚ್ಚಿನ ಆದಾಯ ಬಿಎಂಆರ್ ಸಿಎಲ್ ಗೆ ಲಭಿಸಿದಂತಾಗಿದೆ. ವರುಣನ ಆರ್ಭಟದಿಂದಾಗಿ ವೈಟ್ ಫೀಲ್ಡ್ ನಿಂದ ಚೆಲ್ಲಘಟ್ಟದವರೆಗಿನ 37 ಸ್ಟೇಷನ್ ಗಳನ್ನು ಹೊಂದಿರುವ 43.49 ಕಿ.ಮೀ ಉದ್ದದ ನೇರಳೆ ಮಾರ್ಗದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಟೋಬರ್ 1 ರಿಂದ 24 ವರೆಗಿನ ಅವಧಿಯಲ್ಲಿ ಮೆಟ್ರೊದಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ ಈ ವರ್ಷ 22,93,127 (22.93 ಲಕ್ಷ) ಹೆಚ್ಚಾಗಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಇನ್ನು ನಾಗಸಂದ್ರದಿಂದ ಸಿಲ್ಕ್ ಇನ್ಸಿಟ್ಯೂಟ್ ವರೆಗಿನ 29 ಸ್ಟೇಷನ್ ಗಳನ್ನು ಹೊಂದಿರುವ 30.5 ಕಿ.ಮೀ ಉದ್ದದ ಹಸಿರು ಮಾರ್ಗದಲ್ಲಿ 2023ನೇ ಇಸವಿ ಅಕ್ಟೋಬರ್ ತಿಂಗಳ 24 ದಿನಗಳ ಅವಧಿಗೆ ಹೋಲಿಸಿದರೆ ಈ ವರ್ಷ ಒಟ್ಟು 9,97,343 (9.97 ಲಕ್ಷ) ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಅಕ್ಟೋಬರ್ 1 ರಿಂದ 24ನೇ ತಾರೀಖಿನ ವರೆಗಿನ ದಿನದ ಸರಾಸರಿ ಪ್ರಯಾಣಿಕರ ಸಂಖ್ಯೆ | |||
ಇಸವಿ | 2023 (A) | 2024 (B) | (B-A = ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ |
ನೇರಳೆ ಮಾರ್ಗ | 3,44,809 | 4,40,356 | 95,547 |
ಹಸಿರು ಮಾರ್ಗ | 2,90,497 | 3,32,053 | 41,556 |
ಒಟ್ಟಾರೆ | 6,35,306 | 7,72,409 | 1,37,103 |
2023ರ ಅಕ್ಟೋಬರ್ 1 ರಿಂದ 24ನೇ ಅವಧಿಯಲ್ಲಿ ಪ್ರತಿ ದಿನ ಪ್ರಯಾಣಿಸಿದ ಪ್ರಯಾಣಿಕರ ಸರಾಸರಿ ಹೋಲಿಸಿದಾಗ ಎರಡು ಮಾರ್ಗಗಳಿಂದ ಒಟ್ಟಾರೆ ಈ ವರ್ಷ ಪ್ರತಿ ದಿನದ ಸರಾಸರಿ ಪ್ರಯಾಣಿಕರ ಸಂಖ್ಯೆ 1,37,103 ನಷ್ಟು ಹೆಚ್ಚಾಗಿದೆ. ಇನ್ನು ಬಿಎಂಆರ್ ಸಿಎಲ್ ದೈನಂದಿನ ಸರಾಸರಿ ಆದಾಯ ಈ 24 ದಿನಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 38.44 ಲಕ್ಷ ರೂ. ನಷ್ಟು ಹೆಚ್ಚಾಗಿ ಸಂಗ್ರಹವಾಗಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಾರಿ ಅಕ್ಟೋಬರ್ 1 ರಿಂದ 24ನೇ ತಾರೀಖಿನ ಅವಧಿಯಲ್ಲಿ ಸುರಿದ ಮಳೆಯು ಈವರೆಗೆ ನಗರದಲ್ಲಿ ಸುರಿದ ಮೂರನೇ ಅತ್ಯಧಿಕ (156 ಮಿ.ಮೀ) ದಾಖಲೆಯ ಮಳೆಯಾಗಿದೆ. 1991ರಲ್ಲಿ 250 ಮಿ.ಮೀ ಮೊದಲನೇ ಅತ್ಯಧಿಕ ಮಳೆಯಾಗಿದ್ದರೆ, 1997ನೇ ಇಸವಿಯಲ್ಲಿ 178 ಮಿ.ಮೀ ಮಳೆಯಾಗಿ ಎರಡನೇ ಅತಿ ಹೆಚ್ಚಿನ ಮಳೆಯಾಗಿತ್ತು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮೂಲಗಳು ಬೆಂಗಳೂರು ವೈರ್ ಗೆ ಮಾಹಿತಿ ನೀಡಿದೆ.
ಅಕ್ಟೋಬರ್ 1 ರಿಂದ 24ನೇ ತಾರೀಖಿನ ವರೆಗಿನ ಮಳೆಯ ಪ್ರಮಾಣ | |||
ಕ್ರಮ ಸಂಖ್ಯೆ | ಬಿಬಿಎಂಪಿ ವಲಯದ ಹೆಸರು | ವಾಡಿಕೆ ಮಳೆಯ ಪ್ರಮಾಣ (ಮಿ.ಮೀ ಗಳಲ್ಲಿ) | ವಾಸ್ತವಿಕವಾಗಿ ಸುರಿದ ಮಳೆಯ ಪ್ರಮಾಣ (ಮಿ.ಮೀ ಗಳಲ್ಲಿ) |
1. | ಯಲಹಂಕ | 130 | 292 |
2. | ರಾಜರಾಜೇಶ್ವರಿ ನಗರ | 136 | 259 |
3. | ಪಶ್ಚಿಮ | 127 | 254 |
4. | ದಾಸರಹಳ್ಳಿ | 128 | 231 |
5. | ಬೆಂಗಳೂರು ದಕ್ಷಿಣ | 138 | 202 |
6. | ಬೊಮ್ಮನಹಳ್ಳಿ | 126 | 178 |
7. | ಮಹದೇವಪುರ | 132 | 162 |
8. | ಪೂರ್ವ | 135 | 156 |
ಒಟ್ಟಾರೆ ಸರಾಸರಿ | 131 | 217 |
ಅಕ್ಟೋಬರ್ 1 ರಿಂದ 24ನೇ ತಾರೀಖಿನ ವರೆಗೆ ಬೆಂಗಳೂರಿನ ಬಿಬಿಎಂಪಿಯ 8 ವಲಯಗಳಲ್ಲಿ ವಾಡಿಕೆ ಮಳೆಯ ಪ್ರಮಾಣ ಸರಾಸರಿಯಾಗಿ 131 ಮಿ.ಮೀ ಆಗಿದ್ದರೆ, ಬರೋಬ್ಬರಿ 217 ಮಿ.ಮೀ ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ.65ರಷ್ಟು ಹೆಚ್ಚು ಮಳೆ ಸುರಿದ ಕಾರಣ ನಗರದ ಬಹುತೇಕ ಭಾಗಗಳಲ್ಲಿ ಕೆರೆ, ರಾಜಕಾಲುವೆಗಳು ತುಂಬಿದ್ದಲ್ಲದೆ, ಹಲವು ಮನೆಗಳಿಗೆ ನೀರು ನುಗ್ಗಿ, ರಸ್ತೆಗಳಲ್ಲಿ ಮೊಣಕಾಲು ಮುಳುಗುವಷ್ಟು ಮಳೆಯಾಗಿತ್ತು. ಹೀಗಾಗಿ ವಾಹನ ದಟ್ಟಣೆ ಅವಧಿಯಲ್ಲಿ ಕೆಲಸಕ್ಕೆ ಹೋಗುವವರು ಪರಿತಪಿಸುವಂತಾಗಿ ಹೆಚ್ಚಿನವರು ಸಾರಿಗೆ ವ್ಯವಸ್ಥೆಗಾಗಿ ಮೆಟ್ರೊನಲ್ಲಿ ಸಂಚರಿಸುವುದು ಮೇಲಿನ ಅಂಕಿ- ಅಂಶಗಳಿಂದ ತಿಳಿದು ಬಂದಿದೆ. ಒಟ್ಟಾರೆ ಬೆಂಗಳೂರಿನ ಟ್ರಾಫಿಕ್ ಗೆ ನಮ್ಮ ಮೆಟ್ರೊ ಒಂದು ಪರಿಣಾಮಕಾರಿ ಸಾರಿಗೆ ಸಂಪರ್ಕ ವ್ಯವಸ್ಥೆಯಾಗಿ ಬೆಳೆಯುತ್ತಿರುವುದು ಸಮಾಧಾನಕರ ಸಂಗತಿ.