ಬೆಂಗಳೂರು, ಅ.25 www.bengaluruwire.com : ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೇ ಇಷ್ಟು ದಿನ ಬೃಹತ್ ನೀರುಗಾಲುವೆ, ಕೆರೆ ಒತ್ತುವರಿ ತೆರವಿಗೆ ನಿರ್ಲಕ್ಷ್ಯವಹಿಸಿದ್ದ ಬಿಬಿಎಂಪಿ ಅಧಿಕಾರಿಗಳು, ನಗರದಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿ ಸಿಎಂ- ಡಿಸಿಎಂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಮೇಲೆ ಇದೀಗ ಒತ್ತುವರಿ ತೆರವು ಕ್ರಮಕ್ಕೆ ಮುಂದಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ಮಳೆ ನೀರುಗಾಲುವೆಗಳ ಹಾಗೂ ಕೆರೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್,ಎಲ್ಲಾ ವಲಯದ ತಹಶಿಲ್ದಾರ್ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡುತ್ತಾ, ವಲಯವಾರು ಸಂಬಂಧಪಟ್ಟ ತಹಶಿಲ್ದಾರ್ ರವರು ಬಂದಿರುವ ಎಲ್ಲಾ ಪ್ರಸ್ತಾವನೆಯನ್ನು ಪರಿಮರ್ಶಿಸಿ ರಾಜಕಾಲುವೆ ಒತ್ತುವರಿಯಾಗಿರುವ ಬಗ್ಗೆ ಆದೇಶಿಸಲಾದ ಸ್ಥಳವನ್ನು ನವೆಂಬರ್ 15ರೊಳಗೆ ತೆರವುಗೊಳಿಸಲು ಎಲ್ಲಾ ವಲಯ ಆಯುಕ್ತರಿಗೆ ನಿರ್ದೇಶಿಸಿದರು.
ಬೃಹತ್ ನೀರುಗಾಲುವೆ ಒತ್ತುವರಿ ತೆರವು ಮಾಡದಿದ್ದರೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ತಕ್ಷಣವೇ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳ ಸರ್ವೆ ನಡೆಸಬೇಕು. ಸರ್ವೆ ದಾಖಲೆ ಬಂದ ತಕ್ಷಣ ಖಾಸಗಿ ಅಥವಾ ಸಾರ್ವಜನಿಕವಾಗಿ ಕೆರೆ ಒತ್ತುವರಿ ಕಂಡುಬಂದಲ್ಲಿ ಕೂಡಲೇ ತೆರವು ಗೊಳಿಸುವ ಕಾರ್ಯ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಇಂದಿನಿಂದ ವಲಯವಾರು ಬೃಹತ್ ನೀರು ಗಾಲುವೆ ಹಾಗೂ ರಸ್ತೆಗಳ ನಿರ್ವಹಣೆಯ ಎಲ್ಲಾ ಜವಾಬ್ದಾರಿಯನ್ನು ಆಯಾ ವಲಯ ಆಯುಕ್ತರಿಗೆ ನೀಡಲು ಆದೇಶಿಸಿದರು.
ಟೆಂಡರ್ ಶ್ಯೂರ್ ರಸ್ತೆಗಳಲ್ಲಿನ ಕಂಬಗಳ ಮೇಲೆ ಕೇಬಲ್ ತೆರವಿಗೆ ಆದೇಶ :
ಬಿಬಿಎಂಪಿ ವ್ಯಾಪ್ತಿಯ ಟೆಂಡರ್ ಶ್ಯೂರ್ ರಸ್ತೆಗಳ ಮೇಲೆ ಮತ್ತು ಬೆಸ್ಕಾಂ ಕಂಬಗಳಲ್ಲಿ ಹಾಕಿರುವ ಅನಧಿಕೃತ ಹಾಗೂ ಯಾವುದೇ ಓವರ್ ಹೆಡ್ ಕೇಬಲ್ ಗಳನ್ನು ಈ ಕೂಡಲೇ ತೆರವು ಗೊಳಿಸಬೇಕು. ಯಾವುದೇ ಸಂಸ್ಥೆಯು ಇನ್ನೂ ಮುಂದೆ ಹೊಸ ಕೇಬಲ್ ಅಳವಡಿಸಬೇಕಾದರೆ ಡಕ್ಟ್ ಮೂಲಕವೇ ಅಳವಡಿಸಬೇಕು ಹಾಗೂ ಪಾಲಿಕೆಯ ಅನುಮತಿ ಇಲ್ಲದೇ ಯಾವುದೇ ಕೇಬಲ್ ಅಳವಡಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಹೇಳಿದ್ದಾರೆ.
ಇದಲ್ಲದೆ, ಬೆಸ್ಕಾಂ ಸಂಸ್ಥೆಯ ಅಧಿಕಾರಿಗಳ ಜೊತೆ ಮಾತನಾಡಿ ತಾವು ಕೂಡ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಕಂಬದ ಮೇಲೆ ಕೇಬಲ್ ಅಳವಡಿಸಬಾರದು ನಿಗಧಿತ ಅವಧಿಯಲ್ಲಿ ತೆರವುಗೊಳಿಸಬೇಕು. ನಿಗದಿತ ಹಣವನ್ನು ಪಾವತಿ ಮಾಡಿ ಡಕ್ಟ್ ನಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.
ದೀಪಾವಳಿ ಹಬ್ಬದಲ್ಲಿ ಘನತ್ಯಾಜ್ಯ ನಿರ್ವಹಣೆ :
ಇದೇ ಸಂದರ್ಭದಲ್ಲಿ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಮಾತನಾಡಿ ಮುಂಬರುತ್ತಿರುವ ದೀಪಾವಳಿ ಹಬ್ಬದಲ್ಲಿ ಉತ್ಪತ್ತಿ ಯಾಗುವ ಹೆಚ್ಚು ಘನತ್ಯಾಜ್ಯವನ್ನು ಆಗಿಂದಾಗ್ಗೆ ಹೆಚ್ಚು ಕಾಂಪ್ಯಾಕ್ಟರ್ ಗಳನ್ನು ಉಪಯೊಗಿಸಿ ತೆರವು ಗೊಳಿಸಲು ಸೂಚಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಯಾದ ಜಗದೀಶ್.ಜಿ, ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ಡಾ.ಹರೀಶ್ ಕುಮಾರ್, ವಿಶೇಷ ಜಿಲ್ಲಾಧಿಕಾರಿಗಳಾದ ಎಸ್.ಎಲ್.ಬಾಲಚಂದ್ರನ್, ವಲಯ ಆಯುಕ್ತರಾದ ಕರಿಗೌಡ, ರಮ್ಯ, ಸತೀಶ್, ವಿನೋಥ್ ಪ್ರೀಯ, ಎಲ್ಲಾ ವಲಯ ಮುಖ್ಯ ಅಭಿಯಂತರರು, ಬೆಸ್ಕಾಂ ಅಭಿಯಂತರರು, ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು. ಇದಲ್ಲದೆ ಎಲ್ಲಾ ತಹಶಿಲ್ದಾರರುಗಳು, ಪ್ರಧಾನ ಅಭಿಯಂತರರು ಹಾಗೂ ಎಲ್ಲಾ ವಲಯದ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಿದ್ದರು.