ಬೆಂಗಳೂರು, ಅ.23 www.bengaluruwire.com : ಮಂಗಳೂರಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಉತ್ತಮ ಮಳೆಯಾದ ಕಾರಣ ಬಿಬಿಎಂಪಿ ವ್ಯಾಪ್ತಿಯಲ್ಲಿನ 183 ಕೆರೆಗಳ ಪೈಕಿ 83 ಕೆರೆಗಳು ತುಂಬಿವೆ. ಇದೇ ತಿಂಗಳಿನಲ್ಲಿ ಯಲಹಂಕ ವಲಯ ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ನಗರದ ಉಳಿದ ಭಾಗಗಳಿಗಿಂತ ಹೆಚ್ಚಿನ ಮಳೆಯಾದ ಕಾರಣ ಈ ಎರಡು ವಲಯಗಳ ವ್ಯಾಪ್ತಿಯಲ್ಲಿರುವ 76 ಕೆರೆಗಳ ಪೈಕಿ 52 ಕೆರೆಗಳು ತುಂಬಿ ಈ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳ ಮನೆಗಳಿಗೆ, ಬಡಾವಣೆ, ಉದ್ಯಾನವನ, ರಸ್ತೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಲು ಕಾರಣ ಎಂಬುದು ಬಿಬಿಎಂಪಿಯ ಕೆರೆ ನೀರಿನ ಮಟ್ಟದ ಅಂಕಿಅಂಶದಿಂದ ಬಹಿರಂಗವಾಗಿದೆ.
ಇದೇ ರಾಜಧಾನಿ ಬೆಂಗಳೂರಿನ ಐದೂ ತಾಲೂಕುಗಳನ್ನು ರಾಜ್ಯ ಸರ್ಕಾರ ಈ ವರ್ಷದ ಆರಂಭದಲ್ಲಿ ಬರಪೀಡಿತ ಎಂದು ಘೋಷಿಸಿತ್ತು. 2023-24ನೇ ಸಾಲಿನಲ್ಲಿ ಮಳೆಯಿಲ್ಲದ ಕಾರಣ ಬೆಂಗಳೂರಿನಲ್ಲಿ ಬಿಬಿಎಂಪಿಗೆ ಸೇರಿದ 183 ಕೆರೆಗಳ ಪೈಕಿ 46 ಕೆರೆಗಳಲ್ಲಿ ನೀರಿಲ್ಲದೆ ಬತ್ತಿ ಹೋಗಿತ್ತು. ಒಟ್ಟಾರೆ 183 ಕೆರೆಗಳ 31,909.85 ದಶಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯವಿರುವ ಕೆರೆಗಳಲ್ಲಿ ಆಗ ಕೇವಲ ಶೇ.45.89 ರಷ್ಟು ಮಾತ್ರ ನೀರಿತ್ತು. ಆದರೆ ಪ್ರಸ್ತುತ ನಗರದ 183 ಕೆರೆಗಳಲ್ಲಿ ಒಟ್ಟಾರೆ 26,543.23 ದಶಲಕ್ಷ ಲೀಟರ್ ಅಂದರೆ ಸರಾಸರಿಯಾಗಿ ಶೇ.83.18ರಷ್ಟು ನೀರನ್ನು ಹೊಂದಿದೆ.
ಯಲಹಂಕದ ಕೇಂದ್ರೀಯ ವಿಹಾರ್, ಟಾಟಾ ನಗರ ಮತ್ತಿತರ ಕಡೆಗಳಲ್ಲಿ ತೀವ್ರ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸಿದರು. ಈ ಬಾರಿ ಯಲಹಂಕ ವಲಯದಲ್ಲಿ 27 ಕೆರೆಗಳ ಪೈಕಿ 20 ಕೆರೆಗಳು ಸಂಪೂರ್ಣ ಭರ್ತಿಯಾಗಿ ಕೆರೆ ಕೋಡಿ ಹರಿದಿದೆ.
ಯಲಹಂಕ ವಲಯದಲ್ಲಿ 27 ಕೆರೆಗಳ ಪೈಕಿ 20 ಕೆರೆಗಳು ತುಂಬಿವೆ | ||
ಪ್ರಮುಖ ಕೆರೆಗಳ ಹೆಸರು | ಕೆರೆಯ ವಿಸ್ತೀರ್ಣ | ಕೆರೆಯಲ್ಲಿ ನೀರು ತುಂಬಿದ ಪ್ರಮಾಣ |
ಯಲಹಂಕ ಕೆರೆ | 292.1 ಎಕರೆ | ಶೇ.100 |
ಕೋಗಿಲು ಕೆರೆ | 73.28 ಎಕರೆ | ಶೇ.100 |
ಅಟ್ಟೂರು ಕೆರೆ | 90.4 ಎಕರೆ | ಶೇ.100 |
ಜಕ್ಕೂರು ಕೆರೆ | 164.17 ಎಕರೆ | ಶೇ.100 |
ದೊಡ್ಡಬೊಮ್ಮನಸಂದ್ರ ಕೆರೆ | 124.19 ಎಕರೆ | ಶೇ.100 |
ರಾಚೇನಹಳ್ಳಿ ಕೆರೆ | 131.6 ಎಕರೆ | ಶೇ.100 |
ಹಾರೋಹಳ್ಳಿ ಕೆರೆ | 74.32 ಎಕರೆ | ಶೇ.87.50 |
ಸಿಂಗಪುರ ಕೆರೆ | 66 ಎಕರೆ | ಶೇ.100 |
ಪುಟ್ಟೇನಹಳ್ಳಿ ಕೆರೆ | 37 ಎಕರೆ | ಶೇ.100 |
ಹೆಬ್ಬಾಳ ಕೆರೆ | 269.5 ಎಕರೆ | ಶೇ.100 |
ಇನ್ನು ಮಹದೇವಪುರ ವಲಯದಲ್ಲಿನ 49 ಕೆರೆಗಳ ಪೈಕಿ 32 ಕೆರೆಗಳು ತುಂಬಿ ಹೋಗಿರುವುದರಿಂದ ಹಾಗೂ ಈ ವಲಯದಲ್ಲಿ ಇನ್ನೂ ಕೂಡ ಸೂಕ್ತ ರಾಜಕಾಲುವೆ ನಿರ್ಮಾಣ ಹಾಗೂ ಕೆರೆಗಳಿಗೆ ಸೂಕ್ತ ರೀತಿ ಸಮರ್ಪಕವಾಗಿ ಸಂಪರ್ಕ ಕಲ್ಪಿಸದೆ ಆ ಭಾಗದ ಜನ ಸಂಚಾರಕ್ಕೆ, ಮನೆಗಳಿಗೆ, ಕೆಳ ಸೇತುವೆ, ರಸ್ತೆಗಳಲ್ಲಿ ನೀರು ನಿಂತು ಕೋಟ್ಯಾಂತರ ರೂಪಾಯಿ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗುತ್ತಿದೆ.
ಮಹದೇವಪುರ ವಲಯದಲ್ಲಿ 49 ಕೆರೆಗಳ ಪೈಕಿ 32 ಕೆರೆಗಳು ತುಂಬಿವೆ | ||
ಪ್ರಮುಖ ಕೆರೆಗಳ ಹೆಸರು | ಕೆರೆಯ ವಿಸ್ತೀರ್ಣ | ಕೆರೆಯಲ್ಲಿ ನೀರು ತುಂಬಿದ ಪ್ರಮಾಣ |
ಚಿಕ್ಕಬೆಳ್ಳಂದೂರು ಕೆರೆ | 72 ಎಕರೆ | ಶೇ.100 |
ದೊಡ್ಡನೆಕ್ಕುಂದಿ ಕೆರೆ | 114.17 ಎಕರೆ | ಶೇ.77.78 |
ಕಲ್ಕೆರೆ ಕೆರೆ | 186.38 ಎಕರೆ | ಶೇ.100 |
ರಾಮಪುರ ಕೆರೆ | 188.11 ಎಕರೆ | ಶೇ.100 |
ಸಾವಿರಾರು ಕೋಟಿ ರೂ. ವೆಚ್ಚವಾದರೂ ರಾಜಕಾಲುವೆ ಸುಸ್ಥಿತಿಗೆ ಬಂದಿಲ್ಲ :
ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 840 ಕಿಲೋಮೀಟರ್‌ಗಳಷ್ಟು ಉದ್ದದ ಬೃಹತ್ ಮಳೆನೀರುಗಾಲುವೆಗಳಿದ್ದು, ಕೋರ್ ಏರಿಯಾಗಳಲ್ಲಿ 240 ಕಿಲೋಮೀಟರ್‌ಗಳು ಮತ್ತು ಹೊರ ಪ್ರದೇಶಗಳಲ್ಲಿ 600 ಕಿಲೋಮೀಟರ್‌ಗಳಷ್ಟು ರಾಜಕಾಲುವೆಗಳಿವೆ. ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಅನುದಾನ, ಬಿಬಿಎಂಪಿ ಸೇರಿದಂತೆ ಸಾವಿರಾರು ಕೋಟಿ ರೂ.ಗಳ ಹಣವನ್ನು ರಾಜಕಾಲುವೆ ನಿರ್ಮಾಣಕ್ಕೆ ಸುರಿದರೂ ಬೆಂಗಳೂರಿನಲ್ಲಿ ಸ್ವಲ್ಪ ಜೋರು ಮಳೆಯಾದರೆ ನಗರದಲ್ಲಿನ ಕೆರೆ ಸರಪಳಿಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳು ಸೂಕ್ತ ರೀತಿ ಸಂಪರ್ಕ ಹೊಂದಿರದ ಕಾರಣ ವರುಣನ ಆರ್ಭಟವಾದರೆ ರಸ್ತೆ, ಮನೆಗಳಿಗೆ, ಆಪಾರ್ಟ್ ಮೆಂಟ್ ಗಳಿಗೆ ನೀರು ನುಗ್ಗುವ, ಮಳೆ ನೀರು ನಿಲ್ಲುವ ದಾರುಣ ಪರಿಸ್ಥಿತಿ ನಿಂತಿಲ್ಲ. ರಾಜಕಾಲುವೆ ಒತ್ತುವರಿ ಕಾರ್ಯವನ್ನು ತಡೆಯುವಲ್ಲಿ ಬಿಬಿಎಂಪಿಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿನ ಕೆರೆಗಳನ್ನು ಸಂಪರ್ಕಿಸುವ ಹಲವು ರಾಜಕಾಲುವೆಗಳನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಅಕ್ರಮವಾಗಿ ನೀರು ಹರಿಯುವ ಮಾರ್ಗವನ್ನು ಬದಲಾಯಿಸಿರುವ, ಅತಿಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ, ಅಗಲವಾಗಿರುವ ರಾಜಕಾಲುವೆಯನ್ನು ದೊಡ್ಡ ವಾಣಿಜ್ಯ ಕಟ್ಟಡ, ಅಪಾರ್ಟ್ ಮೆಂಟ್ ಹಾಗೂ ಪ್ರಭಾವಿಗಳ ನಿರ್ಮಾಣ ಕಾರ್ಯಗಳಿಗಾಗಿ ಅವರ ಅನುಕೂಲಕ್ಕೆಂದು ಪಾಲಿಕೆ ಬೃಹತ್ ನೀರುಗಾಲುವೆ ಭ್ರಷ್ಟ ಅಧಿಕಾರಿಗಳು ಕೆಲವು ಕಡೆಗಳಲ್ಲಿ ಅದರ ವಿಸ್ತೀರ್ಣ ಕಡಿಮೆಗೊಳಿಸಿ ಪುನಃ ಸ್ವಲ್ಪ ದೂರದ ಬಳಿಕ ದೊಡ್ಡದಾಗಿ ರಾಜಕಾಲುವೆ ನಿರ್ಮಾಣ ಮಾಡಿರುವ ಹೀಗೆ ನಾನಾ ಕಾರಣಗಳಿಗಾಗಿ ನಗರದಲ್ಲಿನ ಸರಪಳಿ ವ್ಯವಸ್ಥೆ ಹೊಂದಿದ ಕೆರೆಗಳು ಒಂದಕ್ಕೊಂದು ಸಂಪರ್ಕ ಕಡಿದುಕೊಂಡಿರುವುದೇ ಪ್ರತಿ ಬಾರಿ ನಿರಂತರವಾಗಿ ಜೋರು ಮಳೆಯಾದರೆ ಕೆರೆ ಉಕ್ಕಿ, ರಾಜಕಾಲುವೆ ಉಕ್ಕಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.
ಮುಖ್ಯ ಪ್ರಧಾನ ಎಂಜಿನಿಯರ್ ಗೆ ಹೆಚ್ಚುವರಿ 4 ಸಿಇ ಹುದ್ದೆ ಏಕೆ? :
ಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಹಲವು ಅರ್ಹರಾದ ಹಲವು ಎಂಜಿನಿಯರ್ ಗಳಿದ್ದಾರೆ. ಆದರೆ ಬಿಬಿಎಂಪಿ ಮುಖ್ಯ ಪ್ರಧಾನ ಎಂಜಿನಿಯರ್ ಹುದ್ದೆಯಲ್ಲಿರುವ ಪ್ರಹ್ಲಾದ್ ಅವರಿಗೇ ಪಾಲಿಕೆಯ ರಸ್ತೆ ಮತ್ತು ಮೂಲ ಸೌಕರ್ಯ, ಬೃಹತ್ ನೀರುಗಾಲುವೆ, ಕೆಸಿ ವ್ಯಾಲಿ ಹಾಗೂ ಬೆಂಗಳೂರು ಸ್ಮಾರ್ಟ್ ಸಿಟಿ ಚೀಫ್ ಎಂಜಿನಿಯರ್ ಗಳ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಪಾಲಿಕೆಯಲ್ಲಿ ಮುಖ್ಯ ಆಯುಕ್ತರು, ಆಡಳಿತಾಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ, ಮುಖ್ಯ ಕಾರ್ಯದರ್ಶಿಗಳು ಹೀಗೆ ಬಿಬಿಎಂಪಿ, ರಾಜ್ಯ ಸರ್ಕಾರದೊಂದಿಗೆ ಕಾರ್ಯನಿರ್ವಹಿಸುವಲ್ಲೇ ಮುಖ್ಯ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ಅವರಿಗೆ ಹೆಚ್ಚು ಸಮಯ ಹಿಡಿಯುವಾಗ ಮತ್ತೆ ಹೆಚ್ಚುವರಿಯಾಗಿ ಈ ನಾಲ್ಕು ಚೀಫ್ ಎಂಜಿನಿಯರ್ ಹುದ್ದೆಗಳನ್ನು ನೀಡಿರುವುದರಿಂದ ರಾಜಧಾನಿಯಲ್ಲಿ ಪ್ರಮುಖ ರಸ್ತೆ, ಬೃಹತ್ ನೀರುಗಾಲುವೆ ವಿಚಾರದಲ್ಲಿ ಸೂಕ್ತ ಮೇಲ್ವಿಚಾರಣೆ ನಡೆಸಲು ಸಾಧ್ಯವಾಗದೆ ನಗರದಲ್ಲಿ ಮಳೆ ಬಂದಾಗಲೆಲ್ಲಾ ಬೆಂಗಳೂರು ಸಂಕಷ್ಟ ಅನುಭವಿಸುತ್ತಿದೆ. ಪೂರ್ಣ ರೂಪದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇನ್ನೂ ಆಗಿಲ್ಲ. ಈ ಕಾರಣದಿಂದಾಗಿ ಬಿಬಿಎಂಪಿ ಜನರ ಹಿಡಿಶಾಪಕ್ಕೆ ಗುರಿಯಾಗಿದೆ ಎಂದು ಸಾಕಷ್ಟು ದೂರುಗಳು ಕೇಳಿಬಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಉಳಿದ 6 ವಲಯಗಳಲ್ಲಿ ತುಂಬಿದ ಕೆರೆಗಳು ಹಾಗೂ ಪ್ರಮುಖ ಕೆರೆಗಳ ಹೆಸರು, ಅವುಗಳ ವಿಸ್ತೀರ್ಣ ಹಾಗೂ ಅದರಲ್ಲಿನ ನೀರಿನ ಪ್ರಮಾಣದ ವಿವರ ಈ ಕೆಳಕಂಡಂತಿದೆ :
ಬೊಮ್ಮನಹಳ್ಳಿ ವಲಯದಲ್ಲಿ 44 ಕೆರೆಗಳ ಪೈಕಿ 10 ಕೆರೆಗಳು ತುಂಬಿದೆ | ||
ಪ್ರಮುಖ ಕೆರೆಗಳ ಹೆಸರು | ಕೆರೆಯ ವಿಸ್ತೀರ್ಣ | ಕೆರೆಯಲ್ಲಿ ನೀರು ತುಂಬಿದ ಪ್ರಮಾಣ |
ಬೇಗೂರು ಕೆರೆ | 137 ಎಕರೆ | ಶೇ.41.67 |
ಹುಳಿಮಾವು ಕೆರೆ | 140.17 ಎಕರೆ | ಶೇ.25 |
ವೆಂಕೋಜಿರಾವ್ ಕೆರೆ | 142.29 ಎಕರೆ | ಶೇ.100 |
ಬೆಂಗಳೂರು ದಕ್ಷಿಣ ವಲಯದಲ್ಲಿ 7 ಕೆರೆಗಳ ಪೈಕಿ 1 ಕೆರೆ ತುಂಬಿದೆ | ||
ಮಡಿವಾಳ ಕೆರೆ | 268.2 ಎಕರೆ | ಶೇ.100 |
ಪೂರ್ವ ವಲಯದಲ್ಲಿ 1 ಕೆರೆಯಿದ್ದು ಪೂರ್ಣ ರೂಪದಲ್ಲಿ ತುಂಬಿದೆ | ||
ಅಲಸೂರು ಕೆರೆ | 106 ಎಕರೆ | ಶೇ.100 |
ರಾಜರಾಜೇಶ್ವರಿ ನಗರ ವಲಯದಲ್ಲಿ 34 ಕೆರೆಗಳ ಪೈಕಿ 15 ಕೆರೆಗಳು ತುಂಬಿದೆ | ||
ಜೆ.ಪಿ.ಪಾರ್ಕ್ | 103.22 ಎಕರೆ | ಶೇ.100 |
ಕನ್ನಹಳ್ಳಿ ಕೆರೆ | 68 ಎಕರೆ | ಶೇ.100 |
ಹೊಸಕೆರೆಹಳ್ಳಿ ಕೆರೆ | 59.26 ಎಕರೆ | ಶೇ.83.33 |
ಉಲ್ಲಾಳ ಕೆರೆ | 26 ಎಕರೆ | ಶೇ.63.75 |
ಹೇರೋಹಳ್ಳಿ ಕೆರೆ | 34 ಎಕರೆ | ಶೇ.100 |
ದಾಸರಹಳ್ಳಿ ವಲಯದಲ್ಲಿ 11 ಕೆರೆಗಳ ಪೈಕಿ 5 ಕೆರೆಗಳು ತುಂಬಿದೆ | ||
ಕರಿವೋಬನಹಳ್ಳಿ ಕೆರೆ | 53.24 ಎಕರೆ | ಶೇ.100 |
ದಾಸರಹಳ್ಳಿ ಕೆರೆ | 27.33 ಎಕರೆ | ಶೇ.100 |
ಚಿಕ್ಕಬಾಣಾವರ ಕೆರೆ | 105.15 ಎಕರೆ | ಶೇ.10.53 |
ಪಶ್ಚಿಮ ವಲಯದಲ್ಲಿ 2 ಕೆರೆಗಳ ಪೈಕಿ ಯಾವುದು ಶೇ.100ರಷ್ಟು ತುಂಬಿಲ್ಲ | ||
ಸ್ಯಾಂಕಿ ಕೆರೆ | 46.19 ಎಕರೆ | ಶೇ.78.26 |
ನಾಯಂಡಹಳ್ಳಿ ಕೆರೆ | 15.08 ಎಕರೆ | ಶೇ.75.48 |
ಕಳೆದ 22 ದಿನಗಳಲ್ಲಿ 123 ವರ್ಷಗಳಲ್ಲೇ 5ನೇ ಅತಿಹೆಚ್ಚು ಮಳೆ :
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 183 ಕೆರೆಗಳ ಪೈಕಿ ಬಹುತೇಕ ಕೆರೆಗಳು ಸಣ್ಣ ಕೆರೆಗಳೇ ಈ ಬಾರಿ ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಗೆ ತುಂಬಿ ಕೊಂಡಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅಕ್ಟೋಬರ್ 1 ರಿಂದ 22ರ ತನಕ ವಾಡಿಕೆ ಮಳೆ 11.8 ಸೆಂಟಿಮೀಟರ್ ಮಳೆಯಾಗುತ್ತೆ. ಆದರೆ ಈ ಬಾರಿ 24.01 ಸೆಂ.ಮೀ ಮಳೆಯಾಗಿದೆ. 1901ನೇ ಇಸವಿಯಿಂದ 2024ರ ಇಸವಿಯ ತನಕ ಈ ಅವಧಿಯಲ್ಲಿ ಅತಿಹೆಚ್ಚು ಮಳೆಯಾಗಿ ದಾಖಲೆ ನಿರ್ಮಾಣವಾಗಿದ್ದು 2005ರ ಇಸವಿಯಲ್ಲಿ. ಆಗ 29.01 ಸೆಂ.ಮೀ ಮಳೆಯಾಗಿತ್ತು. 1943ರಲ್ಲಿ 28.7 ಸೆಂ.ಮೀ ಹಾಗೂ 1970ನೇ ಇಸವಿಯಲ್ಲಿ 25.3 ಸೆಂ.ಮೀ ಮಳೆಯಾಗಿದೆ. ಇದಾದ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದ್ದು 2024ರ ಈ ಅವಧಿಯಲ್ಲಿ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಮುಖ ಕೆರೆಗಳಿಗೆ ತೂಬು ಕಾಲುವೆ ನಿರ್ಮಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ? :
ಈ ಹಿಂದೆ ನಗರದಲ್ಲಿ ಭಾರೀ ಮಳೆಯಾಗಿ ಕೆರೆಗಳಲ್ಲಿ ಕೋಡಿ ಹರಿದು ತಗ್ಗು ಪ್ರದೇಶಗಳ ಮನೆಗಳಿಗೆ, ರಸ್ತೆ, ಖಾಲಿ ಜಾಗಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣ ನಷ್ಟವಾದಾಗ ಹಿಂದಿನ ಬಿಜೆಪಿ ಸರ್ಕಾರ ಪ್ರಮುಖ ಕೆರೆಗಳಿಗೆ 36 ಕೋಟಿ ರೂ. ವೆಚ್ಚದಲ್ಲಿ ತೂಬು ಕಾಲುವೆ (ತನ್ನ ಕೆಳಗೆ ನೀರು ಹರಿಯುವುದಕ್ಕೆ ಅವಕಾಶ ಕೊಡುವ ಚಲಿಸಬಲ್ಲ ದ್ವಾರವನ್ನು ಸೂಚಿಸುತ್ತದೆ.) ಅಳವಡಿಸುವ ಯೋಜನೆಯನ್ನು ಜಾರಿಗೆ ತಂದಿತ್ತು. ಅದಾದ ಬಳಿಕ ಬಂದ ಕಾಂಗ್ರೆಸ್ ಸರ್ಕಾರ ತೂಬು ನಿರ್ಮಾಣಕ್ಕೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದ ಕಾರಣ, ಹೇಗೊ ಸಿಕ್ಕ ಅನುದಾನದಲ್ಲಿ ಬಿಬಿಎಂಪಿಯ ಕೆರೆ ವಿಭಾಗ ಕೇವಲ 9 ಕೆರೆಗಳಿಗೆ ತೂಬು ಅಳವಡಿಸಿದೆ. ಜಕ್ಕೂರು ಕೆರೆ, ದೊಡ್ಡನೆಕ್ಕುಂದಿ ಕೆರೆ, ಇನ್ನು 10 ತೂಬುಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪ್ರತಿಯೊಂದು ತೂಬು ನಿರ್ಮಾಣಕ್ಕೆ ತಲಾ 25 ಲಕ್ಷ ರೂ. ವೆಚ್ಚವಾಗುತ್ತದೆ.
ಉಳಿದಂತೆ 83 ಕೆರೆಗಳಿಗೆ ತೂಬು ನಿರ್ಮಾಣ ಕಾರ್ಯಕ್ಕೆ ಕೆರೆ ವಿಭಾಗದ ವಿಶೇಷ ಆಯುಕ್ತರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆರೆಗಳಿಗೆ ತೂಬುಗಳಿದ್ದಲ್ಲಿ ಅಗತ್ಯ ಪ್ರಮಾಣದಲ್ಲಿ ನೀರು ಸಂಗ್ರಹಕ್ಕೆ ಹಾಗೂ ಹೆಚ್ಚಾದ ನೀರನ್ನು ಹೊರಗೆ ಬಿಡುವಲ್ಲಿ ಪ್ರಮುಖವಾಗಿದೆ. ನಗರದಲ್ಲಿನ 183 ಕೆರೆಗಳಲ್ಲಿ ಕೆಲವೊಮ್ಮೆ ಕೆರೆ ತುಂಬಿದರೂ ತೂಬಿಲ್ಲದ ಕಾರಣ ಅಗತ್ಯ ಪ್ರಮಾಣದ ನೀರು ಸಂಗ್ರಹಕ್ಕೆ ಅವಕಾಶವಿಲ್ಲದೆ ಅನಗತ್ಯವಾಗಿ ನೀರು ಕೋಡಿ ಹರಿದು ಹೋಗುತ್ತಿದೆ. ಬೇಸಿಗೆ ಕಾಲದಲ್ಲಿ ಕೆರೆಯಲ್ಲಿ ನೀರು ಸಂಗ್ರವಿಲ್ಲದೆ ಕೆರೆ ಬತ್ತಿ ಹೋಗುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ತೂಬು ನಿರ್ಮಾಣದಲ್ಲಿ ಹಾಗೂ ಸೂಕ್ತ ರೀತಿಯಲ್ಲಿ ಮಳೆ ನೀರು ರಾಜಕಾಲುವೆಯಲ್ಲಿ ಹರಿದು ಕೆರೆ ಸೇರಿ ಅಲ್ಲಿಂದ ಮತ್ತೊಂದು ಕೆರೆ ರಾಜಕಾಲುವೆಯ ಮೂಲಕ ಸರಾಗವಾಗಿ ಹರಿಯಲು ಅನುವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯವಹಿಸಿರುವುದರಿಂದ ಭಾರೀ ಮಳೆಯಾದಾಗ ನಗರದಲ್ಲಿ ಪದೇ ಪದೇ ಸಮಸ್ಯೆ ಎದುರಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದೆ. ಇನ್ನಾದರೂ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.