ಬೆಂಗಳೂರು, ಅ.20 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಆಕಾಶವೇ ಬಾಯ್ಬಿಟ್ಟಂತೆ ಕಳೆದ ರಾತ್ರಿಯಿಂದ ಧೋ ಎಂದು ಸುರಿಯುತ್ತಿರುವ ಮಳೆ ಬೆಳಗ್ಗೆ 6.30ರ ತನಕವೂ ಬಿಟ್ಟು ಬಿಡದಂತೆ ಸುರಿಯುತ್ತಿದೆ. ನಿರಂತರ ಮಳೆಗೆ ನಗರ ತಗ್ಗು ಪ್ರದೇಶ, ಪ್ರಮುಖ ರಸ್ತೆ, ವಾರ್ಡ್ ಗಳ ರಸ್ತೆಗಳಲ್ಲಿ ನೀರು ನಿಂತು ಜನ ಹಾಗೂ ವಾಹನ ಸಂಚಾರಕ್ಕೆ ತೊಡಕಾಗಿದೆ.
ಇಂದು ಬೆಳಗ್ಗೆ 7.30ರ ವರುಣಮಿತ್ರ ವರದಿ ಪ್ರಕಾರ ನಗರದಲ್ಲಿ ಅತಿಹೆಚ್ಚು ಮಳೆ ಕೆಂಗೇರಿಯಲ್ಲಿ ದಾಖಲಾಗಿದ್ದು 139.50 ಮಿ.ಮೀ ಮಳೆಯಾಗಿದೆ. ರಾಜರಾಜೇಶ್ವರಿನಗರದಲ್ಲಿ 106 ಮಿ.ಮೀ, ಹೆಮ್ಮಿಗೆಪುರದಲ್ಲಿ 63 ಮಿ.ಮೀ, ಪುಟ್ಟೇನಹಳ್ಳಿಯ ದೊರೆಸಾನಿಪಾಳ್ಯದಲ್ಲಿ 63 ಮಿ.ಮೀ, ಕೋಣನಕುಂಟೆಯಲ್ಲಿ 50.50 ಮಿ.ಮೀ ಮಳೆಯೂ ಸೇರಿದಂತೆ ನಗರದ 49 ಸ್ಥಳಗಳಲ್ಲಿ 10 ಮಿ.ಮೀಗಿಂತ ಹೆಚ್ಚು ಮಳೆಯಾಗಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC)ದ ಮುನ್ಸೂಚನೆಯಂತೆ ಅ.22ರ ಬೆಳಗ್ಗೆ 8.30ರ ವರೆಗೆ 15.60 ಮಿ.ಮೀ ನಿಂದ 64.4 ಮಿ.ಮೀವರೆಗೆ ಬಹುತೇಕ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ವರದಿ ಮಾಡಿದೆ.