ಬೆಂಗಳೂರು, ಅ.18 www.bengaluruwire.com : ಐಟಿ ಸಿಟಿ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವವರು ಸಮಯ ಸಿಗದ ಕಾರಣ ಎಷ್ಟೋ ರೆಡಿ ಟು ಈಟ್, ದರ್ಶಿನಿ, ಹೋಟೆಲ್ ಗಳಲ್ಲಿ ಪಾರ್ಸಲ್ ತೆಗೆದುಕೊಂಡು ಹೋಗುವವರೇ ಹೆಚ್ಚು. ದೊಡ್ಡ ದುಡಿಯುವ ಜನಸಂಖ್ಯೆ, ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಹಾಲು ಮಹಾಮಂಡಳ (KMF)ದ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಇಡ್ಲಿ- ದೋಸೆ ಹಿಟ್ಟನ್ನು ಪ್ಯಾಕಿಂಗ್ ರೂಪದಲ್ಲಿ ಮಾರುಕಟ್ಟೆಗೆ ಸದ್ಯದಲ್ಲೆ ಪರಿಚಯಿಸುತ್ತಿದೆ.
ನಂದಿನಿ ಬ್ರಾಂಡ್ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬೆಂಗಳೂರಿನಲ್ಲಿ ಪರಿಚಯಿಸಲು ಸಜ್ಜಾಗಿದೆ. ಇದೇ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಉತ್ಪನ್ನಕ್ಕೆ ಚಾಲನೆ ನೀಡಲಿದ್ದಾರೆ. ಇದಾದ ಎಂಟತ್ತು ದಿನಗಳಲ್ಲಿ ನಂದಿನಿ ಔಟ್ ಲೆಟ್, ವಿವಿಧ ಪ್ರಮುಖ ಅಂಗಡಿಗಳಲ್ಲಿ ಬೆಂಗಳೂರು ಮಾರುಕಟ್ಟೆಯಲ್ಲಿ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟು ಸಿಗಲಿದೆ.
ಈ ಕುರಿತಂತೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಬೆಂಗಳೂರು ವೈರ್ ಜೊತೆ ಮಾತನಾಡುತ್ತಾ, “ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟುಗಳನ್ನು 450 ಗ್ರಾಂ ಮತ್ತು 900 ಗ್ರಾಂ ಪ್ಯಾಕ್‌ಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಸಿಗುವ ಇತರ ಸಿದ್ದ ಹಿಟ್ಟಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಹಾಗೂ ದರವೂ ಕಡಿಮೆಯಿರಲಿದೆ. ಸದ್ಯ ಇನ್ನೂ ದರ ನಿಗದಿಪಡಿಸಿಲ್ಲ. ಸದ್ಯದಲ್ಲೇ ದರ ನಿಗದಿ ಮಾಡುತ್ತೇವೆ.”
“ಬೆಂಗಳೂರು ನಗರಕ್ಕೆ ಇಡ್ಲಿ ಮತ್ತು ದೋಸೆ ಹಿಟ್ಟುಗಳನ್ನು ಪ್ಯಾಕಿಂಗ್ ಮಾಡಲು ಜಯನಗರದಲ್ಲಿ ಪ್ಯಾಕಿಂಗ್ ಘಟಕವೊಂದನ್ನು ತೆರೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ದಿನಾಂಕವನ್ನು ಕೋರಿದ್ದೇವೆ. ಇದು ಶೀಘ್ರದಲ್ಲೇ ಸಿಗಲಿದೆ. ಮುಂದಿನ ವಾರದೊಳಗೆ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರಲಿವೆ. ನಾವು ಅದನ್ನು ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸುತ್ತೇವೆ. ಪ್ರತಿದಿನ 10 ಸಾವಿರದಿಂದ 20 ಸಾವಿರ ಕೆ.ಜಿ ಹಿಟ್ಟನ್ನು ಮಾರಾಟ ಮಾಡುವ ಉದ್ದೇಶವಿದೆ” ಎಂದು ಅವರು ಹೇಳಿದ್ದಾರೆ.
ತನ್ನ ಈ ನೂತನ ಇಡ್ಲಿ ಮತ್ತು ದೋಸೆ ಹಿಟ್ಟಿನ ಉತ್ಪನ್ನದ ಬಿಡುಗಡೆಯೊಂದಿಗೆ, ನಂದಿನಿಯು ಎಂಟಿಆರ್ ಮತ್ತಿತರ ಪ್ರಮುಖ ಸ್ಪರ್ಧಿಗಳಿಗೆ ಸ್ಪರ್ಧೆ ನೀಡಲು ಸಜ್ಜಾಗುತ್ತಿದೆ. ಈ ವರ್ಷದ ಆಗಸ್ಟ್‌ನಲ್ಲಿ ಯೋಜಿಸಲಾಗಿದ್ದ ಉದ್ಘಾಟನೆ ಮಾಡಲು ನಿರ್ಧರಿಸಿದ್ದರೂ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ನಗರದಲ್ಲಿ ಬಹುದೊಡ್ಡ ದುಡಿಯುವ ವರ್ಗ ಹಾಗೂ ಐಟಿ ವೃತ್ತಿಪರರು ಇದ್ದಾರೆ. ಅದಕ್ಕಿಂತ ಮುಖ್ಯವಾಗಿ ಬಹು ಮಂದಿಯ ಬೆಳಗಿನ ಉಪಾಹಾರ ಸಾಮಾನ್ಯವಾಗಿ ಇಡ್ಲಿ ಹಾಗೂ ದೋಸೆ ಆಗಿರುವ ಕಾರಣ ಇವುಗಳ ಹಿಟ್ಟನ್ನು ನಂದಿನಿ ಬ್ರಾಂಡ್ ಅಡಿ ಕೆಎಂಎಫ್ ಪರಿಚಯಿಸಲು ತೀರ್ಮಾನಿಸಿದೆ.