ಬೆಂಗಳೂರು, ಅ.18 www.bengaluruwire.com : ಅಕ್ಟೋಬರ್ ತಿಂಗಳ ಒಳಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ತುರ್ತು ಆಸ್ತಿ ನೋಂದಣಿಗಾಗಿ ಅಂತಿಮ ಇ-ಖಾತಾ ಪಡೆಯಲು ಬಿಬಿಎಂಪಿಯಲ್ಲಿ ಎಲ್ಲಾ ದಾಖಲೆಗಳನ್ನು ಆನ್ ಲೈನ್ ನಲ್ಲಿ ಅಪಲೋಡ್ ಮಾಡಿದಲ್ಲಿ ಒಂದೇ ದಿನದಲ್ಲಿ ಅಂತಿಮ ಇ-ಖಾತಾ ನೀಡಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಂದಾಯ ವಿಭಾಗಕ್ಕೆ ಸೂಚಿಸಿದ್ದಾರೆ.
ಬಿಬಿಎಂಪಿ ಅಂತಿಮ ಇ-ಖಾತಾವನ್ನು ಪಡೆಯಲು ಸ್ವತ್ತಿನ ಮಾಲೀಕರು ಈ ಕೆಳಗಿನ ವಿಧಾನವನ್ನು ಅನುಸರಿಸಬೇಕು :
1. ಆನ್‌ಲೈನ್ https://BBMPeAasthi.karnataka.gov.in ನಲ್ಲಿ ವಾರ್ಡ್‌ವಾರು ಇ-ಖಾತಾ ಪಟ್ಟಿಯಿಂದ ನಿಮ್ಮ ಕರಡು ಇ-ಖಾತಾ ಅನ್ನು ಮೊದಲಿಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು.
2. ತಮ್ಮ ಸ್ವತ್ತಿನ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಹೆಸರು ಮತ್ತು ಸ್ವತ್ತಿನ ಅರ್ಜಿ ಸಂಖ್ಯೆಯನ್ನು ತಿಳಿದುಕೊಳ್ಳಬಹುದು.
3. ಅಂತಿಮ ಇ-ಖಾತಾ ಪಡೆಯಲು ಕೆಳಗಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಿ/ಅಪ್‌ಲೋಡ್ ಮಾಡಬೇಕು :
(i) ತಮ್ಮ ಸ್ವತ್ತಿನ ಆಸ್ತಿತೆರಿಗೆ ಅರ್ಜಿ ಸಂಖ್ಯೆಯ 10-ಅಂಕಿಗಳು.
(ii) ಮಾಲೀಕರ ಆಧಾರ್ ಆಧಾರಿತ eKYC (ಇ-ಖಾತಾ ನಲ್ಲಿರುವ ಎಲ್ಲಾ ಮಾಲೀಕರು ಇಕೆವೈಸಿ ಮಾಡಬೇಕಾಗಿದೆ. ಯಾವುದೇ ಮಾಲೀಕರು ಆಧಾರ್ ಹೊಂದಿಲ್ಲದಿದ್ದರೆ, ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಬೇಟಿ ನೀಡಿ ಪಾಸ್‌ಪೋರ್ಟ್ ಅಥವಾ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಬಳಸಿ ದೃಢೀಕರಿಸಬೇಕು).
(iii) ಮಾಲೀಕರು ಆಸ್ತಿಯನ್ನು ಪಡೆದ ನೋಂದಾಯಿತ ಪತ್ರದ ಸಂಖ್ಯೆ ನಮೂದಿಸಬೇಕು (ಕ್ರಯ/ದಾನ ಪತ್ರ ಇತ್ಯಾದಿ ಮಾರ್ಗದಲ್ಲಿ) (ಕಾವೇರಿ ತಂತ್ರಾಂಶದಿಂದ ನೋಂದಾಯಿತ ಪತ್ರ ಮಾಹಿತಿಯನ್ನು ಪಡೆಯಲಾಗುವುದು)
(iv) ಆಸ್ತಿಯ ಹಕ್ಕು ನಿರೂಪಿಸುವ ನೋಂದಾಯಿತ ಪತ್ರವು, ನೋಂದಣಿ ದಿನಾಂಕದ ಒಂದು ದಿನದ ಹಿಂದಿನಿಂದ ಅಕ್ಟೋಬರ್ 18 ವರೆಗಿನ ಆಸ್ತಿಯ ಋಣಭಾರ ಪ್ರಮಾಣಪತ್ರ.
(v) ಆಸ್ತಿಯ ಮಾಲೀಕರು, ಆಸ್ತಿಯ ಹೊರಗೆ ಹಾಗೂ ಮುಂದೆ ನಿಂತಿರುವ ಆಸ್ತಿಯ ಛಾಯಾಚಿತ್ರ.
(vi) ಬೆಸ್ಕಾಂ (BESCOM) ಸಂಸ್ಥೆಯ 10-ಅಂಕಿಯ ಖಾತೆಯ ಐಡಿ (BESCOM ಬಿಲ್ ನೋಡಿ & ಖಾಲಿ ಭೂಮಿಗೆ ಇದು ಕಡ್ಡಾಯವಲ್ಲ).
(vii) ಬಿಡಬ್ಲ್ಯುಎಸ್ಎಸ್ ಬಿ ಮಾಹಿತಿ ಅಪಲೋಡ್ (BWSSB) (ಐಚ್ಛಿಕ).
4. ಮೇಲೆ ತಿಳಿಸಿರುವಂತೆ ಮಾಹಿತಿ ಹಾಗೂ ದಾಖಲೆಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ, ಸಲ್ಲಿಸಿದ ನಂತರ, ಎಲ್ಲವೂ ಕ್ರಮದಲ್ಲಿದ್ದರೆ, ಒಂದೇ-ದಿನದಲ್ಲಿ ಅಂತಿಮ ಇ-ಖಾತಾ ವನ್ನು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಅವರನ್ನು ಭೇಟಿ ಮಾಡಿ ಪಡೆಯಬಹುದು.
5. ಮೇಲಿನ ವಿಧಾನವನ್ನು ಪೂರ್ಣಗೊಳಿಸಲು ಯಾವುದೇ ಸವಾಲುಗಳಿದ್ದಲ್ಲಿ ಮತ್ತು ನೀವು ತುರ್ತು ನೋಂದಣಿಯನ್ನು ಹೊಂದಿದ್ದರೆ, ತಮ್ಮ ಎಲ್ಲಾ ದಾಖಲೆಗಳು ಮತ್ತು ಪ್ರಸ್ತುತ ಮೇಲೆ ತಿಳಿಸಲಾದ ಕಾಲಾವಧಿಯ ಋಣಭಾರ ಪ್ರಮಾಣಪತ್ರವನ್ನು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಅಲ್ಲಿ ಸಹಾಯ ಫಲಕದ ಸಿಬ್ಬಂದಿಯು ತಮಗೆ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಮತ್ತು ಒಂದು ದಿನದಲ್ಲಿ ನಿಯಮಗಳ ಪ್ರಕಾರ ನಿಮಗೆ ಅಂತಿಮ ಇ-ಖಾತಾಯನ್ನು ಹೊಂದಲು ಅವರ ಸಹಾಯವನ್ನು ಪಡೆಯಬಹುದು ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
6. ಸಾರ್ವಜನಿಕರಿಗೆ ಸೂಚನೆ: ಉಪ-ನೋಂದಣಾಧಿಕಾರಿ ಕಛೇರಿಯಲ್ಲಿ ತುರ್ತು ಆಸ್ತಿ ನೋಂದಣಿಯನ್ನು ಹೊಂದಿರದ ನಾಗರಿಕರು, ಬಿಬಿಎಂಪಿ ಹಿಂಬರಹದ ಮೂಲಕ ನಿರ್ದಿಷ್ಟವಾಗಿ ಸೂಚಿನೆಯ ಹೊರತು ಅಂತಿಮ ಇ-ಖಾತಾವನ್ನು ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಹೋಗದಂತೆ ವಿನಂತಿಸಲಾಗಿದೆ. ಅಂತಹ ಪ್ರಕರಣಗಳಲ್ಲಿ ತಮ್ಮ ಅಗತ್ಯಕ್ಕೆ ಅನುಕೂಲದ ಸಮಯದಲ್ಲಿ ತಮ್ಮ ಅಂತಿಮ ಇ-ಖಾತಾವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಅಂತಹ ಸಂದರ್ಭಗಳಲ್ಲಿ ಋಣಭಾರ ಪ್ರಮಾಣಪತ್ರ (EC) ಅಗತ್ಯವನ್ನು ಕೈಬಿಡಲಾಗಿದೆ. ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗಾಗಿ 1533 ಗೆ ಕರೆ ಮಾಡಿ ಅಥವಾ [email protected] ಗೆ ಇಮೇಲ್ ಮಾಡಬಹುದು.
ಬಿಬಿಎಂಪಿ ಕಂದಾಯ ವಿಭಾಗದ ನೌಕರರಿಗೆ ಕಾರ್ಯಾಗಾರ :
ಅ.1 ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಆಸ್ತಿ ವ್ಯವಸ್ಥೆ ಜಾರಿಗೊಳಿಸಿದ ಹಿನ್ನಲೆಯಲ್ಲಿ ನಾಗರೀಕರಿಗೆ ಇ-ಆಸ್ತಿಯ ತ್ವರಿತ ಹಾಗೂ ಸುಗಮ ವಿತರಣೆಗಾಗಿ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿ ಮತ್ತು ನೌಕರರಿಗೆ ಇಂದು ಎನ್.ಆರ್. ಕಾಲೋನಿಯ ಡಾ.ಸಿ ಅಶ್ವತ್ಥ್ ಕಲಾಭವನದಲ್ಲಿ, ಕಂದಾಯ ವಿಭಾಗದ ಜಂಟಿ ಆಯುಕ್ತೆಯಾದ ಲಕ್ಷ್ಮೀದೇವಿ ನೇತೃತ್ವದಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಇ-ಖಾತಾ ನೀಡುವ ವಿಚಾರವಾಗಿ ನಗರದ ನಡೆದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು,
ಬಿಬಿಎಂಪಿ ವ್ಯಾಪ್ತಿಯಲ್ಲಿ ತುರ್ತಾಗಿ ಇ-ಖಾತಾ ಪಡೆಯಲು ಬರುವ ಆಸ್ತಿ ಮಾಲೀಕರಿಗೆ ಸರಿಯಾಗಿ ಸ್ಪಂದಿಸಬೇಕು. ಬೆಂಗಳೂರಿನ ಆಸ್ತಿ ಮಾಲೀಕರಿಗೆ ಇ-ಆಸ್ತಿ ಸೇವೆಗಳ ಸುಗಮ ವಿತರಣೆ ಹಾಗೂ ತುರ್ತು ಸಂದರ್ಭಗಳಲ್ಲಿ ನೋಂದಣಿ ಪ್ರಕರಣಗಳಿಗೆ ಆದ್ಯತೆಯನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ 21 ಲಕ್ಷಕಿಂತಲೂ ಹೆಚ್ಚು ಆಸ್ತಿಗಳನ್ನು ಡಿಜೀಟಲಿಕರಣಗೊಳಿಸಲಾಗಿದ್ದು, ಅ.1ನೇ ತಾರೀಖಿನಿಂದ ಜಾರಿಗೆ ಬರುವಂತೆ ಇ-ಆಸ್ತಿ ವ್ಯವಸ್ಥೆಗೆ ಒಳಪಡಿಸಿ bbmp.eaasthi.karnataka.gov.in ನಲ್ಲಿ ರಚಿಸಿ ಇರಿಸಲಾಗಿದೆ ಎಂದರು.
ಇ-ಖಾತಾ ಪಡೆಯಲು ಹೆಲ್ಪ್ ಡೆಸ್ಕ್:
ಆಸ್ತಿ ನೊಂದಣಿ ಮಾಡಿಸುವವರಿಗೆ ಶೀಘ್ರವಾಗಿ ಇ-ಖಾತಾ ಪಡೆಯುವ ಸಲುವಾಗಿ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಗಳಲ್ಲಿ ಹೆಲ್ಪ್ ಡೆಸ್ಕ್ (Help Desk) ತೆರೆಯಲಾಗಿದ್ದು, ಈ ಮೂಲಕ ಶೀಘ್ರವಾಗಿ ಇ-ಖಾತಾ ಬಗ್ಗೆ ಅಗತ್ಯ ಮಾಹಿತಿ ಪಡದು ಇ-ಖಾತಾ ಪಡೆಯಬಹುದಾಗಿದೆ. ತುರ್ತಾಗಿ ಆಸ್ತಿ ನೋಂದಣಿ ಮಾಡಿಸುವವರಿಗೆ ಹಾಗೂ ಅನಿವಾಸಿ ಭಾರತೀಯರಿಗೆ ಯಾವುದೇ ತೊಂದರೆ ಆಗದಂತೆ ಅತಿ ಶೀಘ್ರದಲ್ಲಿ ಇ-ಖಾತಾ ವಿತರಿಸುವ ಸಲುವಾಗಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿನ ಹೆಲ್ಪ್ ಡೆಸ್ಕ್ ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ನೆರವಾಗುವಂತೆ ಸೂಚಿಸಿದರು.
8 ವಲಯಗಳ ಅಧಿಕಾರಿಗಳೊಂದಿಗೆ ಕಾರ್ಯಗಾರ:
ಇ-ಖಾತಾ ನೀಡುವ ವಿಚಾರವಾಗಿ ಪಾಲಿಕೆಯ ಎಂಟೂ ವಲಯಗಳಲ್ಲಿ ಬರುವ ಕಂದಾಯ ವಿಭಾಗದ ಉಪ ಆಯುಕ್ತರು, ಸಹಾಯಕ ಕಂದಾಯ ಅಧಿಕಾರಿಗಳು, ವಿಷಯ ನಿರ್ವಾಕರುಗಳು, ಎನ್.ಐ.ಸಿ ಅಧಿಕಾರಿಗಳು ಸೇರಿದಂತೆ 350ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಗಾರದಲ್ಲಿದ್ದರು.