ಮಡಿಕೇರಿ, ಅ.17 www.bengaluruwire.com : ಭಕ್ತರ ಜಯಘೋಷ, ಅರ್ಚಕರ ವೇದ ಮಂತ್ರಘೋಷಗಳ ಮಧ್ಯೆ ತಲಕಾವೇರಿಯ (Tala Kaveri) ಬ್ರಹ್ಮ ಕುಂಡಿಕೆಯಲ್ಲಿ ಗುರುವಾರ ಬೆಳಗ್ಗೆ 7.41 ನಿಮಿಷಕ್ಕೆ ಸರಿಯಾಗಿ ತೀರ್ಥೋದ್ಭವಾಗಿ ಕಾವೇರಿ (Cauvery) ದರ್ಶನ ನೀಡಿದಳು.
ಕೊಡಗು ಜಿಲ್ಲೆಯ ಮಡಿಕೇರಿಯ ಭಾಗಮಂಡಲದಲ್ಲಿ ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಜೀವ ನದಿ ಕಾವೇರಿ ಗುರುವಾರ ಬೆಳಗ್ಗೆ 7.41 ನಿಮಿಷಕ್ಕೆ ತುಲಾ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ಉಕ್ಕಿ ಹರಿದಳು.
ತುಲಾ ಸಂಕ್ರಮಣದಲ್ಲಿ ಇಂದು ಬೆಳಗ್ಗೆ 7 ಗಂಟೆ 41 ನಿಮಿಷಕ್ಕೂ ಮೊದಲು ಒಂದು ಗಂಟೆಯಿಂದ ನಿರಂತರವಾಗಿ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ವಿಶೇಷ ಪೂಜಾ ಪುನಸ್ಕಾರಗಳು ನಡೆಯಿತು. ಜೊತೆಗೆ ಅರ್ಚಕ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಪುರೋಹಿತರ ತಂಡ ಬ್ರಹ್ಮಕುಂಡಿಕೆಯ ಬಳಿ ಕಾವೇರಿ ತೀರ್ಥೋದ್ಭವಕ್ಕೆ ಪೂಜೆ ನಡೆಸಿದರು. ಕಾವೇರಿ ಮಾತೆಯನ್ನು ಆಹ್ವಾನಿಸಲು ವಿವಿಧ ಪೂಜಾ ಕೈಂಕಾರ್ಯಗಳನ್ನು ಅರ್ಚಕರ ತಂಡ ಕೈಗೊಂಡಿತ್ತು.
ತೀರ್ಥೋದ್ಭವದ ವೇಳೆ ಭಕ್ತರ ಜಯಘೋಷ, ಅರ್ಚಕರ ವೇದ ಮಂತ್ರಘೋಷಗಳು ಮುಗಿಲುಮುಟ್ಟಿದವು. ತೀರ್ಥ ಉಕ್ಕುತ್ತಿದ್ದಂತೆಯೇ ಮೊದಲ ತೀರ್ಥವನ್ನು ಬ್ರಹ್ಮ ದೇವನಿಗೆ ಅರ್ಪಣೆ ಮಾಡಲಾಯಿತು. ಬಳಿಕ ಅರ್ಚಕ ವೃಂದಕ್ಕೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ನಂತರ ಭಕ್ತವೃಂದ ಕಲ್ಯಾಣಿಯಲ್ಲಿ ತೀರ್ಥಸ್ನಾನಕ್ಕೆ ಬಿಂದಿಗೆ, ಕೊಡಗಳಲ್ಲಿ ತೀರ್ಥ ಸಂಗ್ರಹ ಮಾಡಿದರು.
ಮಂಡ್ಯ, ಮೈಸೂರು, ಹಾಸನ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಹಾಗೂ ಬೇರೆ ರಾಜ್ಯಗಳಾದ ತಮಿಳುನಾಡು, ಕೇರಳದಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರ ಆಗಮಿಸಿದ್ದರು.
ಬುಧವಾರವಷ್ಟೇ ಮಂಡ್ಯದ ತೊರೆಕಾಡನಹಳ್ಳಿಯಲ್ಲಿ ಬೆಂಗಳೂರಿನ 50 ಲಕ್ಷಕ್ಕೂ ಹೆಚ್ಚು ಜನರಿಗೆ ನೀರು ಒದಗಿಸುವ ಕಾವೇರಿ 5ನೇ ಹಂತದ ಯೋಜನೆ ಉದ್ಘಾಟನೆಗೊಂಡುನಗರದ 110 ಹಳ್ಳಿಗಳ ವ್ಯಾಪ್ತಿಯ ಮನೆಗಳ ನಲ್ಲಿಗಳಲ್ಲಿ ಕಾವೇರಿ ಹರಿದಿದ್ದಾಳೆ. ಅದಾದ ಮರುದಿನವೇ ಅಂದರೆ ಇಂದು ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ.