ಬೆಂಗಳೂರು, ಅ.16 www.bengaluruwire.com : ನಗರದಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆಯ ಕಾರಣ ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿನ ಎಸ್‌ವಿ ರಸ್ತೆ ಮತ್ತು ಇಂದಿರಾನಗರ ನಡುವೆ ಹಳಿಯ ಮೇಲೆ ಮರ ಬಿದ್ದ ಕಾರಣ ಕಾರ್ಯಾಚರಣೆ ತಾತ್ಕಾಲಿಕವಾಗಿ ಅಡ್ಡಿಯಾಗಿತ್ತು. ಈ ಮರವನ್ನು ತೆರವುಗೊಳಿಸಿ, ಬೆಳಗ್ಗೆ 8.05 ರಿಂದ ಎಂದಿನಂತೆ ರೈಲುಗಳು ಓಡಾಡುತ್ತಿವೆ.
ಇಂದು ಬೆಳಿಗ್ಗೆ 6.15 ಗಂಟೆ ಸುಮಾರಿಗೆ ನೇರಳೆ ಮಾರ್ಗದ ಎಸ್‌ವಿ ರಸ್ತೆ ಮತ್ತು ಇಂದಿರಾನಗರ ನಡುವೆ ಹಳಿಯ ಮೇಲೆ ಮರ ಬಿದ್ದ ಕಾರಣ, ಬೈಯಪ್ಪನಹಳ್ಳಿ ಮತ್ತು ವೈಟ್ ಫೀಲ್ಡ್ ಹಾಗೂ ಎಂ ಜಿ ರಸ್ತೆ ಮತ್ತು ಚಲ್ಲಘಟ್ಟ ನಡುವೆ ಮಾತ್ರ ರೈಲುಗಳು ಓಡುತ್ತಿದ್ದವು. ಆದರೆ 8.05ರಿಂದ ಮರ ತೆರವು ಮಾಡಿದ್ದರಿಂದ ಈಗ ಎಂದಿನಂತೆ ರೈಲು ಸೇವೆ ಆರಂಭವಾಗಿದೆ.
ಮೆಟ್ರೊ ಅಧಿಕಾರಿಗಳಿಂದ ಮಳೆಯಲ್ಲಿಯೂ ಪ್ರಯಾಣಿಕರಿಗೆ ಆದಷ್ಟು ಆನಾನುಕೂಲತೆಯನ್ನು ತಪ್ಪಿಸಿ ಮರವನ್ನು ತೆರವುಗೊಳಿಸಲಾಗಿದೆ. ಸಂಪೂರ್ಣ ನೇರಳೆ ಮಾರ್ಗದಲ್ಲಿ ಬೆಳಗ್ಗೆ 8.05 ರಿಂದ ಎಂದಿನಂತೆ ರೈಲುಗಳು ಓಡಾಡುತ್ತಿವೆ ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 6.15 ಗಂಟೆ ಸುಮಾರಿಗೆ ನೇರಳೆ ಮಾರ್ಗದ ಎಸ್‌ವಿ ರಸ್ತೆ ಮತ್ತು ಇಂದಿರಾನಗರ ನಡುವೆ ಹಳಿಯ ಮೇಲೆ ಮರ ಬಿದ್ದರೂ 7 ಗಂಟೆಯಾದರೂ ಮೆಟ್ರೊ ಎಲೆಕ್ಟ್ರಾನಿಕ್ ಫಲಕಗಳಲ್ಲಿ ಸೂಕ್ತ ಮಾಹಿತಿ ಹಾಕದ ಬಗ್ಗೆ ಮೆಟ್ರೊ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿ ಎಕ್ಸ್ ನಲ್ಲಿ ಮೆಟ್ರೊ ಖಾತೆಗೆ ಟ್ಯಾಗ್ ಮಾಡಿದ್ದಾರೆ.
“ಬೆಳಗ್ಗೆ 6.16ಗೆ ಸಂಚಾರ ವ್ಯತ್ಯಾಸ ಆದರೂ 7 ಘಂಟೆಯವರೆಗೂ ನಿಮ್ಮ ಟ್ರೈನ್ ಗಳಲ್ಲಿ ಪ್ರಯಾಣಿಕರಿಗೆ ಮಾಹಿತಿ ಇರಲಿಲ್ಲ. ಬೋರ್ಡ್ ಗಳಲ್ಲಿ Whitefield ಅಂತಾನೇ ತೋರಿಸುತ್ತಿತ್ತು. ಸ್ಟೇಷನ್ ಗಳಲ್ಲಿ ಎಲ್ಲಿಯೂ ಸರಿಯಾದ ಮಾಹಿತಿ ಕೊಡ್ತಾ ಇರಲಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.