ಬೆಂಗಳೂರು, ಅ.15 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಸೇರ್ಪಡೆಯಾದ 110 ಹಳ್ಳಿಗಳ ಪ್ರದೇಶಗಳಿಗೆ 775 ದಶಲಕ್ಷ ಲೀಟರ್ ಹೆಚ್ಚುವರಿ ಕುಡಿಯುವ ನೀರನ್ನು ಪೂರೈಸುವ ಕಾವೇರಿ 5ನೇ ಹಂತ (Kaveri 5th Phase)ದ ಯೋಜನೆ ನಾಳೆ ಲೋಕಾರ್ಪಣೆಯಾಗಲಿದೆ. ಇದರಿಂದ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನಾಳೆಯಿಂದ ಕಾವೇರಿ ನೀರು ಲಭ್ಯವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಳೆ ಮಂಡ್ಯ ಜಿಲ್ಲೆ ತೊರೆಕಾಡನಹಳ್ಳಿ (ಟಿ.ಕೆ.ಹಳ್ಳಿ)ಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ಕಾವೇರಿ 5ನೇ ಹಂತ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
₹4,336 ಕೋಟಿ ವೆಚ್ಚದ ಈ ಬೃಹತ್ ಯೋಜನೆ ಬೆಂಗಳೂರಿಗರ ಬದುಕಿಗೆ ನೆಮ್ಮದಿ ಒದಗಿಸಲಿದೆ. ಬೆಂಗಳೂರು ನಗರದ 110 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ಈ ಯೋಜನೆಯಿಂದ 110 ಹಳ್ಳಿಗಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಸ್ಥಿತಿಯು ಸುಧಾರಿಸಲಿದೆ. ಸುಮಾರು 50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಯೋಜನೆ ಆರಂಭಿಸಲಾಯಿತು.
ಪ್ರಸ್ತುತ ನಗರಕ್ಕೆ ಪ್ರತಿನಿತ್ಯ 1,450 ದಶಲಕ್ಷ ಲೀಟರ್ ಕಾವೇರಿ ನೀರನ್ನು ಪೂರೈಸಲಾಗುತ್ತಿದೆ. ಅಂದರೆ ತಿಂಗಳಿಗೆ 1.6 ಟಿಎಂಸಿ ಅಡಿ ನೀರನ್ನು ಬೆಂಗಳೂರು ಜಲಮಂಡಳಿ ಪೂರೈಸುತ್ತಿದೆ. ಕಾವೇರಿ 5ನೇ ಹಂತದ ಯೋಜನೆ ನಾಳೆಯಿಂದ ಆರಂಭವಾಗಿ ಸಂಪೂರ್ಣ ಕಾರ್ಯಾಚರಿಸಿದರೆ ಪ್ರತಿನಿತ್ಯ 750 ದಶಲಕ್ಷ ಲೀಟರ್ ನೀರು ಹೆಚ್ಚುವರಿಯಾಗಿ ಪೂರೈಕೆಯಾಗಲಿದೆ. ಈ ಯೋಜನೆಯು ಸೇರ್ಡೆಯಾದರೆ ಅಲ್ಲಿಗೆ ನಗರಕ್ಕೆ ಪ್ರತಿ ತಿಂಗಳು ಒಟ್ಟಾರೆ 2.4 ಟಿಎಂಸಿ ಅಡಿ ನೀರು ಪೂರೈಸಿದಂತಾಗುತ್ತದೆ.
ಒಟ್ಟಾರೆ ನಗರಕ್ಕೆ ಸುಪ್ರೀಂಕೋರ್ಟ್ ತೀರ್ಪಿನಂತೆ ವಾರ್ಷಿಕ 24 ಟಿಎಂಸಿ ಹಂಚಿಕೆಯಾಗಿದ್ದು, ಪ್ರಸ್ತುತ 19 ಅಡಿ ಟಿಎಂಸಿ ನಗರಕ್ಕೆ ಪೂರೈಕೆಯಾಗುತ್ತಿದೆ. ಅಲ್ಲದೆ ಕಾವೇರಿ 5ನೇ ಹಂತದ ಯೋಜನೆಯಿಂದ 5 ಟಿಎಂಸಿ ಹಾಗೂ ಸರ್ಕಾರ ಒಪ್ಪಿಗೆ ನೀಡಿದ ಹೆಚ್ಚುವರಿ 10 ಟಿಎಂಸಿ ಸೇರಿದರೆ ವಾರ್ಷಿಕ ಒಟ್ಟಾರೆ 34 ಟಿಎಂಸಿ ಅಡಿ ನೀರು ನಗರಕ್ಕೆ ಹಂಚಿಕೆಯಾದಂತಾಗುತ್ತದೆ.
ಬೆಂಗಳೂರಿನ 50 ಲಕ್ಷ ಜನರಿಗೆ ಅನುಕೂಲ