ಮುಂಬೈ, ಅ.11 www.bengaluruwire.com : ಇಂದಿಲ್ಲಿ ಶುಕ್ರವಾರ ನಡೆದ ಮಂಡಳಿಯ ಸಭೆಯ ನಂತರ ರತನ್ ಟಾಟಾ (Ratan Tata) ಅವರ ಮಲ ಸಹೋದರ ನೋಯೆಲ್ ಟಾಟಾ (Noel Tata) ಅವರನ್ನು ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬುಧವಾರ ಮುಂಬೈ ಆಸ್ಪತ್ರೆಯಲ್ಲಿ 86 ನೇ ವಯಸ್ಸಿನಲ್ಲಿ ನಿಧನರಾದ ರತನ್ ಟಾಟಾ ಅವರ ಉತ್ತರಾಧಿಕಾರಿ ನೋಯೆಲ್ ಇದೀಗ ಟಾಟಾ ಟ್ರಸ್ಟ್ ನೂತನ ಸಾರಥಿಯಾಗಿದ್ದಾರೆ.
ರತನ್ ಟಾಟಾ ಅವರ ನಿಧನವು ದೇಶದ ವ್ಯಾಪಾರ- ವ್ಯವಹಾರದಲ್ಲಿ ಒಂದು ಯುಗ ಅಂತ್ಯವಾದಂತಾಗಿದೆ. ಒಬ್ಬ ವ್ಯಕ್ತಿಯು ದೇಶದ ಕೈಗಾರಿಕಾ ಕ್ಷೇತ್ರವನ್ನು ಮರು ರೂಪಿಸಿದುದಲ್ಲದೆ, ತನ್ನ ಕುಟುಂಬ ಮಾಲೀಕತ್ವದ ಸಮೂಹವನ್ನು ಜಾಗತಿಕ ಶಕ್ತಿ ಕೇಂದ್ರವಾಗಿ ಪರಿವರ್ತಿಸಿದರು.
ನೋಯೆಲ್ ಟಾಟಾ ಅವರು 2000 ರ ದಶಕದ ಆರಂಭದಲ್ಲಿ ಸಂಸ್ಥೆಗೆ ಸೇರಿದಾಗಿನಿಂದ ಟಾಟಾ ಗ್ರೂಪಿನ ಬೆಳವಣಿಗೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ರತನ್ ಟಾಟಾ ಟ್ರಸ್ಟ್ ಮತ್ತು ದೊರಾಬ್ಜಿ ಟಾಟಾ ಟ್ರಸ್ಟ್‌ನ ಸಭೆಯ ನಂತರ ಅವರನ್ನು ಇಂದು ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ನೋಯೆಲ್ ಟಾಟಾ ಟಾಟಾ ಸ್ಟೀಲ್ ಮತ್ತು ವಾಚ್ ಕಂಪನಿ ಟೈಟಾನ್‌ನ ಉಪಾಧ್ಯಕ್ಷರಾಗಿದ್ದಾರೆ. ರತನ್ ಟಾಟಾ ಅವರ ಮಲತಾಯಿ ಹಾಗೂ ನೋಯೆಲ್ ಟಾಟಾ ಅವರ ತಾಇಯಾಗಿರುವ ಫ್ರೆಂಚ್-ಸ್ವಿಸ್ ಕ್ಯಾಥೋಲಿಕ್, ಸಿಮೋನ್ ಟಾಟಾ ಅವರು ಪ್ರಸ್ತುತ ಟ್ರೆಂಟ್, ವೋಲ್ಟಾಸ್, ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಮತ್ತು ಟಾಟಾ ಇಂಟರ್‌ನ್ಯಾಶನಲ್‌ನ ಅಧ್ಯಕ್ಷರಾಗಿದ್ದಾರೆ. ಅವರು ಯುಕೆಯ ಸಸೆಕ್ಸ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದಿದ್ದರು ಮತ್ತು ಇನ್ ಸೀಡ್ (INSEAD) ನಲ್ಲಿ ಇಂಟರ್ನ್ಯಾಷನಲ್ ಎಕ್ಸಿಕ್ಯೂಟಿವ್ ಪ್ರೋಗ್ರಾಂ (IEP) ಅನ್ನು ಪೂರ್ಣಗೊಳಿಸಿದ್ದರು.
ಈ ಹೊಸ ನೇಮಕಾತಿಯ ಮೊದಲು ನೋಯೆಲ್ ಟಾಟಾ ಅವರ ಪ್ರಮುಖ ಪಾತ್ರವೆಂದರೆ ಟಾಟಾ ಇಂಟರ್ನ್ಯಾಷನಲ್ ಲಿಮಿಟೆಡ್‌ನ ಗುಂಪಿನ ವ್ಯಾಪಾರ ಮತ್ತು ವಿತರಣಾ ಅಂಗವಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. 2010 ರಿಂದ 2021 ರವರೆಗೆ ನೋಯೆಲ್ ಟಾಟಾ ನಾಯಕತ್ವದಲ್ಲಿ, ಕಂಪನಿಯು $ 500 ಮಿಲಿಯನ್ ವಹಿವಾಟಿನಿಂದ $ 3 ಬಿಲಿಯನ್‌ಗೆ ಬೆಳೆವಣಿಗೆ ಹೊಂದಿತು. ಈ ಮೂಲಕ ಹೆಚ್ಚು ಸ್ಪರ್ಧಾತ್ಮಕ ವಾತಾವರಣದಲ್ಲಿ ಕಂಪನಿಯನ್ನು ಬೆಳೆಸುವ ತನ್ನ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದರು.
ಟಾಟಾದ ರಿಟೇಲ್ ಅಂಗವಾದ ಟ್ರೆಂಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ, ಅವರು 1998 ರಲ್ಲಿ ಒಂದು ಮಳಿಗೆ ಆರಂಭಿಸಿ ನಂತರ ಹಂತ ಹಂತವಾಗಿ 700 ಕ್ಕೂ ಹೆಚ್ಚು ಮಳಿಗೆಗಳಿಗೆ ಅದರ ಕಾರ್ಯಾಚರಣೆಯನ್ನು ವಿಸ್ತರಿಸಿದರು. ಟಾಟಾ ಟ್ರಸ್ಟ್‌ಗಳು ಎಲ್ಲಾ 14 ಟಾಟಾ ಟ್ರಸ್ಟ್‌ಗಳ ಕಾರ್ಯಗಳನ್ನು ನಿರ್ವಹಿಸುವ ಏಕಮಾತ್ರ ಸಂಸ್ಥೆಯಾಗಿದೆ. ಟಾಟಾ ಟ್ರಸ್ಟ್ ನಲ್ಲಿ ಪ್ರಸ್ತುತ ವೇಣು ಶ್ರೀನಿವಾಸನ್, ವಿಜಯ್ ಸಿಂಗ್ ಮತ್ತು ಮೆಹ್ಲಿ ಮಿಸ್ತ್ರಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ.
ಇನ್ನು ಟಾಟಾ ಸನ್ಸ್ (Tata Sons)ನ ಮಾಲೀಕತ್ವವನ್ನು ಹೆಚ್ಚಾಗಿ ಎರಡು ಪ್ರಮುಖ ಟ್ರಸ್ಟ್‌ಗಳು ಹೊಂದಿವೆ – ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ರತನ್ ಟಾಟಾ ಟ್ರಸ್ಟ್, ಇದು ಒಟ್ಟಾರೆಯಾಗಿ ಶೇಕಡಾ 50 ರಷ್ಟು ಮಾಲೀಕತ್ವವನ್ನು ಒಳಗೊಂಡಿದೆ.
ರತನ್ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ಅವರು ಕುಟುಂಬದ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ ಹಾಗೂ ಅವರು ದಕ್ಷಿಣ ಮುಂಬೈನ ಕೊಲಾಬಾದಲ್ಲಿ ಎರಡು ಬೆಡ್‌ರೂಮ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. 1937 ರಲ್ಲಿ ಸಾಂಪ್ರದಾಯಿಕ ಪಾರ್ಸಿ ಕುಟುಂಬದಲ್ಲಿ ಜನಿಸಿದ ರತನ್ ಟಾಟಾ ಅವರು 10 ವರ್ಷದವರಾಗಿದ್ದಾಗ ಅವರ ತಂದೆ ನವಲ್ ಮತ್ತು ತಾಯಿ ಸೂನಿ ಟಾಟಾ ವಿಚ್ಛೇದನದ ನಂತರ ಅವರ ಅಜ್ಜಿಯೇ ಅವರನ್ನು ಸಾಕಿ ಬೆಳೆಸಿದರು.