ಬೆಂಗಳೂರು, ಅ.07 www.bengaluruwire.com : ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಭಾನುವಾರ ಮಧ್ಯಾಹ್ನ ಸಫಾರಿಗೆ ಹೋದ ಬಸ್ ಮೇಲೆ ಚಿರತೆ ಕಿಟಕಿಯ ಮೇಲೆ ಹಾರಿದ್ದು, ಇದರಿಂದಾಗಿ ಬಸ್‌ನಲ್ಲಿದ್ದ ಪ್ರವಾಸಿಗರು ಹೆದರಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಚಿರತೆ ಸಫಾರಿಯ ತೆರೆದ ಪ್ರದೇಶದಲ್ಲಿ ಚಿರತೆಗಳನ್ನು ಬಿಡಲಾಗಿದೆ. ಭಾನುವಾರದಂದು ಬಸ್ ನೋಡಿದ ಚಿರತೆ ಎಡಭಾಗದ ಹಿಂಬದಿ ಕಿಟಕಿಯ ಬಳಿ ಏಕಾಏಕಿ ಹಾರಿ, ಮೆಶ್ ಹಾಕಿದ್ದ ಕಂಬಿಗಳನ್ನು ಹಿಡಿದು ಕೆಲ ಹೊತ್ತು ಒಳಗೆ ಕಾಲು ಹಾಕಲು ಯತ್ನಿಸಿದೆ. ಆದರೆ ಕಬ್ಬಿಣದ ಮೆಶ್ ಇದ್ದ ಹಿನ್ನೆಲೆಯಲ್ಲಿ ಒಳಗೆ ಹೋಗಲು ಸಾಧ್ಯವಾಗಿಲ್ಲ.
ಆದರೆ ಬಸ್ ಒಳಗಿದ್ದ ಪ್ರವಾಸಿಗರು ಆತಂಕಗೊಂಡು ಕೂಗಾಡಿದ್ದಾರೆ. ಸಫಾರಿ ವಾಹನಗಳಿಗೆ ಪ್ರತಿಯೊಂದಕ್ಕೂ ಕಬ್ಬಿಣದ ಮೆಶ್ ಹಾಕಲಾಗಿದೆ. ಆದ್ದರಿಂದ ಯಾವುದೇ ಸಮಸ್ಯೆ ಅಥವಾ ಅನಾಹುತವಾಗಿಲ್ಲ. ಈ ಹಿಂದೆಯೂ ಸಿಂಹ ಒಂದು ಇದೇ ರೀತಿ ಸಫಾರಿಗೆ ಹೋದ ಬಸ್ ಮೇಲೆ ಹಾರಿತ್ತು ಎಂದು ಮೂಲಗಳು ತಿಳಿಸಿವೆ.
ಬಸ್ ಮೇಲೆ ಹತ್ತಿ ವಾಪಸ್ ಕೆಳಗೆ ಇಳಿದ ಚಿರತೆ, ಬಸ್ ಮುಂದೆ ಹೋಗುತ್ತಿದ್ದರೂ ಹಿಂದೆ ಕೆಲ ಹೊತ್ತು ಪಕ್ಕದಲ್ಲಿ ಹೋಗಿದ್ದು, ಪ್ರವಾಸಿಗರು ಆತಂಕಪಡುವ ಪರಿಸ್ಥಿತಿ ಎದುರಾಗಿತ್ತು. ಚಿರತೆ ಬಸ್ ಮೇಲೆ ಹಾರುತ್ತಿರುವ ವಿಡಿಯೋವನ್ನು ಮತ್ತೊಂದು ವಾಹನದಲ್ಲಿದ್ದ ಪ್ರವಾಸಿಗರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಚಿರತೆಯ ಈ ವರ್ತನೆ ಸಾಮಾನ್ಯವಾದುದು :
ಚಿರತೆಗಳು ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿ. ಚಿರತೆ ಸಫಾರಿಯಲ್ಲಿ ಭಾನುವಾರ ಮಧ್ಯಾಹ್ನ ಮೇಲೆ ಚಿರತೆ ಹಾರಿದೆ. ಇದು ಚಿರತೆಯ ಸಾಮಾನ್ಯ ವರ್ತನೆ. ಚಿರತೆಗಳು ಸಾಮಾನ್ಯವಾಗಿ ಈ ರೀತಿ ಮಾಡುತ್ತವೆ. ಆದರೆ ಪ್ರತಿಯೊಂದು ಬಸ್‌ಗೆ ಸುರಕ್ಷತಾ ದೃಷ್ಟಿಯಿಂದ ನಾವು ಕಬ್ಬಿಣ ಹಾಕಿರುವುದರಿಂದ ತೊಂದರೆ ಆಗಿಲ್ಲ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ನಾವು ಇನ್ನು ಮುಂದೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ.
– ಸೂರ್ಯಸೇನ್, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ