ಬೆಂಗಳೂರು, ಅ.07 www.bengaluruwire.com : ಫುಟ್ ಪಾತ್, ಸರ್ಕಾರಿ ಖಾಲಿ ಜಾಗ, ಭೂಮಿ ಒತ್ತುವರಿ ಮಾಡೋದನ್ನ ಕೇಳಿದ್ದೇವೆ. ಆದರೆ ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ರಸ್ತೆಯನ್ನೇ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಕೊಳವೆ ಬಾವಿ (Borewell) ಕೊರೆಸಿದವರ ಮೇಲೆ ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನ ಮೇಲೆ ಎಫ್‌ಐಆರ್ (FIR) ದಾಖಲಾಗಿದೆ.
ಆರ್.ಆರ್ ನಗರ ವಲಯ ಹೇರೋಹಳ್ಳಿ ವಾರ್ಡಿನ ವೀರಭದ್ರೇಶ್ವರ ನಗರ ಓಂ ಸಾಯಿ ಪಬ್ಲಿಕ್ ಮುಖ್ಯ ರಸ್ತೆಯಲ್ಲಿ ಪಾಲಿಕೆ ವತಿಯಿಂದ ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ಅ.3 ಹಾಗೂ 4ರ ಸಂಜೆಯವರೆಗೆ ಕೊಳವೆ ಬಾವಿ ಕೊರೆಸುವ ಕಾರ್ಯ ಕೈಗೊಳ್ಳಲಾಗಿತ್ತು. ಈ ಸಂಬಂಧ ಪಾಲಿಕೆಗೆ ದೂರು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾರ್ವಜನಿಕ ರಸ್ತೆಯನ್ನು ಅಗೆದು ಹಾಳು ಮಾಡಿ ಕೊಳವೆ ಬಾವಿಯನ್ನು ಪಾಲಿಕೆಯ ರಸ್ತೆಯಲ್ಲಿ ಕೊರೆಸುತ್ತಿದ್ದು, ಸಾರ್ವಜನಿಕರಿಗಾಗಿ ನಿರ್ಮಾಣ ಮಾಡಿದ ಡಾಂಬರು ರಸ್ತೆಯನ್ನು ಹಾಳು ಮಾಡಿದ್ದರು. ಈ ಸಂಬಂಧ 4ನೇ ಅಕ್ಟೋಬರ್ ರಂದು ಪಾಲಿಕೆ ಅಧಿಕಾರಿಯೊಬ್ಬರು ಮಾಗಡಿ ಮುಖ್ಯ ರಸ್ತೆಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಳವೆ ಬಾವಿ ಕೊರೆಸಿದವರ ಹಾಗೂ ಬೋರ್‌ವೆಲ್ ಕೊರೆಯುವ ವಾಹನದ ಮೇಲೆ ಕಾನೂನ ಕ್ರಮ ಕೈಗೊಳ್ಳಲು ದೂರು ನೀಡಿದ್ದರು.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಥಮ ವರ್ತಮಾನ ವರದಿ(ಎಫ್.ಐ.ಆರ್) ದಾಖಲಿಸಿಕೊಳ್ಳಲಾಗಿದ್ದು, ಕೂಡಲೇ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಲು ಪೊಲೀಸ್ ಠಾಣೆಯಲ್ಲಿ ಕೋರಲಾಗಿದೆ. ಅಲ್ಲದೆ ಅನಧಿಕೃತವಾಗಿ ರಸ್ತೆಯಲ್ಲಿ ಕೊಳವೆ ಬಾವಿ ಕೊರೆದವರಿಗೆ ದಂಡ ವಿಧಿಸಲು ಕೂಡಾ ಕ್ರಮ ಕೈಗೊಳ್ಳಲಾಗುತ್ತಿದೆ.
