ಬೆಂಗಳೂರು, ಅ.04 www.bengaluruwire.com : ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಬರುವ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ರವರ ನೇತೃತ್ವದಲ್ಲಿ ಶುಕ್ರವಾರ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು. ಪಾದಚಾರಿ ಮಾರ್ಗ ಒತ್ತುವರಿ ಮಾಡದಂತೆ ಈಗಾಗಲೇ ಅಂಗಡಿ ಮತ್ತು ಮಳಿಗೆಗಳ ಮಾಲೀಕರಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿರುತ್ತದೆ. ಆದರೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದು, ಅದರಿಂದ ಪಾದಚಾರಿಗಳ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿರುತ್ತದೆ.
ಚರ್ಚ್ ಸ್ಟ್ರೀಟ್ ರಸ್ತೆಯ ಎರಡೂ ಬದಿಯಲ್ಲಿನ ಸುಮಾರು 50 ಅಂಗಡಿ ಮತ್ತು ಮಳಿಗೆಗಳು ಪಾದಚಾರಿ ಮಾರ್ಗ ಒತ್ತವರಿ ಮಾಡಿಕೊಂಡು, ಅಲ್ಲಿಟ್ಟಿದ್ದ ಸಾಮಗ್ರಿಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿತು. ಚರ್ಚ್ ಸ್ಟ್ರೀಟ್ ರಸ್ತೆಯ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪೊಲೀಸ್ ಸಿಬ್ಬಂದಿ, ಪಾಲಿಕೆ ಅಧಿಕಾರಿಗಳು ಹಾಗೂ ಮಾರ್ಷಲ್ಗಳ ಸಹಯೋಗದಲ್ಲಿ ಕೈಗೊಳ್ಳಲಾಯಿತು. ತೆರವು ಕಾರ್ಯಾಚರಣೆಯ ವೇಳೆ 20ಕ್ಕೂ ಹೆಚ್ಚು ಗ್ಯಾಂಗ್ ಮ್ಯಾನ್ಗಳು, 2 ಟಿಪ್ಪರ್ಗಳು ಹಾಗೂ 6 ಟ್ರ್ಯಾಕ್ಟರ್ ಗಳ ಮೂಲಕ ಪಾದಚಾರಿ ಮಾರ್ಗದಲ್ಲಿರಿಸಿದ್ದ ಸಾಮಗ್ರಿಗಳನ್ನು ಪಾಲಿಕೆ ತನ್ನ ವಶಕ್ಕೆ ಪಡೆದಿದೆ. ಮತ್ತೆ ಪಾದಚಾರಿ ಮಾರ್ಗ ಒತ್ತುವರಿ ಮಾಡದಂತೆ ಎಲ್ಲಾ ಮಳಿಗೆಯ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.
ಪೂರ್ವ ವಲಯ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಒತ್ತುವರಿ ತೆರವು :
ಪಾದಚಾರಿ ಮಾರ್ಗದಲ್ಲಿ ಆಹಾರ ತಯಾರಿಸುವುದರಿಂದ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅಲ್ಲದೆ ತೆರೆದ ಜಾಗದಲ್ಲಿ ಸಿಲಿಂಡರ್ಗಳನ್ನು ಬಳಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವ ಕಾರಣ ನಾಗರೀಕರು ರಸ್ತೆಯಲ್ಲಿ ಓಡಾಡುವ ಸ್ಥಿತಿ ಏರ್ಪಡುತ್ತದೆ. ಇದರಿಂದ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗಲಿದ್ದು, ಅಪಘಾತಗಳಾಗುವ ಸಂಭವ ಹೆಚ್ಚಿರುತ್ತದೆ. ಆದ್ದರಿಂದ ಪೂರ್ವ ವಲಯ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುವುದು ಎಂದು ವಲಯ ಆಯುಕ್ತರು ತಿಳಿಸಿದ್ದಾರೆ.
ಈ ವೇಳೆ ವಲಯ ಜಂಟಿ ಆಯುಕ್ತರಾದ ಸರೋಜಾ, ಕಾರ್ಯಪಾಲಕ ಅಭಿಯಂತರರಾದ ಮುನಿರೆಡ್ಡಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.