ಮೈಸೂರು, ಅ.03 www.bengaluruwire.com : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಬೆಳಗ್ಗೆ 9.15 ರಿಂದ 9.40 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ದಸರಾ ಉದ್ಘಾಟನೆ ಆಗಲಿದೆ. ಚಾಮುಂಡಿ ಬೆಟ್ಟದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ 10 ದಿನಗಳ ದಸರಾಗೆ ಚಾಲನೆ ನೀಡಲಿದ್ದಾರೆ. 10 ದಿನವೂ ನಾಡ ದೇವತೆ ತಾಯಿ ಚಾಮುಂಡೇಶ್ವರಿಗೆ ಬಗೆ ಬಗೆಯ ವಿಶೇಷವಾದ ಅಲಂಕಾರದಿಂದ ಸಿಂಗರಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ.
ಚಾಮುಂಡೇಶ್ವರಿಗೆ ನವರಾತ್ರಿ ಅಲಂಕಾರ :
ಗುರುವಾರ ಬ್ರಾಹ್ಮೀ ಅಲಂಕಾರ, ಶುಕ್ರವಾರ ಮಹೇಶ್ವರಿ, ಶನಿವಾರ ಕೌಮಾರಿ, ಸೋಮವಾರ ವಾರಾಹಿ, ಮಂಗಳವಾರ ಇಂದ್ರಾಣಿ, ಬುಧವಾರ ಸಿದ್ಧಿ ಧಾತ್ರಿ, ಗುರುವಾರ ಸರಸ್ವತಿ, ಶುಕ್ರವಾರ ಮಹಾಲಕ್ಷ್ಮಿ ಹಾಗೂ ಶನಿವಾರ ಅಶ್ವಾರೋಹಣ ಅಲಂಕಾರದಿಂದ ಚಾಮುಂಡೇಶ್ವರಿ ದೇವಿ ಭವ್ಯ ಅಲಂಕಾರಗಳಿಂದ ಕಂಗೊಳಿಸಲಿದ್ದಾರೆ. ದೇವಾಲಯದ ಎಡ ಭಾಗದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ವೇದಿಕೆ ಮುಂಭಾಗ ಸಾರ್ವಜನಿಕರು ಕೂರಲು 3 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ದಸರಾ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರ ಸ್ಟ್ರೀಮ್ ಲೈನ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ. ಮುಖ್ಯಮಂತ್ರಿಗಳು, ಕ್ಯಾಬಿನೆಟ್ ಸಚಿವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದರೂ ಸಹ, ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ. ಹತ್ತು ದಿನಗಳ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಲಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ಜಿಲ್ಲಾಡಳಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.
ನೇರ ಪ್ರಸಾರದ ಲಿಂಕ್ ಗಾಗಿ ಇಲ್ಲಿ ಪ್ರೆಸ್ ಮಾಡಿ
ಹೇಗಿರುತ್ತೆ ರಾಜವಂಶಸ್ಥರ ಖಾಸಗಿ ದರ್ಬಾರ್ ?:
ನವರಾತ್ರಿಯ ಮೊದಲ ದಿನದಿಂದ ವಿಜಯ ದಶಮಿಯವರೆಗೆ ಹತ್ತು ದಿನಗಳ ಕಾಲ ರಾಜ ಪಾರಂಪರೆಯಂತೆ ನವರಾತ್ರಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ರತ್ನ ಖಚಿತ ಸಿಂಹಾಸನದಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಿ ನವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇದರ ಜೊತೆಗೆ ನವರಾತ್ರಿಯ 9ನೇ ದಿನ ಆಯುಧ ಪೂಜೆ, ಹತ್ತನೇ ದಿನ ವಿಜಯ ದಶಮಿಯನ್ನು ಆಚರಿಸುವುದು ಸಂಪ್ರದಾಯವಾಗಿದೆ.
ಶರನ್ನವರಾತ್ರಿಯ ಮೊದಲ ದಿನ ಅಂದರೆ ಇಂದು ಅರಮನೆಯಲ್ಲಿ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಣ್ಣೆಶಾಸ್ತ್ರ, ದರ್ಬಾರ್ ಹಾಲ್ನಲ್ಲಿ ಜೋಡಣೆ ಮಾಡಿರುವ ಸಿಂಹಾಸನಕ್ಕೆ ಸಿಂಹದ ತಲೆ ಜೋಡಣೆ, ಬೆಳಗ್ಗೆ 7.45 ರಿಂದ 8.45 ರವರೆಗೆ ಅರಮನೆಯ ಚಾಮಂಡಿ ತೊಟ್ಟಿಯಲ್ಲಿ ಯದುವೀರ್ ಅವರಿಗೆ ಕಂಕಣ ಧಾರಣೆ ಹೀಗೆ ವಿವಿಧ ಕಾರ್ಯಕ್ರಮ ನಡೆಯಲಿದೆ. ಆ ನಂತರ ದರ್ಬಾರ್ ಹಾಲ್ನಲ್ಲಿ ಖಾಸಗಿ ದರ್ಬಾರ್ ಆರಂಭವಾಗಲಿದೆ.
ಅ.9 ರಂದು ಬೆಳಗ್ಗೆ 10.05 ರಿಂದ 10.35 ರವರೆಗೆ ಸರಸ್ವತಿ ಪೂಜೆ ನಡೆಯಲಿದೆ. ಅ.10ರಂದು ಸಂಜೆ ಖಾಸಗಿ ದರ್ಬಾರ್ ಮುಗಿದ ನಂತರ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಉತ್ಸವ ಜರುಗಲಿದೆ.
ಅ.12 ರಂದು ವಿಜಯದಶಮಿ ದಿನದಂದು ಬೆಳಗ್ಗೆ 9.45 ಕ್ಕೆ ಪಟ್ಟದ ಆನೆ ಕುದುರೆ ಪಟ್ಟದ ಹಸುವಿನೊಂದಿಗೆ ದೇವರನ್ನು ತರುವ ಕಾರ್ಯ ನಡೆಯಲಿದೆ. 10.15ಕ್ಕೆ ಉತ್ತರ ಪೂಜೆ, 11.20 ರಿಂದ 11.45 ರವರೆಗೆ ವಿಜಯಯಾತ್ರೆ ಶಮಿಪೂಜೆ ಹಾಗೂ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಆ ನಂತರ ನವರಾತ್ರಿ ಉತ್ಸವದಲ್ಲಿ ರಾಜವಂಶಸ್ಥರು ನಡೆಸುವ ಧಾರ್ಮಿಕ ಕಾರ್ಯ ಸಂಪನ್ನವಾಗುತ್ತದೆ. ಇದಾದ ಬಳಿಕ ಸರ್ಕಾರದ ಜಂಬೂಸವಾರಿ ಮೆರವಣಿಗೆಗೆ ಚಾಲನೆ ದೊರೆಯುವುದು.