ಬೆಂಗಳೂರು, ಅ.03 www.bengaluruwire.com : ನಿನ್ನೆ ರಾತ್ರಿ ಸುರಿದ ಭಾರಿ ಮಳೆ ಹಾಗೂ ಸಿಡಿಲಿನ ಹೊಡೆತದಿಂದ ಹಾರೋಹಳ್ಳಿ ಹಾಗೂ ಟಿ.ಕೆ ಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯನ್ನು ದುರಸ್ತಿಗೊಳಿಸಲಾಗಿದ್ದು, ವಿದ್ಯುತ್ ಸಂಪರ್ಕದಲ್ಲಾಗಿದ್ದ ವ್ಯತ್ಯಯವನ್ನು ಸರಿಪಡಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ನಿನ್ನೆ ರಾತ್ರಿ ಈ ಪಂಪಿಂಗ್ ಸ್ಟೇಷನ್‌ಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿದ್ದ ಲೈನ್‌ಗಳಿಗೆ ಸಿಡಿಲು ಬಡಿದು, ಟ್ರಾನ್ಸ್‌ಫಾರ್ಮರ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಆದ ಈ ಅವಘಡದಿಂದಾಗಿ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಪಂಪಿಂಗ್ ಸ್ಟೇಷನ್ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ನೀರು ಪಂಪಿಂಗ್ ಸ್ಥಗಿತಗೊಂಡಿತ್ತು.
ಕೆಪಿಟಿಸಿಎಲ್ ಹಾಗೂ ಬೆಂಗಳೂರು ಜಲಮಂಡಳಿ ಸಿಬ್ಬಂದಿಗಳು ಸಮನ್ವಯದಿಂದ ರಾತ್ರಿ ಮಳೆಯಲ್ಲೇ ತುರ್ತು ರಿಪೇರಿ ಕಾಮಗಾರಿಯನ್ನು ಕೈಗೊಳ್ಳುವ ಮೂಲಕ ತಾಂತ್ರಿಕ ಸಮಸ್ಯೆಯನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯುತ್ ವ್ಯತ್ಯಯದಿಂದ ಸುಮಾರು 10 ಗಂಟೆಗಳ ಕಾಲ ಪಂಪಿಂಗ್ ಸ್ಥಗಿತಗೊಂಡಿತ್ತು. ಇದೀಗ ನೀರು ಪಂಪಿಂಗ್ ಪ್ರಕ್ರಿಯೆಯನ್ನು ಚಾಲನೆಗೊಳಿಸಲಾಗಿದೆ. ಈ 10 ಗಂಟೆಗಳ ಸ್ಥಗಿತದಿಂದಾಗಿ ನಗರದ ಕೆಲವು ಪ್ರದೇಶಗಳಲ್ಲಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಭಾರಿ ಮಳೆಯ ಮಧ್ಯೆ ತುರ್ತು ಕಾಮಗಾರಿ ಮೂಲಕ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಿದ ಕೆಪಿಟಿಸಿಎಲ್ ಹಾಗೂ ಬೆಂಗಳೂರು ಜಲಮಂಡಳಿ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.