ಪ್ಯಾರಿಸ್, ಸೆ.30 www.bengaluruwire.com : ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (National Security Advisor- Ajit Doval) ಇಂದಿನಿಂದ ಎರಡು ದಿನಗಳ ಕಾಲ ಫ್ರಾನ್ಸ್‌ಗೆ ಭೇಟಿ ನೀಡಲಿದ್ದು, ಅಲ್ಲಿ ರಫೇಲ್ ಮೆರೈನ್ ಜೆಟ್ (Rafale Marine jets) ಒಪ್ಪಂದದ ಕುರಿತು ಅಂತಿಮ ಚರ್ಚೆಗಳನ್ನು ನಡೆಸುವ ಸಾಧ್ಯತೆಯಿದೆ.
26 ರಫೇಲ್ ಮೆರೈನ್ ಜೆಟ್‌ಗಳ ಖರೀದಿಗೆ ಫ್ರಾನ್ಸ್ ತನ್ನ ಅಂತಿಮ ಬೆಲೆಯ ಪ್ರಸ್ತಾಪವನ್ನು ಸಲ್ಲಿಸಿದ ನಂತರ ಈ ದೋವೆಲ್ ಫ್ರಾನ್ಸ್ ಗೆ ಭೇಟಿ ನೀಡುತ್ತಿದ್ದಾರೆ. ಈ ಖರೀದಿಯಲ್ಲಿ 22 ಏಕ ಆಸನ ವ್ಯವಸ್ಥೆಯ ಜೆಟ್ ಮತ್ತು ನಾಲ್ಕು ಅವಳಿ-ಸೀಟರ್ ತರಬೇತಿ ಜೆಟ್ ಆವೃತ್ತಿಗಳು ಸೇರಿವೆ. ಈ ಒಪ್ಪಂದವು ಭಾರತೀಯ ನೌಕಾಪಡೆ (Indian Navy)ಗೆ ನಿರ್ಣಾಯಕವಾಗಿದೆ. ಏಕೆಂದರೆ ನೌಕಾಪಡೆಯ ಬಳಿ ಸದ್ಯ ಇರುವ ಹಳೆಯ ಮಿಗ್-29ಕೆ (MiG-29K) ಯುದ್ಧ ವಿಮಾನಗಳನ್ನು ಬದಲಿಸಲು ಮತ್ತು ಸಾಗರದಲ್ಲಿ ಶತ್ರುಗಳನ್ನು ನಿಗ್ರಹಿಸುವ ಸಾಮರ್ಥ್ಯ (maritime strike capabilities)ಗಳನ್ನು ಹೆಚ್ಚಿಸಲು ಅಗತ್ಯವಾಗಿದೆ.
ಈ ಯೋಜನೆಗಾಗಿ ಫ್ರೆಂಚ್ ಕಡೆಯಿಂದ ಭಾರತೀಯ ಅಧಿಕಾರಿಗಳಿಗೆ ಅತ್ಯುತ್ತಮ ಮತ್ತು ಅಂತಿಮ ಬೆಲೆಯ ಪ್ರಸ್ತಾಪವನ್ನು ಸಲ್ಲಿಸಲಾಗಿದೆ ಮತ್ತು ಪ್ರಸ್ತಾವಿತ ಒಪ್ಪಂದದಲ್ಲಿ ಸಾಕಷ್ಟು ಮಾತುಕತೆಗಳ ನಂತರ ಗಮನಾರ್ಹವಾಗಿ ಬೆಲೆ ಕಡಿತವನ್ನು ನೀಡಲಾಗಿದೆ ಎಂದು ರಕ್ಷಣಾ ಮೂಲಗಳು ಎಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿವೆ.
ಐಎನ್‌ಎಸ್ ವಿಕ್ರಾಂತ್ ವಿಮಾನ ವಾಹಕ ನೌಕೆ ಮತ್ತು ವಿವಿಧ ನೆಲೆಗಳಲ್ಲಿ ನಿಯೋಜಿಸಲು ಹೊರಟಿರುವ 26 ರಫೇಲ್ ಮರೀನ್ ಜೆಟ್‌ಗಳನ್ನು ಖರೀದಿಸಲು ಭಾರತ ಮತ್ತು ಫ್ರಾನ್ಸ್ ಒಪ್ಪಂದವನ್ನು ಮಾಡಿಕೊಳ್ಳುತ್ತಿವೆ. ಕಳೆದ ವಾರ ಫ್ರಾನ್ಸ್ ತಂಡವೊಂದು ಭಾರತದೊಂದಿಗೆ ಮಾತುಕತೆ ಅಂತಿಮಗೊಳಿಸಲು ದೆಹಲಿಗೆ ಬಂದಾಗ ಎರಡೂ ಕಡೆಯವರು ಮಾತುಕತೆ ನಡೆಸಿದ್ದರು.
ಇಂದಿನಿಂದ ಪ್ಯಾರಿಸ್‌ನಲ್ಲಿ ಭಾರತೀಯ ಎನ್‌ಎಸ್‌ಎ (NSA) ತನ್ನ ಫ್ರೆಂಚ್ ರಕ್ಷಣಾ ಅಧಿಕಾರಿಗಳೊಂದಿಗೆ ಭಾರತ-ಫ್ರಾನ್ಸ್ ನಡುವೆ ರಕ್ಷಣಾ ಕಾರ್ಯತಂತ್ರದ ಸಭೆಯಲ್ಲಿ ಈ ಒಪ್ಪಂದವನ್ನು ಚರ್ಚೆಗೆ ತೆಗೆದುಕೊಳ್ಳಲಿದೆ. ಭಾರತೀಯ ನೌಕಾಪಡೆಗೆ ಈ ಒಪ್ಪಂದವು ಮಹತ್ವದ್ದಾಗಿದೆ ಏಕೆಂದರೆ ಅದು ತನ್ನ ಕಡಲ ದಾಳಿಯ ಸಾಮರ್ಥ್ಯವನ್ನು ಬಲಪಡಿಸಲು ನೋಡುತ್ತಿದೆ.
ರಫೇಲ್ ಗೆ ಸ್ವದೇಶಿ ರಾಡಾರ್ ಅಳವಡಿಕೆ :
ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುವ ರಫೇಲ್ ಮರೀನ್ ಜೆಟ್‌ಗಳಲ್ಲಿ ಸ್ವದೇಶಿ ಉತ್ತಮ್ ರಾಡಾರ್ (Uttam Radar)ನ ಏಕೀಕರಣ (Integration)ದಂತಹ ಸರ್ಕಾರದ ಒಪ್ಪಂದಗಳಿಗೆ ಸರ್ಕಾರದಲ್ಲಿ ಸಮಾನವಾದ ಟೆಂಡರ್ ದಾಖಲೆಯಾದ ವಿನಂತಿಯ ಪತ್ರದಲ್ಲಿನ ವ್ಯತ್ಯಾಸಗಳನ್ನು ಭಾರತವು ಅನುಮೋದಿಸಿದೆ. ಯುದ್ಧವಿಮಾನದಲ್ಲಿ ಈ ರಾಡಾರ್ ಅಳವಡಿಸುವ ಕಾರ್ಯಕ್ಕೆ ಸುಮಾರು ಎಂಟು ವರ್ಷ ಅವಧಿ ತೆಗೆದುಕೊಳ್ಳುತ್ತದೆ ಮತ್ತು ಈ ಕಾರ್ಯಕ್ಕೆ ಫ್ರೆಂಚ್ ತಂಡಕ್ಕೆ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಯುದ್ಧವಿಮಾನದಲ್ಲಿ ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಅಳವಡಿಸುವಂತೆ ಭಾರತ ಕೂಡ ಫ್ರಾನ್ಸ್‌ಗೆ ಮನವಿ ಮಾಡಿತ್ತು. ಇದು ರುದ್ರಮ್ ವಿಕಿರಣ ನಿಗ್ರಹ ಕ್ಷಿಪಣಿ (Rudram anti-radiation missiles)ಗಳ ಜೊತೆಗೆ ದೃಶ್ಯ ವ್ಯಾಪ್ತಿಗೆ ಮೀರಿದ ಕ್ಷಿಪಣಿ ಅಸ್ತ್ರಾ (Astra beyond visual range missiles) ವನ್ನು ಒಳಗೊಂಡಿದೆ.
ಒಪ್ಪಂದದಲ್ಲಿ ಹಣದುಬ್ಬರ ದರ, ಭಾರತೀಯ ವಾಯುಪಡೆಗೆ 36 ರಫೇಲ್ ಯುದ್ಧ ವಿಮಾನಗಳ ಹಿಂದಿನ ಒಪ್ಪಂದವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನೌಕಾ ಒಪ್ಪಂದದಲ್ಲಿ ಭಾರತೀಯ ವಾಯುಪಡೆಯ ಕೆಲವು ಅವಶ್ಯಕತೆಗಳನ್ನು ಸಹ ಅಳವಡಿಸಲಾಗಿದೆ. ಇದರಲ್ಲಿ ಸುಮಾರು 40 ಡ್ರಾಪ್ ಟ್ಯಾಂಕ್‌ಗಳು ಮತ್ತು ವಿಮಾನಗಳಿಗಾಗಿ ಕಡಿಮೆ ಸಂಖ್ಯೆಯ ವರ್ಕ್ ಸ್ಟೇಷನ್ ಗಳನ್ನು ಅಳಡಿಸುವುದು ಸೇರಿವೆ. ಹೆಚ್ಚಿನ ಸಂಖ್ಯೆಯ ಆಕಾಶದಿಂದ ಆಕಾಶಕ್ಕೆ ಉಡಾಯಿಸುವ ಉಲ್ಕಾ ಸಿಡಿತಲೆಯ ಕ್ಷಿಪಣಿಗಳನ್ನು ಪಡೆಯಲಿದೆ ಮತ್ತು ಈ ಯೋಜನೆಯಲ್ಲಿ ಹಡಗು ವಿರೋಧಿ ಶಸ್ತ್ರಾಸ್ತ್ರಗಳೊಂದಿಗೆ ಈ ಹಣಕಾಸು ವರ್ಷದ ಅಂತ್ಯದೊಳಗೆ ಮುಕ್ತಾಯಗೊಳ್ಳಲು ಯೋಜಿಸಲಾಗಿದೆ.
ಭಾರತೀಯ ನೌಕಾಪಡೆಗೆ ಆನೆ ಬಲ :
ಡಸ್ಸಾಲ್ಟ್ ಏವಿಯೇಷನ್ (Dassault Aviation) ನಿಂದ ರಫೇಲ್ ಮೆರೈನ್ ಜೆಟ್‌ಗಳ ಖರೀದಿಯು ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ವಿಶೇಷವಾಗಿ ನೌಕಾಪಡೆಯು ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿ ಕೊರತೆಯನ್ನು ಎದುರಿಸುತ್ತಿದೆ. ಈ ಹೊಸ ಖರೀದಿಯು ಭಾರತೀಯ ವಾಯುಪಡೆಗೆ 36 ರಫೇಲ್ ಜೆಟ್‌ಗಳ ಒಪ್ಪಂದದ ನಂತರ ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್‌ನಿಂದ ಭಾರತದ ಎರಡನೇ ಪ್ರಮುಖ ಖರೀದಿಯಾಗಿದೆ.